• ಶಶಿಕರ ಪಾತೂರು

ಮಾಯಾಮೃಗದಿಂದ ಇಲ್ಲಿಯವರೆಗೆ ಸಾಕಷ್ಟು ಧಾರಾವಾಹಿಗಳಲ್ಲಿ ನಾಯಕಿಯಾಗಿ, ಖಳ ನಾಯಕಿಯಾಗಿ ನಟಿಸಿದಾಕೆ ರೇಖಾ ಕುಮಾರ್. ಕನ್ನಡ ಸೇರಿದಂತೆ ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ಜನಪ್ರಿಯತೆ ಪಡೆದಿರುವ ಈ ನಟಿ ಇತ್ತೀಚೆಗಷ್ಟೇ ಒಮಾನ್ ಪ್ರವಾಸ ಮುಗಿಸಿ ಬಂದಿದ್ದಾರೆ. ತಮ್ಮ ಒಟ್ಟು ಪ್ರವಾಸದ ಅನುಭವಗಳ ಬಗ್ಗೆ ಇಲ್ಲಿ ಹೇಳಿಕೊಂಡಿದ್ದಾರೆ.

ಒಮಾನ್ ದೇಶದ ಪ್ರವಾಸ ಅನುಭವ ಹೇಗಿತ್ತು?

ವಾಸ್ತವದಲ್ಲಿ ಅದು ಪ್ರವಾಸ ಮಾತ್ರ ಆಗಿರಲಿಲ್ಲ. ನನ್ನ ತಂಗಿ ಮನೆಗೆ ಕೊಟ್ಟ ಭೇಟಿಯೂ ಹೌದು. ನನ್ನ ತಂಗಿ ರೀನಾ ಪತಿಯೊಂದಿಗೆ ಅಲ್ಲೇ ವಾಸವಾಗಿದ್ದಾಳೆ. ಹಾಗೆ ನನ್ನೊಂದಿಗೆ ಅಕ್ಕ ಕೂಡ ಬಂದಿದ್ದಳು. ಒಟ್ಟಿನಲ್ಲಿ ಒಂದು ಫ್ಯಾಮಿಲಿ ಟೂರ್ ಅನುಭವವಂತೂ ಇತ್ತು.

ನಿಮಗೆ ಒಮಾನ್ ನಲ್ಲಿ ವಿಶೇಷವಾಗಿ ಕಾಣಿಸಿದ್ದೇನು?

ನನಗೆ ಇಡೀ ಒಮಾನ್ ಎನ್ನುವುದೇ ಆಕರ್ಷಕವೆನಿಸಿತು. ಮುಖ್ಯವಾಗಿ ರಸ್ತೆಗಳೆಲ್ಲ ನನಗೆ ಕ್ರೇಜ್ ನೀಡಿತ್ತು. ಆ ರಸ್ತೆಗಳನ್ನೆಲ್ಲ ನೋಡಿ ಲಾಂಗ್‌ ಡ್ರೈವ್‌ ಹೋಗೋ ಮನಸಾಯಿತು. ಆದರೆ ಅಲ್ಲಿ ರೈಟ್ ಹ್ಯಾಂಡ್ ಟ್ರಾಫಿಕ್ ಸಿಸ್ಟಮ್ ಇರುವುದರಿಂದ ನನಗೆ ನನಗೆ ಡ್ರೈವ್ ಮಾಡುವ ಕಾನ್ಫಿಡೆನ್ಸ್‌ ಬರಲಿಲ್ಲ. ಆದರೆ ತಂಗಿಯ ಡ್ರೈವಿಂಗ್ ನಲ್ಲಿ 150 ಕಿಮೀ. ದೂರವನ್ನು ಕೇವಲ ಗಂಟೆಯೊಳಗೆ ರೀಚಾಗಿದ್ದೆವು. ಅದೊಂದು ಟ್ರಾಫಿಕ್‌ ಫ್ರೀ ಪ್ರಯಾಣ.

ಇದನ್ನೂ ಓದಿ: ಹಾರುವ ವಿಮಾನದಿಂದ ಕೆಳಗೆ ಜಂಪ್ ಮಾಡಿದ್ದೆ

ಆ ದೇಶದಿಂದ ಕಲಿತುಕೊಳ್ಳಬೇಕು ಅನಿಸಿದ್ದೇನು?

