- ಸೌಮ್ಯ ಭಾರ್ಗವ್‌

ಕಾಶ್ಮೀರ ಎಂದಾಕ್ಷಣ ಹಿಮದಿಂದ ಆವೃತವಾದ ಬೆಟ್ಟಗಳು, ಸರೋವರಗಳು, ಹಸಿರು ಕಣಿವೆಗಳು ಮತ್ತು ಸುಂದರ ಪ್ರಕೃತಿ ಕಣ್ಣ ಮುಂದೆ ಬರುತ್ತದೆ. ಆದರೆ ಜೂನ್ 23ರಂದು ನಾವು ಕಂಡ ಕೆರನ್ ಕಣಿವೆ ಕಾಶ್ಮೀರದ ಮತ್ತೊಂದು ವಿಭಿನ್ನ ಮುಖವನ್ನು ಪರಿಚಯಿಸಿತು. ಹಿಮಕ್ಕಿಂತ ಹಚ್ಚಹಸಿರಿನಿಂದ ಕಂಗೊಳಿಸುವ, ಗಡಿಯಂಚಿನ ಬದುಕನ್ನು ಹತ್ತಿರದಿಂದ ಪರಿಚಯಿಸಿತು.

ಜೂನ್ 23ರ ಬೆಳಗ್ಗೆ ಸುಮಾರು 9 ಗಂಟೆಗೆ ಶ್ರೀನಗರದಿಂದ ನಮ್ಮ ಪ್ರಯಾಣ ಆರಂಭವಾಯಿತು. ನಗರವನ್ನು ಹಿಂದೆ ಬಿಟ್ಟು ಮುಂದೆ ಸಾಗುತ್ತಿದ್ದಂತೆ ದೃಶ್ಯಗಳು ನಿಧಾನವಾಗಿ ಬದಲಾಗತೊಡಗಿದವು. ರಸ್ತೆಯ ಎರಡೂ ಬದಿಗಳಲ್ಲಿ ಹಚ್ಚಹಸಿರಿನ ಬೆಟ್ಟಗಳು, ದಟ್ಟ ಕಾಡುಗಳು, ಕಣಿವೆಗಳು ಮತ್ತು ಮಧ್ಯೆ ಹರಿಯುವ ನದಿ, ಪ್ರತಿಯೊಂದು ತಿರುವಿನಲ್ಲೂ ಹೊಸ ದೃಶ್ಯ.

ಜೂನ್ ತಿಂಗಳಲ್ಲಿ ಕೆರನ್‌ನಲ್ಲಿ ಬೆಟ್ಟಗಳೆಲ್ಲ ಹಸಿರಿನ ಹೊದಿಕೆ ಹೊದ್ದಂತೆ ಕಾಣುತ್ತವೆ. ಹಸಿರಿನ ವಿವಿಧ ಛಾಯೆಗಳಲ್ಲಿ ಕಾಣುವ ಬೆಟ್ಟಗಳು, ತಂಪಾದ ವಾತಾವರಣ ಮತ್ತು ನಿಸರ್ಗದ ನಿಶ್ಶಬ್ದತೆ ನಮ್ಮ ಪ್ರಯಾಣವನ್ನು ಮತ್ತಷ್ಟು ಸುಂದರಗೊಳಿಸಿತು.

ಇದನ್ನೂ ಓದಿ: ರೋರಿಕ್–ದೇವಿಕಾ ರಾಣಿ ಎಸ್ಟೇಟ್‌ನಲ್ಲಿ ಕೈಗೊಳ್ಳಲಾಗುತ್ತಿರುವ ಎಕೋ ಟೂರಿಸಂ ಕಾಮಗಾರಿಗಳನ್ನು ಚುರುಕುಗೊಳಿಸಿ: ಕೆ.ಜೆ. ಜಾರ್ಜ್

