ಬಿಗ್‌ ಬಾಸ್‌ ಖ್ಯಾತಿಯ ನಟಿ ಸಂಗೀತಾ ಶೃಂಗೇರಿ ಇತ್ತೇಚೆಗೆ ತಮ್ಮ ತಾಯಿಯೊಡನೆ ಹೊಸ ಸಾಹಸ ಮಾಡಿದ್ದಾರೆ. ಮುರುಡೇಶ್ವರದ ನೇತ್ರಾಣಿಯಲ್ಲಿ ಸ್ಕೂಬಾ ಡೈವ್‌ ಮಾಡಿರುವ ಸಂಗೀತಾ ಈ ಅನುಭವವನ್ನು ಪ್ರವಾಸಿ ಪ್ರಪಂಚದ ಜತೆಗೆ ಹಂಚಿಕೊಂಡಿದ್ದಾರೆ.

ಟ್ರಾವೆಲ್‌ ಫ್ರೀಕ್‌

ನಾನು ದೊಡ್ಡ ಟ್ರಾವೆಲ್‌ ಫ್ರೀಕ್.‌ ಅದರಲ್ಲೂ ನನಗೆ ಸ್ಕೂಬಾ ಡೈವಿಂಗ್‌ ಬಹಳ ಇಷ್ಟ. ಎಷ್ಟರ ಮಟ್ಟಿಗೆ ಎಂದರೆ ಬಿಗ್‌ ಬಾಸ್‌ ಮನೆಯೊಳಗೆ ಇದ್ದಾಗ ಸುದೀಪ್‌ ಸರ್‌, ʼಹೊರಗೆ ಹೋಗಿ ಏನು ಮಾಡಬೇಕು ಎಂದುಕೊಂಡಿದ್ದೀರಾ?ʼ ಎಂದು ಕೇಳಿದಾಗಲೂ ಸ್ಕೂಬಾ ಡೈವಿಂಗ್‌ ಅಂತಲೇ ಹೇಳಿದ್ದೆ. ಈಗಾಗಲೇ ಹಲವು ದೇಶಗಳಲ್ಲಿ ಸ್ಕೂಬಾ ಡೈವ್‌ ಮಾಡಿದ್ದೇನೆ. ಆದರೆ, ಕರ್ನಾಟಕದ ನೇತ್ರಾಣಿ ನನಗೆ ಬಹಳ ಇಷ್ಟ. ನನ್ನ ಪರಿಚಯದವರು ಆಕ್ವಾ ರೈಡ್‌ ಎನ್ನುವವರ ಮಾರ್ಗದರ್ಶನದಲ್ಲೇ ಪ್ರತಿ ಬಾರಿ ಸ್ಕೂಬಾ ಡೈವ್‌ ಹೋದುವುದು. ಈ ಬಾರಿಯೂ ಅವರ ಜತೆಗೆ ಹೋಗಿದ್ದೆ.

