ಅಮೆರಿಕದ ನಡುಬೀದಿಯಲ್ಲಿ ಅರೆನಗ್ನ ಜನರು
ಬಿಸಿಲಿಗೆ ಬೆನ್ನು ಒಡ್ಡಿ, ಚಡ್ಡಿ ಮಾತ್ರ ಧರಿಸಿ ಓಡುವ ಯುವಕರನ್ನು ಅಮೆರಿಕದ ಬೀದಿಗಳಲ್ಲಿ ಮೊದಲ ಬಾರಿ ಕಂಡಾಗ, ನನಗಂತೂ ಸಕತ್ ಅಚ್ಚರಿ! ಪ್ರವಾಸಿಗರ ನಡುವೆ, ಬಿಂದಾಸ್ ಆಗಿ ಮೈಬಿಟ್ಟುಕೊಂಡು ಓಡುವಂಥವರನ್ನೇ ನೋಡುತ್ತಾ ನಿಲ್ಲುತ್ತಿದ್ದೆ.
- ಶಶಿಧರ ಹಾಲಾಡಿ
ನಮ್ಮ ವಿಧಾನಸೌಧದ ಎದುರಿನ ರಸ್ತೆಯಲ್ಲೋ, ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲೋ, ಗಂಡಸರು ಕೇವಲ ಚಡ್ಡಿ ಧರಿಸಿ, ದುಡು ದುಡು ಓಡುವುದನ್ನು ಕಲ್ಪಿಸಿಕೊಳ್ಳಬಹುದಾ? ಅದೂ ಒಬ್ಬರಲ್ಲ, ಇಬ್ಬರಲ್ಲ, ಹತ್ತಾರು ಜನ!
ಅಮೆರಿಕದ ಬೀದಿಗಳಲ್ಲಿ ಇಂಥ ದೃಶ್ಯಗಳು ತೀರಾ ಸಾಮಾನ್ಯ! ಬಿಸಿಲಿಗೆ ಬೆನ್ನು ಒಡ್ಡಿ, ಚಡ್ಡಿ ಮಾತ್ರ ಧರಿಸಿ ಓಡುವ ಯುವಕರನ್ನು ಅಮೆರಿಕದ ಬೀದಿಗಳಲ್ಲಿ ಮೊದಲ ಬಾರಿ ಕಂಡಾಗ, ನನಗಂತೂ ಸಕತ್ ಅಚ್ಚರಿ! ಪ್ರವಾಸಿಗರ ನಡುವೆ, ಬಿಂದಾಸ್ ಆಗಿ ಮೈಬಿಟ್ಟುಕೊಂಡು ಓಡುವಂಥವರನ್ನೇ ನೋಡುತ್ತಾ ನಿಲ್ಲುತ್ತಿದ್ದೆ.
ಇದನ್ನೂ ಓದಿ: ಅಮೆರಿಕದಲ್ಲಿ ಗೊರೂರು
ಬಿಸಿಗೆ ಒಡ್ಡಿಕೊಳ್ಳುವ ಉದ್ದೇಶ
ಎಪ್ರಿಲ್ ನಂತರ, ಅಮೆರಿಕದಲ್ಲಿ ಬಿಸಿಲಿಗೆ ಮೈ ಒಡ್ಡುವ ತವಕದಿಂದಾಗಿ, ಕೆಲವರು ಈ ರೀತಿ ಅರೆನಗ್ನರಾಗಿ ಮುಖ್ಯರಸ್ತೆಗಳಲ್ಲಿ ಓಡಾಡ್ತಾರಂತೆ! ಆರು ತಿಂಗಳ ಚಳಿಯ ದಿನಗಳ ನಂತರ ಬಿಸಿಲು ಬೀಳಲು ಶುರುವಾದಾಗ, ಆ ಬಿಸಿಲಿನ ಶಕ್ತಿಯನ್ನು ಬೇಗನೆ ಬಾಚಿಕೊಳ್ಳುವ, ಅತಿಹೆಚ್ಚು ಪ್ರಮಾಣದಲ್ಲಿ ಹೀರಿಕೊಳ್ಳುವ ತವಕದಿಂದ ಗಂಡಸರು ಕೇವಲ ಚಡ್ಡಿ ಧರಿಸಿ, ಪ್ರಮುಖ ಬೀದಿಗಳಲ್ಲಿ ಓಡುವುದು ಸಾಮಾನ್ಯ ದೃಶ್ಯ. ಇತರರು ಲಘು ಬಟ್ಟೆ ಧರಿಸಿಯೂ ಓಡುವುದುಂಟು. ಒಟ್ಟಿನಲ್ಲಿ, ಅಲ್ಲಿ ಸುಡುಬಿಸಿಲಿನಲ್ಲಿ ಅಡ್ಡಾಡುವುದೇ ಪ್ರಮುಖ ಉದ್ದೇಶ.
