- ಬಿ ಪಿ ಶಿವಮೂರ್ತಿ

ಹಾಲೆಂಡ್ ದೇಶದಲ್ಲಿನ ಕ್ಯುಕೆನ್‌ಹಾಫ್‌ ಟುಲಿಪ್ ಉದ್ಯಾನದಲ್ಲಿ ಪ್ರತಿವರ್ಷ ಸುಮಾರು 75ಲಕ್ಷ ಹೂವುಗಳನ್ನು ಬೆಳೆಸಿ ಪ್ರದರ್ಶಿಸುತ್ತಾರೆ. ಈ ಹೂವುಗಳ ಸೌಂದರ್ಯ ಸವಿಯಲು ಏಪ್ರಿಲ್- ಮೇ ತಿಂಗಳುಗಳಲ್ಲಿ ಜಗತ್ತಿನೆಲ್ಲೆಡೆಯಿಂದ ಲಕ್ಷಾಂತರ ಪ್ರವಾಸಿಗರು ಈ ಉದ್ಯಾನಕ್ಕೆ ಭೇಟಿನೀಡುತ್ತಾರೆ.

ಜರ್ಮನಿಯ ಹಿಲ್ಡೆಷೈಮಿನಲ್ಲಿ ನಮ್ಮ ಮಗಳು- ಅಳಿಯನೊಂದಿಗಿದ್ದ ನಾವು, ಏಪ್ರಿಲ್ ಕೊನೆಯ ವಾರದಲ್ಲಿ ಕ್ಯುಕೆನ್‌ಹಾಫ್‌ನ ಜಗತ್ಪ್ರಸಿದ್ಧ ಟುಲಿಪ್ ಉದ್ಯಾನಕ್ಕೆ ಹೋದೆವು. ಕ್ಯುಕೆನ್‌ಹಾಫ಼್, ಹಾಲೆಂಡ್‌ನ ರಾಜಧಾನಿಯಾದ ಆಮ್‌ಸ್ಟ್ರಡಮ್‌ನಿಂದ ಸುಮಾರು 30 ಕಿಮೀ ದೂರದಲ್ಲಿರುವ ಲಿಸ್ಸೆ ಎಂಬ ಊರಿನ ಬಳಿ ಇದೆ. ಈ ಟುಲಿಪ್ ಉದ್ಯಾನ ಜಗತ್ತಿನಲ್ಲೇ ಅತಿದೊಡ್ಡ ಟುಲಿಪ್ ಉದ್ಯಾನ ಎಂದು ಗುರುತಿಸಿಕೊಂಡಿದೆ. ಉದ್ಯಾನ ಪ್ರವೇಶಿಸುತ್ತಿದ್ದಂತೆ ವಿವಿಧ ಬಣ್ಣಗಳ ಹೂವುಗಳ ಸುಂದರ ಲೋಕವೇ ನಮ್ಮೆದುರು ತೆರೆದುಕೊಂಡಿತು. ಅಬ್ಬಾ! ಅದೆಷ್ಟು ಬಗೆಯ ಟುಲಿಪ್ ಹೂವುಗಳು! ಎಲ್ಲಿ ನೋಡಿದರೂ ಸುಂದರವಾಗಿ ಅರಳಿ ನಿಂತ ಆ ಹೂವುಗಳ ಸಾಗರವೇ! ಸುಮಾರು 75ಲಕ್ಷ ಹೂವುಗಳನ್ನು 70 ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ, ಹಸಿರು ಹುಲ್ಲುಹಾಸಿನ ಮಧ್ಯೆ ವ್ಯವಸ್ಥಿತ ಹಾಗೂ ಕಲಾತ್ಮಕವಾಗಿ ಬೆಳೆಸಿದ್ದಾರೆ.

