ನೂರಾರು ಕೋಟಿ ರುಪಾಯಿಗಳ ಹೂಡಿಕೆಯೊಂದಿಗೆ ಮಹಾರಾಷ್ಟ್ರ ಸರಕಾರವು ಕೊಂಕಣ ಕರಾವಳಿ ಪ್ರವಾಸವನ್ನು ಅಭಿವೃದ್ಧಿಗೊಳಿಸಲು ಸಜ್ಜಾಗಿದೆ. ಈ ಮೂಲಕ ಜಾಗತಿಕ ಆಕರ್ಷಣೆ ಗಳಿಸುವ ಗುರಿಯನ್ನು ಹೊಂದಿದೆ. ಇದು ಪ್ರಯಾಣಿಕರಿಗೆ ಅರಬ್ಬೀ ಸಮುದ್ರದ ಆಳದಲ್ಲಿ ಸಬ್‌ಮರೀನ್‌ ಪ್ರವಾಸ ಮಾಡಲು ಅವಕಾಶವನ್ನು ನೀಡುತ್ತದೆ. ಪರಿಸರ ಸ್ನೇಹಿ ಪ್ರವಾಸ ಮತ್ತು ಕೃತಕ ಹವಳದ ದಿಬ್ಬಗಳ ಸೃಷ್ಟಿಯಂಥ ನವೀನ ಕ್ರಮಗಳ ಮೂಲಕ, ಮಹಾರಾಷ್ಟ್ರ ಸಾಹಸ ಮತ್ತು ಸುಸ್ಥಿರ ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳುತ್ತಿದೆ.

ಕರಾವಳಿಯ ಚೆಂದಗಳಿಂದ ಈಗಾಗಲೇ ಹೆಸರಾಗಿರುವ ಮುಂಬೈ-ಗೋವಾ ಕರಾವಳಿ ಸಬ್‌ಮರೀನ್‌ ಟೂರ್‌ಗಳ ಮೂಲಕ ಹೊಸ ಪ್ರವಾಸಿ ಮಾರ್ಗಕ್ಕೆ ತೆರೆದುಕೊಳ್ಳುತ್ತಿದೆ. ವಿಶ್ವ ಆಕರ್ಷಣೆ ಗಳಿಸಲಿರುವ ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಭರವಸೆ ನೀಡುವ ಜಲಾಂತರ್ಗಾಮಿ ಪ್ರವಾಸಕ್ಕೆ ಮಹಾರಾಷ್ಟ್ರ ಸರಕಾರ ಪ್ರಸ್ತಾಪವನ್ನು ಅನುಮೋದಿಸಿದೆ. ಇದರ ಭಾಗವಾಗಿ 24 ಪ್ರವಾಸಿಗರನ್ನು ಹೊತ್ತೊಯ್ಯಲು ಪ್ರಯಾಣಿಕ ಸಬ್‌ಮರೀನ್‌ ನೌಕೆಯ ನಿರ್ಮಾಣಕ್ಕೆ ಭಾರತೀಯ ಹಡಗು ನಿರ್ಮಾಣ ಉದ್ಯಮ ದಿಗ್ಗಜ ಮಜಗಾನ್ ಡಾಕ್ ಶಿಪ್‌ ಬಿಲ್ಡರ್ಸ್ ಲಿಮಿಟೆಡ್ (MDL) ನೇತೃತ್ವ ವಹಿಸಲಿದೆ.

