ಅವಿಸ್ಮರಣೀಯ ಭುವನೇಶ್ವರ ಪ್ರವಾಸ
ಇಲ್ಲಿನ ರಥಯಾತ್ರೆ, ಅಡುಗೆಮನೆಯೂ ವಿಶ್ವವಿಖ್ಯಾತವಾಗಿದೆ. ರಥಯಾತ್ರೆಯ ಸಮಯದಲ್ಲಿ ದೇವರಿಗೆ ಹೊಸ ಕೈಗಳನ್ನು ಜೋಡಿಸುವ ಮತ್ತು ಪ್ರತಿ 12 ವರ್ಷಗಳಿಗೊಮ್ಮೆ ದೇವರ ಮೂರ್ತಿಯನ್ನು ಹೊಸದಾಗಿ ಕೆತ್ತುವ ಸಂಪ್ರದಾಯವಿದೆಯೆಂದು ಕೇಳಿದ್ದೇವೆ. ಅಡುಗೆಮನೆಯಲ್ಲೂ ಒಂದರ ಮೇಲೆ ಒಂದು ಮಡಕೆ ಜೋಡಿಸಿಟ್ಟು ಒಲೆಯ ಮೇಲೆ ಇಟ್ಟರೆ ಎಲ್ಲ ಮಡಕೆಗಳಲ್ಲೂ ಖಾದ್ಯಗಳು ಬೆಂದಿರುತ್ತವೆಯೆಂದೂ ಕೇಳಿದ್ಧೇವೆ.
- ಸಾವಿತ್ರಿ ಶ್ಯಾನುಭಾಗ್, ಕುಂದಾಪುರ
ಇದು ಹೋದ ವರ್ಷದ ಕಥೆ. ಡಿಸೆಂಬರ್ ರಜೆಯಲ್ಲಿ ಪುರಿ, ಭುವನೇಶ್ವರಕ್ಕೆ ಹೋಗೋಣ ಎಂದು ಹೈದರಾಬಾದಿನಲ್ಲಿರುವ ಭಾವ ಪ್ಲ್ಯಾನ್ ಮಾಡತೊಡಗಿದರು. ಇವರ ಚಿಕ್ಕಪ್ಪ, ಚಿಕ್ಕಮ್ಮ ನಮ್ಮೊಂದಿಗೆ ಬರಲು ಆಸಕ್ತಿವಹಿಸಿದರು. ಇದನ್ನು ಕೇಳಿ ಮನೆಯವರು ಎಲ್ಲರೂ ಒಟ್ಟಿಗೆ ಹೋಗಬಹುದಲ್ಲ ಎಂದು ಸಮ್ಮತಿಸಿದ ನಂತರ ವಿಮಾನಯಾನದ ಟಿಕೆಟ್, ಹೊಟೇಲ್ ಬುಕಿಂಗ್ ಎಲ್ಲ ಜವಾಬ್ದಾರಿಯನ್ನು ಭಾವ ವಹಿಸಿಕೊಂಡರು.
ಇದನ್ನೂ ಓದಿ: ಜಗನ್ನಾಥನ ಪುರಿಯಿಂದ ಸೂರ್ಯನ ಕೊನಾರ್ಕ್ವರೆಗೆ
ಮಗಳಿಗೆ ರಾತ್ರಿಯೆಲ್ಲ ಕೆಮ್ಮಿದ್ದರಿಂದ, ಪ್ರಯಾಣಕ್ಕೆ ಏನಾದರೂ ತೊಂದರೆಯಾಗುವುದೋ ಎಂಬ ಆತಂಕವಿತ್ತು. ಕೆಮ್ಮಿನ ಸಿರಪ್, ಕಲ್ಲುಸಕ್ಕರೆ, ಜೇನುತುಪ್ಪ ಹೀಗೆ ಮನೆ ಔಷಧಿಗಳನ್ನೂ ಪ್ಯಾಕ್ ಮಾಡಿಕೊಂಡು ಹೊರಟೆವು. ಬೆಳಗ್ಗೆ 7:30 ವಿಮಾನದಲ್ಲಿ ಕುಳಿತು 9:30ಕ್ಕೆ ಭುವನೇಶ್ವರ ತಲುಪಿದೆವು. ಅಲ್ಲಿ ಭಾವ, ಅಕ್ಕ ಮತ್ತು ಮಗಳು ಪ್ರಣಮ್ಯ ನಮಗಿಂತ ಮೊದಲೇ ತಲುಪಿ ಕಾಯುತ್ತಿದ್ದರು. ಅಲ್ಲಿ ಏರ್ಪೋರ್ಟ್ನಲ್ಲಿ ನಮ್ಮ ಟ್ರಿಪ್-ವ್ಯವಸ್ಥಾಪಕ ಮತ್ತು 4 ದಿನ ನಮ್ಮೊಂದಿಗಿದ್ದು ನಮ್ಮನ್ನು ತಿರುಗಾಡಿಸಲು ಸಾರಥಿಯಾದ ಭುವನ್ ತಯಾರಾಗಿ ಕಾಯುತ್ತಿದ್ದರು. ನಮಗೆ ಹೂವಿನ ಗುಚ್ಛ ನೀಡಿ ಸ್ವಾಗತ ಮಾಡಿದ್ದು ಖುಷಿಯಾಯಿತು.