ಇದನ್ನೂ ಓದಿ: ನೀರಿನ ಮಟ್ಟ ಏರಿದರೆ ಮೇಲೇಳುವ ಮನೆಗಳು

ಸುಂದರ ವಿನ್ಯಾಸ

ಈ ಉದ್ಯಾನದ ವಿನ್ಯಾಸ ನೋಡುಗರನ್ನು ಸೆಳೆಯುತ್ತದೆ. ಇಲ್ಲಿ ಟುಲಿಪ್ ಹೂವುಗಳೇ ಹೆಚ್ಚಾಗಿದ್ದರೂ, ಶೇಕಡ 10- 15 ಭಾಗ ಆರ್ಕಿಡ್ಸ್, ಡಫ಼ೋಡಿಲ್ಸ್, ಹಯಾಸಿಂತ್ಸ್, ಲಿಲೀಸ್, ಕ್ರೋನ್ ಇಂಪೀರಿಯಲ್ ಮೊದಲಾದ ಹೂವುಗಳನ್ನೂ ಬೆಳೆಸಿದ್ದಾರೆ. ನೂರಾರು ಬಗೆಯ ಬಿಳಿ, ಕೆಂಪು, ಗುಲಾಬಿ, ಹಳದಿ, ಮಿಶ್ರ ಬಣ್ಣಗಳ ಟುಲಿಪ್ ಹೂವುಗಳನ್ನು ಇಲ್ಲಿ ಕಾಣಬಹುದು. ಈ ಹೂವುಗಳನ್ನು ಬೆಳೆಸಿರುವ ವಿನ್ಯಾಸ ಬೆರಗು ಮೂಡಿಸುತ್ತದೆ. ಹತ್ತಾರು ಅಡಿಗಳ ಅಳತೆಯ ವೃತ್ತ, ತ್ರಿಭುಜ, ಚೌಕ, ಆಯತ ಮತ್ತು ಅರ್ಧವೃತ್ತಾಕಾರ ಸೇರಿ ಹಲವು ಆಕಾರದ ಪಾತಿಗಳಲ್ಲಿ ಆಕರ್ಷಕವಾಗಿ ಹೂವುಗಳನ್ನು ಬೆಳೆಸಿದ್ದಾರೆ. ಕೆಲವೆಡೆ ಉದ್ಯಾನದ ಒಳಗೆ ಹಾದು ಹೋಗಿರುವ ಕಾಲುದಾರಿಯ ಇಕ್ಕೆಲಗಳಲ್ಲಿ ಅನೇಕ ಸಾಲುಗಳ ಹೂವುಗಳನ್ನು ಬೆಳೆಸಿದ್ದಾರೆ.

Untitled Design (43)

ಗ್ರೀನ್ ಹೌಸ್ ಎಂಬ ದೊಡ್ಡ ಗಾಜಿನ ಮನೆಯ ಒಳಗೆ ಟುಲಿಪ್ ಸೇರಿದಂತೆ ವಿವಿಧ ಬಗೆಯ ಪುಷ್ಪಗಳ ನೂರಾರು ಹೂಗುಚ್ಛಗಳನ್ನು ತಯಾರಿಸಿ ಸುಂದರವಾಗಿ ಜೋಡಿಸಿಟ್ಟಿದ್ದಾರೆ. ಯೂಲಿಯಾನ, ಬೀಟ್ರೆಕ್ಸ್ ಎಂಬ ಹೆಸರಿನ ಪವಿಲಿಯನ್‌ಗಳೂ ಇಲ್ಲಿವೆ. ಇಲ್ಲೆಲ್ಲ ಬಗೆಬಗೆಯ ಪುಷ್ಪಗಳ ಹೂಕುಂಡಗಳನ್ನು ಕಾಣಬಹುದು. ಈ ಉದ್ಯಾನವನದಲ್ಲಿ ಡಚ್ ಸಾಂಪ್ರದಾಯಿಕ ಉಡುಗೆ ತೊಟ್ಟ ಸುಂದರ ಮಹಿಳೆಯರೂ ಇರುತ್ತಾರೆ. ಬಯಸಿದರೆ ಅವರೊಡನೆ ಫೊಟೋ ತೆಗೆಸಿಕೊಳ್ಳಬಹುದು. ನನ್ನ ಪತ್ನಿ ಮತ್ತು ಮಗಳೂ ಅವರೊಡನೆ ನಿಂತು ಫೊಟೋ ಕ್ಲಿಕ್ಕಿಸಿಕೊಂಡರು.

