ಅಲೆಪ್ಪಿಯ ಹಿನ್ನೀರು
ಶಾಂತವಾಗಿ ಹರಿಯುವ ಹಿನ್ನೀರು, ತಲೆದೂಗುವ ತೆಂಗಿನ ಮರಗಳ ಸಾಲು, ಸಣ್ಣ ಅಲೆಗಳ ಮೇಲೆ ತೇಲುವ ಸುಂದರ ದೋಣಿಮನೆಗಳು... ಇದು 'ದೇವರ ಸ್ವಂತ ನಾಡು' ಕೇರಳದ ಅಲೆಪ್ಪಿಯ ಮನಮೋಹಕ ಸೌಂದರ್ಯ! ಪ್ರಕೃತಿಯ ಮಡಿಲಲ್ಲಿ, ನೀರಿನ ಮೇಲೆ ಮನೆಯಲ್ಲಿ ತೇಲುತ್ತಾ ಸಮಯ ಕಳೆಯುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅಲೆಪ್ಪಿಯ ಬೋಟ್ಹೌಸ್ನಲ್ಲಿ ಕಳೆದ ಒಂದು ದಿನದ ಮರೆಯಲಾಗದ ಅನುಭವದ ಚಿತ್ರಣ ಇಲ್ಲಿದೆ.
- ಶೋಭಾ ಪುರೋಹಿತ್
ಬೋಟ್ ಹೌಸ್‌ನಲ್ಲಿ ಒಂದು ದಿನ ಕಳೆಯಬೇಕು ಎನ್ನುವ ನನ್ನ ಕನಸು ನನಸಾಗಿದ್ದು ನವೆಂಬರ್ 2024ರಲ್ಲಿ. ಕೇರಳದ ಚೆಂಗನಶೇರಿಯಲ್ಲಿರುವ ನನ್ನ ಮಗನ ಸ್ನೇಹಿತನ ಆಹ್ವಾನದ ಮೇರೆಗೆ ಬೆಂಗಳೂರಿನ ಮಡಿವಾಳದಿಂದ ಸ್ಲೀಪರ್ ಬಸ್ಸಿನಲ್ಲಿ ಕೇರಳಕ್ಕೆ ಪ್ರಯಾಣ ಬೆಳೆಸಿದೆವು. ಸುಮಾರು 13 ಗಂಟೆಗಳ ಪ್ರಯಾಣ. ಬಸ್ ನಿಲ್ದಾಣದಿಂದ ಅವರ ಮನೆಗೆ ಪುನಃ ಆಟೋ ಪ್ರಯಾಣ. (ಕೇರಳಕ್ಕೆ ಟ್ರೇನ್, ವಿಮಾನದಲ್ಲೂ ಹೋಗಬಹುದು; ಮತ್ತು ಅಲ್ಲಿ ಉಳಿದುಕೊಳ್ಳಲು ಒಳ್ಳೆಯ ಹೊಟೇಲ್ ಹಾಗೂ ಹೋಮ್ ಸ್ಟೇಗಳಿವೆ.) ಆ ಒಂದು ದಿನ ಅವರ ಮನೆಯಲ್ಲೇ ವಿರಮಿಸಿ ಸಂಜೆ ಹತ್ತಿರದ ಒಂದೆರಡು ದೇವಸ್ಥಾನ ನೋಡಿಕೊಂಡು ಬಂದೆವು. ಮರುದಿನ ಸ್ನಾನ, ತಿಂಡಿ ಮುಗಿಸಿ ಅವರದೇ ಕಾರಿನಲ್ಲಿ ಅಲ್ಲಿಂದ 35 ಕಿಮೀ. ದೂರದ ಅಲೆಪ್ಪಿಗೆ ಹೊರಟೆವು.
ಇದನ್ನೂ ಓದಿ: ಮುತ್ತು ಎಂಬ ಗಮ್ಮತ್ತು
ಬೋಟ್ ಹೌಸ್ ಪ್ರವೇಶ
ಕಾರು ನಿಲ್ಲಿಸಿ ಒಳಗೆ ಹೋಗುತ್ತಲೇ ಸಾಲು ಸಾಲು ಮನೆಗಳಂತೆ ತೋರುವ ನೂರಾರು ಬೋಟುಗಳನ್ನು ನೋಡುವುದೇ ಚೆಂದ. ಬೆಳಗಿನ 11 ಗಂಟೆಗೆ ನಮ್ಮ ಚೆಕ್‌ಇನ್ ಸಮಯವಾಗಿತ್ತು. ಆನ್‌ಲೈನ್‌ನಲ್ಲಿ ಮೊದಲೇ ಕಾಯ್ದಿರಿಸಿದ್ದೆವು. ದಿನಕ್ಕೆ ರು. 10,000 ಬಾಡಿಗೆ. ನಾವು ಎರಡು ರೂಮಿನ ಬೋಟ್ ಕಾಯ್ದಿರಿಸಿದ್ದರೂ ಕಾರಣಾಂತರಗಳಿಂದ ನಮಗೆ ಒಂದು ಕೋಣೆಯ ಬೋಟ್ ಸಿಕ್ಕಿತು. ಹೆಚ್ಚಿನ ಕೊಠಡಿಗಳಿಗೆ ಹೆಚ್ಚಿನ ರೇಟು ಇರಬಹುದು. ಬೋಟಿನ ಮುಂದಿನಿಂದಲೇ ಪ್ರವೇಶ, ಮೇಲೆ ಹತ್ತಿದರೆ ಅಲ್ಲೇ ಚಾಲಕರ ಸೀಟು. ಸ್ವಲ್ಪ ಮುಂದೆ ಸಾಗಿ ಒಂದು ಮೆಟ್ಟಿಲು ಇಳಿದರೆ ಚಿಕ್ಕದೊಂದು ಹಾಲ್, ಮಧ್ಯೆ ಟೇಬಲ್ ಮತ್ತು ಕುರ್ಚಿಗಳು. ಎರಡೂ ಪಕ್ಕದಲ್ಲಿ ಗೋಡೆಗೆ ಸೇರಿದಂತೆ ಉದ್ದುದ್ದ ಬೆಂಚು ಮತ್ತು ಬೆಂಚಿನ ಪಕ್ಕ ಎರಡೆರಡು ಕಿಟಕಿಗಳು. ಕಾಲುಚಾಚಿ ಕುಳಿತು ಹೊರಗಿನ ದೃಶ್ಯವನ್ನು ಸವಿಯಬಹುದು.

ಸುಸಜ್ಜಿತ ಬೋಟ್ ಒಳಾಂಗಣ
ಹಾಲ್‌ನಿಂದ ಮುಂದೆ ಸಾಗಿದರೆ ಬಲಗಡೆ ಒಂದು ಸುಸಜ್ಜಿತ ಕೋಣೆ. ಡಬಲ್ ಕಾಟ್ ಮತ್ತು ನಮ್ಮ ವಸ್ತುಗಳನ್ನು ಇರಿಸಲು ಕಪಾಟು ಮತ್ತು ಚಿಕ್ಕ ಮೂಲೆಯಲ್ಲಿ ಕಪಾಟಿಗೆ ಜೋಡಿಸಿದ ಕನ್ನಡಿ. ಹಾಗೇ ಅಲ್ಲಿ ಕುಳಿತುಕೊಳ್ಳಲು ಒಂದು ಕುರ್ಚಿ, ಪಕ್ಕದಲ್ಲಿ ಕಿಟಕಿ. ಅಲ್ಲಿ ಕುಳಿತು ಹೊರಗೆ ಹರಿದಾಡುವ ಬೋಟ್‌ಗಳನ್ನು ನೋಡುತ್ತಾ ತಂಪು ಪಾನೀಯ ಕುಡಿದದ್ದು ನೆನೆದರೆ ಇಂದಿಗೂ ಖುಷಿ ಅನಿಸುತ್ತದೆ. ಬೆಡ್ ರೂಮಿನಿಂದ ಒಳಗೆ ಬಾತ್‌ರೂಂ, ಸಿಂಕ್, ಟಾಯ್ಲೆಟ್ ಕಮೋಡ್ ಮತ್ತು ಸ್ನಾನಕ್ಕೆ ಬಿಸಿ ನೀರು, ತಣ್ಣೀರಿನ ನಲ್ಲಿ, ಎಲ್ಲವೂ ಮನೆಯಲ್ಲಿದ್ದಂತೆ ಅನುಕೂಲವಿತ್ತು.
