ಒಂದು ಹೊಟೇಲ್‌ ದಿ ಬೆಸ್ಟ್‌ ಅನಿಸಿಕೊಳ್ಳು ಸಾಕಷ್ಟು ಕಾರಣಗಳಿರಬಹುದು. ಸಿಬ್ಬಂದಿ ಸೇವೆ, ರುಚಿಕರ ಆಹಾರ, ಉತ್ತಮ ನಿರ್ವಹಣೆ, ಶುಚಿತ್ವ, ಇತಿಹಾಸ ಇನ್ನೂ ಸಾಕಷ್ಟು ಕಾರಣಗಳಿಗೆ ಕೆಲವು ಹೊಟೇಲ್‌ಗಳು ಗುರುತಿಸಿಕೊಳ್ಳುತ್ತವೆ. ಏನೂ ಬೇಡದವರು ಕಡೆಗೆ ʻಆ ಹೊಟೇಲ್‌ನಲ್ಲಿ ನೀಟಾಗಿ ಅಡುಗೆ ಮಾಡಿ ನಮಗೆ ಬಡಿಸುತ್ತಾರೆʼ ಎನ್ನುವುದೂ ಉಂಟು.

ಅಲ್ಲಿನ ವ್ಯವಸ್ಥೆಗಳು ಸರಿಯಾಗಿದ್ದರೆ ಓಕೆ, ಇಲ್ಲದಿದ್ದರೆ ಅಲ್ಲಿನ ಸಿಬ್ಬಂದಿಯನ್ನೋ ಮ್ಯಾನೇಜರ್‌ ಅಥವಾ ಮಾಲೀಕರನ್ನೋ ತರಾಟೆಗೆ ತೆಗೆದುಕೊಳ್ಳುವುದು ಕಾಮನ್‌. ಒಂದುವೇಳೆ ನೀವು ಹೀಗೆ ದೂರಲು ಅಥವಾ ಪ್ರಶಂಸೆ ನೀಡಲು ಅಲ್ಲಿ ಯಾವ ಸ್ಟಾಫ್‌ಗಳೂ ಇಲ್ಲ ಎಂದಾದರೆ ಮಾಡುವುದೇನು?

ಇದನ್ನೂ ಓದಿ: ಪ್ರಪಂಚದಾದ್ಯಂತದ ವಿಚಿತ್ರ 'ಊಟದ ಆಟಗಳು'

ಹೌದು, ಹೀಗೊಂದು ಹೊಟೇಲ್‌ ಜಪಾನ್‌ನ ಒಸಾಕ ನಗರದಲ್ಲಿದೆ. ಅದರ ಹೆಸರು ʻಎಚ್‌ಸಿಐ ರೋಬೋ ಹೌಸ್‌ʼ. ಇಲ್ಲಿ ಒಬ್ಬೇ ಒಬ್ಬ ಮನುಷ್ಯನೂ ಕೆಲಸಕ್ಕಿಲ್ಲ. ಇರುವುದೆಲ್ಲಾ ರೋಬೋಮಯ. ಆಹಾರ ತಯಾರಿಕೆಯಿಂದ ಹಿಡಿದು ತಿಂದು ಬಿಟ್ಟ ತಟ್ಟೆ-ಬಟ್ಟಲುಗಳನ್ನು ತೆಗೆಯುವ ತನಕ ಎಲ್ಲಾ ಕೆಲಸಗಳನ್ನು ಇಲ್ಲಿ ಎಐ ಆಧಾರಿತ ರೋಬೋಟ್‌ಗಳೇ ನಿರ್ವಹಿಸುತ್ತವೆ. ಕಸ ಗುಡಿಸಲು, ಆಹಾರ ಬಡಿಸಲು, ಬಿಲ್‌ ಕಲೆಕ್ಟ್‌, ಪಾತ್ರೆ ತೊಳೆಯಲು ಹೀಗೆ ಎಲ್ಲ ಕೆಲಸಕ್ಕೂ ರೋಬೋಗಳೇ ನೇಮಕವಾಗಿವೆ. ವಿಶೇಷವೆಂದರೆ ಇದು ಎಐ ಮತ್ತು ರೋಬೋಟ್‌ಗಳನ್ನು ಬಳಸಿಕೊಂಡ ವಿಶ್ವದ ಮೊದಲ ʼರೋಬೋಟ್‌ ಉದ್ಯೋಗಿ ಕೆಫೆಟೇರಿಯಾʼ.

