• ಶಂಕರ್‌ ಅಜ್ಜಂಪುರ

ಒಮಾಹಾ ನಗರದ ಹೊರ ಆವರಣದಲ್ಲಿ ʻಲೀ ಸಿಮ್ಮನ್ಸ್ ವನ್ಯಪ್ರಾಣಿ ಸಂರಕ್ಷಣಾ ಕೇಂದ್ರʼವಿದೆ. ಈ ಉದ್ಯಾನ 150 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಕಾರಿನಲ್ಲೇ ಕುಳಿತು ಸುತ್ತುವ ವ್ಯವಸ್ಥೆಯಿರುವುದರಿಂದ ಹೆಚ್ಚು ಸಮಯವೇನೂ ಬೇಕಾಗುವುದಿಲ್ಲ.

ಇದನ್ನೂ ಓದಿ: ಇದು ವನ್ಯ ಮೃಗಗಳ ಲೋಕವೋ… ಈ ಭೂಮಿಗೆ ಇಳಿದ ನಾಕವೋ…

ಇಲ್ಲಿನ ಸಂಗ್ರಹದಲ್ಲಿರುವ ಪ್ರಾಣಿಗಳ ಪೈಕಿ ನಮಗೆ ವಿಶೇಷವೆನಿಸಬಹುದಾದದ್ದು ಎಂದರೆ ಅಮೆರಿಕನ್ ಕಾಡುಕೋಣ, ಬೃಹತ್ ಗಾತ್ರದ ಕಡವೆಗಳು. ಇದಲ್ಲದೆ ಶೀತವಲಯದಲ್ಲಿ ಜೀವಿಸುವ ಪೆಲಿಕನ್‌ಗಳು, ಹೆಜ್ಜಾರ್ಲೆಗಳು, ಚಮಚೆ ಕೊಕ್ಕಿನ ಬಿಲ್‌ಗಳು, ಕೊಕ್ಕರೆಗಳು, ಹಂಸಪಕ್ಷಿ ಮುಂತಾದವು ಸುಲಭವಾಗಿ ದಾರಿಯಲ್ಲೇ ನೋಡಲು ಸಿಕ್ಕುತ್ತವೆ. ಅವುಗಳಿಗೆ ಯಾತ್ರಿಗಳ, ವಾಹನಗಳ ಭಯವಿಲ್ಲ. ನಿಂತಾಗ 4 ಅಡಿ ಎತ್ತರವಿರುವ ಈ ಹಕ್ಕಿಗಳು ರಸ್ತೆಯಲ್ಲಿ ಬಂದು ಬಿಸಿಲು ಕಾಯಿಸುತ್ತಾ, ಒಂದು ಕೊಳದಿಂದ ಮತ್ತೊಂದು ಕೊಳಕ್ಕೆ ನಡದೇ ಸಂಚರಿಸುತ್ತವೆ. ಸ್ಥೂಲದೇಹಿಯಾದ ವ್ಯಕ್ತಿಯೊಬ್ಬ ಅಂಕುಡೊಂಕಾಗಿ, ಬಹಳ ಶ್ರಮದಿಂದ ನಡೆಯುವಂತೆ ಕಾಣುವ ಅವುಗಳ ಚಲನೆ ನಗೆಯುಕ್ಕಿಸುವಂತಿರುತ್ತದೆ. ತಮ್ಮ ಸ್ಥೂಲ ಶರೀರದ ಹೊರತಾಗಿಯೂ ಬಲುದೂರದ ಪಯಣ, ವಲಸೆಗಳನ್ನು ಮಾಡಲು ಸಮರ್ಥವಿರುವ ಈ ಹಕ್ಕಿಗಳ ಚಿಕ್ಕ ಸ್ವರೂಪವನ್ನು ನಾನು ಶಿವಮೊಗ್ಗದ ಸಮೀಪದ ಮಂಡಗದ್ದೆ ಪಕ್ಷಿಧಾಮದಲ್ಲಿ ನೋಡಿದ್ದೇನೆ.

Untitled design

ಬೋಳುತಲೆಯ ಹದ್ದು ರಾಷ್ಟ್ರಪಕ್ಷಿ

ನಮ್ಮಲ್ಲಿ ರಾಷ್ಟ್ರಪಕ್ಷಿಯನ್ನು ನವಿಲು ಎಂದು ಆರಿಸಿಕೊಂಡಿರುವಂತೆ, ಅಮೆರಿಕದಲ್ಲಿ ಬೋಳುತಲೆಯ ಹದ್ದನ್ನು ರಾಷ್ಟ್ರಪಕ್ಷಿ ಎಂದು ಮಾನ್ಯಮಾಡಲಾಗಿದೆ. ಗಾಯಗೊಂಡ ಅನಾಥ ಹದ್ದಿನ ಮರಿಗಳನ್ನು ಸಂರಕ್ಷಿಸಿ ಅರ್ಧ ಎಕರೆ ಜಾಗದಲ್ಲಿ ಬದುಕಲು ಬಿಟ್ಟಿದ್ದಾರೆ. ರೆಕ್ಕೆ ಬಿಚ್ಚಿದಾಗ ಆರೂವರೆ ಅಡಿ ವಿಸ್ತಾರವಿರಬಲ್ಲ ಹದ್ದುಗಳು ಸಂತಾನಕ್ಕೆಂದು ಕಾಡಿನಲ್ಲಿರುವ ದೊಡ್ಡ ಕಡ್ಡಿಗಳ ಸಂಗ್ರಹದಿಂದ ಗೂಡನ್ನು ರಚಿಸುತ್ತವೆ. ಅದರಲ್ಲಿ ಮೊಟ್ಟೆಯಿಟ್ಟು ಮರಿಮಾಡಿದ ನಂತರ ಗೂಡನ್ನು ತ್ಯಜಿಸಿದರೂ, ಇನ್ನಷ್ಟು ಕಡ್ಡಿಗಳನ್ನು ಸೇರಿಸಿಕೊಂಡು ಮುಂದಿನ ವರ್ಷ ಅದೇ ಗೂಡಿಗೆ ಮರಳುತ್ತವೆ. ಇಂಥ ಕಡ್ಡಿಯ ಗೂಡುಗಳು ಕಾಲಾನುಕ್ರಮದಲ್ಲಿ ವಿಸ್ತಾರವಾಗಿ ಹರಡಿಕೊಂಡು ಭಾರ ತಾಳಲಾಗದೇ, ಕೆಲವೊಮ್ಮೆ ಕೆಳಗೆ ಬಿದ್ದು ಮೊಟ್ಟೆ-ಮರಿಗಳಿಗೆ ಹಾನಿಕಾರಕವೂ ಆಗುತ್ತದೆಯಂತೆ.