ಸೂರ್ಯ ದೇವಾಲಯ
ದೋಸೆ, ಇಡ್ಲಿ ಸಿಗುವಂಥ ಹೊಟೇಲ್ನಲ್ಲಿ ತಿಂಡಿ ತಿಂದು ಕೊನಾರ್ಕ್ ಸೂರ್ಯ ದೇವಸ್ಥಾನಕ್ಕೆ ಹೋದೆವು. ಸಮುದ್ರ ತೀರದಲ್ಲಿರುವ ಈ ದೇವಾಲಯವಿದು. 7 ಕುದುರೆಗಳು ರಥವನ್ನು ಎಳೆಯುತ್ತಿರುವಂತೆ ಕೆತ್ತಲಾದ ಈ ದೇವಾಲಯದ ವಾಸ್ತುಶಿಲ್ಪಕ್ಕೆ ಎಂಥವನು ತಲೆಬಾಗಲೇ ಬೇಕು. 24 ಸುಂದರ ಚಕ್ರಗಳು ಈ ರಥದ ಮುಖ್ಯ ಆಕರ್ಷಣೆ. ರಥದ ಸುತ್ತಲೂ ವಿವಿಧ ಪೌರಾಣಿಕ, ಕಾಲ್ಪನಿಕ ಕೆತ್ತನೆಗಳಿದ್ದು, ಅಲ್ಲಿಯ ಗೈಡ್ ನಮಗೆ ಅದ್ಭುತವಾಗಿ ಅದರ ವಿವರಣೆಗಳನ್ನು ನೀಡುತ್ತಾ, ನಡುನಡುವೆ ನಮ್ಮ ಪಟಗಳನ್ನು ನಮ್ಮ ಮೊಬೈಲಿನಲ್ಲಿ ತೆಗೆದುಕೊಟ್ಟರು.
24 ಚಕ್ರಗಳು ದಿನದ 24 ಗಂಟೆಗಳ ಸಂಕೇತವಾಗಿಯೂ, ಅಲ್ಲಲ್ಲಿ ರಥದ ನೆರಳು ಬೀಳುವ ಪರಿ ನೋಡಿಯೇ ಗಂಟೆಯನ್ನು ಹಿಂದಿನ ಕಾಲದಲ್ಲಿ ನಿಖರವಾಗಿ ಗುರುತಿಸುತ್ತಿದ್ದ ಪರಿ ಆಶ್ಚರ್ಯ ಉಂಟು ಮಾಡಿತು. ದೇವಾಲಯದ ಒಳಗಿನ ಆವರಣದಲ್ಲಿ ದುರಸ್ತಿ ನಡೆಯುತ್ತಿದ್ದ ಕಾರಣ ನಮಗೆ ದೇವಾಲಯದ ಒಳನೋಟವನ್ನು ಸವಿಯುವ ಅವಕಾಶ ಸಿಗಲಿಲ್ಲ. ಅಲ್ಲಿಂದ ಮಧ್ಯಾಹ್ನದ ಊಟ ಮುಗಿಸಿ, ಚಂದ್ರಭಾಗಾ ಬೀಚ್ ನೋಡಲು ಹೋದೆವು. ಅಲ್ಲಿಯ ನೋಟ ಸವಿದು ಸಾರಥಿ ನಮ್ಮನ್ನು ಪುರಿಯ ಹೊಟೇಲ್ ರೂಮಿಗೆ ಇಳಿಸಿದರು. ಹೊಟೇಲ್ನಲ್ಲಿ ಸ್ವಲ್ಪ ಫ್ರೆಶ್ ಅಗಿ ನಾವು ಪುರಿಯ ಬೀಚ್ ನೋಡಲು ಹೋದೆವು. ರಾತ್ರಿ ಊಟದ ನಂತರ ಹೊಟೇಲ್ ಹೊರಗೆ ಹೋಗಿ ಸುತ್ತಾಡುತ್ತಾ ಅಲ್ಲೇ ಬಿಸಿಬಿಸಿಯಾಗಿ ಮಾಡುತ್ತಿದ್ದ ರಸಗುಲ್ಲಾ, ವಿವಿಧ ಹಾಲಿನ ಸಿಹಿಖಾದ್ಯಗಳನ್ನು ಸವಿದೆವು.

