• ಶೋಭಾ ಪುರೋಹಿತ್‌

ಒಡಿಶಾದ ಪುರಿಗೆ ಭೇಟಿಕೊಟ್ಟಾಗ ಅಲ್ಲಿ ಸಮುದ್ರ ಸ್ನಾನಮಾಡಿ, ಜಗನ್ನಾಥನ ದರ್ಶನ ಪಡೆದೆವು. ಅಂದು ರಾತ್ರಿ ಅಲ್ಲೇ ತಂಗಿದ್ದೆವು. ಮರುದಿನ ಬೆಳಗ್ಗೆ ಬಸ್ಸು ಹತ್ತಿ ಪುರಿಗೆ ಹತ್ತಿರದ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಹೊರಟೆವು. ಆ ದಿನ ನಾವು ಸಂದರ್ಶಿಸಿದ ಸ್ಥಳಗಳು ಸಾಕ್ಷಿ ಗೋಪಾಲ, ಧವಳಗಿರಿ, ಭುವನೇಶ್ವರ ಮತ್ತು ಕೊನಾರ್ಕ್.

ಇದನ್ನೂ ಓದಿ: ಮೇಘಾಲಯದ ಯಶಸ್ಸಿನ ಸೂತ್ರ : ಕರ್ನಾಟಕಕ್ಕೆ ದಿಕ್ಸೂಚಿಯಾಗಬಲ್ಲದೇ?

ಸಾಕ್ಷಿ ಗೋಪಾಲನ ಬಗ್ಗೆ ಕೌತುಕದ ಕಥೆಯಿದೆ

ಬೃಂದಾವನದ ಗೋಪಾಲಕೃಷ್ಣನನ್ನು ಕಾಣಲು, ಇಬ್ಬರು ಬ್ರಾಹ್ಮಣರು ಹೊರಡುತ್ತಾರೆ. ಅವರಲ್ಲಿ ಒಬ್ಬ ಯುವಕ, ಮತ್ತೊಬ್ಬರು ವೃದ್ಧ. ವೃದ್ಧನಿಗೆ ವಯಸ್ಸಿನ ಕಾರಣ ಪ್ರಯಾಣ ಕಷ್ಟವಾಗುತ್ತದೆ. ಯುವಕ ಆತನಿಗೆ ತುಂಬಾ ಸಹಾಯ ಮಾಡುತ್ತಾನೆ. ಅದಕ್ಕಾಗಿ ಕೃತಜ್ಞತೆಯಿಂದ ವೃದ್ಧ ತನ್ನ ಮಗಳನ್ನು ಆ ಯುವಕನಿಗೆ ಕೊಟ್ಟು ಮದುವೆ ಮಾಡಿಸುವುದಾಗಿ ಹೇಳುತ್ತಾನೆ. ಶ್ರೀಮಂತ ವೃದ್ಧನ ಮಾತನ್ನು ಬಡ ಯುವಕ ನಂಬಲಿಲ್ಲ. ಆಗ ಇದಕ್ಕೆ ಗೋಪಾಲ ಕೃಷ್ಣನೇ ಸಾಕ್ಷಿಯಾಗಿಸಿದ.

ವೃದ್ಧ ಹೀಗೆ ಮಾತುಕೊಟ್ಟ ವಿಷಯ ತಿಳಿದ ಆತನ ಮಗ ಈ ಮದುವೆಗೆ ಒಪ್ಪುವುದಿಲ್ಲ. ಆಸ್ತಿಗೋಸ್ಕರ ಯುವಕ ಮಸಲತ್ತು ಮಾಡಿದ್ದಾನೆ ಎಂದು ಕೋಪಿಸಿಕೊಳ್ಳುತ್ತಾನೆ! ಸ್ವತಃ ವೃದ್ಧ ತನ್ನ ಮಗನಿಗೆ ʻಗೋಪಾಲನನ್ನೇ ಸಾಕ್ಷಿ ಇರಿಸಿ ಮಾತು ಕೊಟ್ಟಿದ್ದೇನೆʼ ಎನ್ನುತ್ತಾನೆ. ಇದನ್ನು ನಂಬದ ಮಗ, ಆ ಗೋಪಾಲನೇ ಬಂದು ಹೇಳಿದರೆ ನಂಬುತ್ತೇನೆ ಎನ್ನುತ್ತಾನೆ! ಆಗ ವೃದ್ಧನಿಗೆ ಸಹಾಯ ಮಾಡಿದ್ದ ಯುವಕ ಪುನಃ ಬೃಂದಾವನಕ್ಕೆ ತೆರಳಿ ಗೋಪಾಲನನ್ನು ಒಪ್ಪಿಸಿ ಕರೆತರಲು ಹೊರಡುತ್ತಾನೆ.

