-ಶಶಿಕರ ಪಾತೂರು

ಅಪ್ಪಟ ಕಲಾವಿದರ ಕುಟುಂಬದಿಂದ ಹೊರಹೊಮ್ಮಿದವರು ಸಂಯುಕ್ತಾ ಹೊರನಾಡು. ಲೈಫು ಇಷ್ಟೇನೇ ಚಿತ್ರದಿಂದ ಪರಿಚಯವಾಗಿ ಹಲವು ವಿಭಿನ್ನ ಚಿತ್ರಗಳಿಂದ ಮತ್ತು ಪಾತ್ರಗಳಿಂದ ಜನ ಮನ ಗೆದ್ದಿರುವ ಸಂಯುಕ್ತಾ ಕೇವಲ ಪ್ರವಾಸಪ್ರಿಯೆ ಮಾತ್ರವಲ್ಲ ಪ್ರಾಣಿಪ್ರಿಯೆಯೂ ಹೌದು. ಫೊಟೋಗ್ರಫಿ ಕೂಡ ಈಕೆಯ ಫೇವರಿಟ್ ಹವ್ಯಾಸ. ಪ್ರವಾಸದ ಉದ್ದೇಶ ಮತ್ತು ದೃಷ್ಟಿಕೋನವೇ ವಿಭಿನ್ನ ಮತ್ತು ಕುತೂಹಲಕಾರಿಯಾಗಿದೆ. ಕಂಫರ್ಟ್ ಜೋನ್ ನಿಂದ ಹೊರಬರಲು ಬೆಸ್ಟ್ ಮಾರ್ಗವೆಂದರೆ ಅದು ಪ್ರವಾಸ ಅನ್ನುತ್ತಾರೆ ಸಂಯುಕ್ತಾ.

ನಿಮ್ಮ ಮೊದಲ ಪ್ರವಾಸದ ನೆನಪು ಯಾವುದು?

ಬಹುಶಃ ಅದು ನನ್ನ ಐದು ಅಥವಾ ಆರನೇ ವರ್ಷದ ಜನ್ಮದಿನ ಇರಬೇಕು. ಆ ಪ್ರಯುಕ್ತ ಶ್ರೀರಂಗಪಟ್ಟಣಕ್ಕೆ‌ ಹೋಗಿದ್ದೆವು. ಮೈಸೂರು ಮೃಗಾಲಯ ನೋಡಿದ್ದೇ ನನ್ನ ಮೊದಲ‌ ಪ್ರವಾಸದ ಖುಷಿಯ ನೆನಪು.

ಮೊದಲು ಮೃಗಾಲಯ ನೋಡಿದ್ದೇ ನೀವು ಪ್ರಾಣಿಪ್ರಿಯೆ ಆಗಲು ಪ್ರೇರಣೆ ಆಯಿತೇ?

ಪ್ರಕೃತಿಯೊಂದಿಗೆ ಬೆರೆತು ಬಾಳಲು ಕಲಿಸಿದ್ದೇ ನನ್ನ ತಂದೆ. ನೀವು ನಂಬಲ್ಲ, ಬೆಂಗಳೂರಲ್ಲೇ ಇದ್ದರೂ ನನಗೆ 15 ವರ್ಷಗಳಾಗುವ ತನಕವೂ ಟಿ.ವಿ ನೋಡುವ ಅವಕಾಶ ಕೊಟ್ಟಿರಲಿಲ್ಲ.‌ ನೋಡುವುದಾದರೆ ಡಿ.ಡಿ ಚಂದನದಲ್ಲಿ ಡಾಕ್ಯುಮೆಂಟರಿಗಳನ್ನು ಮಾತ್ರ ನೋಡಬೇಕಿತ್ತು. ಹೀಗಾಗಿ ನಾನು ಹೊರ ಜಗತ್ತಿನ ಜತೆ ಹೆಚ್ಚು ನೇರವಾಗಿ ಬೆರೆತೆ.‌ ಮಳೆಯಲ್ಲಿ ನೆನೆಯಲು, ಹುಣ್ಣಿಮೆಯಂದು ಟೆರೇಸ್ ಮೇಲೆ‌ ಮಲಗಲು ಕಲಿಸಿದ ನನ್ನ ತಂದೆಯೇ ಇದಕ್ಕೆಲ್ಲ ಪರೋಕ್ಷ ಕಾರಣ ಎಂದು ಹೇಳಬಹುದು. ಈಗ ಯಾವುದಾದರೂ ಒಂದು ದ್ವೀಪದಲ್ಲಿ ನನ್ನ ಒಂಟಿಯಾಗಿ ಬಿಟ್ಟರೂ ಚೆನ್ನಾಗಿಯೇ ಇರುತ್ತೇನೆ.‌ ಟಿವಿ‌, ಫೋನ್ ಇರದಿದ್ದರೂ, ನೆಟ್ವರ್ಕ್ ಇರದಿದ್ದರೂ ಆರಾಮಾಗಿರುತ್ತೇನೆ.