ಈ ಉದ್ಯಾನದಲ್ಲಿ 87 ಬಗೆಯ ಸುಮಾರು 2500 ಮರಗಳಿವೆ. ಸುಂದರವಾಗಿ ಅನೇಕ ಆಕಾರಗಳಲ್ಲಿ ಕತ್ತರಿಸಿದ ಗಿಡಗಳಿವೆ. 50 ಕುಶಲಕರ್ಮಿಗಳು ಮರ, ಲೋಹ, ಸಿಮೆಂಟಿನಿಂದ ನಿರ್ಮಿಸಿರುವ 150 ಆಕರ್ಷಕ ಪ್ರತಿಮೆಗಳನ್ನು ಅಲ್ಲಲ್ಲಿ ಇಟ್ಟಿದ್ದಾರೆ. ಉದ್ಯಾನದೆಲ್ಲೆಡೆ ಕಾಲುವೆಗಳಿವೆ. ಅಲ್ಲಲ್ಲಿ ಕೊಳಗಳನ್ನೂ ನಿರ್ಮಿಸಿದ್ದಾರೆ. ಈ ಕೊಳಗೊಳಲ್ಲಿ ಹಂಸ ಮತ್ತು ಬಾತುಕೋಳಿಗಳನ್ನು ಸಾಕಿದ್ದಾರೆ. ಉದ್ಯಾನದ ವಿವಿದೆಡೆ ನೀರಿನ ಸುಂದರ ಕಾರಂಜಿಗಳನ್ನೂ ಕಾಣಬಹುದು. ಪ್ರವಾಸಿಗಳ ಹಸಿವು ತಣಿಸಲು ಅಚ್ಚುಕಟ್ಟಾದ ರೆಸ್ಟೋರಂಟ್‌ಗಳಿವೆ. ಈ ಉದ್ಯಾನದಲ್ಲಿ ಓಡಾಡಲು ನಿರ್ಮಿಸಿರುವ ರಸ್ತೆಯೇ ಸುಮಾರು 18 ಕಿಮೀ ಉದ್ದವಿದೆ. ಒಟ್ಟು ಉದ್ಯಾನ ಸುತ್ತಾಟಕ್ಕೆ ಐದಾರು ಗಂಟೆಗಳೇ ಬೇಕು.

ಉದ್ಯಾನಕ್ಕೂ ಇದೆ ಇಷ್ಟೂದ್ದ ಇತಿಹಾಸ

15ನೇ ಶತಮಾನದಲ್ಲಿ ಕ್ಯುಕೆನ್‍ಹಾಫ಼್, ಟೇಲಿಂಗರ್ ಅರಮನೆಯಲ್ಲಿ ವಾಸಿಸುತ್ತಿದ್ದ ರಾಣಿ ಜಕೋಬ ಬಾವರಿ ಹಾಗೂ ಅವಳ ಪರಿವಾರದ ಆಹಾರಕ್ಕೆ ಅಗತ್ಯ ತರಕಾರಿ ಬೆಳೆಯುವ ಮತ್ತು ಬೇಟೆಯಾಡುವ ಪ್ರದೇಶವಾಗಿತ್ತು. ಇದರಿಂದ ಈ ಸ್ಥಳಕ್ಕೆ ಕ್ಯುಕೆನ್‌ಹಾಫ್‌ ಎಂಬ ಹೆಸರು. ಡಚ್ ಬಾಷೆಯಲ್ಲಿ ಕ್ಯುಕೆನ್‌ಹಾಫ್ ಎಂದರೆ ಕಿಚನ್ ಗಾರ್ಡನ್ ಎಂದರ್ಥ. 1949ರಲ್ಲಿ ಲಿಸ್ಸೆ ನಗರದ ಮೇಯರ್ ಒಂದು ಸಣ್ಣ ಟುಲಿಪ್ ಪುಷ್ಪ ಪ್ರದರ್ಶನದೊಂದಿಗೆ ಈ ಉದ್ಯಾನ ಆರಂಭಿಸಿದ. ಅಂದು ಕೇವಲ 10 ಜನರು ಇಲ್ಲಿ ಹೂವುಗಳನ್ನು ಬೆಳೆಸಿದ್ದರು. ಈಗ ಸುಮಾರು 100 ಹೂವು ಬೆಳೆಗಾರರು ಈ ಉದ್ಯಾನದಲ್ಲಿ ಜಾಗ ಪಡೆದು ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ಹೂವಿನ ಗಿಡಗಳನ್ನು ಬೆಳೆಸುತ್ತಾರೆ. ಇದಕ್ಕೆ ಅವರು ಯಾವ ಸಂಭಾವನೆಯನ್ನೂ ಪಡೆಯುವುದಿಲ್ಲ. ಆದರೆ ತುಂಬಾ ಚೆನ್ನಾಗಿ ಹೂವುಗಳನ್ನು ಬೆಳೆದವರಿಗೆ ಬಹುಮಾನ ನೀಡುತ್ತಾರೆ.

