• ಪಿ. ಶ್ರೀಧರ್ ನಾಯಕ್

ಈ ವರ್ಷದ ಮಾರ್ಚ್ ತಿಂಗಳ ಎಂಟರಂದು ಲಂಡನ್ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಉಷ್ಣಾಂಶ ಎಂಟು ಡಿಗ್ರಿಯಷ್ಟಿತ್ತು. ನಾವು ಮೇ ತಿಂಗಳ ಕೊನೆಯ ವಾರದಲ್ಲಿ ಡನ್‌ಸ್ಟೇಬಲ್ ಸಮೀಪದ ಮೃಗಾಲಯಕ್ಕೆ ಭೇಟಿಕೊಟ್ಟಾಗ ಉಷ್ಣಾಂಶ 32 ಡಿಗ್ರಿಯಷ್ಟಿತ್ತು. ಸುಡುವ ಬಿಸಿಲು, ಬೀಸುವ ಬಿಸಿಗಾಳಿ ಮಧ್ಯೆ ವಿಪ್ಸ್‌ನೆಡ್‌ ಮೃಗಾಲಯ ವಿಹಾರ ನಮ್ಮದು. ಹಿಂದೆ ರಾಜ ಮಹಾರಾಜರು ಮೃಗಯಾ ವಿಹಾರ ಮಾಡುತ್ತಿದ್ದರು. ಇಷ್ಟೇ ವ್ಯತ್ಯಾಸ ಇಂದಿಗೂ ಅಂದಿಗೂ.

Untitled design (48)

ವಿಪ್ಸ್‌ನೆಡ್ ಮೃಗಾಲಯ

ಈ ಮೃಗಾಲಯ ಬ್ರಿಟನ್‌ನ ಅತ್ಯಂತ ಪ್ರಸಿದ್ಧ ಮತ್ತು ವಿಶಾಲವಾದ ಮೃಗಾಲಯಗಳಲ್ಲಿ ಒಂದು. ಇದು ಈ ದೇಶದ ಬೆಡ್‌ಫೋರ್ಡ್‌ಶೈರ್ ಪ್ರದೇಶದ ಡನ್‌ಸ್ಟೇಬಲ್ ಸಮೀಪದ ವಿಪ್ಸ್‌ನೈಡ್ ಗ್ರಾಮದಲ್ಲಿದೆ. 1931ರಲ್ಲಿ ಆರಂಭಿಸಲಾಯಿತು. ಇದನ್ನು ನಡೆಸುತ್ತಿರುವ ಸಂಸ್ಥೆ Zoological Society of London (ZSL). ಇದೇ ಸಂಸ್ಥೆ ಲಂಡನ್ ಮೃಗಾಲಯವನ್ನೂ ನಿರ್ವಹಿಸುತ್ತದೆ. ಸುಮಾರು 600 ಎಕರೆಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ ದೊಡ್ಡ ತೆರೆದ ಮೃಗಾಲಯವಿದು. ಇಲ್ಲಿ ಕಾರಿನಲ್ಲಿ ಅಥವಾ ಉಚಿತ ಸೇವೆಗೆಂದೇ ಇರುವ ಇಲೆಕ್ಟ್ರಿಕ್ ಮಿನಿ ಬಸ್‌ನಲ್ಲಿ ಕುಳಿತು ಪ್ರಾಣಿಗಳ ನೆಲೆ ಇರುವಲ್ಲಿ ಓಡಾಡುತ್ತಾ ನೋಡಬಹುದು. ಇಲ್ಲಿ ಪ್ರಾಣಿಗಳಿಗೆ ಪಂಜರಗಳು ಇಲ್ಲ. ಅವುಗಳಿಗೆ ಓಡಾಡಲು ವಿಶಾಲವಾದ ಬೇಲಿಯಿಂದ ಆವೃತ್ತವಾದ ಜಾಗ ಇದೆ. ಆ ಸುಂದರ ಪರಿಸರದಲ್ಲಿ ನಾವು ನೋಡಿದ ಪ್ರಾಣಿಗಳ ಯಾದಿ ದೊಡ್ದದು. ಆನೆ, ಸಿಂಹ, ಹುಲಿ, ಜೀಬ್ರಾ, ಕಾಡುಕೋಣ, ಪ್ಲೆಮಿಂಗೋ, ಖಡ್ಗಮೃಗ, ನೀರಾನೆ, ಕರಡಿ, ಜಿರಾಫೆ, ಕಾಡುಹಂದಿ, ನರಿ, ತೋಳ, ಜಿಂಕೆಯ ಹತ್ತು ಹಲವು ಪ್ರಬೇಧಗಳು, ಚಿಪಾಂಜಿ, ಪೆಂಗ್ವಿನ್ ಇಲ್ಲಿವೆ.

