-ಶಶಿಕರ ಪಾತೂರು

'ಶೇಕ್ ಇಟ್ ಪುಷ್ಪವತಿ' ಎಂದಾಗ ತನು ಕುಣಿಸಿದ್ದ ನಿಮಿಕಾ ರತ್ನಾಕರ್ ಈಗ ಸಫಾರಿ ಹೋಗಲು ಸಿದ್ಧವಾಗಿದ್ದಾರೆ. ನಿಮಿಕಾ‌ ನಾಯಕಿಯಾಗಿ ನಟಿಸಿರುವ 'ವೈಲ್ಡ್ ಟೈಗರ್ ಸಫಾರಿ' ಕನ್ನಡ ಮತ್ತು ಹಿಂದಿಯಲ್ಲಿ ತೆರೆಕಾಣಲು ಸಿದ್ಧವಾಗಿದೆ. ಚಿತ್ರದಲ್ಲಿ ನಿಮಿಕಾ ಸಫಾರಿ ಹೋಗುತ್ತಾರಾ ಎನ್ನುವುದು ಇನ್ನೂ ತಿಳಿದಿಲ್ಲ. ಆದರೆ ನಿಜ ಜೀವನದಲ್ಲಿ ನಿಮಿಕಾಗೆ ಪ್ರವಾಸ ಅಂದರೆ ಪಂಚಪ್ರಾಣ.

ಪ್ರವಾಸ ಅಂದರೆ ನಿಮಗೆ ಎಷ್ಟು ಇಷ್ಟ?

ಪ್ರವಾಸ ಅಂದರೆ ನನಗೆ ತುಂಬಾನೇ ಇಷ್ಟ. ಟೈಮ್‌ ಸಿಕ್ಕಾಗೆಲ್ಲ ಪ್ರವಾಸ ಹೋಗುವ ಅಭ್ಯಾಸ ಇದೆ. ಶೂಟಿಂಗ್ ಇದ್ದಾಗ ಅಥವಾ ಕಾರ್ಯನಿಮಿತ್ತ ಪ್ರಯಾಣ ಇದ್ದಾಗಲೂ ಕೂಡ ನಾನು ಇನ್ನೂ ಎರಡು ದಿನಗಳನ್ನು ಹೆಚ್ಚುವರಿಯಾಗಿ ನನಗೆ ಮೀಸಲಾಗಿರಿಸಿಕೊಳ್ಳುತ್ತೇನೆ. ಆ ಜಾಗವನ್ನು ಎಕ್ಸ್ ಪ್ಲೋರ್ ಮಾಡುವುದರಲ್ಲಿ ಖುಷಿ ಕಾಣುತ್ತೇನೆ.

ಇದನ್ನೂ ಓದಿ: ಬಾಬಾಜಿ ಗುಹೆಯಲ್ಲಿ ಒಂದು ತಿಂಗಳು!

ನಿಮ್ಮ ನೆನಪಿನಲ್ಲಿರುವ ಮೊದಲ ಪ್ರವಾಸ ಯಾವುದು?

ಪ್ರತ್ಯೇಕವಾಗಿ ಇದೇ ಮೊದಲ ಪ್ರವಾಸ ಅಂತ ನನಗೆ ನೆನಪಿಲ್ಲ. ಯಾಕೆಂದರೆ ಬಾಲ್ಯದಿಂದಲೇ ತಂದೆ ತುಂಬಾ ಕಡೆ ಕರೆದುಕೊಂಡು ಹೋಗ್ತಾ ಇದ್ದರು. ಪ್ರವಾಸ ಹೋದರೆ ನಾವು ಫ್ಯಾಮಿಲಿ ಪೂರ್ತಿ ಹೋಗ್ತಾ ಇದ್ದೆವು. ನಾನು, ಅಮ್ಮ, ಅಪ್ಪ ಮತ್ತು ನನ್ನ ಬ್ರದರ್.‌ ಈಗಲೂ ನನಗೆ ಕುಟುಂಬ ಸಮೇತ ಪ್ರವಾಸ ಹೋಗಿಯೇ ಅಭ್ಯಾಸ. ಈಗ ವೃತ್ತಿಪರವಾಗಿ ಸುತ್ತಾಡುವಾಗಲೂ ಅಮ್ಮ ಜತೆಗೆ ಇರುತ್ತಾರೆ. ಅದೇ ಎಕ್ಸೈಟ್ಮೆಂಟ್ ಕೂಡ ಹೌದು.

Untitled design (30)

ಶಾಲಾ ದಿನಗಳಲ್ಲಿ ಪ್ರವಾಸ ಹೋಗಿದ್ದೆಲ್ಲಿಗೆ?

