ಗೋಲ್ಡನ್ ಸಿಟಿ- ಜೈಸಲ್‌ಮೇರ್
ಥಾರ್ ಮರುಭೂಮಿಯ ಹೃದಯದಲ್ಲಿ ಚಿನ್ನದ ಬಣ್ಣದಲ್ಲಿ ಕಂಗೊಳಿಸುವ ಜೈಸಲ್‌ಮೇರ್ ಇತಿಹಾಸ, ವಾಸ್ತುಶಿಲ್ಪ ಮತ್ತು ರಾಜಸ್ಥಾನಿ ಸಂಸ್ಕೃತಿಯ ಅಪೂರ್ವ ಸಂಗಮ. 800ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಜೀವಂತ ಕೋಟೆ, ಜೈನ ಮಂದಿರಗಳು, ಗಡಿಸರ್ ಸರೋವರ ಹಾಗೂ ಮರಳುಗಾಡಿನ ಸಾಹಸಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಸೂರ್ಯಾಸ್ತದ ಹೊಂಬಣ್ಣದಲ್ಲಿ ಕಂಗೊಳಿಸುವ ಈ ‘ಗೋಲ್ಡನ್ ಸಿಟಿ’ಯ ಪ್ರತಿಯೊಂದು ಕಲ್ಲಿನಲ್ಲೂ ಒಂದು ಇತಿಹಾಸದ ಕಥೆ ಅಡಗಿದೆ.
- ವಿ. ಶ್ರೀನಿವಾಸ
ರಾಜಸ್ಥಾನ ರಾಜ್ಯದಲ್ಲಿ ʼಗೋಲ್ಢನ್ ಸಿಟಿʼ ಎಂದು ಬಿರುದಾಂಕಿತಗೊಂಡ ನಗರ ಜೈಸಲ್‌ಮೇರ್. ಥಾರ್ ಮರುಭೂಮಿಯ ಹೃದಯ ಭಾಗದಲ್ಲಿರುವ ಈ ನಗರ, ಕೋಟೆ ಇವುಗಳು ಮರುಭೂಮಿಗೆ ಹೊಂದಿಕೊಳ್ಳುವ ನಸು ಹಳದಿ ಬಣ್ಣದಿಂದ ಕೂಡಿದ್ದು, ಸಂಜೆ ಸೂರ್ಯನ ಬೆಳಕಿನಲ್ಲಿ ಚಿನ್ನದಂತೆ ಕಂಗೊಳಿಸುತ್ತದೆ. ಆದ್ದರಿಂದಲೇ ಇದು ʼಗೋಲ್ಡನ್‌ಸಿಟಿʼ.
ಪ್ರಸಿದ್ಧ ವ್ಯಾಪಾರಿ ಮಾರ್ಗ ಸಿಲ್ಕ್ ರೂಟ್ ಚಾಲನೆಯಲ್ಲಿದ್ದ ಕಾಲದಲ್ಲಿ ಇದೊಂದು ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು, ಆಗಿನ ರಾಜರಿಗೆ ಆದಾಯದ ಮೂಲವಾಗಿತ್ತು. ಕ್ರಮೇಣ ಜಲಸಾರಿಗೆ ಅಭಿವೃದ್ಧಿ ಹೊಂದಿದಂತೆ ಬಂದರು ನಗರಗಳು ಪ್ರಮುಖ ವ್ಯಾಪಾರಿ ಕೇಂದ್ರಗಳಾಗುತ್ತಿದ್ದಂತೆ ಸಿಲ್ಕ್‌ರೂಟ್ ವ್ಯಾಪಾರದ ಪ್ರಮಾಣ ಕುಗ್ಗಿತು.