ಒಮಾನ್ ನಲ್ಲಿರುವ ನಿಯಮಗಳ ಶಿಸ್ತಾದ ಅನುಸರಣೆ ಆದರ್ಶವೆನಿಸುತ್ತದೆ. ಬಹುಶಃ ಅದು ರಾಜಾಡಳಿತದಲ್ಲಿರುವ ಕಾರಣ ಆ ಕಟ್ಟುನಿಟ್ಟು ಸಾಧ್ಯವಾಗಿರಬಹುದು. ಆದರೆ ಸೌಲಭ್ಯದ ಬಗ್ಗೆ ಮಾತ್ರ ಮೆಚ್ಚಿಕೊಳ್ಳಲೇಬೇಕು. ಅಲ್ಲಿನ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಉಚಿತ ಕನ್ಸಲ್ಟೇಶನ್‌. ನನ್ನ ತಂಗಿ ಗಂಡ ಅಲ್ಲೇ ಡಾಕ್ಟರ್‌ ಆಗಿರುವ ಕಾರಣ ಈ ಎಲ್ಲ ವಿಚಾರಗಳು ನನಗೆ ಅರಿವಾಯಿತು. ಮುಖ್ಯವಾಗಿ ಸ್ವಚ್ಛತೆಯನ್ನು ಇಡೀ ಆಸ್ಪತ್ರೆಗೆ ಮಾತ್ರವಲ್ಲ, ನಗರಕ್ಕೆ ಅನ್ವಯಿಸಲಾಗಿದೆ.

Untitled design - 2026-04-15T181747.536

ಅಲ್ಲಿನವರು ಸ್ವಚ್ಛತೆಯನ್ನು ಕಾಯ್ದುಕೊಂಡಿರುವ ರೀತಿಗೆ ಉದಾಹರಣೆ ಕೊಡಬಹುದೇ?

ನಾವು ಹೋದಾಗ ಅಲ್ಲಿ ಮಳೆ ಪ್ರಾರಂಭ ಆಗಿತ್ತು. ಅಲ್ಲಿ ಎರಡ್ಮೂರು ಗಂಟೆ ನಿರಂತರವಾಗಿ ಮಳೆ ಸುರಿಯೋದು ಅದೇ ಮೊದಲಂತೆ! ಅನಿರೀಕ್ಷಿತ ಮಳೆಯಿಂದಾಗಿ ಚಿಕ್ಕ ಚಿಕ್ಕ ಹಳ್ಳಗಳು ತುಂಬ್ಕೊಂಡು ಹರೀತಾ ಇತ್ತು. ಮರುಭೂಮಿಯ ಕಲ್ಲು, ಮಣ್ಣು ಎಲ್ಲವೂ ರಸ್ತೆ ಸೇರುತ್ತಿತ್ತು. ಆದರೆ ಮಳೆ ನಿಂತ ಗಂಟೆಗಳೊಳಗೆ ಅವೆಲ್ಲವನ್ನು ಶುದ್ಧಗೊಳಿಸಲಾಗಿತ್ತು. ನೌಕರರು ಬ್ರಶ್‌ ತಗೊಂಡು ಉಜ್ಜುತ್ತಾ ಕ್ಲೀನ್‌ ಮಾಡೋದನ್ನು ಕಣ್ಣಾರೆ ನೋಡಿದ್ದೆ. ಗಲೀಜು ಬಿಡಿ, ಧೂಳು ಕೂಡ ಕಾಣಿಸದಂತೆ ಸ್ವಚ್ಛವಾಗಿ ಉಳಿಸಿಕೊಳ್ಳುತ್ತಾರೆ. ಅದೇ ರೀತಿ ನಮ್ಮದೇ ಕಾರಿದ್ದರೂ ಅವುಗಳನ್ನು ಶಿಸ್ತಾಗಿ ಮೇಂಟೇನ್ ಮಾಡದಿದ್ದಲ್ಲಿ ನಾವೇ ಫೈನ್ ಕಟ್ಟಬೇಕಾಗುತ್ತದೆ.

ನೀವು ಸುತ್ತಾಡಿದಂಥ ಪ್ರೇಕ್ಷಣೀಯ ಜಾಗಗಳು ಯಾವುವು?

