• ಡಾ.ಎಸ್. ಸುಧಾ, ಮೈಸೂರು

ಜಮ್ಮು ಕಾಶ್ಮೀರಕ್ಕೆ ಹೋಗಿ ಹೆಚ್ಚೂಕಮ್ಮಿ 43 ವರ್ಷಗಳಾಗಿದ್ದವು. ನನ್ನ ಗೆಳತಿ ಬೆಂಗಳೂರಿನಿಂದ ಪ್ಯಾಕೇಜ್ ಟೂರಿನ್‌ಲ್ಲಿ ಹೊರಟಿದ್ದಳು. ನನ್ನನ್ನೂ ಕರೆದಳು. ಮೊದಲು ʻನೋಡೋಣ’ ಎಂದಿದ್ದೆ. ನಂತರ ನನ್ನ ಪತಿ ‘ಜಮ್ಮು ಕಾಶ್ಮೀರ ನೋಡಿ ನಾಲ್ಕು ದಶಕಗಳ ಮೇಲಾಗಿದೆಯಲ್ಲಾ ಹೋಗೋಣ’ ಎಂದರು. ಹಾಗಾಗಿ ಪ್ರವಾಸಕ್ಕೆ ಸಜ್ಜಾದೆವು.

ಪ್ರವಾಸ ಶುರುವಾಯಿತು. ಮೊದಲು ಕಾಲಿಟ್ಟಿದ್ದು ಶ್ರೀನಗರಕ್ಕೆ. ಇಲ್ಲಿ ಸೆಕ್ಯೂರಿಟಿ ಜಾಸ್ತಿಯೇ ಇದೆ. ರಸ್ತೆಯಲ್ಲಿ 50-100 ಅಡಿಗಳಿಗೆ ಒಬ್ಬ ಸಿಆರ್‌ಪಿಎಫ್ ಯೋಧ ನಿಂತಿರುತ್ತಾನೆ. ಕೈಯಲ್ಲಿ ಬಂದೂಕು, ತಲೆಮೇಲೆ ಶಿರಸ್ತ್ರಾಣ. ಇಂಥ ಸಾವಿರಾರು ಯೋಧರು ಕಾಶ್ಮೀರವನ್ನು ಕಾಯುತ್ತಿದ್ದಾರೆ. ನಮ್ಮನ್ನೂ ರಕ್ಷಿಸುತ್ತಿದ್ದಾರೆ.

ಇದನ್ನೂ ಓದಿ: ಆಲ್ಟಿಟ್ಯೂಡ್ ಸಿಕ್‌ನೆಸ್!

ಇಂತಿಪ್ಪ ಕಾಶ್ಮೀರದಲ್ಲಿ ನಾವು 2025ರ ಏಪ್ರಿಲ್ 9ರಂದು ಪಹಲ್‌ಗಾಮ್‌ಗೆ ಬೆಳಗ್ಗೆ ಒಂಬತ್ತಕ್ಕೆ ಹೊರಟೆವು. ರಾತ್ರಿ ಶ್ರೀನಗರದಲ್ಲಿ ಮಳೆ ಸುರಿದಿತ್ತು. ನಮ್ಮ ಪ್ರಯಾಣದ ಅವಧಿ ಸುಮಾರು ನಾಲ್ಕು ಗಂಟೆಗಳು. ದಾರಿಯುದ್ದಕ್ಕೂ ದೇವದಾರು, ಸೂಜಿಪರ್ಣ ಮರಗಳು. ನೂರಾರು ಯೋಧರು ದೇಶವನ್ನು ಕಾಯುತ್ತಾ ನಿಂತಿದ್ದರು. ಆಗಾಗ ಮಿಲಿಟರಿ ವಾಹನಗಳೂ ಹೋಗುತ್ತಿದ್ದವು. ಅವರು ಚಲಿಸುವಾಗ ಬೇರೆ ವಾಹನಗಳು ನಿಂತಿರಬೇಕು. ದಾರಿಯಲ್ಲಿ ಪುಲ್ವಾಮ ಸಿಕ್ಕಿತು. ಇದು ಬಹಳ ಕುಖ್ಯಾತ ಜಾಗ. ಕಾರಣ ಕೆಲವು ವರ್ಷಗಳ ಹಿಂದೆ ಇಲ್ಲಿ ಸೈನಿಕರ ‘ಮಾರಣಹೋಮ’ ಆಯಿತಲ್ಲ. ಪುಲ್ವಾಮ ಕೇಸರಿ ಬೆಳೆಯುವ ಜಾಗವೂ ಹೌದು. ನಮ್ಮ ಚಿಕ್ಕ ಬಸ್‌ಗಳನ್ನು ಕೇಸರಿ ಮತ್ತು ಒಣ ಹಣ್ಣುಗಳನ್ನು ಕೊಳ್ಳಲು ಒಂದು ಅಂಗಡಿಯ ಮುಂದೆ ನಿಲ್ಲಿಸಲಾಯಿತು. ನಾವೆಲ್ಲಾ ಇಳಿದು ಒಂದಿಷ್ಟು ವ್ಯಾಪಾರ ಮಾಡಿದೆವು.