Untitled design (1)

ಅಮೆರಿಕನ್ ಕಾಡುಕೋಣ ಮತ್ತು ಕಡವೆಗಳು

ಅಮೆರಿಕನ್ ಕಾಡುಕೋಣಗಳು ತಮ್ಮ ಆಫ್ರಿಕನ್ ಸಂಬಂಧಿಗಳಿಗಿಂತ ಭಿನ್ನವಾಗಿರುತ್ತವೆ. ಹೆಗಲ ಭಾಗ ಎತ್ತರವಾಗಿದ್ದು ಹೆಚ್ಚು ಕೂದಲನ್ನು ಹೊಂದಿರುತ್ತವೆ. ಈಗ ಬೇಸಗೆ ಸಮಯ ಆಗಿರುವುದರಿಂದ ಎಲ್ಲ ಕಾಡೆಮ್ಮೆಗಳೂ ನೀರಿನ ಕೊಳದಲ್ಲೇ ಮೀಯುತ್ತಿದ್ದವು. ಕಡವೆಗಳು ನಿಂತಾಗ ಆರು ಅಡಿ ಎತ್ತರವಿರುತ್ತವೆ. ರೋಮಭರಿತವಾದ ಕೊಂಬುಗಳನ್ನು ಹೊಂದಿರುವ ಇವು ಕೋಡುಗಳನ್ನು ಚಳಿಗಾಲದಲ್ಲಿ ಉದುರಿಸುತ್ತವೆ. ಇಂಥ ದೊಡ್ಡಗಾತ್ರದ ಪ್ರಾಣಿಗಳಿಗೆ ಬೇಕಾಗುವ ಹುಲ್ಲು, ನೀರಿನ ವ್ಯವಸ್ಥೆ ಕಡಿಮೆಯಾಗುತ್ತಾ ಬಂದಾಗ ಅವುಗಳ ನೆಲೆ ನಾಶವಾಗುತ್ತದೆ. ಇವನ್ನೇ ತಿಂದು ಜೀವಿಸುವ ಹುಲಿ-ಸಿಂಹಗಳ ಸಂಖ್ಯೆಯೂ ಕುಗ್ಗುತ್ತದೆಯೆನ್ನುವುದು ಪರಿಸರ ಸಂರಕ್ಷಣೆಯ ಮೊದಲ ಪಾಠವಲ್ಲವೆ.

Untitled design (3)

ಕರಡಿ- ತೋಳಗಳ ದರ್ಶನವಾಗಲಿಲ್ಲ

ನಮಗೆ ಕರಡಿ ಮತ್ತು ತೋಳಗಳ ದರ್ಶನವಾಗಲೇ ಇಲ್ಲ. ಜನರು ತಮ್ಮನ್ನು ನೋಡಲು ಬರುತ್ತಾರೆಂದು ಸ್ವಾಗತಿಸಲು ಅವಕ್ಕೇನು ಉತ್ಸಾಹವಿದ್ದೀತು? ಅಲ್ಸೇಷಿಯನ್ ನಾಯಿಗಳನ್ನು ಹೋಲುವ ತೋಳಗಳನ್ನು ನಾನು ಚಿತ್ರಗಳಲ್ಲಿ ಮಾತ್ರ ನೋಡಿದ್ದೇನೆ. ಸಾಮೂಹಿಕ ಬೇಟೆಮಾಡುವ ತೋಳಗಳಿಗೆ, ಹಿಡಿದಿಟ್ಟಿರುವಂಥ ಪರಿಸರ ಹೊಂದಿಕೆಯಾಗಲಾರದು.

ಸ್ವಚ್ಛವಾದ ಶೌಚಾಲಯ, ವಿರಾಮ ತೆಗೆದುಕೊಳ್ಳಲು ಅಲ್ಲಲ್ಲಿ ವಿಶ್ರಾಂತಿ ತಾಣಗಳು, ನಿರ್ಮಲ ಪರಿಸರಗಳ ಇಲ್ಲಿನ ಕಿರು ಪ್ರವಾಸ ಅಚ್ಚುಮೆಚ್ಚಾಗುವಂಥದ್ದು. ಜತೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಇನ್ನೂ ಸ್ವಾರಸ್ಯವಾಗಿರುತ್ತದೆ.

ಮಾಹಿತಿಗಾಗಿ

ಪ್ರತಿಯೊಬ್ಬರಿಗೆ ಏಳು ಡಾಲರುಗಳ ಪ್ರವೇಶ ಶುಲ್ಕವಿರುತ್ತದೆ.

2-3 ಗಂಟೆಗಳ ಸಮಯದಲ್ಲಿ ಇಡೀ ಉದ್ಯಾನವನ್ನು ಸುತ್ತಾಡಬಹುದು.