ಭಯಗೊಂಡ ಆ ಕ್ಷಣ
ಮಾರನೆಯ ದಿನ ಬೆಳಗ್ಗೆ ಪುರಿಯ ಜಗನ್ನಾಥ ದೇವಾಲಯದತ್ತ ಸಾಗಿದೆವು. ದೇವಾಲಯದ ಪಾಂಡಾ (ಪಂಡಿತಜಿಯ ಸಣ್ಣ ರೂಪ ಇರಬಹುದು) ನಮ್ಮನ್ನು ನೂಕುನುಗ್ಗಲು ಇದ್ದರೂ ಅದನ್ನು ದಾಟಿಸಿ ಒಳಗೆ ಕರೆದುಕೊಂಡು ಹೋದರು. ನಮ್ಮ ದಕ್ಷಿಣ ಭಾರತೀಯ ದೇವಾಲಯಗಳಲ್ಲಿ ದೇವಾಲಯದ ಎಡಭಾಗಕ್ಕೆ ಹೋಗುವ ರೂಢಿಯಂತೆ ನನ್ನ ಮಗ ಆ ಕಡೆ ಹೋದ, ನಾವೆಲ್ಲ ಪಾಂಡಾ ಅವರ ಮಾತಿನಂತೆ ಬಲಭಾಗಕ್ಕೆ ನಡೆದೆವು. ಹತ್ತು ವರ್ಷದ ನನ್ನ ಮಗ ಸ್ವಲ್ಪ ಹೊತ್ತಿನಲ್ಲಿ ನಮ್ಮೊಡನೆ ಇಲ್ಲದಿರುವುದನ್ನು ಕಂಡು ನಾವು ಹೌಹಾರಿದೆವು. ನಮ್ಮನ್ನು ಒಂದು ಕಡೆ ಕೂರಿಸಿ, ಮನೆಯವರು, ಭಾವ ಒಂದೊಂದು ಕಡೆ ಹುಡುಕಲು ಹೊರಟರು. ಗೊತ್ತಿಲ್ಲದ ಊರಲ್ಲಿ ಅವನನ್ನು ಅಷ್ಟು ಜನರ ನಡುವೆ ಹೇಗೆ ಹುಡುಕುವುದು? ನಮಗೆಲ್ಲ ತುಂಬಾ ಗಾಬರಿಯಾಯಿತು. ಆ ಜಗನ್ನಾಥನೇ ನನ್ನ ಮಗನನ್ನು ಒಂದು ಕಡೆ ನಿಲ್ಲಲು ಪ್ರೇರೆಪಿಸಿದನೇನೋ! ಭಾವನವರು ಹುಡುಕಿಕೊಂಡು ಹೋದ ದಾರಿಯಲ್ಲಿ ಸಿಕ್ಕನಂತೆ. ದೇವರ ದರ್ಶನದ ಮೊದಲೇ ಅವನ ಲೀಲೆ ನಮಗೆ ತಿಳಿಯುವಂತಾಯಿತು.