ಇದನ್ನೂ ಓದಿ: ಅಕ್ಷತಾ ಪಾಂಡವಪುರ ಟ್ರಾವೆಲ್‌ ಸ್ಟೋರಿ

ತಾಯಿಯ ಜತೆ ಹೋಗಿದ್ದು ಸ್ಪೆಷಲ್‌

ಈ ಬಾರಿಯ ಸ್ಕೂಬಾ ಡೈವ್‌ ನನ್ನ ತಾಯಿ ಜತೆ ಮಾಡಿದ್ದು ನನಗೆ ಅತ್ಯಂತ ಸ್ಪೆಷಲ್‌. ನನ್ನ ತಾಯಿಗೆ 51 ವರ್ಷ. ನನಗೆ ರಾತ್ರಿಯಿಡೀ ಭಯ ಕಾಡುತ್ತಿತ್ತು. ಏನಾದರೂ ಹೆಚ್ಚು ಕಡಿಮೆ ಆದರೆ ಎಂಬ ಭಯ. ಸರಿಯಾಗಿ ನಿದ್ರೆ ಕೂಡ ಮಾಡಿಲ್ಲ. ಅವರಿಗೆ ವಯಸ್ಸಾಗಿದೆ ಹಾಗೂ ಈ ಮುಂಚೆ ಯಾವತ್ತೂ ಅವರು ಸ್ಕೂಬಾ ಡೈವ್‌ ಮಾಡಿಲ್ಲವಲ್ಲ, ಹೀಗಾಗಿ ಏನಾಗಬಹುದು ಎಂಬ ಚಿಂತೆಯಿತ್ತು. ಆದರೆ, ನನಗೊಂದು ಕನಸಿತ್ತು. ನಾನು ನೋಡಿದ್ದೆಲ್ಲವನ್ನು ಅಮ್ಮನಿಗೆ ತೋರಿಸಬೇಕು ಎಂಬ ಕನಸು. ಅಷ್ಟು ವಯಸ್ಸಾದರೂ ಅವರಿಗೆ ಅಡ್ವೆಂಚರ್‌ ಇಷ್ಟ ಹಾಗೂ ಸಕತ್‌ ಎನರ್ಜಿಟಿಕ್‌ ಕೂಡ ಹೌದು. ಅವರಿಗೆ ಇಂಥದ್ದೆಲ್ಲ ಇಷ್ಟ. ಹೀಗಾಗಿ ಈ ಸಾಹಸಕ್ಕೆ ಮುಂದಾದೆವು. ಎಲ್ಲ ದೇವರಲ್ಲೂ ಪ್ರಾರ್ಥನೆ ಮಾಡಿದ್ದೆ. ಸ್ಕೂಬಾ ಮಾಡುವಾಗ ಉಲ್ಟಾ ನೀರೊಳಗೆ ಡೈವ್‌ ಮಾಡಬೇಕು. ಅದನ್ನು ನೋಡಿಯೇ ಅಮ್ಮ , ʼಏನಿದು ಹೀಗಿದೆʼ ಎಂದು ಗಾಬರಿಗೊಂಡಿದ್ದರು. ಏನಾಗಲ್ಲ ಅಂತ ಅಮ್ಮನಿಗೆ ಧೈರ್ಯ ಹೇಳಿ, ಮೊದಲು ನಾನು ನೀರಿಗೆ ಹಾರಿ ಅಮ್ಮನಿಗೆ ಕಾಯುತ್ತಿದ್ದೆ. ಮೊದಲು ಸ್ವಲ್ಪ ಭಯಗೊಂಡು ನಂತರ ಅಮ್ಮ ಸಲೀಸಾಗಿ ನೀರೊಳಗೆ ಅಡ್ಜಸ್ಟ್‌ ಆದರು. ಅಲ್ಲಿದ್ದ ರಾಮಣ್ಣ ಎಂಬ ಇನ್ಸ್‌ಟ್ರಕ್ಟರ್‌ ಬಹಳ ಸಹಾಯ ಮಾಡಿ ಧೈರ್ಯ ತುಂಬಿದರು. ನನಗಿದು ಡ್ರೀಮ್‌ ಕಮ್‌ ಟ್ರು ಮೊಮೆಂಟ್‌.

Untitled design - 2026-05-11T115352.053

ಮೌನದ ಲೋಕ

ನೀರೊಳಗಿನ ಜಗತ್ತೇ ಬೇರೆ! ನನಗೆ ಅದು ಬಹಳ ಇಷ್ಟ. ಸಮುದ್ರದೊಳಗಿನ ಲೋಕದ ಸುಂದರ ವಿಶೇಷತೆ ಏನೆಂದರೆ ಅಲ್ಲಿ ಮಾತನಾಡುವ ಹಾಗಿಲ್ಲ. ಮಾತಿನಾಡಿದರೆ ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಅದಕ್ಕೆ ಸಮುದ್ರ ಬಾಯಿಯನ್ನೇ ಮುಚ್ಚಿಸಿಬಿಡುತ್ತದೆ. ಕಣ್ಣಿನಲ್ಲೇ ಮಾತನಾಡುವುದು ಅಲ್ಲಿ ಅನಿವಾರ್ಯತೆ. ಬಹುಶಃ ಮಾತನಾಡುವ ಅವಕಾಶ ಇದ್ದಿದ್ದರೆ ಅಲ್ಲೂ ಮಾತನಾಡುತ್ತ ಕಾಲಾಹರಣ ಮಾಡುತ್ತಿದ್ದೇವೋ ಏನೊ. ಈಗ ಅಲ್ಲಿನ ಪ್ರಪಂಚವನ್ನು ಕಣ್ತುಂಬಿಕೊಳ್ಳಲು ಸುಲಭವಾಗುತ್ತದೆ. ಎಷ್ಟೋ ಬಗೆಯ ಮೀನುಗಳು, ಬೇರೆ ಜೀವಿಗಳು ಎಲ್ಲವೂ ಸಮುದ್ರ ಎಂಬ ಒಂದೇ ಲೋಕದಲ್ಲಿ ಒಟ್ಟಿಗೆ ಜೀವಿಸುತ್ತಿರುತ್ತವೆ. ಆದರೆ, ನಾವು ಅಕ್ಕಪಕ್ಕದ ಮನೆಯವರನ್ನೇ ಸಹಿಸಿಕೊಳ್ಳುವುದಿಲ್ಲ. ಈ ನೀರಿನೊಳಗಿನ ಪ್ರಪಂಚ ಜೀವನಕ್ಕೆ ಹೊಸ ದೃಷ್ಟಿಕೋನ ನೀಡುತ್ತದೆ.