Untitled design (18)

ಇಷ್ಟ ಬಂದಹಾಗೆ ಎಲ್ಲೆಲ್ಲೂ ಹೋಗಬಾರದು ಎಂದು ನಮಗೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಮತ್ತೆ ನಮ್ಮ ಟಿಟಿಗಳನ್ನೇರಿ ಪ್ರಯಾಣ ಮುಂದುವರೆಸಿದೆವು. ನಾವು ಹೋದ ಸಮಯ ಕೇಸರಿ ಹೂ ಬಿಡುವ ಕಾಲವಲ್ಲ. ಹಾಗಾಗಿ ಅದು ಬೆಳೆಯುವ ಜಾಗವನ್ನು ಹತ್ತಿರಹೋಗಿ ನೋಡಲಿಲ್ಲ. ಮುಂದೆ ಹೋಗುತ್ತಾ ರಸ್ತೆಯ ಎರಡೂ ಬದಿಯಲ್ಲಿ ಚಿಕ್ಕ ಮರಗಳು ಒಡಲ ತುಂಬಾ ಬಿಳಿಯ ಹೂಗಳನ್ನು ಧರಿಸಿ ಸುಂದರವಾಗಿ ನಿಂತಿದ್ದವು. ಇವು ಸೇಬಿನ ಮರಗಳು. ಕಂದು-ಕರಿಯ ರೆಂಬೆಗಳ ತುಂಬಾ ಬಿಳಿಯ ಸುಂದರ ಹೂಗಳು. ಸೇಬು ಗುಲಾಬಿಯ ಕುಟುಂಬಕ್ಕೆ ಸೇರಿದೆ. ಹತ್ತಿರದಿಂದ ಹೂಗಳನ್ನು ಮತ್ತು ತೋಟವನ್ನು ನೋಡುವ ಆಸೆ ಆಯಿತು. ಮುಂದೆ ನಿಲ್ಲಿಸುವುದಾಗಿ ನಮ್ಮ ವಾಹನ ಚಾಲಕ ಹೇಳಿದ. ಅಂತೆಯೇ ಬಸ್ಸು ನಿಂತಿತು. ನಾವು ಸೇಬಿನ ತೋಟವನ್ನು ಹೊಕ್ಕೆವು. ಹೋಗುತ್ತಿದ್ದಂತೆ ಸುಮಧುರ ಪರಿಮಳ ನನ್ನನ್ನಾವರಿಸಿತು. ಹತ್ತಿರದಿಂದ ಈ ಬಿಳಿಯ ಹೂಗಳನ್ನು ನೋಡಿ ಆಘ್ರಾಣಿಸಿದೆ. ಫೊಟೋ ಕೂಡ ತೆಗೆದದ್ದಾಯಿತು. ಸೇಬಿನ ಜ್ಯೂಸ್ ಕುಡಿದೆವು. ಮತ್ತೆ ಬಸ್ಸೇರಿ ಪಹಲ್‌ಗಾಮ್ ಕಡೆ ಪಯಣ.