ಇದನ್ನೂ ಓದಿ: ಅಲೆಪ್ಪಿಯ ಹಿನ್ನೀರು
ಮೂರು ಗುಡ್ಡಗಳ ಮೇಲಿನ ಕೋಟೆ
1156ರಲ್ಲಿ ರಜಪೂತಾನದ ಭಾಟಿ ವಂಶದ ರಾವಲ್ ಜೈಸಲ್ ಎಂಬ ರಾಜ ಈ ನಗರದಲ್ಲಿ ಕೋಟೆ ಕಟ್ಟಿ ಜೈಸಲ್‌ಮೇರ್ ರಾಜ್ಯವನ್ನು ಸಾಪಿಸಿದರು. ಸುಮಾರು 250 ಅಡಿ ಎತ್ತದ ಒಂದಕ್ಕೊಂದು ಹೊಂದಿಕೊಂಡಿರುವ ಮೂರು ಗುಡ್ಡಗಳ ಮೇಲೆ ಈ ಕೋಟೆಯನ್ನು ನಿರ್ಮಿಸಲಾಗಿರುವುದರಿಂದ ʼತ್ರಿಕೂಟಘಡʼ ಎಂದೂ ಹೆಸರಿದೆ. ಕೋಟೆಯ ಹೊರಾವರಣದ ಸುತ್ತಲೂ 99 ಬುರುಜುಗಳು ಇರುವುದೊಂದು ವಿಶೇಷ. ಕೋಟೆಯ ಒಳಾವರಣವು ಚಕ್ರವ್ಯೂಹದಂತಿದ್ದು, ಹೊಸಬರಿಗೆ ಎಲ್ಲಿಂದ ಹೋಗಬೇಕು, ಎಲ್ಲಿಂದ ಹೊರಗೆ ಬರಬೇಕು ಎಂದು ತಿಳಿಯಲು ಸಾಧ್ಯವಿಲ್ಲ. ಕೋಟೆಯೊಳಗೆ ರಾಜಮಹಲ್ ಅಂದರೆ ರಾಜನ ಅರಮನೆ, ಹಾಗೂ ರಿಷಭದೇವ, ಪಾರ್ಶ್ವದೇವ, ಶಾಂತಿನಾಥ ಮುಂತಾದ ಏಳು ತೀರ್ಥಂಕರರ ಜೈನ ಮಂದಿರಗಳಿವೆ. ಇವು ಸುಮಾರು 12 ರಿಂದ 15ನೆಯ ಶತಮಾನದಲ್ಲಿ ಮರಳುಗಲ್ಲಿನಿಂದ ನಿರ್ಮಿತವಾಗಿವೆ. ಒಂದಕ್ಕಿಂತ ಒಂದು ಅದ್ಭುತ, ಕಲಾತ್ಮಕ ಶಿಲ್ಪಕಲೆಗಳಿಂದ ತುಂಬಿವೆ. ಕೋಟೆಯೊಳಗೆ ಲಕ್ಷ್ಮೀನಾಥ ಮಂದಿರ ಎಂಬ ಲಕ್ಷ್ಮೀ ಹಾಗೂ ನಾರಾಯಣರ ದೇವಾಲಯವೂ ಸುಂದರವಾಗಿದೆ.

ಯುದ್ಧಗಳ ನಡುವೆ ಜೀವಂತವಾಗಿರುವ ಕೋಟೆ
ಜೈಸಲ್‌ಮೇರ್ ರಾಜ್ಯವು ಇತಿಹಾಸದುದ್ದಕ್ಕೂ ಘಜನಿ, ಅಲ್ಲಾವುದ್ದೀನ್ ಖಲ್ಜಿ, ಮೊಘಲರ ಹುಮಾಯುನ್ ಮುಂತಾದ ಧಾಳಿಕೋರರ ಯುದ್ಧಗಳನ್ನೆದುರಿಸಿದೆ. ಕೆಲಕಾಲ ಅವರುಗಳ ವಶವಾಗಿದ್ದೂ ಇದೆ. ಅಂದಿನ ರಜಪೂತ ಪದ್ಧತಿಯಂತೆ ಹಲವು ʼಜೋಹರ್ʼ ಅಂದರೆ ಶತೃಗಳ ಕೈಗೆ ಸಿಕ್ಕಿ ಮರ್ಯಾದೆಗೆ ಕುಂದಾಗಬಾರದೆಂದು ರಾಜಮನೆತನದ ಹೆಂಗಸರು ತಮ್ಮ ಪರಿವಾರದೊಡನೆ ಅಗ್ನಿ ಪ್ರವೇಶ ಅಥವಾ ಜಲಪ್ರವೇಶ ಮಾಡಿ ಅಸುನೀಗುತ್ತಿದ್ದ ದುರಂತಗಳೂ ನಡೆದಿವೆ. ಇಸವಿ 1818 ರಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಅಧೀನ ಸಂಸ್ಥಾನವಾಗಿ ಸ್ವಾತಂತ್ರ್ಯಾನಂತರ ರಾಜಸ್ಥಾನ ರಾಜ್ಯದಲ್ಲಿ ಸೇರಿತು. ಜೈಸಲ್‌ಮೇರ್ ನಗರದ ಸುಮಾರು ಕಾಲು ಭಾಗದಷ್ಟು ಜನ ಈಗಲೂ ಕೋಟೆಯಲ್ಲಿ ವಾಸವಾಗಿದ್ದಾರೆ. ಭಾರತದಲ್ಲಿ ಹಾಗೂ ಜಗತ್ತಿನಲ್ಲಿ ʼಜೀವಂತವಿರುವʼ ಅಂದರೆ ಜನ ವಾಸವಾಗಿರುವ ಕೆಲವೇ ಕೋಟೆಗಳಲ್ಲಿ ಕೂಡ ಒಂದಾಗಿದೆ. ಕೋಟೆಯ ಕಟ್ಟಡಗಳನ್ನು ಸ್ಯಾಂಡ್ ಸ್ಟೋನ್ ಅಥವಾ ಮರಳುಗಲ್ಲಿನಲ್ಲಿ ಕಟ್ಟಿರುವುದರಿಂದ 800ಕ್ಕೂ ಅಧಿಕವರ್ಷಗಳ ಈ ಕಟ್ಟಡಗಳು ಸವಕಳಿ ಹೊಂದಿ ಶಿಥಿಲವಾಗಿವೆ. ಅಲ್ಲಿ ವಾಸಿಸುವ ಜನಸಂಖ್ಯೆ, ವಾಹನಗಳ ಸಂಖ್ಯೆ ಅಧಿಕವಾಗಿರುವುದರಿಂದ ಅಪಾಯಗಳೆದುರಾಗಿದೆ. 2013ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿ ಮಾನ್ಯತೆ ಪಡೆದಿರುವ ರಾಜಸ್ಥಾನದ ಆರು ಕೋಟೆಗಳಲ್ಲಿ ಇದೂ ಒಂದಾಗಿದೆ.
ಮರುಭೂಮಿಯ ಜಲಕನ್ನಡಿ
ಜೈಸಲ್‌ಮೇರ್ ಥಾರ್ ಮರುಭೂಮಿಯಲ್ಲಿರುವುದರಿಂದ ಮಳೆ ಕೊರತೆ ಸಾಮಾನ್ಯವಾಗಿದ್ದು, ಆಗಾಗ್ಗೆ ಬರಗಾಲ ಪೀಡಿತವಾಗುತ್ತಿತ್ತು. ಇಸವಿ 1367ರಲ್ಲಿ ರಾಜರಾಗಿದ್ದ ರಾವಲ್ ಗಡ್ಸಿ ಸಿಂಗ್ ಅವರು ನಗರದ ಸಮೀಪ ಮಳೆನೀರನ್ನು ಸಂಗ್ರಹಿಸುವ ʼಗಡಿಸರ್ ಲೇಕ್ʼ ಅನ್ನು ನಿರ್ಮಿಸಿದರು. ಇದರಿಂದ ನಗರದ ನೀರಿನ ಸಮಸ್ಯೆ ಪರಿಹಾರವಾಯಿತು . ಈಗ ಈ ಸರೋವರವು ಇಂದಿರಾ ಗಾಂಧಿ ಕಾಲುವೆಗೆ ಸಂಪರ್ಕ ಹೊಂದಿ ನೀರಿನ ಕೊರತೆ ಇಲ್ಲದೆ ಸದಾ ತಂಬಿರುತ್ತದೆ. ಸರೋವರದಲ್ಲಿ ದಡದುದ್ದಕ್ಕೂ ಮತ್ತು ಸರೋವರದಲ್ಲಿ ಅಲ್ಲಲ್ಲಿ ಅಲಂಕಾರಿಕ ಮಂಟಪಗಳಿದ್ದು ಸರೋವರದ ನೋಟ ರಮಣೀಯವಾಗಿದೆ.