Untitled Design (7)

ಯುವಕ ಗೋಪಾಲನನ್ನು ಒಪ್ಪಿಸುವಲ್ಲಿ ಯಶಸ್ವಿಯಾಗುತ್ತಾನೆ. ಆದರೆ ಇದಕ್ಕೆ ಶರತ್ತು ವಿಧಿಸುತ್ತಾನೆ. ʻನಾನು ಯಾರಿಗೂ ಕಾಣುವುದಿಲ್ಲ. ನನ್ನ ಗೆಜ್ಜೆಯ ಸದ್ದೇ ನನ್ನ ಆಗಮನದ ಗುರುತಾಗಿರುತ್ತದೆʼ ಎಂದು. ನಂತರ ಗೋಪಾಲನು ಆ ಬ್ರಾಹ್ಮಣ ಯುವಕನ ಜತೆಗೆ ಹೊರಡುತ್ತಾನೆ. ಊರು ಸಮೀಪಿಸುತ್ತದೆ. ಜನರ ಗುಂಪು ಕಾಣುತ್ತಲೇ ಗೋಪಾಲ ಹೊರಗೇ ನಿಲ್ಲುತ್ತಾನೆ. ಗೆಜ್ಜೆ ಸದ್ದು ಕೇಳದಾಗ ಬ್ರಾಹ್ಮಣ ಯುವಕ ತಿರುಗಿ ನೋಡುತ್ತಾನೆ. ಅಲ್ಲಿ ಗೋಪಾಲ ಶಿಲಾಮೂರ್ತಿಯಾಗಿ ನಿಂತಿದ್ದ. ಈ ಪವಾಡ ಕಂಡ ವೃದ್ಧನ ಮಗ ಮದುವೆಗೆ ಒಪ್ಪಿಗೆ ನೀಡುತ್ತಾನೆ! ಹೀಗೆ ಗೋಪಾಲ ಶಿಲಾಮೂರ್ತಿಯಾಗಿ ನಿಂತ ಸ್ಥಳದಲ್ಲೇ ಮಂದಿರ ಕಟ್ಟಲಾಗಿದೆ. ಹೀಗಾಗಿ ಈ ಸ್ಥಳಕ್ಕೆ ಸಾಕ್ಷಿ ಗೋಪಾಲ ಎಂದು ಹೆಸರು ಬಂದಿದೆ.

ಧವಳಗಿರಿ

ಸಾಕ್ಷಿ ಗೋಪಾಲನನ್ನು ಕಂಡು ಹೊರಟು ನಾವು ಧವಳಗಿರಿಗೆ ಬಂದೆವು. ಇದನ್ನು ಬೌದ್ಧ ಸ್ತೂಪ ಎನ್ನಬಹುದು. ಗೇಟಿನಿಂದ ಸ್ವಲ್ಪ ದೂರ ಗಿಡ-ಮರಗಳ ಮಧ್ಯೆ ಹಲವು ಮೆಟ್ಟಿಲುಗಳನ್ನು ಹತ್ತಿದಾಗ ತಾಜ್ ಮಹಲ್‌ನಂಥ ಗುಮ್ಮಟ ಹೊಂದಿರುವ, ಬಿಳಿ ಕಟ್ಟಡ ಇದೆ. ಗುಮ್ಮಟದ ನಾಲ್ಕೂ ಕಡೆ ಬುದ್ಧನ ಕುಳಿತಿರುವ, ನಿಂತಿರುವ, ಮಲಗಿರುವ, ಶೈಲಿಯ ಮೂರ್ತಿಗಳಿವೆ. ಗರ್ಭಗುಡಿ ಇಲ್ಲ! ಬಿಳಿ ಬಣ್ಣದ ನಿರ್ಮಾಣವಾದ್ದರಿಂದ ಧವಳಗಿರಿ ಎಂಬ ಹೆಸರು ಬಂದಿದೆ.

