ಸಂದರ್ಶನ: ಕೇಶವ ಪ್ರಸಾದ್‌ ಬಿ

ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಹಿನ್ನೆಲೆಯ ಕುರಿತು ಹೇಳುವುದಾದರೆ?

ಇದು ಪೂಜ್ಯ ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ಹೆಗ್ಗಡೆ ಅವರ ಕನಸಿನ ಕೂಸು. ವೀರೇಂದ್ರ ಹೆಗ್ಗಡೆ ದೂರದೃಷ್ಠಿಯುಳ್ಳ ನಾಯಕ . ಅವರು 1982ರಲ್ಲಿ ನಿರುದ್ಯೋಗ ನಿವಾರಿಸಲೆಂದೇ ರುಡ್‌ಸೆಟ್‌ ಆರಂಭಿಸಿದರು. ಯಾವುದೇ ಧರ್ಮ, ಲಿಂಗ, ಜಾತಿಗಳ ಭೇದಗಳಿಲ್ಲದೇ ಎಲ್ಲರಿಗೂ ಅನುಕೂಲವಾಗಲು ಸಣ್ಣದಾಗಿ ಆರಂಭವಾದ ಸಂಸ್ಥೆ ಇದು. ಯಾವುದೇ ವ್ಯಕ್ತಿ ತಮ್ಮ ಇಷ್ಟದ ವಿಷಯಗಳಲ್ಲಿ ಕೌಶಲ್ಯಗಳನ್ನು ಕಲಿತುಕೊಂಡು ಸ್ವಯಂ ಉದ್ಯೋಗಿಯಾಗುವಂತೆ ಮಾಡಲು ಇದು ಕೆಲಸ ಮಾಡುತ್ತಿದೆ. 2007ರ ಹೊತ್ತಿಗೆ ರುಡ್‌ಸೆಟ್‌ ಸುಮಾರು 20 ಸಂಸ್ಥೆಗಳನ್ನು ಹೊಂದಿತ್ತು. 17 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಅಂದಿನ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ರಘುವಂಶಿ ಪ್ರಸಾದ್‌ ಅವರು ಧರ್ಮಸ್ಥಳದ ರುಡ್‌ಸೆಟ್‌ ಕೇಂದ್ರಕ್ಕೆ ಭೇಟಿನೀಡಿದ್ದರು. ಇಲ್ಲಿನ ಕೆಲಸಗಳನ್ನು ಕಂಡು ದೇಶದಾದ್ಯಂತ ಪ್ರತಿ ಜಿಲ್ಲೆಯಲ್ಲೂ ರುಡ್‌ಸೆಟ್‌ ಮಾದರಿಯ ಆರ್‌ಸೆಟಿ ಆರಂಭಿಸಲು ಚರ್ಚಿಸಿದ್ದರು. 2011 ಒಡಂಬಡಿಕೆಯೂ ಆಗಿತ್ತು. 2008ರಲ್ಲಿ ನ್ಯಾಷನಲ್‌ ಅಕಾಡೆಮಿ ಆಫ್‌ ಆರ್‌ಸೆಟಿಯನ್ನು ದೇಶಕ್ಕೆ ಸಮರ್ಪಿಸಿದೆವು. ಅದರ ಉದ್ದೇಶ ಹೊಸದಾಗಿ ಬಂದ ಆರ್‌ಸೆಟಿ ಡೈರೆಕ್ಟರ್‌ಗಳಿಗೆ ಟ್ರೇನಿಂಗ್‌ ನೀಡುವುದಾಗಿತ್ತು. ವೀರೇಂದ್ರ ಹೆಗ್ಗಡೆ ಅವರು ಅದಕ್ಕೆ ಅಧ್ಯಕ್ಷರಾಗಿದ್ದರು. ಅವರು ಕೇಂದ್ರ ಸರಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡರು. ಅದರನ್ವಯ ದೇಶದಾದ್ಯಂತ ಪ್ರತಿ ಜಿಲ್ಲೆಗೆ ಒಂದರಂತೆ 500 ಆರ್‌ಸೆಟಿ ಆರಂಭಿಸಬೇಕು ಎಂಬುದು ಒಪ್ಪಂದವಾಗಿತ್ತು. ಮುಖ್ಯವಾಗಿ ತರಬೇತುದಾರರಿಗೆ ತರಬೇತಿ ನೀಡುವ ಕಾರ್ಯಕ್ರಮ ಆರಂಭವಾಯಿತು. ರಾಜ್ಯ ಮತ್ತು ರಾಷ್ಟ್ರೀಯ ಡೈರೆಕ್ಟರ್‌ಗಳನ್ನು ನೇಮಕ ಮಾಡಲಾಯಿತು. ಅವರು ಎಲ್ಲಾ ಸಂಸ್ಥೆಗಳಿಗೆ ಭೇಟಿನೀಡಿ ಅಲ್ಲಿನ ಕಾರ್ಯ ನಿರ್ವಹಣೆಯನ್ನು ಗಮನದಲ್ಲಿಡುತ್ತಿದ್ದಾರೆ. ಕೇಂದ್ರ ಸರಕಾರ ಮತ್ತು ವೀರೇಂದ್ರ ಹೆಗ್ಗಡೆಯವರು ನನ್ನನ್ನು ನ್ಯಾಷನಲ್‌ ಡೈರೆಕ್ಟರ್‌ ಆಗಿ ನೇಮಿಸಿದರು. ಎರಡು ಮೂರು ದಶಕಗಳ ಹಿಂದೆಯೇ ಇಂಥದೊಂದು ಸಂಸ್ಥೆಯನ್ನು ಸ್ಥಾಪಿಸುವ ಇಂಗಿತ ಅವರದ್ದಾಗಿತ್ತು.
ಇದನ್ನೂ ಓದಿ: ಶಿಕ್ಷಣವನ್ನು ಉದ್ಯಮವಾಗಿಸುವ ಆಲೋಚನೆ ಇಲ್ಲ- ಅಜಯ್ ಪೂಜಾರ್‌