ಚಿಟ್ಟೆಗಳ ಉದ್ಯಾನ, ಕೋತಿಗಳ ಮಿನಿ ಅರಣ್ಯ

ಚಿಟ್ಟೆಗಳ ಉದ್ಯಾನ, ಕೋತಿಗಳಿಗೂ ಮಿನಿ ಅರಣ್ಯ ಇಲ್ಲಿವೆ. ಮೃಗಾಲಯ ನೋಡಲು ಹೋಗುವವರು ಇಲ್ಲಿಗೆ ಹೋಗಲು ಪ್ರತ್ಯೇಕ ಟಿಕೇಟು ಕೊಳ್ಳಬೇಕು. ನಾಡಿನ ಒಳಗೂ ಹೊರಗೂ ಸಾಕಷ್ಟು ಕೋತಿಗಳನ್ನು ಮತ್ತು ಕೋತಿ ಚೇಷ್ಟೆ ನೋಡಿದ ನಮಗೆ ಮತ್ತೆ ಅತ್ತ ಹೆಜ್ಜೆ ಹಾಕಲು ಮನಸಾಗಲಿಲ್ಲ.

ಇಲ್ಲಿ ಇರುವ ಏಷ್ಯಾದ ಆನೆಗೆ ಸ್ನಾನ ಮಾಡಿಸದೆ ಹಲವು ತಿಂಗಳಾಗಿರಬೇಕು. ಮಾವುತನ ಹಂಗಿಲ್ಲದೆ ಆವರಣದ ಒಳಗಡೆ ಹೆಜ್ಜೆ ಹಾಕುತ್ತಿತ್ತು. ನಮ್ಮ ಜತೆಗೆ ಇದ್ದ ಮೊಮ್ಮಗ ವಿಯಾನ್ಶ್ ಎಬಿಸಿಡಿ ಕಲಿಕೆಯ ಪುಸ್ತಕದಲ್ಲಿ ಇರುವ ಆನೆ, ಹುಲಿ, ಜಿರಾಫೆ, ಜಿಬ್ರಾವನ್ನು ಸ್ವತಃ ಎದುರಲ್ಲಿ ನೋಡಿ ಖುಷಿಪಟ್ಟ.

Untitled design (47)

ಆರುನೂರು ಎಕರೆಯಲ್ಲಿ ಓಡಾಡುವವರಿಗೆ ದಣಿವಾಗುವುದು ಸಹಜ. ವೃದ್ಧರು ಬ್ಯಾಟರಿ ಚಾಲಿತ ತ್ರಿಚಕ್ರ ವಾಹನದಲ್ಲಿ ಕುಳಿತು ಈ ಪ್ರಾಣಿ ಲೋಕದಲ್ಲಿ ವಿಹರಿಸುತ್ತಿದ್ದರು. ಇಲ್ಲಿ ವಯಸ್ಸು ಆಯಿತೆಂದು ಯಾರೂ ಮೂಲೆ ಗುಂಪಾಗುವುದಿಲ್ಲ. ಸ್ವಂತ ಕಾರಿನಲ್ಲಿ ಬಂದು ಇಳಿದ ನಂತರ ತ್ರಿಚಕ್ರ ವಾಹನದಲ್ಲಿ ಹೊಟೇಲ್, ಮಾಲ್, ಪಾರ್ಕ್, ಮೃಗಾಲಯಗಳಿಗೆ ಹೋಗುತ್ತಾರೆ. ಇರುವುದೊಂದೇ ಬದುಕು ಎನ್ನುವುದನ್ನು ಅರಿತಿರುವ ಇವರು ಅದನ್ನು ಆನಂದಿಸಿ ಅನುಭವಿಸುತ್ತಾರೆ.

ಲೇಖಖರು: ಹಿರಿಯ ಪತ್ರಕರ್ತರು