ಸಿದ್ಧತೆ ಜೋರು

ನಾನು ಈಗಾಗಲೇ ಹಲವು ಸ್ಕೂಬಾ ಡೈವ್‌ ಮಾಡಿದ್ದರಿಂದ ನನ್ನ ಜತೆಗೆ ಬರುವವರಿಗೆ ಸಾಮಾನ್ಯವಾಗಿ ಎಲ್ಲಿ ತಪ್ಪಾಗಬಹುದು ಎನ್ನುವುದನ್ನು ಮೊದಲೇ ಹೇಳಿರುತ್ತೇನೆ. ಮುಖ್ಯವಾಗಿ ಎರಡು ವಿಷಯ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಬಾಯಲ್ಲಿ ಉಸಿರಾಡಬೇಕು. ಇನ್ನೊಂದು ಇಕ್ವಿಲೈಸಿಂಗ್‌ ಅಂದರೆ ಆಗಾಗ ಕಿವಿಗೆ ತುಂಬುವ ಗಾಳಿಯನ್ನು ಕ್ಲಿಯರ್‌ ಮಾಡಿಕೊಳ್ಳಬೇಕು. ಇದರ ಜತೆಗೆ ಮನಸನ್ನು ಸಮಾಧಾನವಾಗಿಟ್ಟುಕೊಳ್ಳಬೇಕು. ಇಷ್ಟಿದ್ದರೆ ಯಾರು ಬೇಕಾದರೂ ಡೈವ್‌ ಮಾಡಬಹುದು. ಅಮ್ಮನಿಗೆ ಮೊದಲೇ ಹೇಳಿದ್ದೆ. ಹಾಗೆಯೇ ಕನ್ನಡಕದಲ್ಲಿ ನೀರು ಹೇಗೆ ಕ್ಲಿಯರ್‌ ಮಾಡಬೇಕು ಎನ್ನುವುದನ್ನು ಕಲಿಸಿದ್ದೆ. ಇಡೀ ಡೈವ್‌ ಅಲ್ಲಿ ಅಮ್ಮನಿಗೆ ಒಂದೇ ಒಂದು ಸಮಸ್ಯೆಯೂ ಎದುರಾಗಲಿಲ್ಲ.