ಸಿರಿಯ ಹೆಜ್ಜೆ ಗುರುತುಗಳು ಹೇಗಿದ್ದವು?

ಇಲ್ಲಿ ಮುಖ್ಯವಾದ ವಿಷಯವೊಂದನ್ನು ಹೇಳಲು ಬಯಸುತ್ತೇನೆ. ಕೇಂದ್ರ ಸರಕಾರ, ವೀರೇಂದ್ರ ಹೆಗ್ಗಡೆಯವರು ಮತ್ತು ಎಲ್ಲಾ ಬ್ಯಾಂಕ್‌ಗಳ ಸಹಕಾರದಿಂದ ಇಂದಿಗೆ ಆರ್‌ಸೆಟಿ ಕ್ರಾಂತಿ ಮಾಡಿದೆ. 2017ರಲ್ಲಿ ಪ್ರಥಮ ಬಾರಿಗೆ ಕೇಂದ್ರ ಸರಕಾರ ಮಿನಿಸ್ಟ್ರಿ ಆಫ್‌ ಆಂಟ್ರ್‌ಪ್ರಿನರ್‌ಶಿಪ್‌ ಎಂಬ ಉದ್ಯಮಶೀಲತೆಗೆ ಒಂದು ಹೊಸ ಸಚಿವಾಲಯ ಆರಂಭಿಸಿದರು. ಆ ಮಿನಿಸ್ಟರಿ ಆಲ್‌ ಇಂಡಿಯಾ ಲೆವೆಲ್‌ನಲ್ಲಿ ʻನ್ಯಾಷನಲ್‌ ಆಂಟ್ರ್‌ಪ್ರಿನರ್‌ಶಿಪ್‌ ಅವಾರ್ಡ್‌ʼ ನೀಡಲು ಆರಂಭಿಸಿದರರು. ನಾವು ಅದಕ್ಕೆ ಅಪ್ಲೆ ಮಾಡಿದ್ದೆವು. ನಮ್ಮ ಕಾರ್ಯಗಳ ಕುರಿತು ಅವರಿಗೆ ವಿವರಿಸಿ ಸಕ್ಸಸ್‌ ರೇಟ್‌ ಅನ್ನು ತೋರಿಸಿದೆವು. ಅವರು ತುಂಬಾ ಖುಷಿ ಪಟ್ಟರು. ರಾಜನಾಥ್‌ ಸಿಂಗ್‌ ಅವರು 2017ರಲ್ಲಿ ನಮಗೆ ಈ ಅವಾರ್ಡ್‌ ನೀಡಿದರು. ಆಗ ಆರ್‌ಸೆಟಿಯ ಎಲ್ಲ ಭಾಗಿದಾರರೂ ಸಂತೋಷ ಪಟ್ಟಿದ್ದೆವು. ಉಜಿರೆಯಂಥ ಸಣ್ಣ ಊರಿನಲ್ಲಿ ಆರಂಭವಾದ ಕಾರ್ಯ ಈ ಮಟ್ಟಿಗೆ ಸಕ್ಸಸ್‌ ಕಾಣಬೇಕಾದರೆ ಇದಕ್ಕೆಲ್ಲ ವೀರೇಂದ್ರ ಹೆಗ್ಗಡೆ ದೂರದೃಷ್ಟಿ ಮತ್ತು ಸಮರ್ಥ ನಾಯಕತ್ವ ಕಾರಣ ಎನ್ನಬಹುದು.

