ದೇಶದ ಹಲವು ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಭೂಕುಸಿತ, ಹಠಾತ್ ಪ್ರವಾಹ, ರಸ್ತೆ ಕುಸಿತ ಮತ್ತು ಸಂಚಾರ ಅಸ್ತವ್ಯಸ್ತವಾಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಅನಗತ್ಯ ಪ್ರಯಾಣವನ್ನು ಮುಂದೂಡುವಂತೆ ಹವಾಮಾನ ಸಂಸ್ಥೆಗಳು ಸಲಹೆ ನೀಡಿವೆ.

ಪ್ರವಾಸ ತಪ್ಪಸಬೇಕಾದ 6 ಪ್ರಮುಖ ತಾಣಗಳು:

ಮಹಾರಾಷ್ಟ್ರದ ಲೋಣಾವಾಲಾ – ಖಂಡಾಲಾ

Untitled design (60)

ಮಹಾರಾಷ್ಟ್ರದ ಜನಪ್ರಿಯ ಹಿಲ್ ಸ್ಟೇಷನ್‌ಗಳಾದ ಲೋಣಾವಾಲಾ ಮತ್ತು ಖಂಡಾಲಾ ಪ್ರದೇಶಗಳಲ್ಲಿ ನಿರಂತರ ಮಳೆಯಿಂದ ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತಗಳು ಸಂಭವಿಸುತ್ತಿವೆ. ಕಾರ್ಜತ್–ಲೋಣಾವಾಲಾ ಮಾರ್ಗ ಹಾಗೂ ಮುಂಬೈ–ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಮಣ್ಣು ಮತ್ತು ಕಲ್ಲುಗಳು ರಸ್ತೆಗೆ ಬಿದ್ದಿರುವ ಕಾರಣ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮುಂಬಯಿ, ಠಾಣೆ ಹಾಗೂ ರಾಯಘಢ ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಎಚ್ಚರಿಕೆ ನೀಡಿದ್ದು, ಇನ್ನೂ ಹೆಚ್ಚು ಭೂಕುಸಿತಗಳಾಗುವ ಸಾಧ್ಯತೆಯೂ ಇದೆ.

ಹಿಮಾಚಲದ ತೀರ್ಥನ್ ಕಣಿವೆ ಮತ್ತು ಚಂಬಾ

ಭಾರೀ ಮಳೆಯಿಂದ ತೀರ್ಥನ್ ಕಣಿವೆಗೆ ಸಂಪರ್ಕ ಕಲ್ಪಿಸುವ ಲಾರ್ಜಿ–ಸೈಂಜ್ ರಸ್ತೆ ಹಾಗೂ ಚಂಬಾ–ತಿಸ್ಸಾ ಮಾರ್ಗಗಳಲ್ಲಿ ಭೂಕುಸಿತ, ಬಂಡೆ ಕುಸಿತ ಮತ್ತು ಹಠಾತ್ ಪ್ರವಾಹ ಉಂಟಾಗಿದೆ. ಟ್ರೆಕ್ಕಿಂಗ್ ಹಾಗೂ ಪ್ರಕೃತಿ ಪ್ರವಾಸಕ್ಕಾಗಿ ಈ ಪ್ರದೇಶಗಳಿಗೆ ತೆರಳುವವರು ಸದ್ಯಕ್ಕೆ ತಮ್ಮ ಯೋಜನೆ ಮುಂದೂಡುವುದು ಸೂಕ್ತ.

ಉತ್ತರಾಖಂಡದ ಗಂಗೋತ್ರಿ

Untitled design (62)

ಚಾರ್ ಧಾಮ ಯಾತ್ರೆಯ ಪ್ರಮುಖ ಕ್ಷೇತ್ರವಾದ ಗಂಗೋತ್ರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಭೂಕುಸಿತಗಳು ಸಂಭವಿಸಿದ್ದು, ಕೆಲವು ಕಡೆ ನದಿಗಳ ನೀರಿನ ಮಟ್ಟವೂ ಏರಿಕೆಯಾಗಿದೆ. ರಸ್ತೆಗಳ ಸ್ಥಿರತೆ ಕುಸಿದಿರುವುದರಿಂದ ಯಾತ್ರಿಕರು ಹಾಗೂ ಪ್ರವಾಸಿಗರು ಪರಿಸ್ಥಿತಿ ಸುಧಾರಿಸುವವರೆಗೆ ಪ್ರಯಾಣ ಕೈಗೊಳ್ಳಬಾರದು.

ಜಮ್ಮು-ಕಾಶ್ಮೀರದ ಡೋಡಾ ಮತ್ತು ಕಿಶ್ತ್ವಾರ್

Untitled design (63)

ನಿರಂತರ ಮಳೆಯಿಂದ ಡೋಡಾ ಮತ್ತು ಕಿಶ್ತ್ವಾರ್ ಜಿಲ್ಲೆಗಳಲ್ಲಿ ಭೂಕುಸಿತ ಹಾಗೂ ಹಠಾತ್ ಪ್ರವಾಹಗಳು ಸಂಭವಿಸಿವೆ. ಎರಡೂ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಗೆ ಹಾನಿಯಾಗಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಹಿಮಾಲಯ ಪ್ರದೇಶಗಳಿಗೆ ಅನಗತ್ಯ ಪ್ರವಾಸವನ್ನು ಸದ್ಯಕ್ಕೆ ತಪ್ಪಿಸುವುದು ಸೂಕ್ತ.

ಅಸ್ಸಾಂ–ಅರುಣಾಚಲ ಪ್ರದೇಶದ ಪ್ರವಾಹ ಪೀಡಿತ ಪ್ರದೇಶಗಳು

Untitled design (64)

ಅಸ್ಸಾಂನ ಧೇಮಾಜಿ ಜಿಲ್ಲೆ ಸೇರಿದಂತೆ ಹಲವು ಪ್ರದೇಶಗಳು ಪ್ರವಾಹದಿಂದ ತತ್ತರಿಸಿವೆ. ರೈಲ್ವೇ ಹಳಿ ಮತ್ತು ಸೇತುವೆಗಳಿಗೆ ಹಾನಿಯಾಗಿದ್ದು, ಅನೇಕ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಅರುಣಾಚಲ ಪ್ರದೇಶದಲ್ಲೂ ಭೂಕುಸಿತ ಮತ್ತು ಹಠಾತ್ ಪ್ರವಾಹಗಳಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಈ ಭಾಗಗಳಿಗೆ ಪ್ರವಾಸವನ್ನು ಸದ್ಯಕ್ಕೆ ಮುಂದೂಡುವುದು ಸುರಕ್ಷಿತ..

ಕೇರಳದ ವಾಯನಾಡು

Untitled design (59)

ಕೇರಳದ ಜನಪ್ರಿಯ ಪ್ರವಾಸಿ ತಾಣವಾದ ವಾಯನಾಡಿನಲ್ಲಿ ಮತ್ತೆ ಭೂಕುಸಿತಗಳು ಸಂಭವಿಸುತ್ತಿವೆ. ಮೀನಾಕ್ಷಿ ಮತ್ತು ಚೂರಲ್‌ಮಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯ ಪರಿಣಾಮ ರಕ್ಷಣಾ ಕಾರ್ಯಾಚರಣೆ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಬಹುತೇಕ ಭಾಗಗಳು ತೆರೆದಿದ್ದರೂ, ಭೂಕುಸಿತದ ಅಪಾಯ ಇರುವ ಪ್ರದೇಶಗಳನ್ನು ಪ್ರವಾಸಿಗರು ತಪ್ಪಿಸುವುದು ಒಳಿತು.