Untitled design (2)

ನೀವಾಗಿ ಪ್ರವಾಸ ಹೋಗುವುದನ್ನು ಯಾವಾಗಿಂದ ಅಭ್ಯಾಸ ಮಾಡಿಕೊಂಡಿರಿ?

ನಾನು ನಟಿಯಾಗುವ ಮೊದಲೇ ಛಾಯಾಗ್ರಾಹಕಿಯಾಗಿದ್ದೆ. ಛಾಯಾಗ್ರಹಣದ ಹುಚ್ಚು ಹುಟ್ಟಿಕೊಂಡಿದ್ದೇ ಪ್ರವಾಸ ಹೋಗಿ ಫೊಟೋ ತೆಗೆಯಲೆಂದು. ನಾನು ವಿದೇಶಗಳಲ್ಲಿ ಸುತ್ತಾಡಿದರೂ ಅಲ್ಲಿ ನೀರು, ಪ್ರಕೃತಿಯೇ ನನಗೆ ಪ್ರಥಮ ಆಕರ್ಷಣೆ.

ನಿಮ್ಮ ಪ್ರವಾಸದ ರೀತಿ ಹೇಗಿರುತ್ತವೆ?

ನಾನು ಪ್ರಾಕೃತಿಕ ತಾಣದಲ್ಲಿ ಎಲ್ಲೇ ಆದರೂ ಖುಷಿಯಿಂದ ಸುತ್ತಾಡುತ್ತೇನೆ. ನಮ್ಮಲ್ಲಿ ಪಶ್ಚಿಮ ಘಟ್ಟ, ಜೋಗ್ ಫಾಲ್ಸ್ ಇಷ್ಟ. ಇವೆಲ್ಲಕ್ಕಿಂತ ಕಬಿನಿ‌ ನನಗೆ ತುಂಬಾನೇ ಇಷ್ಟ.‌ ಬಂಡೀಪುರ ಕೂಡ‌‌ ಹೋಗುತ್ತಿರುತ್ತೇನೆ. ಬೀಚ್ ಅಂದರಂತೂ ತುಂಬಾ ಆಪ್ತ.

ನಾನು ಯಾವುದೇ ಸಿನಿಮಾ‌ ಅಥವಾ ಪಾತ್ರ ಮಾಡಿದರೂ ಅದು ಮುಗಿದ ತಕ್ಷಣ ಒಂದು ಪ್ರವಾಸ ಹೋಗುತ್ತೇನೆ. ನನ್ನ ಪಾತ್ರವನ್ನು ಅಲ್ಲೇ ಬಿಟ್ಟು ಸಂಯುಕ್ತ ಆಗಿ ಮರಳಿ ಬರುತ್ತೇನೆ.

ರಾಜ್ಯದಾಚೆ ನಿಮಗೆ ಇಷ್ಟವಾದ ಅನುಭವವಿತ್ತ ಪ್ರವಾಸ ಯಾವುದಾಗಿತ್ತು?

ನಾನು ಕಾಶ್ಮೀರಕ್ಕೆ ಹೋಗಿ‌ ಟ್ರೆಕ್ಕಿಂಗ್ ಮಾಡಿದ್ದೀನಿ.‌ ಅಲ್ಲಿ ಹಿಮ ಬೀಳುವುದನ್ನು ನೋಡಿದ್ದೇನೆ. ಮೂರೇ ಗಂಟೆಯೊಳಗೆ ಪೂರ್ತಿ ಊರಿಗೆ ಊರೇ ಮಂಜಿನಲ್ಲಿ ಅಡಗುವುದು ಒಂದು ವಿಸ್ಮಯ. ನಾನು ಅಲ್ಲಿ ಯೋಧರನ್ನು ಭೇಟಿಯಾಗಲು ಅನುಮತಿ ಪಡೆದೇ ಹೋಗಿದ್ದೆ.

