• ಮೋಹನ ಭಟ್ಟ, ಅಗಸೂರು

ಚಿಸಿಕ್ ಎಂಬುದು ಲಂಡನ್‌ನ ಪ್ರಶಾಂತ, ಬಿರುಸಿಲ್ಲದ ಪುಟ್ಟ ಪಟ್ಟಣ. ಇಲ್ಲಿಯ ಮಾರುಕಟ್ಟೆ ಹೂಗಳಿಗಾಗಿ, ಹೂದೋಟದ ಪರಿಕರಗಳಿಗಾಗಿ ಜನಪ್ರಿಯ. ಮನೆಯ ಮುಂದಷ್ಟೆ ಅಲ್ಲ, ಕಿಟಕಿ ಬಾಗಿಲುಗಳ ಮೇಲೆ ವಿವಿಧ ರೀತಿಯ ಹೂ ಬಿಡುವ ಗಿಡ ಬಳ್ಳಿಗಳನ್ನು ಬೆಳೆಸುವುದು ಸಾಮಾನ್ಯ. ಹೂಗಳು ಅರಳಿ ಮನೆಗೆ ಸುಂದರ ಕಳೆಯನ್ನು ನೀಡುವ ಸಂಭ್ರಮವನ್ನು ಇಲ್ಲಿ ನೋಡುವುದೇ ಕಣ್ಣಿಗೆ ಹಬ್ಬ.

New Project (6)

ಇಂಥ ಪರಿಸರವನ್ನು ಹೊಂದಿರುವ ಚಿಸಿಕ್ನಲ್ಲಿ ತಿಂಗಳಿನ ಮೊದಲ ಸೋಮವಾರ ಬೆಳಗ್ಗೆಯೇ ಹೂಗಳ ಸಂತೆ ನಡೆಯುತ್ತದೆ. ಮಧ್ಯಾಹ್ನದ ನಂತರ ಹೋದರೆ ಈ ಸಂತೆಯನ್ನು ನೋಡುವುದು ಅಸಾಧ್ಯ. ಈ ಸಂತೆಗೆ ಬರುವವರೆಲ್ಲ, ಹೂಗಳು ಹಾಗೂ ಹೂದೋಟ ಪ್ರಿಯರು. ‌ಹೇಗೆ ತಮ್ಮಮನೆಯ ಮುಂದೆ, ತಾರಸಿಯ ಮೇಲೆ ಇನ್ನೂ ಚಂದವಾಗಿ ಹೂದೋಟವನ್ನು ಹೇಗೆ ಸಿದ್ಧಪಡಿಸಬಹುದು ಎಂಬ ಕಲಾತ್ಮಕ ಮನಸ್ಸನ್ನು ಹೊಂದಿರುವವರು.

ಸಂತೆ ಹೇಗಿದೆ ಗೊತ್ತಾ?

ಇಲ್ಲಿನ ನಗರಸಭೆಯೇ ಈ ಸಂತೆಯನ್ನು ಆಯೋಜಿಸುತ್ತದೆ. ಸಂತೆಯ ಪ್ರದೇಶಕ್ಕೆ ವಾಹನ ಪ್ರವೇಶವಿರುವುದಿಲ್ಲ. ಬೇಕಾ ಬಿಟ್ಟಿ ತಿರುಗಾಡುವುದಕ್ಕೂ ಇಲ್ಲಿ ಅವಕಾಶವಿಲ್ಲ. ಒಂದೊಂದೇ ಮಳಿಗೆಗಳನ್ನು ನಿಧಾನವಾಗಿ ನೋಡುತ್ತಾ ವಿಧ ವಿಧವಾದ ಹೂಗಳ ಅಂದವನ್ನು ಸವಿಯುತ್ತಾ ಸಾಗಿದರೆ ಮನಸ್ಸು ಅರಳುತ್ತದೆ.

New Project (8)