ಪಾಂಡಾಜಿ ನಮಗೆ ಪ್ರತಿಯೊಬ್ಬರು ಕೈಹಿಡಿದುಕೊಳ್ಳಿ, ಬಹಳ ಜನರಿರುವ ಕಾರಣ ಕಳೆದುಹೋಗಬಹುದು ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದರು. ನಮ್ಮನ್ನು ದೇವಾಲಯದ ಒಳಭಾಗಕ್ಕೆ ಕರೆದುಕೊಂಡು ಹೋಗಿ ʼಕೃಷ್ಣ, ಬಲಭದ್ರ, ಸುಭದ್ರೆʼಯ ದರ್ಶನ ಮಾಡಿಸಿದರು. 3 ಮೂರ್ತಿಗಳು ಮರದಿಂದ ಮಾಡಿದ್ದು, ದೇವಾಲಯದ ಬಗ್ಗೆ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ದೇವಾಲಯದ ನಿರ್ಮಾಣದ ಸಮಯದಲ್ಲಿ ರಾಣಿಯು, ʼಮೂರ್ತಿಗಳ ಕೆತ್ತನೆ ಕಾರ್ಯ ನಡೆಯುತ್ತಿದೆಯೇ?ʼ ಎಂದು ವಿಧಿಸಿದ ಗಡುವಿಗಿಂತ ಮೊದಲೇ ವೀಕ್ಷಿಸಲು ಹೋದ ಕಾರಣ ಶಿಲ್ಪಿ ಮಾಯವಾದನೆಂದೂ, ಇಲ್ಲಿ ಕೃಷ್ಣನ ಮೂರ್ತಿಗೆ ಹೃದಯ ಇದೆಯೆಂದೂ ಹಾಗೂ ಡಾ. ಪಾರ್ವತಿ ಐತಾಳ್ ಅವರು ಬರೆದ ʼಸಂಚಾರಿ ಭಾವʼ ಕೃತಿಯಲ್ಲಿ ದೇವರಿಗೆ ಆರೋಗ್ಯ ಕೆಟ್ಟಾಗ ಮದ್ದು ಮಾಡುವ ಮತ್ತು ದೇವರಿಗೆ ಸ್ನಾನ ಮಾಡಿಸಲು ದೇವಾಲಯದ ಒಳಗೆ ಇರುವ ಬಾವಿಯ ಕುರಿತ ಕಥೆಗಳಿವೆ.
ಜಗನ್ನಾಥನ ವಿಶೇಷಗಳು
ಇಲ್ಲಿನ ರಥಯಾತ್ರೆ, ಅಡುಗೆಮನೆಯೂ ವಿಶ್ವವಿಖ್ಯಾತವಾಗಿದೆ. ರಥಯಾತ್ರೆಯ ಸಮಯದಲ್ಲಿ ದೇವರಿಗೆ ಹೊಸ ಕೈಗಳನ್ನು ಜೋಡಿಸುವ ಮತ್ತು ಪ್ರತಿ 12 ವರ್ಷಗಳಿಗೊಮ್ಮೆ ದೇವರ ಮೂರ್ತಿಯನ್ನು ಹೊಸದಾಗಿ ಕೆತ್ತುವ ಸಂಪ್ರದಾಯವಿದೆಯೆಂದು ಕೇಳಿದ್ದೇವೆ. ಅಡುಗೆಮನೆಯಲ್ಲೂ ಒಂದರ ಮೇಲೆ ಒಂದು ಮಡಕೆ ಜೋಡಿಸಿಟ್ಟು ಒಲೆಯ ಮೇಲೆ ಇಟ್ಟರೆ ಎಲ್ಲ ಮಡಕೆಗಳಲ್ಲೂ ಖಾದ್ಯಗಳು ಬೆಂದಿರುತ್ತವೆಯೆಂದೂ ಕೇಳಿದ್ಧೇವೆ. ದೇವಾಲಯದ ಪಕ್ಕದಲ್ಲಿ ಅನೇಕ ವ್ಯಾಪಾರಿಗಳು ಪ್ರಸಾದದ ಥಾಲಿಯನ್ನೂ, ಬೇರೆ ಬೇರೆ ಖಾದ್ಯಗಳನ್ನು ತೆಗೆದುಕೊಂಡು ಕುಳಿತಿರುತ್ತಾರೆ. ಗೋಪುರದ ಮೇಲಿರುವ ಧ್ವಜವು ಹಳದಿ ಅಥವಾ ಕೆಂಪು ಬಣ್ಣದಲ್ಲಿದ್ದು, ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಹಾರಾಡುವ ವಿಶೇಷತೆ ಹೊಂದಿದೆ. ಪ್ರತಿದಿನ ಅರ್ಚಕರು ಅಷ್ಟು ಎತ್ತರದಲ್ಲಿರುವ ಧ್ವಜವನ್ನು ಬದಲಾಯಿಸುತ್ತಾರೆ.

