ಬ್ಯಾಂಕಾಕ್‌ನ ಈ ಜಾಗದ ಬಗ್ಗೆ ಯಾರಿಗೂ ಹೆಚ್ಚು ಗೊತ್ತಿಲ್ಲ!
ಇಲ್ಲಿನ ಪ್ರತಿ ಕಟ್ಟಡವೂ ವಿಭಿನ್ನ ಹಾಗೂ ವಿಶಿಷ್ಟವಾಗಿದೆ. ಪುರಾತನ ಮಾದರಿಯ ಈ ಕಟ್ಟಡಗಳ ನಡುವೆ ನಡೆದಾಡುವಾಗ ಯಾವುದೋ ಐತಿಹಾಸಿಕ ಸಿನಿಮಾದಲ್ಲಿ ನಡೆದಾಡುತ್ತಿರುವಂತೆ ಭಾಸವಾಗುತ್ತದೆ. ಅಷ್ಟೇ ಅಲ್ಲದೆ ಪ್ರತಿ ಕಟ್ಟಡದ ಬಳಿಯೂ ಹಾಗೂ ಮ್ಯೂಸಿಯಂ ಪಾರ್ಕಿನಾದ್ಯಂತ ಅಲ್ಲಲ್ಲಿ ಕಾಣುವ ಕೊಳಗಳು, ಚಿಕ್ಕ ಚಿಕ್ಕ ಸೇತುವೆಗಳು, ಕಾರಂಜಿಗಳು, ಬಣ್ಣ ಬಣ್ಣದ ಹೂವುಗಳು, ಬಂಗಾರ ಬಣ್ಣದ ಉದ್ದವಾದ ದೋಣಿಗಳು, ಜಲಪಾತಗಳು, ನೀರನ್ನು ಉಗುಳುವ ಡ್ರ್ಯಾಗನ್‌ಗಳು, ಚಿಕ್ಕ ಉದ್ಯಾನವನಗಳು ಎಲ್ಲವೂ ಸೇರಿ ಬೇರೆಯದೇ ಲೋಕಕ್ಕೆ ಹೋದ ಅನುಭವ ನೀಡುತ್ತವೆ.
- ಮೇಘಾ ಹೆಗಡೆ
ಬ್ಯಾಂಕಾಕ್‌ಗೆ ಹೋಗಿ ಅಲ್ಲಿನ ಪ್ರಮುಖ ಆಕರ್ಷಣೆಗಳನ್ನು ನೋಡಿ, ಸ್ಟ್ರೀಟ್ ಫುಡ್ ಸವಿದು, ಶಾಪಿಂಗ್ ಮಾಡಿ ಬರುವ ಎಷ್ಟೋ ಪ್ರವಾಸಿಗರಿಗೆ ಗೊತ್ತೇ ಇರದ ಆದರೆ ನೋಡಲೇಬೇಕಾದ ಅತ್ಯಂತ ಸುಂದರ ಮ್ಯೂಸಿಯಂ ಪಾರ್ಕ್ ಎಂದರೆ ಸಮುತ್ ಪ್ರಕಾನ್‌ನಲ್ಲಿರುವ ಏನ್ಶಿಯೆಂಟ್ ಸಿಯಾಮ್ ಅಥವಾ ಏನ್ಶಿಯೆಂಟ್ ಸಿಟಿ. ಮ್ಯೂಸಿಯಂ ಎಂದ ತಕ್ಷಣ ಹೆಚ್ಚಾಗಿ ಯಾವುದೋ ಹಳೆಯ ಪಳೆಯುಳಿಕೆಗಳನ್ನೋ, ಹಿಂದೆಂದೋ ಬಳಸಿದ ಪಾತ್ರೆ, ಪುಸ್ತಕ, ನಾಣ್ಯಗಳನ್ನೂ ಇಟ್ಟಿರಬಹುದು ಎಂದು ಭಾವಿಸಿದರೆ ಅದು ತಪ್ಪು. ಜಗತ್ತಿನ ಕೆಲವೇ ಕೆಲವು ಅತಿದೊಡ್ಡ ಬಾಹ್ಯಾಂಗ ಮ್ಯೂಸಿಯಂಗಳಲ್ಲಿ (ಔಟ್‌ಡೋರ್ ಮ್ಯೂಸಿಯಂ) ಒಂದು ಎನ್ನಲಾದ ಏನ್ಶಿಯೆಂಟ್ ಸಿಟಿ 200 ಎಕರೆ ವಿಸ್ತೀರ್ಣದ್ದಾಗಿದ್ದು, ಇದನ್ನು ನೋಡಲು ಕನಿಷ್ಠ ಒಂದು ದಿನವಾದರೂ ಬೇಕು.