ಸಂತೆಗೆ ಕೇವಲ ಹೂ, ಹೂವಿನ ಗಿಡಗಳಷ್ಟೇ ಬರುವುದಿಲ್ಲ. ಹೂದೋಟಕ್ಕೆ ಬೇಕಾದ ಪರಿಕರಗಳು, ಗೊಬ್ಬರು, ವಿಟಮಿನ್ ಗಳೂ ದೊರೆಯುತ್ತವೆ. ಮಳಿಗೆಗಳಲ್ಲಿ ಪ್ರದರ್ಶನ, ಮಾರಾಟ ಹಾಗೂ ಪ್ರಾತ್ಯಕ್ಷಿಕೆಗಳನ್ನು ನೋಡಲು ಸಾಧ್ಯ. ಕಾಫಿ ಕುಡಿಯುವ ಚಿಕ್ಕ ಕಪ್ ಗಳಲ್ಲೂ ಪುಟ್ಟದಾದ ಹೂವಿನ ಗಿಡಗಳು ಹೂಬಿಟ್ಟಿರುವುದುನ್ನು ನೋಡುವುದೇ ಪುಷ್ಪಪ್ರೇಮಿಗಳಲ್ಲಿ ಸಂತಸ ಮೂಡಿಸುತ್ತದೆ. ಈ ಹೂವುಗಳು ತಿಂಗಳಾದರೂ ಮುದುಡದೆ, ಬಾಡದೆ ಹೊಸತನದೊಂದಿಗೆ ಕಂಗೊಳಿಸುವುದನ್ನು ನೋಡಬಹುದು. ಇಂಥ ನೂರಾರು ಬಗೆಯ ಹೂವಿನ ಗಿಡಗಳು ಇಲ್ಲಿವೆ.

ಕ್ಯಾಕ್ಟಸ್ ನಲ್ಲಿ ಹಲವು ವಿಧ

New Project (9)

ಕ್ಯಾಕ್ಟಸ್ ಗಿಡಗಳು ವಿಶಿಷ್ಟವಾದ ಆಕಾರ ಮತ್ತು ಮುಳ್ಳುಗಳಿಂದ ಕೂಡಿದ್ದರೂ ಬಹಳ ಆಕರ್ಷಕ ಮತ್ತು ಸುಂದರವಾಗಿರುತ್ತದೆ. ಅಂಥ ಕ್ಯಾಕ್ಟಸ್ ಗಿಡಗಳನ್ನು ಪಾಟ್‌ಗಳಲ್ಲಿಯೇ ಬೆಳೆಸಬೇಕೆಂದಿಲ್ಲ, ಮನೆಯಂಗಳದಲ್ಲಿ ನೆಟ್ಟು ಆರೈಕೆ ಮಾಡಬೇಕೆಂದೂ ಇಲ್ಲ. ಅವುಗಳನ್ನು ಪೋಷಿಸುವ ಮನಸ್ಸಿದ್ದವರಿಗೆ ಇಲ್ಲಿ ಅನೇಕ ಅವಕಾಶಗಳಿವೆ. ಮನೆಯೊಳಗೆ ಈ ಪಾಟನ್ನು ಇಟ್ಟು ಸಂತಸಪಡುವವರಿಗೆ, ಅದನ್ನು ಪೋಷಿಸುವುದು ಹೇಗೆ ? ಗೋಲ್ಡನ್‌ ಬಾಲ್‌, ಇಕಿನೋ, ರೆಡ್‌ ಹೆಡ್‌, ಹೆಡ್ಜ್‌, ಫಿಷ್‌ ಹೂಕ್‌, ಮೆಕ್ಸಿಕನ್‌ ಫಯರ್‌ ಬ್ಯಾರಲ್‌,ಯಲ್ಲೋಕ್ಯಾಕ್ಟಸ್‌ ಇತ್ಯಾದಿ ಜಾತಿ ಗಿಡಗಳನ್ನು ಸಣ್ಣ ಟೆರಕೋಟ ಅಲಂಕಾರಿ ಪಾಟ್‌ಗಳಲ್ಲಿ ಮರಳು ಮಿಶ್ರಿತ ಮಣ್ಣಿನಲ್ಲಿ ಸುಲಭವಾಗಿ ಬೆಳೆಸುವ ವಿಧಾನಗಳ ಬಗೆಗೂ ವಿಶೇಷ ತರಬೇತಿಯನ್ನು ಈ ಸಂತೆಯಲ್ಲೇ ನೀಡಲಾಗುತ್ತದೆ.

ಬರಿಯ ಸ್ಥಳೀಯರಷ್ಟೇ ಅಲ್ಲದೆ ಪ್ರವಾಸಿಗರೂ ಸಾಕಷ್ಟು ಸಂಖ್ಯೆಯಲ್ಲಿ ಈ ಮಾರುಕಟ್ಟೆಯಲ್ಲಿ ಫಾಲ್ಗೊಳ್ಳುತ್ತಾರೆ. ಹೂವುಗಳ ಬಗ್ಗೆ , ಗಿಡಗಳ ಆರೈಕೆಯ ಬಗೆಗೂ ಮಾಹಿತಿಯನ್ನು ಪಡೆದುಕೊಂಡು ಹೂವಿನ ಲೋಕದಲ್ಲಿ ವಿಹರಿಸುತ್ತಾರೆ.