ಶಾಂತಿ ಸ್ತೂಪ
ಧೌಲಿ ಶಾಂತಿ ಸ್ತೂಪದಲ್ಲಿ ಕಳಿಂಗ ಯುದ್ಧದ ಬಳಿಕ ಅಶೋಕರಾಜನು ಬೌದ್ಧ ಧರ್ಮ ಸ್ವೀಕರಿಸಿದ ಸಂಕೇತವಾಗಿರುವ ಹಲವು ಚಿತ್ರಗಳನ್ನು ಕಾಣಬಹುದು. ಸಂಜೆ ವೇಳೆ ಅಲ್ಲಿ ಧ್ವನಿ, ಬೆಳಕಿನ ಪ್ರದರ್ಶನವಿರುತ್ತದೆ. ನಾವು ಬೆಳಗ್ಗೆ ಹೋದ ಕಾರಣ ನೋಡಲು ಸಾಧ್ಯವಾಗಲಿಲ್ಲ. ಸಾಖೀಗೋಪಾಲ(ಸಾಕ್ಷಿ)ದೇವಾಲಯದಲ್ಲಿ ದರ್ಶನ ಮುಗಿಸಿ ಅಲ್ಲಿಂದ ನಂದಕಾನನ್ ಮೃಗಾಲಯಕ್ಕೆ ಭೇಟಿ ನೀಡಿದೆವು. ಇದು ವಿಶಾಲ ಮೃಗಾಲಯವಾಗಿದ್ದು, ಮಕ್ಕಳಿಗೆ ವಿವಿಧ ಪ್ರಾಣಿಗಳನ್ನು ನೋಡಿ ಬಹಳ ಖುಶಿಯಾಯಿತು.
ಪ್ರವಾಸದ ನಾಲ್ಕನೆಯ ದಿನ ಬೆಳಗ್ಗೆ ಉಪಾಹಾರ ಮುಗಿಸಿ, ಲಿಂಗರಾಜ ದೇವಾಲಯಕ್ಕೆ ಹೋದೆವು. ಅಲ್ಲಿನ ಬೃಹತ್ ದೇವಾಲಯದ ಕೆತ್ತನೆಯೂ ಅದ್ಭುತ. ನಾವು ಭೇಟಿ ನೀಡಿದ್ದು ಸೋಮವಾರ ಆದ ಕಾರಣ ಹಾಗೂ ಆ ದಿನ ಅಮಾವಾಸ್ಯೆಯೂ ಇದ್ದ ಕಾರಣ ಬಹಳ ಜನನಿಬಿಡವಾಗಿತ್ತು. ಮುಕ್ತೇಶ್ವರ ದೇವಾಲಯದ ಕಮಾನುದ್ವಾರ ಬಹುಸುಂದರವಾಗಿದ್ದು ಅಲ್ಲಿ ಬಹಳ ಪಟಗಳನ್ನು ತೆಗೆದುಕೊಂಡೆವು. ಅಲ್ಲೇ ಹತ್ತಿರದಲ್ಲಿರುವ ರಾಜರಾಣಿ ದೇವಾಲಯದಲ್ಲಿ ಯಾವುದೇ ಮೂರ್ತಿಯಿಲ್ಲದಿದ್ದರೂ ಸುಂದರ ಶಿಲ್ಪಕಲೆಯನ್ನು ಕಾಣಬಹುದು. ಉದಯಗಿರಿ ಮತ್ತು ಖಂಡಗಿರಿ ಗುಹೆಗಳ ಕೆತ್ತನೆಯಂತೂ ಪ್ರವಾಸಿಗರ ಮನಸೂರೆಗೊಳ್ಳುವಂತಿದೆ. ಜೈನ ತಪಸ್ವಿಗಳ ವಾಸಕ್ಕಾಗಿ ನಿರ್ಮಿಸಲ್ಪಟ್ಟ ಗುಹೆಗಳು, ರಾಣೀಗುಫಾ ಎಂಬ ಎರಡಂತಸ್ತಿನ ಗುಹೆಗಳು, ಹಾಥಿಗುಫಾ, ಗಣೇಶ ಗುಫಾ ಎಂಬ ಆನೆ ಮತ್ತು ಗಣೇಶನ ಕೆತ್ತನೆಯ ಗುಹೆಗಳು