Untitled design - 2026-03-27T193954.950

ತರಬೇತಿಯ ನಂತರ ಉದ್ಯಮ ಆರಂಭಿಸುವುದು ಹೇಗೆ?

ಹೌದು, ತರಬೇತಿಯ ನಂತರ ಉದ್ಯಮ ಆರಂಭಿಸಲು ಹಣ ಬೇಕು. ಆರ್ಥಿಕವಾಗಿ ಹಿಂದುಳಿದವರು ಎಲ್ಲಿಂದ ಹಣ ತರುತ್ತಾರೆ? ಉದ್ಯಮ ಆರಂಭಿಸಲು ಹಣ ಬೇಕಲ್ಲ, ಅದಕ್ಕೆ ಸಹಕಾರಿಯಾಗಲೆಂದೇ ವೀರೇಂದ್ರ ಹೆಗ್ಗಡೆಯವರು ಎಸ್‌ಕೆಡಿಆರ್‌ಡಿಪಿ ಆರಂಭಿಸಿದರು. ಈಗ ಸುಮಾರು 60 ಲಕ್ಷ ಸ್ವ-ಸಹಾಯ ಗುಂಪಿನ ಜನರು ಈ ಎಸ್‌ಕೆಡಿಆರ್‌ಡಿಪಿ ಸಹಾಯ ಪಡೆದುಕೊಂಡಿದ್ದಾರೆ. ಒಂದೆಡೆ ಆರ್‌ಸೆಟಿಯಿಂದ ಉದ್ಯಮ ತರಬೇತಿ ಇನ್ನೊಂದೆಡೆ ಎಸ್‌ಕೆಡಿಆರ್‌ಡಿಪಿಯಿಂದ ಧನ ಸಹಾಯ ಪಡೆದು ತರಬೇತಿ ಪಡೆದವರು ಉದ್ಯಮ ಆರಂಭಿಸಲು ಸಹಕಾರಿಯಾಗಿದೆ. ಆರ್‌ಸೆಟಿ ಮತ್ತು ರುಡ್‌ಸೆಟ್‌ನಲ್ಲಿ ತಯಾರಾಗುವ ಸಿರಿ ಉತ್ಪನ್ನಗಳನ್ನು ಮಾರಾಟ ಮಾಡಲು ಸಹಕಾರಿಯಾಗುವಂತೆ 2004ರಲ್ಲಿ ಆರಂಭಿಸಿದ್ದೇ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯನ್ನು ಆರಂಭಿಸಲಾಯಿತು. ಇದು ನಾಟ್‌ ಫಾರ್‌ ಪ್ರಾಫಿಟ್‌ ಕಂಪೆನಿ.

ಮಹಿಳೆಯರ ಸಬಲೀಕರಣಕ್ಕೆ ಸಿರಿಯ ಕೊಡುಗೆಯೇನು?

ವೀರೇಂದ್ರ ಹೆಗ್ಗಡೆಯವರು ಎರಡು ಸಾವಿರ ಮಹಿಳೆಯರಿಂದ 20ಲಕ್ಷ ರುಪಾಯಿ ಮೂಲ ಬಂಡವಾಳ ಕಲೆಹಾಕಿ ಈ ಸಿರಿ ಕಂಪೆನಿಯನ್ನು ಆರಂಭಿಸಿದರು. ಸೆಕ್ಷನ್‌ 8ರಲ್ಲಿ ಈ ಕಂಪೆನಿ ನೋಂದಣಿಯಾಗಿದೆ. ಇದರಲ್ಲಿ ಟೆಕ್ಸ್‌ಟೈಲ್‌, ಕ್ಲೀನಿಂಗ್‌ ಏಜೆನ್ಸಿ, ಅಗರಬತ್ತಿ ತಯಾರಿಕೆ, ಉಪ್ಪಿನಕಾಯಿ, ಬೇಕರಿ ಉತ್ಪನ್ನಗಳು ಹೀಗೆ ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲು ಆರಂಭಿಸಿದರು. ಇಲ್ಲಿ ಶೇ. 75ರಷ್ಟು ಮಹಿಳಾ ಉದ್ಯೋಗಿಗಳಿದ್ದಾರೆ. ಇದು ಮಹಿಳಾ ಸಬಲೀಕರಣವಲ್ಲವೇ?