ನನ್ನ ವಿದ್ಯಾಭ್ಯಾಸವೆಲ್ಲ ಮಂಗಳೂರಿನಲ್ಲೇ ನಡೆದ ಕಾರಣ ಬಾಲ್ಯದ ಪ್ರವಾಸವೆಲ್ಲ ಅಲ್ಲೇ ಸುತ್ತಮುತ್ತಲಿನ ಭಾಗದಲ್ಲಿತ್ತು. ಶಾಲೆಯಿಂದ ಗೈಡ್ಸ್‌ ಜತೆ ಹೋಗ್ತಾ ಇದ್ದೆವು. ಶಾಲೆಯಿಂದ ಅಂದರೆ ಒಂದು ದಿನ ಪ್ರವಾಸ ಇತ್ತು. ದೂರ ದೂರ ಹೋಗ್ತಾ ಇರಲಿಲ್ಲ. ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಮಾಡುವ ಸಮಯದಲ್ಲಿ ಒಂದು ದಿನದ ಪ್ರವಾಸಕ್ಕೆ ಗೋವಾಗೆ ಹೋಗಿದ್ದೆ. ಬಹುಶಃ ಅದೊಂದು ಬಿಟ್ಟರೆ ನನ್ನದು ಎಲ್ಲವೂ ಫ್ಯಾಮಿಲಿ ಟೂರ್ ಗಳೇ.

ಇಂದಿನ ತನಕ ಫ್ರೆಂಡ್ಸ್ ಜತೆ ಟೂರ್ ಮಾಡಿದ್ದೇ ಇಲ್ಲವೇ?

ಹೋಗಿದ್ದೇನೆ. ಆದರೆ ಅದೇ ಸ್ಕೂಲ್ ಫ್ರೆಂಡ್ಸ್ ಜತೆಗೆ! ನಾವು ಒಂದಷ್ಟು ಮಂದಿ ಆಪ್ತ ಗೆಳತಿಯರಿದ್ದೇವೆ. ಬೆಂಗಳೂರಿಗೆ ಬಂದ ಮೇಲೆ, ಕಳೆದ ವರ್ಷ ನಮ್ಮ ಆಸೆ ತೀರಿಸಿಕೊಂಡೆವು. ಸ್ಕೂಲ್‌ ಟೈಮ್‌ನಲ್ಲೇ ನಾವು ಪ್ಲಾನ್‌ ಮಾಡ್ತಾ ಇದ್ದೆವು. ಆದರೆ ಆಗ ಆಗ್ತಾ ಇರಲಿಲ್ಲ. ಒಬ್ಬೊಬ್ಬ ಫ್ರೆಂಡ್ಸ್‌ ಒಂದೊಂದು ಕಡೆಯಲ್ಲಿ ಇದ್ದರು. ಆದರೂ ಕಳೆದ ವರ್ಷ ಹೋಗಲೇ ಬೇಕು ಅಂತ ಡಿಸೈಡ್‌ ಮಾಡಿದ್ದೆವು. ಹಾಗಾಗಿ ನಾವು ಮೂವರು ಬಾಲಿಗೆ ಹೋದೆವು. ಟೆಂಪಲ್ಸ್‌, ಸೀನರೀಸ್‌ ಮಾತ್ರವಲ್ಲ, ಹೆಲ್ತ್‌ವೈಸ್‌ ಹೋಗುವುದಾದರೂ ಅಲ್ಲಿ ಆಸ್ವಾದನೆಗೆ ತುಂಬಾ ಇದೆ. ಪಾರ್ಟಿ ಕೂಡಾ ಮಾಡಬಹುದು. ಅದರೆ ನಾವು ಮಾಡಿಲ್ಲ. ಗರ್ಲ್ಸ್ ಟ್ರಿಪ್ಸ್‌ ಯಾವಾಗಲೂ ಫನ್‌ ಆಗಿರುತ್ತವೆ.

ನಿಮಗೆ ಮರೆಯಲಾಗದಂಥ ಪ್ರವಾಸ ಯಾವುದು?

ಕಳೆದ ವರ್ಷ ಫೆಬ್ರವರಿಯಲ್ಲಿ ಕಾಶ್ಮೀರಕ್ಕೆ ಹೋಗಿದ್ದೆ. ನಾನು ಇಷ್ಟು ವರ್ಷ ಸ್ನೋ ನೋಡಿರಲಿಲ್ಲ. ಆದರೆ ಗುಲ್ ಮೊಹರ್ ನಲ್ಲಿ ಸ್ನೋ ಫೀಲ್‌ ಮಾಡಿದೆ. ಹಿಮದ ಮಳೆಯೇ ಬಂದ ಹಾಗೆ! ಸ್ವರ್ಗದಲ್ಲಿ ಕುಳಿತುಕೊಂಡ ಹಾಗೆ ಫೀಲ್‌ ಆಗಿತ್ತು. ಆದರೆ ಚಳಿ ತುಂಬಾ ಜಾಸ್ತಿ ಅಲ್ಲಿ. ನಾನು ಮಂಗಳೂರಿನವಳು ಆಗಿರುವುದರಿಂದ ಹೆಚ್ಚು ಚಳಿ ತಡೆದುಕೊಂಡು ಅಭ್ಯಾಸ ಇರಲಿಲ್ಲ. ನಾನು ತುಂಬಾ ಬಟ್ಟೆ ಹಾಕಿಕೊಂಡು ಎಲ್ಲಾ ಎಂಜಾಯ್‌ ಮಾಡಿದೆ!