ನೀರಿನೊಳಗೆ ಅಲೆಯುವ ವಾಹನ

maharashtra

ಈ ಸಬ್‌ ಮರೀನ್‌, ಅರಬ್ಬೀ ಸಮುದ್ರದ ಅಂತರಾಳದಲ್ಲಿನ ಪ್ರಪಂಚವನ್ನು ಪ್ರವಾಸ ಹೋಗುವ ಜನರ ಕಣ್ಣಮುಂದೆ ತಂದು ನಿಲ್ಲಿಸಲಿದೆ. ಸಮುದ್ರ ಜೀವಿಗಳನ್ನು ಹತ್ತಿರದಿಂದ ಅನ್ವೇಷಿಸಲು ಅಪರೂಪದ ಅವಕಾಶವನ್ನು ಒದಗಿಸುತ್ತದೆ. ಹೊಸತನ್ನು ಅನ್ವೇಷಿಸುವ, ಸಾಹಸ ಪ್ರಿಯರು ಮತ್ತು ಸಮುದ್ರಶಾಸ್ತ್ರದ ಕುತೂಹಲಿಗಳು ಇಷ್ಟಪಡುವ ರೋಮಾಂಚಕ ಅನುಭವವನ್ನು ನೀಡಲಿದೆ. ಇದರ ಜತೆಗೆ ಸಮುದ್ರದಾಳದ ಪ್ರವಾಸಕ್ಕೆ ಹೊಸಬಾಷ್ಯ ಬರೆಯಲಿರುವ ಕೊಂಕಣ ಕರಾವಳಿಗೆ ಅಂತಾರಾಷ್ಟ್ರೀಯ ಬೇಡಿಕೆಯ ತಾಣವಾಗಿ ರೂಪಿಸಲು ಈ ಯೋಜನೆ ಸಾರಥ್ಯ ವಹಿಸಲಿದೆ.

ಸಾಗರದಾಳದಲ್ಲಿ EX-INS ರೀಫ್

ಸಬ್‌ಮರೀನ್‌ ಮೂಲಕ ಸಮುದ್ರದ ಆಳದ ಪ್ರವಾಸ ಅನುಭವದ ಜತೆಗೆ, ನಿವೃತ್ತ INS ಗುಲ್ದಾರ್ ಮೂಲಕ ಅಂಡರ್‌ ವಾಟರ್ ಮ್ಯೂಸಿಯಂ ಮತ್ತು ಆರ್ಟಿಫಿಶಿಯಲ್ ರೀಫ್ ನಿರ್ಮಾಣಕ್ಕೂ ಕೈ ಹಾಕಲಾಗಿದೆ. ಸುಂದರ ರೀಫ್‌ ಅಥವಾ ಹವಳದ ದಿಬ್ಬಗಳನ್ನು ರಚಿಸಲು ಯೋಜನೆ ವಿನ್ಯಾಸಗೊಳಿಸಲಾಗಿದೆ.

ನಿವೃತ್ತ ನೌಕಾ ಹಡಗನ್ನು ಸಮುದ್ರದಲ್ಲಿ ಮುಳುಗಿಸಲು ಯೋಜಿಸಲಾಗಿದ್ದು, ಈ ಯೋಜನೆಯು ವಿವಿಧ ಜಾತಿಯ ಮೀನು ಮತ್ತು ಹವಳಗಳನ್ನು ಆಕರ್ಷಿಸುವ ಪರಿಸರವನ್ನು ಸೃಷ್ಟಿಸುತ್ತದೆ. ಸಮುದ್ರ ಜೀವಿಗಳ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಜತೆಗೆ ಇದರಿಂದ ನೀರೊಳಗಿನ ವಸ್ತುಸಂಗ್ರಹಾಲಯದ ಪರಿಕಲ್ಪನೆಯ ಪ್ರವಾಸೋದ್ಯಮ ಕೊಡುಗೆಗೆ ಹೊಸ ಆಯಾಮ ನೀಡುತ್ತದೆ. ಮಿಲಿಟರಿ ಇತಿಹಾಸ, ಸಮುದ್ರ ಜೀವಶಾಸ್ತ್ರ ಮತ್ತು ರೋಮಾಂಚಕ ಅನುಭವಗಳು ಪ್ರವಾಸದಲ್ಲಿ ದೊರೆಯಲಿದ್ದು, ಅಧ್ಯಯನ ಆಸಕ್ತರಿಗೂ ಅತ್ಯುತ್ತಮ ಅವಕಾಶವಾಗಲಿದೆ.