ಇದನ್ನೂ ಓದಿ: ಅವಿಸ್ಮರಣೀಯ ಭುವನೇಶ್ವರ ಪ್ರವಾಸ
ಲೆಕ್ ವಿರಿಯಪಾನ್ ಎಂಬ ಥೈಲ್ಯಾಂಡ್ ನ ಶ್ರೀಮಂತ ಉದ್ಯಮಿಯ ಕಲಾಸಕ್ತಿ ಈ ಏನ್ಶಿಯೆಂಟ್ ಸಿಟಿ ನಿರ್ಮಾಣಕ್ಕೆ ಪ್ರೇರಣೆಯಾಯಿತು. ಆರಂಭದಲ್ಲಿ ಪ್ರವಾಸೋದ್ಯಮ ಇದರ ಗುರಿಯಾಗಿತ್ತು. ಆದರೆ ದೇಶದ ಎಷ್ಟೋ ಪ್ರವಾಸಿ ತಾಣಗಳು ಅವಸಾನದ ಸ್ಥಿತಿಯಲ್ಲಿರುವುದನ್ನ ಮನಗಂಡ ಲೆಕ್ ವಿರಿಯಪಾನ್ ಮುಂದಿನ ಪೀಳಿಗೆಗೆ ದೇಶದ ಇತಿಹಾಸ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಮ್ಯೂಸಿಯಂ ಮಾದರಿಯ ಏನ್ಶಿಯೆಂಟ್ ಸಿಟಿಯನ್ನು 1972ರಲ್ಲಿ ನಿರ್ಮಿಸಿದರು.
ಇಲ್ಲಿ ಏನೆಲ್ಲ ನೋಡಬಹುದು?
ಈ ಮ್ಯೂಸಿಯಂ ಪಾರ್ಕಿನ ಒಳಗೆ ಲಾವೋಸ್, ಕಾಂಬೋಡಿಯಾ, ಮಯನ್ಮಾರ್, ಮತ್ತು ಥೈಲ್ಯಾಂಡಿನಲ್ಲಿರುವ ಅತಿ ಪ್ರಮುಖ 100ಕ್ಕೂ ಹೆಚ್ಚು ಪುರಾತನ ಕಟ್ಟಡಗಳ ಚಿಕ್ಕ ಪ್ರತಿಕೃತಿಗಳನ್ನ ನೋಡಬಹುದು. ಇಲ್ಲಿನ ಪ್ರತಿ ಕಟ್ಟಡವೂ ವಿಭಿನ್ನ ಹಾಗೂ ವಿಶಿಷ್ಟವಾಗಿದೆ. ಪುರಾತನ ಮಾದರಿಯ ಈ ಕಟ್ಟಡಗಳ ನಡುವೆ ನಡೆದಾಡುವಾಗ ಯಾವುದೋ ಐತಿಹಾಸಿಕ ಸಿನಿಮಾದಲ್ಲಿ ನಡೆದಾಡುತ್ತಿರುವಂತೆ ಭಾಸವಾಗುತ್ತದೆ. ಅಷ್ಟೇ ಅಲ್ಲದೆ ಪ್ರತಿ ಕಟ್ಟಡದ ಬಳಿಯೂ ಹಾಗೂ ಮ್ಯೂಸಿಯಂ ಪಾರ್ಕಿನಾದ್ಯಂತ ಅಲ್ಲಲ್ಲಿ ಕಾಣುವ ಕೊಳಗಳು, ಚಿಕ್ಕ ಚಿಕ್ಕ ಸೇತುವೆಗಳು, ಕಾರಂಜಿಗಳು, ಬಣ್ಣ ಬಣ್ಣದ ಹೂವುಗಳು, ಬಂಗಾರ ಬಣ್ಣದ ಉದ್ದವಾದ ದೋಣಿಗಳು, ಜಲಪಾತಗಳು, ನೀರನ್ನು ಉಗುಳುವ ಡ್ರ್ಯಾಗನ್‌ಗಳು, ಚಿಕ್ಕ ಉದ್ಯಾನವನಗಳು ಎಲ್ಲವೂ ಸೇರಿ ಬೇರೆಯದೇ ಲೋಕಕ್ಕೆ ಹೋದ ಅನುಭವ ನೀಡುತ್ತವೆ. ಅಷ್ಟೇ ಅಲ್ಲದೆ ರೆಸ್ಟೋರೆಂಟ್‌ಗಳು, ಎಳನೀರು ಮತ್ತು ಜ್ಯೂಸ್ ಸೆಂಟರ್‌ಗಳು ಹಾಗೂ ಶೌಚಾಲಯದ ವ್ಯವಸ್ಥೆ ಕೂಡ ಲಭ್ಯವಿದೆ. ಸೆಲ್ಫೀ ಹಾಗೂ ಫೊಟೋ ಪ್ರಿಯರಿಗಂತೂ ಇದು ಸಾಕ್ಷಾತ್ ಸ್ವರ್ಗವೇ ಸರಿ. ಒಟ್ಟಾರೆಯಾಗಿ ಸರಿಸುಮಾರು 116 ಪ್ರತಿಕೃತಿಗಳನ್ನು ಈ ಮ್ಯೂಸಿಯಂ ಪಾರ್ಕ್‌ನಲ್ಲಿ ನೋಡಬಹುದು. 200 ಎಕರೆ ವಿಸ್ತೀರ್ಣದ ಈ ಮ್ಯೂಸಿಯಂ ಅನ್ನು ನಡೆದು ಹೋಗುವ ಆಯ್ಕೆ ಇದೆಯಾದರೂ ಎಲ್ಲವನ್ನೂ ನೋಡುವದು ಅಸಾಧ್ಯ.

ಎಲ್ಲೆಲ್ಲಿ ಸುತ್ತಾಡಬಹುದು?
ಬೈಸಿಕಲ್- ಪ್ರವೇಶದ್ವಾರದ ಬಳಿ ಟಿಕೆಟ್ ಕೊಂಡಾಗ 100 ಭಾತ್ (ಥಾಯ್ ಕರೆನ್ಸಿ) ಪಾವತಿಸಿ ಬೈಸಿಕಲ್ ಹಾಗೂ ಚಿಕ್ಕ ಆಡಿಯೋ ರೆಕಾರ್ಡನ್ನ ಪಡೆಯಬಹುದು.
ಟ್ರಾಮ್- ಈ ಥೀಮ್ ಪಾರ್ಕ್‌ನಲ್ಲಿ ದಿನಕ್ಕೆ ನಾಲ್ಕು ಬಾರಿ ಉಚಿತವಾಗಿ ಟ್ರಾಮ್ ಓಡಿಸುತ್ತಾರೆ. ಮಕ್ಕಳು ಹಾಗೂ ವಯಸ್ಸಾದವರಿಗೆ ಇದು ಹೆಚ್ಚು ಅನುಕೂಲಕರ. ಆದರೆ ಇದು ನಿಗದಿತ ಸಮಯಕ್ಕಷ್ಟೇ ಸೀಮಿತವಾಗಿದ್ದು, ಕೆಲವೇ ಕಟ್ಟಡಗಳ ಬಳಿ ನಿಗದಿತ ಸಮಯದವರೆಗೆ ಮಾತ್ರ ವೀಕ್ಷಣೆ ಮತ್ತು ಫೊಟೋಗಾಗಿ ನಿಲ್ಲಿಸುತ್ತಾರೆ.