Untitled design - 2026-05-11T115338.717

ದೇವಸ್ಥಾನ ಪ್ರವಾಸ

ಸ್ಕೂಬಾ ಡೈವ್‌ಗಿಂತ ಮುಂಚೆ ಅಮ್ಮನ ಜತೆಗೆ ಮಂಗಳೂರು ಪ್ರವಾಸ ಮಾಡಿದ್ದೆ. ಅಲ್ಲಿರುವ ಬಹುತೇಕ ಎಲ್ಲ ದೇವಾಲಯಗಳಿಗೆ ಭೇಟಿ ನೀಡಿದ್ದೆವು. ಎಲ್ಲವೂ ಎಷ್ಟು ಸುಂದರವಾಗಿತ್ತು. ಮೊದಲಿಗೆ ಕೊರಗಜ್ಜ ದರ್ಶನ ಮಾಡಿ ನಂತರ ಮಹಾಕಾಳಿ, ಲಕ್ಷ್ಮೀ ಸೇರದಿಂತೆ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದು. ಕೊನೆಯಲ್ಲಿ ಮುರುಡೇಶ್ವರಕ್ಕೆ ಹೋಗಿದ್ದು. ಎಲ್ಲಿಯೂ ಯಾರ ಇನ್ಫ್ಲೂಯನ್ಸ್‌ ಇಲ್ಲದೆ ಸುಮ್ಮನೆ ಹೋಗಿದ್ದು, ಆದರೆ ಅಲ್ಲಿ ಯಾರಾದರು ಗುರುತಿಸಿ ಪ್ರೀತಿಯಿಂದ ಮಾತನಾಡಿಸಿ ದರ್ಶನದ ವ್ಯವಸ್ಥೆ ಮಾಡುತ್ತಿದ್ದರು. ಕೆಲವು ಜಾಗಗಳಿಗೆ ದೇವರೇ ಕರೆಸಿಕೊಳ್ಳುತ್ತಾರೆ ಅಂತಾರಲ್ಲ ಹಾಗೇ ಆಗಿತ್ತು. ನನ್ನ ಮತ್ತು ಅಮ್ಮನ ಈ ಜರ್ನಿ ಬಹಳ ಸುಂದರವಾಗಿತ್ತು.

ವಿಶೇಷ ಅನುಭವ

ಸುಮಾರು 40 ನಿಮಿಷಗಳ ಕಾಲ ಸಮುದ್ರದೊಳಗಿದ್ದೆವು. ನಾನು ಅಮ್ಮನಿಕಿಂತ ಇನ್ನೂ ಸ್ವಲ್ಪ ಆಳ ಹೋಗಿದ್ದೆ. ಸುಮಾರು 20 ಮೀಟರ್‌ ಅಷ್ಟು ಆಳಕ್ಕೆ ಹೋಗಿದ್ದೆ. ಬಳಿಕ ನಾನು ಅಮ್ಮ ಬಹಳ ಸಮಯ ನೀರಿನಲ್ಲಿ ಕಳೆದೆವು. ಅಮ್ಮನನ್ನು ನೀರಿನಲ್ಲಿ ನಾನು ಎತ್ತಿ ಹಿಡಿದು, ಫೊಟೋ ತೆಗೆಸಿಕೊಂಡು ಬಹಳ ಎಂಜಾಯ್‌ ಮಾಡಿದೆವು. ನನ್ನ ಪ್ರಕಾರ ಏನೆಂದರೆ ಎಷ್ಟು ಬೇಗ ಆಗತ್ತೋ ಅಷ್ಟು ಬೇಗ ಅವರ ತಂದೆ-ತಾಯಿ ಜತೆಗೆ ಸ್ಕೂಬಾ ಡೈವ್‌ ಮಾಡಬೇಕು.‌ ಇವೆಲ್ಲ ಲೈಫ್‌ಟೈಮ್‌ ಎಕ್ಸ್‌ಪೀರಿಯನ್ಸ್!

Untitled design - 2026-05-11T115400.099

ಇತರ ಪ್ರವಾಸ

ಇತ್ತೀಚೆಗೆ ಉಡುಪಿಯಲ್ಲಿರುವ ಕುದ್ರು ನೆಸ್ಟ್‌ ರೆಸಾರ್ಟ್‌ಗೆ ಹೋಗಿದ್ದೆ. ಬೋಟಿಂಗ್‌, ಕಯಾಕಿಂಗ್‌ ಎಲ್ಲ ಮಾಡಿ, ಬೋಟ್‌ ಅಲ್ಲೇ ರಾತ್ರಿ ಸುಮಾರು ಹೊತ್ತು ಕುಳಿತು ನಕ್ಷತ್ರ ನೋಡಿದೆವು. ಪ್ರವಾಸ ಅಂತ ಹೊರಗಡೆ ಹೋಗುತ್ತೇವೆ ಆದರೆ ಕರ್ನಾಟಕದಲ್ಲಿ ಇರುವುದನ್ನೇ ನೋಡಲು ಬಹಳ ಸಮಯ ಬೇಕು. ಎಷ್ಟೋ ಸುಂದರವಾದ ಜಾಗಗಳು ಇಲ್ಲಿವೆ.