ಪಹಲ್‌ಗಾಮ್ ತಲುಪಿದಾಗ ಮಧ್ಯಾಹ್ನ ಒಂದು ಗಂಟೆಯ ಮೇಲಾಗಿತ್ತು. ಅಲ್ಲಿಯ ಜನಸಾಗರ, ವಾಹನಗಳು, ಪೋನಿಗಳನ್ನು ನೋಡಿಯೇ ಸಾಕಾಯಿತು. ಸಾವಿರಾರು ಜನ ನೆರೆದಿದ್ದರು. ಸುತ್ತಮುತ್ತ ನೋಡಲು ಕಾರಿನಲ್ಲಿ ಅಥವಾ ಪೋನಿಯ (ಕುದುರೆ) ಮೇಲೆ ಹೋಗಬಹುದಿತ್ತು. ಮೇಘಗಳು ತಲೆಯ ಮೇಲೇ ಅಟಕಾಯಿಸಿಕೊಂಡಿದ್ದವು. ನಮ್ಮಂಥ ಹಿರಿಯರಿಗೆ ಕಾರೇ ಸರಿ ಎಂದುಕೊಂಡೆವು. ಆದರೆ ಒಂದು ಕಾರು ಕೂಡ ಸಿಗುವ ಸ್ಥಿತಿ ಇರಲಿಲ್ಲ. ಕಡೆಗೆ ಸಿಕ್ಕ ಒಂದು ಕಾರಿನಲ್ಲಿ ನಾಲ್ಕು ಜನ ಕುಳಿತು ಹೊರಟೆವು. ನಾವಿಬ್ಬರು ಮತ್ತು ಇಬ್ಬರು ಗೆಳತಿಯರು. ಆಗಲೇ ಸಣ್ಣಗೆ ಮಳೆ ಶುರುವಾಗಿತ್ತು. ನಮ್ಮನ್ನು ಇನ್ನೂ ಎತ್ತರದ ಪರ್ವತದ ಮೇಲೆ ಕರೆದುಕೊಂಡು ಹೋಗಿ 3-4 ಸ್ಥಳಗಳನ್ನು ತೋರಿಸಬೇಕಿತ್ತು. ಪಹಲ್‌ಗಾಮ್‌ನಲ್ಲಿ ತುಂಬಾ ಚಳಿಯಿತ್ತು. ಸ್ವಲ್ಪ ದೂರದಲ್ಲಿಯೇ ಹಿಮ ಬಿದ್ದಿತ್ತು. ದೂರದಲ್ಲಂತೂ ಹಿಮಾಚ್ಛಾದಿತ ಪರ್ವತಗಳೇ ಶ್ವೇತಧಾರಿಗಳಾಗಿ ನಿಂತಿದ್ದವು. ಅವುಗಳ ಮಧ್ಯೆ ಸೂಜಿಪರ್ಣ ಮರಗಳು ಹಸಿರಾಗಿದ್ದವು. ಎರಡೂ ಬಣ್ಣಗಳು ಶಾಂತಿಯ ದ್ಯೋತಕಗಳೇ, ಆದರೆ ಮೊದಲು ನಾವು ‘ಆರು’ ಕಣಿವೆ ಎನ್ನುವ ಸ್ಥಳವನ್ನು ನೋಡಿದೆವು. ಯಾರೂ ಕಾರಿನಿಂದ ಇಳಿಯಲಿಲ್ಲ. ನಮ್ಮ ಪಕ್ಕದ ರಸ್ತೆ ಬದಿಯಲ್ಲೇ ಹಿಮ ಬಿದ್ದಿತ್ತು. ಮುಂದೆ ಬೇತಾಬ್ ಕಣಿವೆಯನ್ನು ಡ್ರೈವರ್ ತೋರಿಸಿದ. ಅಲ್ಲೊಂದು ಪಾರ್ಕ್, ಬೇತಾಬ್ ಸಿನಿಮಾದ ಚಿತ್ರೀಕರಣ ಆಗಿದ್ದರಿಂದ ಈ ಸ್ಥಳಕ್ಕೆ ಅದೇ ಹೆಸರು ಬಂದಿದೆ. ಇಲ್ಲಿ ಕೂಡ ನಾವು ಇಳಿದು ಮಳೆಯಲ್ಲಿ ನೆನೆಯಲು ತಯಾರಿರಲಿಲ್ಲ. ಇನ್ನೊಂದು ಸ್ಥಳಕ್ಕೆ ಮಾತ್ರ ಹೋಗಬಹುದು ಎಂದು ಹೇಳಿದ ಡ್ರೈವರ್. ನಾವೂ ‘ಹ್ಞೂ’ ಗುಟ್ಟಿದೆವು. ಮಧ್ಯದಲ್ಲಿ ಮೋದಿಯನ್ನು ಬೈಯಲು ಶುರುಮಾಡಿದ. ಆದರೆ ನಾವ್ಯಾರೂ ಪ್ರತಿಕ್ರಿಯಿಸಲಿಲ್ಲ. ಆಗ ಸುಮ್ಮನಾದ. ಅಲ್ಲಿಂದ ನಾವು ಹೋಗಿದ್ದು ಚಂದನವಾರಿಗೆ. ಇದು ಅಮರನಾಥ್ ಯಾತ್ರೆಯ ಲಾಸ್ಟ್ ಸ್ಟಾಪ್. ಇಲ್ಲಿಂದ 32 ಕಿಮೀ ದೂರದಲ್ಲಿ ಅಮರನಾಥ ಗುಹೆ ಇದೆ. ಕಾರನ್ನು ನಿಲ್ಲಿಸುತ್ತೇನೆ ಎಂದು ಪಾರ್ಕ್ ಮಾಡಿದ. ಮಳೆ ಧೋ ಎಂದು ಶುರುವಾಯಿತು. ಹತ್ತಿರದಲ್ಲೇ ಒಂದು ಟಾರ್ಪಾಲ್ ಹಾಕಿದ ಟೀ ಅಂಗಡಿ ಇತ್ತು. ಅದು ನಮ್ಮ ಪುಣ್ಯ. ಅಲ್ಲಿಗೆ ಹೋಗಿ ನಿಂತು ಟೀ ಕುಡಿದೆವು. ಮೈ ಸ್ವಲ್ಪ ಬೆಚ್ಚಗಾಯಿತು. ಮತ್ತೆ ಮಳೆಯಲ್ಲೇ ವಾಪಸ್ ಪಹಲ್‌ಗಾಮ್‌ಗೆ ಹೊರಟೆವು.