ಅನುಮತಿ ಪಡೆಯುವ ಅನುಭವ

ಕೆರನ್ ಗಡಿಯಂಚಿನ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಅನುಮತಿ ಪಡೆಯುವುದು ಅತ್ಯಂತ ಮುಖ್ಯ. ನಮ್ಮ ಪ್ರಯಾಣದ ಸಂದರ್ಭದಲ್ಲಿ ಅಗತ್ಯ ಅನುಮತಿಯನ್ನು ಕ್ರಾಲ್ಪೋರಾ ಪೊಲೀಸ್‌ ಠಾಣೆಯಲ್ಲಿ ಪಡೆದುಕೊಂಡೆವು. ಅದೇ ರೀತಿ ಕುಪ್ವಾರ ಜಿಲ್ಲೆಯಲ್ಲೂ ಅನುಮತಿ ಪಡೆದುಕೊಂಡೆವು. ಗಡಿಯಂಚಿನ ಪ್ರದೇಶಕ್ಕೆ ಪ್ರವಾಸ ಕೈಗೊಳ್ಳುವವರು ಅನುಮತಿ ಮತ್ತು ದಾಖಲೆಗಳ ವಿಚಾರದಲ್ಲಿ ಮುಂಚಿತವಾಗಿ ಮಾಹಿತಿ ಪಡೆದುಕೊಳ್ಳುವುದು ಅತ್ಯಂತ ಮುಖ್ಯ ಎಂಬುದು ತಿಳಿಯಿತು.

Untitled design - 2026-10-08T145736.907

ಬದಲಾಗಿರುವ ಕೆರನ್

ಕೆರನ್‌ನಲ್ಲಿ ನಿಂತಾಗ, ಈ ಪ್ರದೇಶವು ಕಳೆದ ಒಂದು ದಶಕದಲ್ಲಿ ಕಂಡಿರುವ ಬದಲಾವಣೆಯ ಬಗ್ಗೆ ಯೋಚಿಸದೇ ಇರಲು ಸಾಧ್ಯವಾಗಲಿಲ್ಲ. ಸುಮಾರು 10-12 ವರ್ಷಗಳ ಹಿಂದೆ ಈ ಪ್ರದೇಶದ ವಾತಾವರಣ ಇಂದಿನ ಪ್ರವಾಸಿ ಅನುಭವಕ್ಕಿಂತ ಬಹಳ ಭಿನ್ನವಾಗಿತ್ತು ಎಂದು ಸ್ಥಳೀಯವಾಗಿ ತಿಳಿದುಕೊಂಡೆವು.

ಕಿಶನ್‌ಗಂಗಾ ನದಿಯ ಇನ್ನೊಂದು ಬದಿಯಲ್ಲಿ ಪಾಕಿಸ್ತಾನ ಆಡಳಿತದಲ್ಲಿರುವ ಪ್ರದೇಶವಿದ್ದು, ಅಲ್ಲಿ ಇದೇ ನದಿ ನೀಲಂ (Neelum) ಎಂದು ಕರೆಯಲ್ಪಡುತ್ತದೆ. ಆ ಭಾಗವು ನೀಲಂ ಕಣಿವೆಯೊಂದಿಗೆ ಗುರುತಿಸಿಕೊಂಡಿದೆ. ಅಲ್ಲಿ ಪ್ರವಾಸೋದ್ಯಮ ಮತ್ತು ಹೊಟೇಲ್ ವ್ಯವಸ್ಥೆಯೂ ಸಾಕಷ್ಟು ಅಭಿವೃದ್ಧಿಯಾಗಿರುವುದಾಗಿ ತಿಳಿಯಿತು.

ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತದ ಬದಿಯ ಕೆರನ್ ಕೂಡ ಬಾರ್ಡರ್‌ ಟೂರಿಸಂ ಮೂಲಕ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಒಮ್ಮೆ ಸಾಮಾನ್ಯ ಪ್ರವಾಸಿಗರು ಸುಲಭವಾಗಿ ತಲುಪಲು ಸಾಧ್ಯವಾಗದ ಪ್ರದೇಶವೆಂದು ಪರಿಗಣಿಸಲಾಗುತ್ತಿದ್ದ ಈ ಗಡಿಯಂಚಿಗೆ ಇಂದು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರು ಬರುತ್ತಿದ್ದಾರೆ.