ಗಾಲ್ಫ್ ಕಾರ್ಟ್- ಉಳಿದ ಆಯ್ಕೆಗಳಿಗಿಂತ ಸ್ವಲ್ಪ ದುಬಾರಿಯಾದ ಆದರೆ ಸುಲಭ ಮಾರ್ಗವೆಂದರೆ ಪ್ರವೇಶದ್ವಾರದ ಬಳಿ ಹಣ ಪಾವತಿಸಿ ಅಲ್ಲೇ ಸಿಗುವ ಗಾಲ್ಫ್ ಕಾರ್ಟನ್ನು ಬಳಸುವದು. ಇದನ್ನು ನಿಲ್ಲಿಸಲು ಪ್ರತಿ ಪ್ರಮುಖ ಆಕರ್ಷಣೆಯ ಬಳಿಯೂ ನಿಗದಿತ ಸ್ಥಳವಿದ್ದು, ನಮಗೆ ಬೇಕಾದಲ್ಲಿ ಬೇಕಾದಷ್ಟು ಹೊತ್ತು ನಿಂತು ಮುಂದೆ ಸಾಗಬಹುದು. ವಿದೇಶಿ ಪ್ರವಾಸಿಗರು ಪಾಸ್‌ಪೋರ್ಟ್ ಹಾಗೂ ಗಾಲ್ಫ್ ಕಾರ್ಟ್ ಬಳಸುವುದಾದರೆ ಡ್ರೈವಿಂಗ್ ಲೈಸೆನ್ಸ್ ಅನ್ನು ತರುವುದು ಕಡ್ಡಾಯ. ಅಲ್ಲದೇ ಪ್ರವೇಶದ್ವಾರದ ಬಳಿಯೇ ಸಿಗುವ ಈ ಮ್ಯೂಸಿಯಂ ಪಾರ್ಕ್‌ನ ನಕಾಶೆ ಕೂಡ ಅತ್ಯವಶ್ಯ. ನಕಾಶೆ ಇಲ್ಲದೇ ಹೋದರೆ ಹೋದ ಜಾಗಕ್ಕೇ ಮತ್ತೆ ಮತ್ತೆ ಹೋಗಿ ಎಷ್ಟೋ ಸ್ಥಳಗಳು ತಪ್ಪಿ ಹೋಗುವ ಸಾಧ್ಯತೆಯೇ ಹೆಚ್ಚು. ಪ್ರವೇಶ ದರ ಹಾಗೂ ಇತರ ದರಗಳು ಬದಲಾಗುವ ಸಾಧ್ಯತೆ ಇದ್ದು, ಪ್ರವಾಸಿಗರು ಹೋಗುವ ಮುನ್ನ ಅವರ ವೆಬ್‌ಸೈಟ್ ಮೂಲಕ ಮಾಹಿತಿ ಪಡೆಯುವುದು ಉತ್ತಮ.

ತಲುಪುವದು ಹೇಗೆ?