Untitled design (17)

ವಾಪಸ್ಸು ಬಂದಾಗ ಅಂದಾಜು ನಾಲ್ಕು ಗಂಟೆ. ನಮ್ಮ ಊಟ ಪ್ಯಾಕ್ ಆಗಿ ಬಂದಿತ್ತು. ಅಲ್ಲೇ ಒಂದು ಹೊಟೇಲ್‌ನಲ್ಲಿ ಕೂತು ಊಟ ಮಾಡಿದೆವು. ಒಂದು ಭಾತ್ ಮತ್ತು ಮೊಸರನ್ನ ಇರಬೇಕು. ವಾಶ್‌ರೂಮ್‌ ಕೂಡ ಇತ್ತು. ಅದಕ್ಕೊಂದು ಕ್ಯೂ. ನನ್ನ ಸರತಿಯೂ ಬಂದಿತು. ಸರಿ, ಎಲ್ಲ ಮುಗಿಸಿ ನಾನು ಮತ್ತು ಪತಿ ಹೊಟೇಲ್‌ನಿಂದ ಹೊರಟೆವು. ಹಾಗೇ ಸುಮ್ಮನೆ ಎಡಗೈ ನೋಡಿದಾಗ ನವರತ್ನಗಳ ಉಂಗುರವೇ ಇರಲಿಲ್ಲ! ತಕ್ಷಣ ಇಬ್ಬರೂ ಕಷ್ಟಪಟ್ಟು ಮತ್ತೆ ಕೊಚ್ಚೆ ಹಾಗೂ ಮಳೆಯಲ್ಲಿ ವಾಪಾಸ್ ಬಂದೆವು. ಬರುತ್ತಾ ಹೋದ ದಾರಿಯನ್ನು ಕಣ್ಣಿಟ್ಟು ಉಂಗುರಕ್ಕಾಗಿ ನೋಡಿದೆವು. ಕಾಣಲಿಲ್ಲ. ಎಲ್ಲಿ ಬಿತ್ತೋ? ನನಗೆ ಬೇಜಾರೇ ಆಗಲಿಲ್ಲ. ಸಿಕ್ಕಿದರೆ ಓಕೆ, ಇಲ್ಲದಿದ್ದಲ್ಲಿ ಇಲ್ಲ ಎಂದುಕೊಂಡೆ. ಈಗ ಮೂವತ್ತೈದು ವರ್ಷಗಳಿಂದ ನನಗೆ ಈ ಮನೋಭಾವ ಬಂದುಬಿಟ್ಟಿದೆ.