ನಮ್ಮ ಪ್ರವಾಸದ ಅತ್ಯಂತ ನೆನಪಿನಲ್ಲಿ ಉಳಿದ ಕ್ಷಣಗಳಲ್ಲಿ ಒಂದು ಧ್ವಜಸ್ತಂಭದ ಬಳಿ ಕಳೆದ ಸಮಯ. ಸ್ಥಳೀಯರ ಡೋಲಕ್‌ನ ತಾಳಕ್ಕೆ ನಮ್ಮ ತಂಡದ ಉತ್ಸಾಹ ಮತ್ತಷ್ಟು ಹೆಚ್ಚಾಯಿತು. ನಾವು ಧ್ವಜಸ್ತಂಭದ ಬಳಿ ನೃತ್ಯ ಮಾಡುತ್ತಾ ʼಭಾರತ್ ಮಾತಾ ಕಿ ಜೈʼ ಎಂದು ಘೋಷಣೆ ಕೂಗಿದೆವು. ನಾವು ನಾಲ್ವರೂ ಆ ಕ್ಷಣವನ್ನು ಸಂಪೂರ್ಣವಾಗಿ ಆನಂದಿಸಿದೆವು.

ಗಡಿಯಾಚೆಗಿನ ಜನರಿಗೆ ಕೈ ಬೀಸಿದ ಕ್ಷಣ

ಕೆರನ್‌ನ ಮತ್ತೊಂದು ವಿಶಿಷ್ಟ ಅನುಭವವೆಂದರೆ ಗಡಿಯಾಚೆಯ ಪ್ರದೇಶವನ್ನು ಹತ್ತಿರದಿಂದ ನೋಡುವ ಅವಕಾಶ. ಅನುಮತಿಸಲಾದ ಸ್ಥಳದಿಂದ ಗಡಿಯಾಚೆ ಇರುವ ಜನರನ್ನು ದೂರದಿಂದ ನೋಡಬಹುದಾಗಿತ್ತು. ನಾವು ಕೈ ಬೀಸಿದಾಗ ಅವರೂ ನಮಗೆ ಕೈ ಬೀಸಿ ಪ್ರತಿಕ್ರಿಯಿಸಿದ ಕ್ಷಣ ನಮ್ಮೆಲ್ಲರಿಗೂ ಬಹಳ ವಿಶೇಷವಾಗಿ ಅನಿಸಿತು. ಕೆಲವೇ ಕ್ಷಣಗಳ ಆ ಸರಳ ಮಾನವೀಯ ಸಂವಹನ ಮನಸಿನಲ್ಲಿ ಬಹಳ ಹೊತ್ತು ಉಳಿಯಿತು.

Untitled design - 2026-10-08T145741.470

ಕೆರನ್ ತಲುಪಿದ ನಂತರ ಮತ್ತೊಂದು ವಿಭಿನ್ನ ಅನುಭವ ಎದುರಾಯಿತು. ಅಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲ. Wi-Fi ಕೂಡ ಇಲ್ಲ. ಮೊದಲಿಗೆ ಸ್ವಲ್ಪ ವಿಚಿತ್ರವೆನಿಸಿದರೂ, ನಂತರ ಅದೇ ಪ್ರವಾಸದ ಒಂದು ಸುಂದರ ಭಾಗವಾಗಿ ಅನಿಸಿತು. ನಿರಂತರ ಕರೆಗಳು, ಮೆಸೇಜ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಿಂದ ದೂರವಾಗಿ ನಾವು ಪರಸ್ಪರ ಮಾತನಾಡಿದೆವು, ನಕ್ಕೆವು, ಪ್ರಕೃತಿಯನ್ನು ನೋಡಿದೆವು ಮತ್ತು ಫೊಟೋಗಳನ್ನು ತೆಗೆದುಕೊಂಡೆವು. ಹೊರಗಿನ ಪ್ರಪಂಚದ ಸಂಪರ್ಕ ಕಡಿಮೆಯಾದರೂ, ನಮ್ಮ ನಾಲ್ವರ ನಡುವಿನ ಸಂಪರ್ಕ ಮಾತ್ರ ಇನ್ನಷ್ಟು ಗಟ್ಟಿಯಾಯಿತು.