ಪ್ರವಾಸದ ವೇಳೆ ಕುಟುಂಬದ ಜತೆಯಲ್ಲಿದ್ದಾಗ ಅಚ್ಚರಿಯ ಘಟನೆಗಳು ಏನಾದರೂ ಎದುರಾಗಿವೆಯೇ?

ಎಲ್ಲೇ ಹೋದರೂ ಅನಿರೀಕ್ಷಿತವಾಗಿ ಕುಟುಂಬ ಸಂಗಮವಾಗುವುದೇ ನನ್ನ ಅಚ್ಚರಿ! ಕಳೆದ ವರ್ಷ ಅಮ್ಮನ ಜತೆ ಕತಾರ್‌ಗೆ ಹೋಗಿದ್ದೆ. ಅಲ್ಲಿ ನಮ್ಮ ಸಿನಿಮಾದ ಟೀಸರ್‌ ಲಾಂಚ್‌ ಕಾರ್ಯಕ್ರಮವಿತ್ತು. ಸಲ್ಮಾನ್‌ ಖಾನ್ ಭಾಗಿಯಾದ ಕಾರ್ಯಕ್ರಮ ಆಗಿತ್ತದು. ಈ ಟ್ರಿಪ್‌ ಎಕ್ಸ್‌ಟೆಂಡ್‌ ಮಾಡಿ ನಾನು ಅಮ್ಮ ಅಲ್ಲಿ ಸುತ್ತಾಡಿದೆವು. ನಂತರ ದುಬೈಗೆ ಹೋದೆವು. ಅಲ್ಲಿ ರೆಮೋ ಡಿಸೋಜಾ ಟೀಸರ್‌ ಲಾಂಚ್‌ ಮಾಡಿದರು. ವೈಲ್ಡ್ ಟೈಗರ್ ಲೈಫ್‌ ಸಫಾರಿ ಚಿತ್ರದ್ದು. ಆಗ ಕೂಡಾ ಅಮ್ಮ ಇದ್ದರು. ನನ್ನ ತಮ್ಮ ಕೂಡಾ ಅಲ್ಲಿ ಅಚಾನಕ್‌ ಆಗಿ ಭೇಟಿಯಾಗಿದ್ದ.

Untitled design (28)

ನಿಮ್ಮ ಕನಸಿನ ಪ್ರವಾಸ ಅಂದರೆ ಯಾವುದು?

ಯುರೋಪ್‌ ತಿರುಗಾಡುವುದು ನನ್ನ ಡ್ರೀಮ್‌. ಅಲ್ಲಿ ನೋಡಬೇಕಾದ ತುಂಬಾ ಜಾಗಗಳಿವೆ. ಈ ವರ್ಷ ಆದರೂ ಹೋಗಬೇಕು ಎನ್ನುವ ಆಸೆ. ಈ ಸಲ ಸಮಯ ಸಿಕ್ಕಾಗ ಖಂಡಿತ ಹೋಗ್ತೇನೆ. ಕರ್ನಾಟಕದಲ್ಲಿ ಸಹಜವಾಗಿ ನನ್ನ ಫೇವರಿಟ್ ಊರು ಮಂಗಳೂರು, ನಂತರ ಬೆಂಗಳೂರು. ಇಲ್ಲಿನ ವಾತಾವರಣ ತುಂಬಾ ಇಷ್ಟ. ಆಹಾರ ಅಂತ ಬಂದಾಗ ಮಂಗಳೂರು ಇಷ್ಟ. ಉತ್ತರ ಭಾರತವನ್ನು ಎಕ್ಸ್‌ಪ್ಲೋರ್‌ ಮಾಡಬೇಕು ಎನ್ನುವ ಆಸೆ ಇದೆ.

ದೇವಸ್ಥಾನಗಳ ದರ್ಶನ ಮಾಡುತ್ತಿರುತ್ತೀರಾ?

ದೇವಸ್ಥಾನಕ್ಕೆ ಹೋಗುವ ಹುಚ್ಚು ತುಂಬಾ ಇದೆ. ತ್ರಯಂಬಕೇಶ್ವರಕ್ಕೆ ಹೋಗಿದ್ದೆ. ಆ ಜ್ಯೋತಿರ್ಲಿಂಗವು ನಾಸಿಕ್‌ನಲ್ಲಿದೆ. ಕಳೆದ ವರ್ಷ ಸುಬ್ರಹ್ಮಣ್ಯಕ್ಕೆ ಹೋಗಿದ್ದೆ. ಅಲ್ಲಿನ ವೈಬ್‌ ಚೆನ್ನಾಗಿತ್ತು ಅಂತ ಅಲ್ಲೇ ಎರಡ್ಮೂರು ದಿನ ಇದ್ದೆ.