ಹಾಲೆಂಡ್ ಜಗತ್ತಿನಲ್ಲೇ ಅತಿಹೆಚ್ಚು ಟುಲಿಪ್ ಹೂವುಗಳನ್ನು ಬೆಳೆಯುವ ಹಾಗೂ ರಫ಼್ತು ಮಾಡುವ ದೇಶ. ಇಲ್ಲಿ ಸುಮಾರು 9500 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬಗೆಯ ಟುಲಿಪ್ ಹೂವುಗಳನ್ನು ಬೆಳೆಯುತ್ತಾರೆ. 1630- 1637ರ ಕಾಲವನ್ನು ಹಾಲೆಂಡಿನಲ್ಲಿ ಟುಲಿಪ್ ಹೂವುಗಳ ಸುವರ್ಣ ಯುಗವೆಂದೇ ಕರೆಯುತ್ತಾರೆ. ಆ ವರ್ಷಗಳಲ್ಲಿ ಹಾಲೆಂಡ್‌ನ ಜನರು ತಮ್ಮ ಆಸ್ತಿಗಳನ್ನೂ ಮಾರಿ ಟುಲಿಪ್ ಹೂವುಗಳ ಉತ್ಪಾದನೆ ಹಾಗೂ ವ್ಯಾಪಾರಗಳಿಗೆ ತೊಡಗಿದ್ದರು ಎನ್ನಲಾಗಿದೆ. ಆಗ ಈ ಹೂವುಗಳ ಮಾರುಕಟ್ಟೆ ಷೇರು ವಿನಿಮಯ ಕೇಂದ್ರಗಳಲ್ಲೂ ನೋಂದಾಯಿಸಲ್ಪಟ್ಟಿತ್ತು ಎನ್ನಲಾಗಿದೆ ಆದರೆ 1637ರಲ್ಲಿ ಟುಲಿಪ್ ಮಾರುಕಟ್ಟೆ ನೆಲಕಚ್ಚಿ ಹಲವರು ದಿವಾಳಿಯಾಗಿದ್ದು ಈಗ ಇತಿಹಾಸ.

Untitled Design (42)

ಪ್ರವಾಸಿಗಳ ದಂಡು

ಈ ಉದ್ಯಾನ ವೀಕ್ಷಿಸಲು ಬಂದಿದ್ದ ದೇಶ- ವಿದೇಶಗಳ ಪ್ರವಾಸಿಗಳಿಗಂತೂ ಲೆಕ್ಕವೇ ಇಲ್ಲ. ಎಲ್ಲಿ ನೋಡಿದರೂ ಪ್ರವಾಸಿಗರೇ! ಟುಲಿಪ್ ಹೂವುಗಳು ಅರಳುವ ಸಮಯ ಪ್ರತಿವರ್ಷ ಮಾರ್ಚ್‌ ತಿಂಗಳ ಕೊನೆಯ ವಾರದಿಂದ ಮೇ ತಿಂಗಳ ಮಧ್ಯ ಭಾಗದವರೆಗೆ ಮಾತ್ರ. ಹಾಗಾಗಿ ಈ ಕ್ಯುಕೆನ್‍ಹಾಫ಼್‍ನ ಟುಲಿಪ್ ಉದ್ಯಾನ ಪ್ರತಿವರ್ಷ ಈ ಸಮಯದಲ್ಲಿ ಪ್ರವಾಸಿಗಳ ವೀಕ್ಷಣೆಗೆ ತೆರೆಯಲ್ಪಡುತ್ತದೆ. ಕೇವಲ 1.6 ಕೋಟಿ ಜನಸಂಖ್ಯೆ ಹೊಂದಿರುವ ಪುಟ್ಟ ದೇಶ ಹಾಲೆಂಡ್ ಜಗತ್ತಿನಲ್ಲೇ ಅತಿದೊಡ್ಡ ಟುಲಿಪ್‌ ಉದ್ಯಾನವನ್ನು ಸುಂದರವಾಗಿ ಬೆಳೆಸಿ, ಪ್ರವಾಸಿಗರನ್ನು ಸೆಳೆಯುತ್ತಿರುವ ಈ ಪ್ರಯತ್ನ ನಿಜಕ್ಕೂ ಮೆಚ್ಚುವಂಥದ್ದು.

ಮಾಹಿತಿ ಪೆಟ್ಟಿಗೆ :

  • ಏಪ್ರಿಲ್‌ ಕೊನೆಯ ವಾರ ಮತ್ತು ಮೇ ಮೊದಲ ವಾರ ಕ್ಯುಕೆನ್‍ಹಾಫ಼್‍ನ ಟುಲಿಪ್ ಉದ್ಯಾನ ಭೇಟಿಗೆ ಉತ್ತಮ ಸಮಯ. ಈ ಏಳೆಂಟು ವಾರಗಳಲ್ಲೇ ಸುಮಾರು ಎಂಟು ಲಕ್ಷ ಪ್ರವಾಸಿಗಳು ಈ ಉದ್ಯಾನಕ್ಕೆ ಭೇಟಿನೀಡುತ್ತಾರೆ
  • ಈ ಟುಲಿಪ್ ಉದ್ಯಾನ ಜಗತ್ತಿನಲ್ಲೇ ಅತಿಹೆಚ್ಚು ಚಿತ್ರಗಳನ್ನು ತೆಗೆಸಿಕೊಳ್ಳುವ ಉದ್ಯಾನವಾಗಿ ಗುರುತಿಸಿಕೊಂಡಿದೆ