ಮುಖ್ಯವಾಗಿ ಮಸ್ಕತ್ ನ ಸುಲ್ತಾನ್ ಖಬೂಸ್ ಗ್ರ್ಯಾಂಡ್ ಮಸೀದಿಯ ವೈಭವ ನೋಡಿದೆವು. ಕೋಟೆಗಳ ವಾಸ್ತುಶಿಲ್ಪ, ನದಿಯಲ್ಲಿ ಕಾಯ್ದುಕೊಂಡಿರುವ ಶುದ್ಧ ನೀರು ಎಲ್ಲವೂ ಸೌಂದರ್ಯಕ್ಕೆ ಮೆರುಗು ನೀಡಿವೆ. ಆದರೆ ನಾವು ಅಲ್ಲಿ ಇದ್ದಿದ್ದೇ ಏಳು ದಿನ. ತಂಗಿಗೆ ತುಂಬಾ ಜನ ಸ್ನೇಹಿತರು. ಅವರೆಲ್ಲ ಪ್ರತಿದಿನ ತಮ್ಮ ಮನೆಗೆ ಕರೆಯುತ್ತಿದ್ದರು.

ಒಮಾನ್ ಆಹಾರ ಹೇಗಿತ್ತು?

ನಾವು ಹೋಗಿದ್ದೆಲ್ಲ ಕನ್ನಡಿಗರ ಮನೆಗೆ. ಹಾಗಾಗಿ ಒಮಾನ್ ಗೆ ಹೋದರೂ ಭಾರತೀಯ ಆಹಾರವೇ ಸಿಗುತ್ತಿತ್ತು. ಆದರೆ ನನಗೆ ಹೊಸ ಮಾದರಿ ಆಹಾರಗಳನ್ನು ಸೇವಿಸುವ ಆಸಕ್ತಿ ಇದೆ. ಹಾಗಾಗಿ ಅಲ್ಲಿರುವ ಪಾಕಿಸ್ತಾನಿ ವೆಜ್ ರೆಸ್ಟೋರೆಂಟ್‌ಗೆ ಹೋಗಿದ್ದೆವು. ಅಲ್ಲಿ ಟರ್ಕಿಷ್‌ ಫುಡ್ ಟ್ರೈ ಮಾಡಿದ್ವಿ. ಅದೇ ರೀತಿ ಒಮಾನಿ ಹಲ್ವಾದ ರುಚಿಯನ್ನೂ ಸವಿದಿದ್ದೇವೆ.

ನಿಮ್ಮ ಪ್ರವಾಸದಲ್ಲಿ ಯುದ್ಧದ ಪರಿಣಾಮವೇನೂ ಕಾಣಿಸಿಲ್ಲವೇ?

ನಾವು ಫ್ಲೈಟ್‌ ಟಿಕೆಟ್‌ ಬುಕ್‌ ಮಾಡುವಾಗ ಯುದ್ಧ ಶುರುವಾಗಿರಲಿಲ್ಲ. ವೀಸಾ ಬಂದ ಮೇಲೆ ಯುದ್ಧಾರಂಭವಾಯಿತು. ಆದರೆ ತಂಗಿ ಮನೆಯವರು ಏನೂ ಸಮಸ್ಯೆ ಇಲ್ಲ ಎಂದಾಗ ಹೋದೆವು. ನಮಗೇನೂ ಸಮಸ್ಯೆ ಆಗಿಲ್ಲ.

ನೀವು ಇದುವರೆಗೆ ಎಷ್ಟು ದೇಶಗಳನ್ನು ಸುತ್ತಿದ್ದೀರಿ? ಆ ಅನುಭವ ಹೇಗಿದೆ?

ನಾನು ಥೈಲ್ಯಾಂಡ್‌, ಸಿಂಗಾಪುರ್‌, ಮಲೇಷಿಯಾ,‌ ಶ್ರೀಲಂಕಾ, ಅಂಡಮಾನ್ ಹೋಗಿದ್ದೀನಿ. ಸಿಂಗಾಪುರ್‌, ಮಲೇಷಿಯಾ ಚೆನ್ನಾಗಿತ್ತು. ಹೆಚ್ಚಾಗಿ ಅಕ್ಕನ ಜತೆಯೇ ಹೋಗುತ್ತೇನೆ. ಬಾಲಿಗೆ ಹೋದಾಗ ಹೋದಾಗ ಇಂಡಿಯಾದಲ್ಲೇ ಉತ್ತಮ ಜಾಗದಲ್ಲಿ ಸುತ್ತಾಡಿದ ಅನುಭವವಾಗಿದೆ. ಯಾಕೆಂದರೆ ಅಲ್ಲಿ ಮಹಾಭಾರತ, ರಾಮಾಯಣ ನಾಟಕಗಳನ್ನು ಡ್ಯಾನ್ಸ್‌ ಡ್ರಾಮಾ ಮೂಲಕ ತೋರಿಸುತ್ತಾರೆ. ಮಲೇಷಿಯಾದಲ್ಲಿ ಸುಬ್ರಹ್ಮಣ್ಯ ದೇವಸ್ಥಾನ‌ ದರ್ಶನ ಖುಷಿ‌ಕೊಟ್ಟಿತ್ತು.