ಮರುಭೂಮಿಯ ಸಾಹಸ ಲೋಕ
ಜೈಸಲ್‌ಮೇರ್ ಈಗ ದಿನದಿಂದ ದಿನಕ್ಕೆ ಪ್ರವಾಸಿ ಆಕರ್ಷಣೆಯಾಗಿ ಬೆಳೆಯುತ್ತಿದೆ. ಕಾರಣ ಇಲ್ಲಿ ಮರುಭೂಮಿಯಲ್ಲಿ ಹೆಚ್ಚುತ್ತಿರುವ ರೆಸಾರ್ಟ್‌ಗಳು. ಅವುಗಳು, ಜೀಪ್ ಸಫಾರಿ, ಒಂಟೆ ಸವಾರಿ, ರಾತ್ರಿ ಊಟೋಪಚಾರ, ನಂತರ ತರುಣಿಯರಿಂದ ರಾಜಸ್ಥಾನಿ ಜಾನಪದ ನೃತ್ಯದ ಮನೋರಂಜನೆ. ನಂತರ ಅವರೊಂದಿಗೆ ಜನಪ್ರಿಯ ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕುವ ಆಕರ್ಷಣೆ ಇವುಗಳನ್ನು ಪ್ಯಾಕೇಜ್ ರೀತಿಯಲ್ಲಿ ನೀಡುತ್ತಿವೆ. ಮರಳುಗಾಡಿನಲ್ಲಿ ವೇಗದ ವಾಹನ ಚಾಲನೆಯಂಥ ಸಾಹಸ ಕ್ರೀಡೆಗಳು ಯುವ ಪ್ರವಾಸಿಗರನ್ನು ಸೆಳೆಯುತ್ತಿದೆ.
ಜೈಸಲ್‌ಮೇರ್ ಚಿನ್ನದ ನಗರಿ ಎಂದು ಹೆಸರು ಪಡೆದಿದ್ದರೂ ಚಿನ್ನದಂತೆ ಕಾಣುವ ನಗರಿ ಅಷ್ಡೇ ಚಿನ್ನದ ನಿಕ್ಷೇಪವೇನಿಲ್ಲ. ಆದರೆ, ಇಲ್ಲಿ ಅತಿ ಪುರಾತನ ಗ್ರಂಥಾಲಯವಿದ್ದು ಅದರಲ್ಲಿ ಅತಿ ಅಪರೂಪದ ಹಸ್ತಪ್ರತಿಗಳೂ, ಕಲಾಕೃತಿಗಳೂ ಇವೆಯಂತೆ. ಇವುಗಳನ್ನೇ ಅಸಲಿ ಚಿನ್ನವೆನ್ನಬಹುದೇ? ಸತ್ಯಜಿತ್ ರೇ ಅವರ ಸೋನಾರ್ ಖಿಲ ಎಂಬ ಸಿನಿಮಾ ಇಲ್ಲಿನ ಕೋಟೆಯಲ್ಲಿ ಚಿತ್ರಿತಗೊಂಡಿರುವ ಯಶಸ್ವಿ ಪತ್ತೇದಾರಿ ಸಿನಿಮಾ. ಹಾಗಾಗಿ ಹಲವರು ಇದನ್ನು ಸೋನಾರ್ ಖಿಲಾ ಎಂದೇ ಕರೆಯುತ್ತಾರೆ. ʼಒಮ್ಮೆ ಸೂರ್ಯನು ತನ್ನ ರಥದಲ್ಲಿ ಹೋಗುವಾಗ ತನ್ನ ಸಾರಥಿಗೆ ಇದೇನಿದು ನನ್ನ ರಥದಂತೆಯೇ ಕಾಣುತ್ತಿದೆಯಲ್ಲಾ ಏನದು? ಎಂದು ಕೇಳಿದನಂತೆ. ಅದಕ್ಕೆ ಸಾರಥಿಯು ಅದು ಜೈಸಲ್‌ಮೇರ್ ಕೋಟೆ ಎಂದು ಹೇಳಿದನಂತೆʼ ಎಂದು ಹೇಳುವ ಅಲ್ಲಿನ ಜಾನಪದ ಗೀತೆ ಅಲ್ಲಿ ಬಹು ಜನಪ್ರಿಯವಾಗಿದೆ.