ಆಕರ್ಷಣೀಯವಾಗಿವೆ. ಅಲ್ಲಿಂದ ಊಟ ಮುಗಿಸಿ ಒರಿಸ್ಸಾದ ಸಾಂಪ್ರದಾಯಿಕ ಮಗ್ಗದ ಸೀರೆಗಳ(ಸಾಂಬಾಲ್ಪುರಿ) ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿಂದ ಅಲ್ಲಿಯ ಮಾರ್ಕೆಟ್ನಲ್ಲಿ ಸಾಂಬಾಲ್ಪುರಿ ಚಿತ್ರ ಹೊಂದಿರುವ ಕಾಟನ್ ಕುರ್ತಾಗಳನ್ನು ಕೊಂಡು ವಾಪಸ್ ವಿಮಾನ ನಿಲ್ದಾಣಕ್ಕೆ ಬಂದೆವು. ಅಲ್ಲಿಂದ ಬೆಂಗಳೂರಿಗೆ ವಾಪಸ್ಸಾದೆವು.
ಪ್ರವಾಸದ ನಾಲ್ಕು ದಿನವೂ ಅಲ್ಲಿನ ರಸಗುಲ್ಲಾದ ಸವಿ, ಅಲ್ಲಿನ ರಸ್ತೆಗಳ ಮೇಲೆ ಇಕಾತ್ ಕಲೆ ನಮ್ಮನ್ನು ಸೆಳೆಯಿತು. ಪ್ರವಾಸಕ್ಕೆ ಹೋಗುವ ಸ್ವಲ್ಪ ದಿನಗಳ ಮೊದಲೇ ಹಲವಾರು ಕನ್ನಡ ಬರಹಗಾರರು ತಾವು ಒರಿಸ್ಸಾ ಪ್ರವಾಸಕ್ಕೆ ಹೋದ ಅನುಭವಗಳನ್ನು ದಾಖಲಿಸಿದ್ದರು. ಅವರನ್ನು ಹಿಂಬಾಲಿಸಿ ನಾವು ಹೋದೆವು. ಪ್ರವಾಸದ ಆದಿ ಇಂದ ಅಂತ್ಯದವರೆಗೂ ʼಭುವನೇಶ್ವರದ ತುಂಬಾ ಭುವನೇಶ್ವರಿಯ ಕುವರʼರೇ ನಮ್ಮೊಂದಿಗೆ ಹೋದಲೆಲ್ಲ ಸಿಗುತ್ತಿದ್ದರು. ಹೀಗಾಗಿ ನಾವು ಕರ್ನಾಟಕದಿಂದ ಹೊರಗೆ ಹೋಗಿದ್ದೇವೆ ಎಂದು ಅನಿಸಲೇ ಇಲ್ಲ. ವಾಪಸ್ಸು ಬಂದ ಮೇಲೆ ಕೂಡ ಅಲ್ಲಿನ ಸವಿನೆನಪುಗಳು ನಮ್ಮನ್ನು ಕಾಡುತ್ತಿದ್ದವು.
ಮಾಹಿತಿ ಪೆಟ್ಟಿಗೆ:
ಎಲ್ಲ ದೇವಾಲಯಗಳಲ್ಲೂ ಮೊಬೈಲ್ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ. ದೇವಾಲಯದ ಪಕ್ಕದಲ್ಲೇ ಮೊಬೈಲ್, ಚಪ್ಪಲಿ ಇಡಲು ಹಲವಾರು ಸ್ಟಾಂಡ್ ಗಳಿವೆ. ಕೆಲವೊಮ್ಮೆ ನಾವು ಸ್ಟಾಂಡಿನಲ್ಲಿಟ್ಟರೆ, ಕೆಲವೊಮ್ಮೆ ನಮ್ಮ ವಾಹನದಲ್ಲೇ ಬಿಡುತ್ತಿದ್ದೆವು.