Untitled Design (5)

ಭುವನೇಶ್ವರ

ದವಳಗಿರಿ ನೋಡಿಕೊಂಡು ನಂತರ ಹೋಗಿದ್ದು ಭುವನೇಶ್ವರದ ಲಿಂಗರಾಜ ಮಂದಿರಕ್ಕೆ. ಇದನ್ನು ಭುವನೇಶ್ವರದ ಅತ್ಯಂತ ಎತ್ತರದ ದೇವಸ್ಥಾನ ಎನ್ನುತ್ತಾರೆ. ಈತ ಸುತ್ತಮುತ್ತಲಿನ ಲಿಂಗಗಳಿಗೆ ಒಡೆಯ; ಹೀಗಾಗಿ ಲಿಂಗರಾಜ ಎಂಬ ಹೆಸರು. ಭುವಿಯಿಂದ ಉದ್ಭವಿಸಿದ ಕಾರಣಕ್ಕೆ ಇದನ್ನು ಭುವನೇಶ್ವರ ಎನ್ನುತ್ತಾರೆ. ವಿಶೇಷವೆಂದರೆ ಇದು ಅರ್ಧ ಲಿಂಗ ಇನ್ನರ್ಧ ಸಾಲಿಗ್ರಾಮ; ಹೀಗಾಗಿ ಇದನ್ನು ಹರಿಹರ ಎಂದು ಪೂಜಿಸಲಾಗುತ್ತಿದೆ ಎಂದು ಸ್ಥಳೀಯರಿಂದ ನಮಗೆ ತಿಳಿಯಿತು. ಶಿವಲಿಂಗ ಸುಮಾರು ಹತ್ತು ಅಡಿ ಅಗಲವಿದ್ದು ಕೋಣೆಯ ತುಂಬಾ ವ್ಯಾಪಿಸಿದೆ. ಅಲ್ಲೇ ಕಬ್ಬಿಣದ ಕಟಕಟೆಯ ಮೂಲಕ ದರ್ಶನ ಪಡೆದೆವು.

ಕೊನಾರ್ಕ್

ಈ ಸುತ್ತಾಟದಲ್ಲಿ ನಾವು ಕೊನೆಯದಾಗಿ ಹೋಗಿದ್ದು ಕೊನಾರ್ಕ ಸೂರ್ಯ ಮಂದಿರಕ್ಕೆ. ಇಲ್ಲಿ ರಿಪೇರಿ ಕೆಲಸ ನಡೆದಿದ್ದರಿಂದ ಒಳಗೆ ಹೋಗಲು ಅವಕಾಶ ಇರಲಿಲ್ಲ. ಹೊರಗಿನಿಂದಲೇ ವಿಡಿಯೋ ಮಾಡಿದೆ. ಇದು ಅಷ್ಟ ಭುಜಾಕೃತಿಯಲ್ಲಿದ್ದು ಸುತ್ತಲೂ ಚಕ್ರಗಳಿವೆ. ಮುಂದುಗಡೆ ಕುದುರೆಗಳಿದ್ದು, ಸೂರ್ಯನ ರಥದ ಕಲ್ಪನೆ ಹೊಂದಿದೆ.

Untitled Design (6)

ಸುತ್ತಾಡಿ ಎಲ್ಲವನ್ನೂ ನೋಡಿಕೊಂಡು ಪುರಿಗೆ ಹಿಂತಿರುಗುವಾಗ, ಸ್ವಲ್ಪ ದಾರಿ ಸಮುದ್ರಕ್ಕೆ ಸಮಾನಾಂತರವಾಗಿ ಸಾಗಿತ್ತು. ಪೋನಿ ಚಂಡಮಾರುತದ, ಮುನ್ಸೂಚನೆಯಾಗಿ ಗಾಳಿ ರಭಸವಾಗಿತ್ತು. ಸಮುದ್ರದ ಅಲೆಗಳ ಶಬ್ದ, ಭಯ ಹುಟ್ಟಿಸುವಷ್ಟು ಜೋರಾಗಿತ್ತು. ಮರುದಿನವೇ ಚಂಡಮಾರುತ ಪುರಿಗೆ ಅಪ್ಪಳಿಸುವ ಮುನ್ಸೂಚನೆ ಇತ್ತು! ನಿಗದಿಯಾದಂತೆ ಮರುದಿನ ಬೆಳಗ್ಗೆ ರೈಲು ಮೂಲಕ ಗಯಾಕ್ಕೆ ಹೊರಟೆವು. ನಾವು ಹೊರಟ ದಿನವೇ ಚಂಡಮಾರುತ ಪುರಿಗೆ ಅಪ್ಪಳಿಸಿ, ದೇವಸ್ಥಾನದಲ್ಲೆಲ್ಲಾ ನೀರು ತುಂಬಿಕೊಂಡಿತು ಅಂತ ವಿಷಯ ತಿಳಿದು ಬಂತು. ಒಟ್ಟಾರೆ ಈ ಪ್ರವಾಸ ನನ್ನ ನೆನಪಾಗಿ ಉಳಿದಿದೆ.