ಜೂನ್ ತಿಂಗಳಿನಲ್ಲಿ ನಾನು ಶಿಕಾಗೋದಲ್ಲಿ ಪ್ರವಾಸ ಮಾಡಿದೆ. ಅಲ್ಲಿನ ಬೀದಿಯಲ್ಲೂ ಅಂಥ ಕೆಲವು ಯುವಕರಿದ್ದರು! ಪ್ರವಾಸಿಗರ ನಡುವೆ ಓಡುತ್ತಾ ಏದುಸಿರು ಬಿಡುತ್ತಿದ್ದರು. ನಂತರ ನಾನು ಅಮೆರಿಕದ ರಾಜಧಾನಿಗೆ ಪ್ರವಾಸ ಹೋಗಿದ್ದೆ. ವಾಷಿಂಗ್ಟನ್‌ನಲ್ಲೂ ಅಲ್ಲಿನ ಪ್ರಖ್ಯಾತ, ಎತ್ತರ ಸ್ಮಾರಕದ ಮುಂದಂತೂ ಹತ್ತಾರು ಗಂಡಸರು ಚಡ್ಡಿ ಮಾತ್ರ ಧರಿಸಿ ವೈಟ್‌ಹೌಸ್ ಕಡೆಗೆ ತಲುಪಿಸುತ್ತಿದ್ದ ಒಂದು ಕಾಲ್ದಾರಿಯಲ್ಲಿ ಓಡುತ್ತಿದ್ದರು!

ವಾಷಿಂಗ್ಟನ್‌ನಲ್ಲಿ ಓಡಾಟಕ್ಕೊಂದು ಮೈದಾನ
ವಾಷಿಂಗ್ಟನ್‌ನ ವೈಟ್‌ಹೌಸ್ ಎದುರು, ಬಹುದೂರದ ತನಕ, ವಿಶಾಲವಾದ ಮೈದಾನವನ್ನು ಉದ್ದೇಶಪೂರ್ವಕವಾಗಿ ಕಾಪಿರಿಸಿದ್ದಾರೆ. ಅಲ್ಲಿ ಈ ರೀತಿ ಓಡುವವರು, ಬಟ್ಟೆ ಧರಿಸಿ ಓಡುವವರು, ಸೈಕ್ಲಿಂಗ್ ಮಾಡುವವರು ಸಂತಸದಿಂದ ಓಡಾಡುತ್ತಾ, ಇಡೀ ವಾತಾವರಣದಲ್ಲಿ ಸಂತಸದ ಹೊನಲನ್ನು ಹರಿಸಿದ್ದರು.
ವೈಟ್‌ಹೌಸ್ ಎದುರಿನಲ್ಲೇ ಇದ್ದ ಇನ್ನೊಂದು ವಿಶಾಲ ಭಾಗದಲ್ಲಿ ವಾಲಿಬಾಲ್ ಆಡುವವರೂ ನೆರೆದಿದ್ದರು! ಆ ದೇಶದ ರಾಜಧಾನಿಯ ಶಕ್ತಿ ಕೇಂದ್ರದ ಎದುರು ಸೈಕ್ಲಿಂಗ್ ತೀರಾ ಸಾಮಾನ್ಯ. ಇಂಥದ್ದೊಂದು ಆಟೋಟದ ದೃಶ್ಯವನ್ನು ನಮ್ಮ ದೇಶದ ದೆಹಲಿಯ ಪಾರ್ಲಿಮೆಂಟ್ ಎದುರು ಕಲ್ಪಿಸಲೂ ಸಾಧ್ಯವಿಲ್ಲ! ಅಲ್ಲವೇ?