ಕಟ್ಟುನಿಟ್ಟಿನ ಭದ್ರತೆ

ಕೆರನ್ ಸಾಮಾನ್ಯ ಪ್ರವಾಸಿ ತಾಣವಲ್ಲ. ಗಡಿಯಂಚಿನ ಪ್ರದೇಶವಾಗಿರುವುದರಿಂದ ಭದ್ರತಾ ತಪಾಸಣೆ ಅತ್ಯಂತ ಕಟ್ಟುನಿಟ್ಟಾಗಿದೆ. ಗುರುತಿನ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ನಮ್ಮ ಪ್ರಯಾಣದ ಸಂದರ್ಭದಲ್ಲಿ ಆಧಾರ್ ಕಾರ್ಡ್‌ಗಳನ್ನು ಭದ್ರತಾ ಸಿಬ್ಬಂದಿ ತಮ್ಮ ಬಳಿ ಇಟ್ಟುಕೊಂಡು, ನಾವು ಹಿಂದಿರುಗಿದ ನಂತರ ಮರಳಿ ನೀಡಿದರು. ಮೊಬೈಲ್ ಫೋನ್‌ಗಳನ್ನೂ ಪರಿಶೀಲಿಸಲಾಗುತ್ತಿತ್ತು.

ನನ್ನ ಮೊಬೈಲ್ ಪರಿಶೀಲಿಸುವ ಸಂದರ್ಭದಲ್ಲಿ ನನ್ನ ಬ್ಲಾಕ್ಡ್‌ ಲಿಸ್ಟ್‌ನಲ್ಲಿ ಕೆಲವು ಪಾಕಿಸ್ತಾನಿ ಸಂಖ್ಯೆಗಳು ಇರುವುದನ್ನು ಭದ್ರತಾ ಸಿಬ್ಬಂದಿ ಗಮನಿಸಿದರು. ಈ ಕುರಿತು ಸುಮಾರು 10-15 ನಿಮಿಷಗಳ ಕಾಲ ನನ್ನನ್ನು ವಿಚಾರಿಸಲಾಯಿತು.

ನಾನು ಅವರಿಗೆ ಸ್ಪಷ್ಟವಾಗಿ ವಿವರಿಸಿದೆ. ನಾನು ಪ್ರಯಾಣ ಸಂಸ್ಥೆಯನ್ನು ನಡೆಸುತ್ತಿದ್ದು, ಪ್ರತಿದಿನ ಅನೇಕ ಅಪರಿಚಿತ ಕರೆಗಳು ಮತ್ತು ಸ್ಪಾಮ್‌ ಮೆಸೇಜ್‌ ಬರುತ್ತವೆ. ಆದ್ದರಿಂದ ಪರಿಚಯವಿಲ್ಲದ ಅಥವಾ ನಿರಂತರ ಸ್ಪಾಮ್‌ ಮಾಡುವ ಹಲವಾರು ಸಂಖ್ಯೆಗಳನ್ನು ನಾನು ಬ್ಲಾಕ್‌ ಮಾಡುತ್ತೇನೆ. ನನ್ನ ಬ್ಲಾಕ್ಡ್‌ ಲಿಸ್ಟ್‌ನಲ್ಲಿದ್ದ ಕೆಲವು ಸಂಖ್ಯೆಗಳು ಪಾಕಿಸ್ತಾನಿ ಸಂಖ್ಯೆಗಳಾಗಿವೆ ಎಂಬುದು ನನಗೆ ತಿಳಿದಿರಲಿಲ್ಲ ಎಂದು ವಿವರಿಸಿದೆ. ಅವರು ವಿಚಾರಿಸಿದ ನಂತರ ಪ್ರಕ್ರಿಯೆ ಮುಂದುವರಿಯಿತು. ಕೆರನ್‌ನಿಂದ ಹಿಂದಿರುಗುವಾಗಲೂ ಭದ್ರತಾ ತಪಾಸಣೆ ಮುಂದುವರಿಯಿತು. ಪ್ರತಿಯೊಂದು ಬ್ಯಾಗ್‌ನ್ನೂ ಸ್ಕ್ಯಾನ್ ಮಾಡಿ ಪರಿಶೀಲಿಸಲಾಗುತ್ತಿತ್ತು.