ಸಿರಿ ಉತ್ಪನ್ನಗಳ ಬಗ್ಗೆ ಗ್ರಾಹಕರಿಗಿರುವ ವಿಶ್ವಾಸ?

ಮೆಟಿರಿಯಲ್‌ ಪ್ರೊಡಕ್ಷನ್‌ ಕಾಸ್ಟ್‌ ಲಾಜಿಸ್ಟಿಕ್‌ ಕಾರಣಕ್ಕೆ ಹೆಚ್ಚಾಗುತ್ತಿತ್ತು. ಒಂದು ಘಟಕದಲ್ಲಿ ತಯಾರಾದ ಉಪ್ಪಿನಕಾಯಿ ಇನ್ನೊಂದು ಘಟಕದಲ್ಲಿ ತಯಾರಾದ ಉಪ್ಪಿನಕಾಯಿ ಒಂದೇ ಕ್ವಾಲಿಟಿ ಇರುತ್ತಿರಲಿಲ್ಲ. ಎಲ್ಲೆಲ್ಲಿ ಫೆಸಿಲಿಟಿಗಳು ಕಡಿಮೆ ಇದೆಯೋ ಅಲ್ಲೆಲ್ಲ ಪುಟ್ಟ ಪುಟ್ಟ ಪ್ರೊಡಕ್ಷನ್‌ ಘಟಕ ಆರಂಭಿಸಿದೆವು. ನಕ್ಸಲ್‌ ಪೀಡಿತ ಸವಣಾಳ್‌ ಏರಿಯಾದಲ್ಲೂ ಒಂದು ಟೆಕ್ಸ್‌ಟೈಲ್‌ ಘಟಕ ಆರಂಭಿಸಿದರು. ಎಲ್ಲಾ ಘಟಕಗಳಿಗೆ ಮ್ಯಾನೇಜ್‌ಮೆಂಟ್‌ ವಿಸಿಟ್‌ ಮಾಡುವುದು ಕಷ್ಟವಾಗಿತ್ತು. ಬೇರೆ ಬೇರೆ ಕಾರಣಗಳಿಂದ ಕಂಪೆನಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿತ್ತು. ಇಷ್ಟಿದ್ದರೂ ವೀರೇಂದ್ರ ಹೆಗ್ಗಡೆಯವರು ಈ ಕಂಪೆನಿಯನ್ನು ಮುಚ್ಚಲು ಬಿಡದೆ ನಡೆಸಿಕೊಂಡು ಬರುತ್ತಿದ್ದರು. 2019ರಲ್ಲಿ ನಾನು ಸಿಂಡಿಕೆಟ್‌ನಿಂದ ರಿಟೈರ್ಡ್‌ ಆಗಿದ್ದೆ. ಪೂಜ್ಯರ ಬಳಿ ಬಂದು ಸೇವೆ ಮಾಡಲು ಅವಕಾಶ ಕೇಳಿದಾಗ ಅವರು ನನ್ನನ್ನು ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ಮುಖ್ಯಸ್ಥರನ್ನಾಗಿ ನೇಮಿಸಿದರು. ಕೋವಿಡ್‌ ಸಮಯದ ನಂತರ 2021ರಲ್ಲಿ ಸುಮಾರು ಒಂದು ಕೋಟಿ ರುಪಾಯಿ ಲಾಭವಾಯಿತು. ಇದು ಅಂದಿಗೆ ಖುಷಿಯ ವಿಚಾರ. ಉತ್ಪನಗಳಂತೂ ಮೈತ್‌ ಟು ಮೌತ್‌ ಪ್ರಚಾರದಿಂದಲೇ ಗ್ರಾಹಕರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದೆ.

Untitled design - 2026-03-27T194016.299

ಸಿರಿ ಘಟಕಗಳ ಕಾರ್ಯ ನಿರ್ವಹಣೆ ಹೇಗಿದೆ?