ಮುಂದೆ ಹೊಟೇಲ್‌ ಒಳಗೆ ಹೆಜ್ಜೆಯಿಟ್ಟೆವು. ನಾನು ವಾಶ್‌ರೂಮ್‌ ತನಕ ಹೋದೆ. ಊಹೂಂ ಉಂಗುರ ಎಲ್ಲಿಯೂ ಇಲ್ಲ. ಈಗ ನನ್ನ ಗೆಳತಿ ಅಲ್ಲಿ ಕ್ಯೂನಲ್ಲಿ ನಿಂತಿದ್ದಳು. ಒಳಗಿದ್ದವರು ಬಂದ ಮೇಲೆ ನೋಡುವ ಎಂದು ಹೇಳಿ ಅವಳೊಟ್ಟಿಗೆ ನಿಂತೆ. ಒಳಗಿದ್ದವರು ಬಂದರು. ನನ್ನ ಗೆಳತಿ ಒಳಗೆ ಕಾಲಿಟ್ಟಳು. ‘ಓ, ನೋಡು ಇಲ್ಲಿ ಬಿದ್ದಿದೆ’ ಎಂದು ಉಂಗುರವನ್ನು ಕೈಗಿತ್ತಳು. ಇದು ಆಶ್ಚರ್ಯಕರ. ನನಗೆ ನೂರಕ್ಕೆ ಒಂದು ಭಾಗವೂ ಆಸೆ ಇರಲಿಲ್ಲ. ಅಂತೂ ಮತ್ತೆ ನನ್ನ ಬೆರಳಲ್ಲಿ ತೂರಿ ಕುಳಿತುಕೊಂಡಿತು. ನನ್ನ ಮೂರು ಪದರದ ಬಟ್ಟೆಗಳಲ್ಲಿ ಎಲ್ಲಿಯೋ ಸಿಕ್ಕಿಕೊಂಡು ಕೆಳಗೆ ಬಿದ್ದಿದೆ. ಯಾರೂ ಅದನ್ನು ನೋಡಿಲ್ಲ, ತೆಗೆದಿಲ್ಲ. ಆಶ್ಚರ್ಯವಲ್ಲವೇ?

ನಾವು ವಾಪಾಸು ಬಂದ ಒಂದು ವಾರದಲ್ಲಿ ಪಹಲ್‌ಗಾಮ್‌ನಲ್ಲಿ ನರಮೇಧವೇ ನಡೆದಿದೆ. ನನ್ನ ಹೃದಯ ರೋಧಿಸುತ್ತಿದೆ. ಕಾಶ್ಮೀರದಲ್ಲಿ ಇದಕ್ಕೆಲ್ಲಾ ಎಂದಿಗೆ ಕೊನೆ? ನನಗನ್ನಿಸಿತು ಜೀವನ ಮತ್ತು ಉಂಗುರ, ಎರಡೂ ಕ್ಷಣ ಭಂಗುರ.