ಸೈನಿಕರಿಗೊಂದು ಹೃದಯಪೂರ್ವಕ ನಮನ

ಕೆರನ್‌ನಂಥ ಗಡಿಯಂಚಿನ ಪ್ರದೇಶದಲ್ಲಿ ಕೆಲವು ಗಂಟೆಗಳನ್ನು ಕಳೆಯುವಾಗ, ನಮ್ಮ ಗಡಿಯನ್ನು ಕಾಯುತ್ತಿರುವ ಸೈನಿಕರ ಕರ್ತವ್ಯದ ಕಠಿಣತೆ ಎಷ್ಟಿರಬಹುದು ಎಂಬುದು ಸ್ವಲ್ಪವಾದರೂ ಅರ್ಥವಾಗುತ್ತದೆ. ನಾವು ಪ್ರವಾಸಿಗರಾಗಿ ಹಚ್ಚಹಸಿರಿನ ಬೆಟ್ಟಗಳನ್ನು, ಕಿಶನ್‌ಗಂಗಾ ನದಿಯ ಸೌಂದರ್ಯವನ್ನು ಮತ್ತು ಗಡಿಯಂಚಿನ ಅನುಭವವನ್ನು ಆನಂದಿಸಿ ಹಿಂದಿರುಗುತ್ತೇವೆ. ಆದರೆ ನಮ್ಮ ಸುರಕ್ಷತೆಗಾಗಿ ಇದೇ ಪ್ರದೇಶದಲ್ಲಿ ಹಗಲು-ರಾತ್ರಿ ಕರ್ತವ್ಯ ನಿರ್ವಹಿಸುವ ಸೈನಿಕರು ಅಲ್ಲಿಯೇ ಉಳಿಯುತ್ತಾರೆ. ಎಲ್ಲ ಭದ್ರತಾ ಸಿಬ್ಬಂದಿಗೆ ಹೃತ್ಪೂರ್ವಕ ಧನ್ಯವಾದಗಳು. ನಮ್ಮ ದೇಶದ ಗಡಿಯನ್ನು ಕಾಯುತ್ತಿರುವ ಪ್ರತಿಯೊಬ್ಬ ಸೈನಿಕನಿಗೂ ಹೃದಯಪೂರ್ವಕ ನಮನ.

Untitled design - 2026-10-08T145732.544

ಬದಲಾಗುತ್ತಿರುವ ಗಡಿಯಂಚಿನ ಪ್ರವಾಸೋದ್ಯಮ

ಕೆರನ್‌ನಲ್ಲಿ ಇಂದು ಕಾಣುತ್ತಿರುವ ಪ್ರವಾಸಿಗರ ಸಂಚಾರ ಗಮನಾರ್ಹ. ಕೆಲ ವರ್ಷಗಳ ಹಿಂದೆ ಈ ಪ್ರದೇಶವನ್ನು ಮುಖ್ಯವಾಗಿ ಗಡಿಯಂಚಿನ ಸೂಕ್ಷ್ಮ ಪ್ರದೇಶವೆಂದು ನೋಡಲಾಗುತ್ತಿತ್ತು. ಈಗ ಪ್ರವಾಸೋದ್ಯಮದ ಮೂಲಕ ಕೆರನ್ ತನ್ನದೇ ಆದ ಹೊಸ ಗುರುತನ್ನು ಪಡೆದುಕೊಳ್ಳುತ್ತಿದೆ. ಭಾರತದ ವಿವಿಧ ಭಾಗಗಳಿಂದ ಜನರು ಇಲ್ಲಿಗೆ ಬರುತ್ತಿದ್ದಾರೆ. ಕುಟುಂಬಗಳು ಸಮಯ ಕಳೆಯುತ್ತಿವೆ. ಪ್ರಕೃತಿಯನ್ನು ಆಸ್ವಾದಿಸುತ್ತಿವೆ. ಗಡಿಯಂಚಿನ ವಾತಾವರಣವನ್ನು ಅನುಭವಿಸುತ್ತಿವೆ.