ಯಾಕೆಂದರೆ ಸೈನಿಕರು ಹೇಗೆ ಎಲ್ಲಾ ಆಸೆಗಳನ್ನು ಬಿಟ್ಟು ದೇಶಕ್ಕಾಗಿ ಪ್ರಾಣ ತ್ಯಾಗಕ್ಕೆ ಸಿದ್ಧರಾಗುತ್ತಾರೆ ಎಂದು ಕೇಳಬೇಕಿತ್ತು. ಅವರು ಅಂಥದೊಂದು ನಿರ್ಲಿಪ್ತ ಸ್ಥಿತಿ ತಲುಪಿರುವುದು ಅವರ ಮಾತಿನಿಂದ ಅರ್ಥವಾಗಿತ್ತು. ಅಲ್ಲಿಂದ ಬಂದ ಮೇಲೆ ನಾನು ಕೂಡ ಒಂದಷ್ಟು ಕಾಲ‌ ಸೋಷಿಯಲ್ ಮೀಡಿಯಾದಿಂದ ದೂರವಾಗಿದ್ದೆ.‌

ವಿದೇಶ ಪ್ರವಾಸದಲ್ಲಿ ವಿಶೇಷ ಅನುಭವಗಳೇನಾದರೂ ಆಗಿದೆಯೇ?

ಕಳೆದ ವರ್ಷ ನಾನು ಛಾಯಾಗ್ರಾಹಕಿಯಾಗಿ ಆಫ್ರಿಕಾದ ಟಾನ್ಝಾನಿಯಾಗೆ ಹೋಗಿದ್ದೆ‌. ಅದೊಂದು‌ ಬದುಕು ಬದಲಾಯಿಸಿದ ಘಟನೆ. ನಾನು ಲಯನ್ ಕನ್ಸರ್ವೇಶನ್ ಕ್ಯಾಂಪ್ ನಲ್ಲಿದ್ದೆ. ಅಲ್ಲಿ ಕಾಡಿನಲ್ಲಿದ್ದ ಸಿಂಹವೊಂದು ಸಾಯುವ ಸಮಯದಲ್ಲಿ ವಿರಕ್ತ ಸನ್ಯಾಸಿಯಂತೆ ತಾನಾಗಿಯೇ ಪ್ರಕೃತಿಗೆ ಶರಣಾಗುವುದನ್ನು ಕಣ್ಣಾರೆ ಕಂಡಿದ್ದೇನೆ.‌ ವಯಸ್ಸಾಗಿದ್ದ ಆ ಸಿಂಹ ಗಾಯಗೊಂಡಿತ್ತು. ಅದು ತಾನಾಗಿಯೇ ಆಹಾರ ತ್ಯಜಿಸಿ ಮರವೊಂದರ ಕೆಳಗೆ ಕುಳಿತಿತ್ತು. ಕೆಲವು ದಿನಗಳಲ್ಲಿ ಅದು ಸತ್ತು ಹೋಯಿತು ಕೂಡ. ಸಿಂಹಗಳು ಕೊನೆಯ ದಿನಗಳಲ್ಲಿ ಇಂಥ ತೀರ್ಮಾನ ಮಾಡುವುದು ಸಹಜ ಅಲ್ಲಿನ ಚಾಲಕರೊಬ್ಬರು ತಿಳಿಸಿದರು.

ನೀವು ಕೈಗೊಂಡ ಮರೆಯಲಾಗದ ಪ್ರವಾಸ ಅಂದರೆ ಯಾವುದು?

ನಮ್ಮ ಅಜ್ಜಿ ಭಾರ್ಗವಿ ನಾರಾಯಣ್ ತೀರಿಕೊಂಡ ಬಳಿಕ ನಾನು ತುಂಬಾ ನೊಂದಿದ್ದೆ. ಆದರೆ ಅತ್ತಿರಲಿಲ್ಲ.‌ ಮೂರು ತಿಂಗಳ‌ ಬಳಿಕ ಸ್ಕೂಬಾ ಡೈವಿಂಗ್ ಕೋರ್ಸ್ ಗೆ ನಾನು‌ ಮಾಲ್ಡೀವ್ಸ್ ಗೆ ಹೋಗಿದ್ದೆ. ಆಗ ದಿಢೀರ್ ಚಂಡಮಾರುತ ಬಂದಿತ್ತು. ಬೆಳಗ್ಗೆ ಅಂಥ ಯಾವ ಲಕ್ಷಣವೂ ಇರಲಿಲ್ಲ. ಆದರೆ ನಮ್ಮ ಚಿಕ್ಕ ಬೋಟ್ ಸಮುದ್ರ ಮಧ್ಯೆ ತಲುಪಿದಾಗ ಭಾರೀ ಗಾಳಿ, ಅಲೆಗಳಿಂದ ಕಂಗೆಡಬೇಕಾಯಿತು. ನಾವು 8 ಜನ ಇದ್ದೆವು. ನಮಗೆ ಲೈಫ್ ಜಾಕೆಟ್ ಹಾಕಿದ್ದರು. ಹಿಂದಿನ ದಿನ ಇಬ್ಬರು ಭಾರತೀಯರೇ ಮುಳುಗಿ ಹೋಗಿದ್ದರು. ನನ್ನ ಫೋನ್ ಎಲ್ಲೋ ಹೋಗಿತ್ತು.