ಅಡುಗೆಮನೆ ಮತ್ತು ವಿಹಾರ
ಬೆಡ್ ರೂಮ್ ಪಕ್ಕದಲ್ಲಿ ಒಂದು ಓಣಿ. ಅಲ್ಲಿಂದ ಒಳಗೆ ಸುಸಜ್ಜಿತ ಅಡುಗೆ ಕೋಣೆ. ಮನೆಯಲ್ಲಿದ್ದಂತೆ ಅಡುಗೆ ಕಟ್ಟೆ. ಸ್ಟವ್, ಮೈಕ್ರೋವೇವ್, ಮಿಕ್ಸಿ, ಫ್ರಿಡ್ಜ್, ಪಾತ್ರೆಗಳು, ತರಕಾರಿ, ದಿನಸಿ ಎಲ್ಲವೂ ಅಚ್ಚುಕಟ್ಟಾಗಿ ಜೋಡಿಸಿದ ಶೆಲ್ಫ್‌ಗಳು. ಹಾಗೆಯೇ ಮುಂದುವರಿದರೆ ಬೋಟಿನ ಹಿಂಭಾಗದ ಡೆಕ್, ಬಾಲ್ಕನಿ. ಅಲ್ಲಿ ನಿಂತು ಸುತ್ತಲಿನ ಪ್ರಕೃತಿ ಸವಿಯುತ್ತಾ ಫೊಟೋ ಕ್ಲಿಕ್ಕಿಸಿಕೊಂಡೆವು. ಒಳಗೆ ಬಂದು ಟೇಬಲ್‌ನಲ್ಲಿ ಜೋಡಿಸಿಟ್ಟ ಹಣ್ಣುಗಳನ್ನು ಕೊಯ್ದು ತಿಂದೆವು. ಅಷ್ಟರಲ್ಲಿ ಬೋಟ್ ಚಲಿಸಲಾರಂಭಿಸಿತು. ಕಿಟಕಿ ಪಕ್ಕ ಕುಳಿತು ಟೀ ಕುಡಿಯುತ್ತಾ ಹೊರಗಿನ ದೃಶ್ಯವನ್ನು ವೀಕ್ಷಿಸಿದೆವು. ಎಲ್ಲಿ ನೋಡಿದರೂ ನೀರು, ಪಕ್ಕದಲ್ಲೇ ಹಾದು ಹೋಗುವ ನೂರಾರು ಬೋಟುಗಳು, ಕೆಲವಂತೂ ಮಹಡಿಯಲ್ಲಿ ರೂಮು ಇದ್ದು ಜನ ಬಾಲ್ಕನಿಯಲ್ಲಿ ನಿಂತು ಪ್ರಯಾಣಿಸುತ್ತಿದ್ದರು

ರಾತ್ರಿಯ ಕಿನ್ನರ ಲೋಕ
ಒಂದು ಗಂಟೆ ಸುಮಾರಿಗೆ ಇನ್ನೊಂದು ದಡದಲ್ಲಿ ಬೋಟು ನಿಲ್ಲಿಸಿದಾಗ ಇಳಿದು ಹೊರಗಡೆ ಸುತ್ತಾಡಿ ಬರುವಂತೆ ಸೂಚಿಸಿದರು. ಹಾಗೆಯೇ ಮಾಡಿದೆವು. ಬರುವಷ್ಟರಲ್ಲಿ ಊಟ ತಯಾರಾಗಿತ್ತು. ಬಿಸಿ ಚಪಾತಿ, ಪಲ್ಯ, ಅನ್ನ, ಸಾಂಬಾರು, ಊಟ ಮುಗಿಸಿ ಮತ್ತೆ ಸ್ವಲ್ಪ ಕಾಲ ಹೊರಗಡೆ ಸುತ್ತಾಡಿ ಬಂದು ವಿಶ್ರಮಿಸಿದೆವು. ಸಂಜೆ ವೇಳೆಗೆ ಟೀ, ಸ್ನ್ಯಾಕ್ಸ್ ಬಂತು. ತಿಂದು ಅವರವರ ಇಷ್ಟದ ಹವ್ಯಾಸದಲ್ಲಿ ತೊಡಗಿದೆವು. ರಾತ್ರಿ ಅಲ್ಲಿಯೇ ನಮ್ಮ ವಾಸ್ತವ್ಯ. ಊಟ ಮುಗಿಸಿ ಹರಟುತ್ತಾ ಮಲಗಿದೆವು. ಅಲ್ಲಲ್ಲಿ ಬೋಟುಗಳಲ್ಲಿ ಮಿನುಗುವ ದೀಪ, ನೀರಿನ ಮೇಲಿನ ತಂಗಾಳಿ ಎಲ್ಲವೂ ಸೇರಿ ಕಿನ್ನರ ಲೋಕ ಸೃಷ್ಟಿಸಿತ್ತು.
ಬೆಳಗ್ಗೆ 6-00 ಗಂಟೆಗೆ ಮರು ಪ್ರಯಾಣ ಶುರುವಾಯಿತು. ಬೋಟ್ ಚಲಿಸುತ್ತಾ ಮೊದಲಿದ್ದ ಸ್ಥಾನಕ್ಕೆ ಬಂದು ಸೇರಿತು. ನಾವು ಎದ್ದು, ಪ್ರಾತರ್ವಿಧಿಗಳನ್ನು ಮುಗಿಸಿ, ಸ್ನಾನ ಮಾಡಿ ಬರುವಷ್ಟರಲ್ಲಿ ತಿಂಡಿ, ಕಾಫಿ ಆಯ್ತು. ನಂತರ ಅಲ್ಲಿಂದ ನಮ್ಮನ್ನು ಬೀಳ್ಕೊಡಲಾಯಿತು.
ಮರೆಯಲಾಗದ ಮಧುರ ನೆನಪು
ಹೊತ್ತು ಹೊತ್ತಿಗೆ ನಮ್ಮ ಅಗತ್ಯಗಳನ್ನು ಪೂರೈಸುವ ಅಲ್ಲಿನ ಸಿಬ್ಬಂದಿಯ ಜತೆ ಒಂದೇ ದಿನದಲ್ಲಿ ಸ್ನೇಹ ಬೆಳೆದಿತ್ತು. ಅಲ್ಲಿಂದ ಹೊರಡುವಾಗ ಮನಸಿಗೆ ಏನೋ ಕಳವಳ! ಅವರೊಂದಿಗೆ ಫೊಟೋ ತೆಗೆಸಿಕೊಂಡು, ಟಿಪ್ಸ್ ಕೊಟ್ಟು, ಧನ್ಯವಾದಗಳನ್ನು ತಿಳಿಸಿ ವಿದಾಯ ಹೇಳಿದೆವು. ಒಂದು ದಿನದ ಬೋಟ್ ಹೌಸ್ ವಾಸ ಇಂದಿಗೂ ಮರೆಯದ ನೆನಪಾಗಿ ಉಳಿದಿದೆ.