ಬ್ಯಾಂಕಾಕ್‌ನಿಂದ 40 ಕಿಲೊಮೀಟರ್ ದೂರ ಇರುವ ಏನ್ಶಿಯೆಂಟ್ ಸಿಟಿಗೆ ಹೋಗಲು ಟ್ಯಾಕ್ಸಿಗಳು ಇವೆ. ಊಬರ್ ಮಾದರಿಯಲ್ಲೇ ಇರುವ ʼಗ್ರಾಬ್ʼ ಟ್ಯಾಕ್ಸಿಗಳನ್ನ ತಲುಪಲು ಇರುವ ಅತಿ ಸುಲಭದ ಆಯ್ಕೆಯಾಗಿದೆ. ಎಲ್ಲದಕ್ಕಿಂತ ಸುಲಭ ಹಾಗೂ ತ್ವರಿತವಾಗಿ ಸಿಟಿಯನ್ನ ತಲುಪುವ ಮಾರ್ಗವೆಂದರೆ ಬಿಟಿಎಸ್ (ಸ್ಕೈ ಟ್ರೇನ್) ಬ್ಯಾಂಕಾಕ್ ರೈಲ್ವೇ ವ್ಯವಸ್ಥೆ. ಸ್ಕೈ ಟ್ರೇನ್‌ನ (ಗ್ರೀನ್ ಲೈನ್ ) ಮೂಲಕ ಬ್ಯಾಂಕಾಕ್ ನ ಯಾವುದೇ ಪ್ರಮುಖ ಸ್ಟೇಷನ್ನಿನಿಂದ ಸಮುತ್ ಪ್ರಕಾನ್ ಸಮೀಪದ ಖೇಹಾ ಸ್ಟೇಷನ್ ಗೆ ಹೋದರೆ, ಅಲ್ಲಿಂದ ಏನ್ಶಿಯೆಂಟ್ ಸಿಟಿ ಕೇವಲ 8-10 ನಿಮಿಷದಲ್ಲಿ ತಲುಪಬಹುದು. ಖೇಹಾ ಸ್ಟೇಷನ್ನಿಂಗ್ ಇಳಿದು ಮುಖ್ಯ ರಸ್ತೆಗೆ ಬಂದರೆ ಏನ್ಶಿಯೆಂಟ್ ಸಿಟಿಗೆ ಹೋಗುವ ಸಾಂಗ್ತಾವ್ ಗಳು (ನಂ 36) (ಒಂದು ಬಗೆಯ ಖಾಸಗಿ ವಾಹನ) ಸಿಗುತ್ತವೆ. ಇವುಗಳಲ್ಲಿ ಹೋಗಿ ಏನ್ಶಿಯೆಂಟ್ ಸಿಟಿಯ ಪ್ರವೇಶದ್ವಾರದ ಬಳಿ ಇಳಿದುಕೊಳ್ಳಬಹುದು.
ಕೊನೆ ಹನಿ
ಏನ್ಶಿಯೆಂಟ್ ಸಿಟಿ ಬ್ಯಾಂಕಾಕ್ ನಗರದಿಂದ ಹೊರವಲಯದಲ್ಲಿ ಹಾಗೂ ದೂರದಲ್ಲಿರುವ ಕಾರಣ ಇದು ಪ್ರವಾಸಿಗರಿಂದ ಕಿಕ್ಕಿರಿದು ತುಂಬಿರುವುದಿಲ್ಲ. ಆದಾಗ್ಯೂ ವಿದೇಶಿ ಪ್ರವಾಸಿಗರನ್ನು, ಹಾಗೂ ಶೈಕ್ಷಣಿಕ ಪ್ರವಾಸಕ್ಕೆಂದು ಬಂದ ಬ್ಯಾಂಕಾಕ್‌ನ ಬೇರೆ ಬೇರೆ ಶಾಲಾ ಕಾಲೇಜಿನ ಮಕ್ಕಳನ್ನ ಸರ್ವೆಸಾಮಾನ್ಯವಾಗಿ ಕಾಣಬಹುದು. ಇದನ್ನು ತಲುಪಲು ಹಾಗೂ ನೋಡಲು ಬಹಳ ಸಮಯ ಹಿಡಿಯುವದರಿಂದ ಪ್ರವಾಸಿ ಏಜೆನ್ಸಿಗಳು ಇದರ ಬಗ್ಗೆ ಪ್ರಚಾರ ಮಾಡುವುದಿಲ್ಲ. ಆದರೆ, ಖಂಡಿತವಾಗಿಯೂ ಬ್ಯಾಂಕಾಕ್‌ಗೆ ಹೋದಾಗ ಸಮಯ ಹೊಂದಿಸಿ ನೋಡಲೇಬೇಕಾದ ಸ್ಥಳ ಇದಾಗಿದೆ. ಥೈಲ್ಯಾಂಡ್‌ನ ಗತವೈಭವವನ್ನ ಸಾರುವ ಈ ಸಿಟಿ ಪ್ರವಾಸಿಗರ ಮನಸಿನಲ್ಲಿ ಅಚ್ಚಳಿಯದೇ ಉಳಿಯುವಲ್ಲಿ ಯಾವುದೇ ಸಂದೇಹವಿಲ್ಲ.