Untitled design - 2026-04-15T181739.936

ದೇಶದೊಳಗೆ ನಿಮ್ಮನ್ನು ಸೆಳೆದ ದೇವಾಲಯಗಳು ಯಾವುವು?

ಟೆಂಪಲ್‌ ರನ್‌ ಕ್ರೇಜ್‌ ಇದೆ. ಟ್ರಾವೆಲಿಂಗ್ ಮತ್ತು ಟೆಂಪಲ್‌ ಟ್ರಿಪ್‌ಗೆ ಎಂದು ಎರಡು ಗ್ಯಾಂಗ್ ಗಳೇ ಇವೆ. ನಾನು ಎರಡರಲ್ಲೂ ಇದ್ದೇನೆ. ನನಗೆ ತಮಿಳುನಾಡು ಸೇರಿದಂತೆ ನಮ್ಮ ದಕ್ಷಿಣದಲ್ಲಿರುವ ದೇವಾಲಯಗಳೇ ಇಷ್ಟ. ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಕಪ್ಪು ಕಲ್ಲಿನ ದೇವರೇ ನನಗಿಷ್ಟ. ಉತ್ತರದ ಮಾರ್ಬಲ್ ದೇವರನ್ನು ಕಂಡರೆ ನನ್ನಲ್ಲಿ ಭಕ್ತಿ ಮೂಡದು.

ಟ್ರಾವೆಲಿಂಗ್ ಗ್ಯಾಂಗ್ ಜತೆ ಎಲ್ಲೆಲ್ಲ ಸುತ್ತಾಡಿದ್ದೀರಿ?

ನಾವು ಜಮ್ಮು ಕಾಶ್ಮೀರ, ಮುಂಬೈ, ಹೈದರಾಬಾದ್‌, ಕೇರಳ, ಅಸ್ಸಾಂ, ರಾಜಸ್ತಾನ, ದೆಹಲಿ, ಚಿರಾಪುಂಜಿ, ಮೇಘಾಲಯ ತಮಿಳುನಾಡು ಎಲ್ಲ ಸುತ್ತಾಡಿದ್ದೇವೆ. ನನಗೆ ಜೈಪುರ ಮತ್ತು ಅದಕ್ಕಿಂತಲೂ ಜೈಸಲ್ಮೇರ್‌ ಅಂದರೆ ಇಷ್ಟ. ಮರುಭೂಮಿಯಲ್ಲಿ ಟೆಂಟ್‌ ಹಾಕಿ ಮಲಗುವ ಅನುಭವ ಸಫಾರಿ ಎಲ್ಲವೂ ವಿಭಿನ್ನವಾಗಿರುತ್ತದೆ.

ಇದುವರೆಗಿನ ಪ್ರವಾಸದಲ್ಲಿ ಮರೆಯಲಾಗದ ಅನುಭವ ಯಾವುದು?

ವರ್ಷಗಳ ಹಿಂದೆ ಸಿಂಗಾಪುರಕ್ಕೆ ಹೋದಾಗ ಅಲ್ಲಿ ನನ್ನ ಫ್ಯಾನ್‌ ಕ್ಲಬ್‌ ಮಾಡಿಕೊಂಡಿದ್ದಂಥ ತಮಿಳುನಾಡಿನ ಅಭಿಮಾನಿ ಸಿಕ್ಕಿದ್ದಳು. ನನಗೆ ಒಂದು ಸುಂದರವಾದ ಭಾವನಾತ್ಮಕ ಪತ್ರ ಕೊಟ್ಟಿದ್ದಳು. ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡಿದ್ದೆವು.