ಅವತ್ತೇನೋ‌ ಪಾರಾಗಿ ದಡ ಸೇರಿದ್ದೆವು. ಆದರೆ ಆ ಭಯಕ್ಕೆ ಮರುದಿನ‌ ಸಮುದ್ರದ ಕಡೆಗೆ ಹೋಗುವಾಗಲೇ ಎಲ್ಲರಿಗೂ ವಾಂತಿ ಬರುವಂತಾಗುತ್ತಿತ್ತು.

Untitled design (1)

ದೇವಸ್ಥಾನಗಳಿಗೆ ಪ್ರವಾಸ ಹೋಗುವ ಹವ್ಯಾಸ ಇಲ್ಲವೇ?

ದೇವಸ್ಥಾನ ದರ್ಶನ ಅಂದರೆ ಅದು ಅಮ್ಮ ಹಾಕುವ ಪ್ಲ್ಯಾನ್ ಆಗಿರುತ್ತದೆ. ನನಗೆ ಅವರೊಂದಿಗೆ ಹೋದಾಗ ನಮ್ಮ 'ಹೊರನಾಡೇ' ಹೆಚ್ಚು ಇಷ್ಟವಾಗೋದು. ಇತ್ತೀಚೆಗೆ ಸೋಮನಾಥಪುರಕ್ಕೆ ಹೋಗಿದ್ದೆವು. ಅಲ್ಲಿನ ವಾಸ್ತುಶಿಲ್ಪ ನೋಡಿಯೇ ಮೈಮರೆತು ಹೋದೆ. ಅಂದಿನವರ ಸಾಧನೆ ಮುಂದೆ ನಾವೇನೂ ಇಲ್ಲ.

ಪ್ರವಾಸ ಹೋಗಲು ನೀವು ಸೂಚಿಸುವ ಜಾಗ ಯಾವುದು?

ಇಲ್ಲಿಂದ ಮೈಸೂರಿಗೆ ಹೋದರೂ ಕಲಿಯುವುದು ತುಂಬ ಇದೆ. ಓದು ಅಥವಾ ಡಾಕ್ಯುಮೆಂಟರಿ ನೋಡುವುದಕ್ಕಿಂತ ಹೆಚ್ಚಾಗಿ ಹೊಸ ಹೊಸ ಭಾಗಗಳಿಗೆ ಭೇಟಿ ನೀಡುವುದರಿಂದ ತುಂಬಾನೇ ಕಲಿಯಬಹುದು. ಸ್ವಲ್ಪ ಬೇರೆಯವರನ್ನು ಅರಿಯುವ ಪ್ರಯತ್ನ ಮಾಡಿದರೂ ನಾವೆಲ್ಲರೂ‌ ಒಂದೇ... ನಮ್ಮೆಲ್ಲರ ಕಷ್ಟಗಳು ಒಂದೇ ಎಂದು ಅರ್ಥವಾಗುತ್ತದೆ. ಜನರೊಂದಿಗೆ ಮಾತಾಡಿ ಬೆರೆಯುವುದರಿಂದ ಅಲ್ಲಿನ ಆಹಾರ ಸೇವಿಸುವುದರಿಂದ ಜಗತ್ತು ತುಂಬ ಚಿಕ್ಕದಾಗಿದೆ ಅಂತ ತಿಳಿಯುತ್ತೆ. ಮನಸು ಮತ್ತು ಹೃದಯದ ನಡುವಿನ ಪ್ರಯಾಣವೇ ಅತ್ಯುತ್ತಮ ಪ್ರಯಾಣ ಅಂತಾರೆ. ಈ ಪ್ರಯಾಣ ಕೂಡ ನೀವು ನಿಮ್ಮ ಕಂಫರ್ಟ್ ಜೋನಿಂದ ಎದ್ದು ಹೊರಗೆ ಬಂದಾಗಲಷ್ಟೇ ಸಾಧ್ಯವಾಗುತ್ತದೆ.