ಸುಮಾರು 50-60 ಕಡೆಗಳಲ್ಲಿ ನಮ್ಮ ಘಟಕಗಳು ಕೆಲಸ ಮಾಡುತ್ತಿವೆ. ಇವುಗಳನ್ನೆಲ್ಲ ಒಟ್ಟಾಗಿ ನೋಡಿಕೊಳ್ಳುವುದು ಕಷ್ಟದ ಕೆಲಸ. ಹಾಗಾಗಿ ಅವುಗಳನ್ನೆಲ್ಲ ಒಂದು ಸೂರಿನಡಿ ತರಬೇಕು. ಇದರಿಂದ ಉತ್ಪನ್ನಗಳ ಕ್ವಾಲಿಟಿ ಕಾಪಾಡಿಕೊಳ್ಳಬಹುದು, ಮಾನಿಟರಿಂಗ್‌ ಮಾಡಲು ಸುಲಭವಾಗುತ್ತದೆ ಎಂದು ಕೇಳಿಕೊಂಡಿದ್ದೆ. ಇದಕ್ಕೆ ವೀರೇಂದ್ರ ಹೆಗ್ಗಡೆಯವರೂ ಸಮ್ಮತಿ ನೀಡಿದ್ದರು. ಇದಕ್ಕಾಗಿ ಏಳು ಎಕರೆ ಸ್ಥಳದಲ್ಲಿ ಒಂದು ಸುಸಜ್ಜಿತ ಕ್ಯಾಂಪಸ್‌ ಸಿದ್ಧವಾಯಿತು. ಈ ಕ್ಯಾಂಪಸ್‌ನಲ್ಲಿ ಕೆನಾರಾ ಬ್ಯಾಂಕ್‌ನ ಎಟಿಎಂ ಇದೆ. ಸಿರಿ ಉತ್ಪನ್ನಗಳ ಮಾರಾಟ ಮಳಿಗೆ ಇದೆ. ಕ್ಯಾಂಟಿನ್‌ ಇದೆ. ಅಧಿಕಾರಿಗಳಿಗೆ ಕ್ಯಾಬಿನ್‌ ವ್ಯವಸ್ಥೆ ಇದೆ. ಐಬಿ, ಉಪ್ಪಿನ ಕಾಯಿ ಘಟಕ, ಟೆಕ್ಸ್‌ಟೈಲ್‌ ಘಟಕಗಳಿವೆ. ಹಾಸ್ಟೆಲ್‌, ಜಿಮ್‌ ವ್ಯವಸ್ಥೆ, ಸಿಬ್ಬಂದಿಗಳಿಗಾಗಿ ಬಸ್‌ ಸೌಕರ್ಯ, ಶಿಶು ವಿಹಾರ ಹೀಗೆ ಅಗತ್ಯ ಎಲ್ಲಾ ಸೌಕರ್ಯಗಳನ್ನು ಪೂಜ್ಯ ವೀರೇಂದ್ರ ಹೆಗ್ಗಡೆಯವರು ಮಾಡಿಕೊಟ್ಟಿದ್ದಾರೆ.

ಸಿರಿ ಉದ್ಯೋಗಿಗಳಿಗಿರುವ ಸೌಲಭ್ಯಗಳೇನು?

ಇಲ್ಲಿ ಕೆಲಸ ಮಾಡುವವರಿಗೆ ಗ್ರಾಚುಟಿ, ಪ್ರಾವಿಡೆಂಟ್‌ ಫಂಡ್‌, ಇಎಸ್‌ಐ, ಇನ್ಷುರೆನ್ಸ್‌, ವರ್ಷಕ್ಕೆ ಎರಡು ಬೋನಸ್‌, ವರ್ಷಕ್ಕೊಮ್ಮೆ ಇನ್ಕ್ರಿಮೆಂಟ್‌, ಮೂರು ವರ್ಷಗಳಿಗೊಮ್ಮೆ ಪ್ರಮೋಷನ್‌ ನೀಡಲಾಗುತ್ತಿದೆ. ಸಿರಿ ಕ್ಲಬ್‌ ಹೌಸ್‌ ಇದೆ. ಅದರಲ್ಲಿ ನಾಯಕತ್ವ ಗುಣ ಬೆಳೆಸಲು ಹಲವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಸಿರಿ ಹಬ್ಬದಲ್ಲಿ ಅವರ ಕ್ರೀಡೆ ಮತ್ತಿತರ ಕಲೆಗಳ ಅಭಿವ್ಯಕ್ತಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಹೀಗೆ ಅವರ ಸರ್ವತೋಮುಖ ಅಭಿವೃದ್ಧಿಗೆ ಅವಕಾಶ ನೀಡಲಾಗುತ್ತಿದೆ.