ಒಂದು ಮರೆಯಲಾಗದ ಅನುಭವ

ಗೀತಾ, ಉಷಾ, ನವ್ಯಾ ಮತ್ತು ನಾನು, ನಾಲ್ವರೂ ಕೆರನ್‌ನ ಪ್ರತಿಯೊಂದು ಕ್ಷಣವನ್ನೂ ಸಂಪೂರ್ಣವಾಗಿ ಅನುಭವಿಸಿದೆವು. ನಮ್ಮ ಉತ್ಸಾಹ ಮಾತ್ರ ಎಲ್ಲಿಯೂ ಕಡಿಮೆಯಾಗಲಿಲ್ಲ. ಜೂನ್‌ನ ಕೆರನ್ ಹಿಮದ ಕಾಶ್ಮೀರವಲ್ಲ, ಅದು ಹಸಿರಿನ ಕಾಶ್ಮೀರ. ಕೆರನ್‌ನ ನಿಜವಾದ ಸೌಂದರ್ಯ ಅದರ ಬೆಟ್ಟಗಳು ಮತ್ತು ನದಿಗಳಷ್ಟೇ ಅಲ್ಲ, ಗಡಿಯಂಚಿನ ಜೀವನ, ಅಲ್ಲಿನ ಜನರ ಸರಳತೆ, ಧ್ವಜಸ್ತಂಭದ ಬಳಿ ಮೊಳಗುವು ದೇಶಭಕ್ತಿಯ ಘೋಷಣೆ, ನಮ್ಮ ಸೈನಿಕರ ಕಟ್ಟುನಿಟ್ಟಿನ ಭದ್ರತೆ ಎಲ್ಲವೂ ಸುಂದರ ಅನುಭವ. ಕೆಲವು ಪ್ರವಾಸಗಳು ಫೊಟೋಗಳಲ್ಲಿ ಉಳಿಯುತ್ತವೆ. ಕೆಲವು ಪ್ರವಾಸಗಳು ಮನಸಿನಲ್ಲಿ ಉಳಿಯುತ್ತವೆ. ಕೆರನ್, ನಮ್ಮ ಪಾಲಿಗೆ ಅಂಥದ್ದೇ ಒಂದು ಪ್ರವಾಸ.

ಮಾಹಿತಿ ಪೆಟ್ಟಿಗೆ

ಕೆರನ್‌ನಲ್ಲಿ ಭಾರತದ ಗಡಿಯಂಚಿನ ಪ್ರಮುಖ ಅಂಚೆ ಕಚೇರಿಗಳಲ್ಲೊಂದನ್ನು ಕಾಣಬಹುದು. ಇದು ಗಡಿಯಂಚಿನ ಪ್ರದೇಶದಲ್ಲೂ ಸಾಮಾನ್ಯ ಜನಜೀವನ ಹೇಗೆ ಮುಂದುವರಿಯುತ್ತದೆ ಎಂಬುದನ್ನು ತೋರಿಸುವ ಒಂದು ಸಣ್ಣ ಕಿಟಕಿಯಂತಿದೆ. ಕೆರನ್‌ನಲ್ಲಿ ಸಸ್ಯಾಹಾರಿ ಆಹಾರ ದೊರೆಯುತ್ತದೆ. ಆದರೆ ಹೊಟೇಲ್‌ಗಳ ಆಯ್ಕೆ ಸೀಮಿತವಾಗಿದೆ. ಆದ್ದರಿಂದ ಸಂಪೂರ್ಣ ಸಸ್ಯಾಹಾರ ಬಯಸುವವರು ಪ್ರಯಾಣಕ್ಕೂ ಮುನ್ನ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.