Untitled design - 2026-05-10T131126.564

ನಾನ್‌ವೆಜ್ಜೇ ಜಾಸ್ತಿ

ಜಪಾನ್‌ ಮಾಂಸಾಹಾರ ಪ್ರಿಯರ ದೇಶ. ಹಾಗಾಗಿ ಇಲ್ಲಿನ ಪ್ರತಿ ರೆಸ್ಟೋರೆಂಟ್‌ಗಳಲ್ಲಿ ಮಾಂಸಾಹಾರ ಸಿಗುವುದು ಸಹಜ. ಈ ರೆಸ್ಟೋರೆಂಟ್‌ನಲ್ಲೂ ಅಷ್ಟೆ. ಆನ್‌ಲೈನ್‌ ವೆಬ್‌ಸೈಟ್‌ನಲ್ಲಿ ಈ ರೆಸ್ಟೋರೆಂಟ್‌ನ ಮೆನುವನ್ನು ಕಾಣಬಹುದು. ಅದರಲ್ಲಿ ಮೊದಲ ಆಹಾರವೇ ನಾನ್‌ವೆಜ್‌, ನಮಗೆ ಹೆಸರು ಹೇಳಲು ಬಾರದ ಆಹಾರ ಖಾದ್ಯಗಳೂ ಈ ರೆಸ್ಟೋರೆಂಟ್‌ನಲ್ಲಿವೆ. ಜಪಾನೀಸ್‌ ಸ್ಥಳೀಯ ಆಹಾರಗಳನ್ನು ಇಲ್ಲಿ ಸವಿಯಬಹುದು.

ಹೈಜಿನಿಕ್‌

ಈ ರೆಸ್ಟೋರೆಂಟ್‌ ಸಾಕಷ್ಟು ಜನಪ್ರಿಯವಾಗಲು ರೋಬೋಗಳನ್ನು ಕೆಲಸಕ್ಕೆ ನೇಮಿಸಿರುವುದು ಒಂದು ಕಾರಣವಾದರೆ, ಶುಚಿತ್ವ ಎರಡನೆಯ ಕಾರಣ. ಬಂದಷ್ಟು ಜನ ಗ್ರಾಹಕರು ಬರಲಿ ಎಂದು ಸದಾ ಮುಕ್ತವಾಗಿರುವ ರೆಸ್ಟೋರೆಂಟ್‌ ಇದಲ್ಲ. ಬದಲಿಗೆ ಯಾವುದೇ ಗ್ರಾಹಕ ಇಲ್ಲಿಗೆ ಬರಬೇಕೆಂದರೂ ಮೊದಲು ಆನ್‌ಲೈನ್‌ನಲ್ಲಿ ಬುಕಿಂಗ್‌ ಮಾಡಿಕೊಳ್ಳಬೇಕು.

ಕೆಲವು ಹೊಟೇಲ್‌ಗಳಲ್ಲಿ ಕುಕ್‌ಗಳು ಶುಚಿ ಕಾಯ್ದುಕೊಳ್ಳುವುದಿಲ್ಲ, ಹೇಗೆ ತಯಾರಿಸುತ್ತಾರೋ ಏನೋ ಎನ್ನುವ ಭಯದಿಂದ ಹಲವರು ಹೊಟೇಲ್‌ ಆಹಾರವನ್ನು ದೂರವೇ ಇಡುತ್ತಾರೆ. ಆದರೆ ಜಪಾನ್‌ನ ಈ ರೆಸ್ಟೋರೆಂಟ್‌ನಲ್ಲಿ ಅಂಥ ಯಾವ ವಿಷಯಗಳಿಗೂ ಜನರು ಭಯ ಪಡಬೇಕಿಲ್ಲ. ಏಕೆಂದರೆ ಇಲ್ಲಿ ಅಡುಗೆ ಮಾಡುವ ಸಿಬ್ಬಂದಿ ರೋಬೋಟ್‌ಗಳು. ಅವುಗಳೂ ಲೋಹಗಳಿಂದ ತಯಾರಾಗಿವೆ. ನೀಟಾಗಿ ಆಹಾರ ತಯಾರಿಸಿ ಬಡಿಸುತ್ತವೆ.

Untitled design - 2026-05-10T131120.219

ಪ್ರದರ್ಶನ ಮಳಿಗೆಯೂ ಹೌದು

ಈ ಹೊಟೇಲ್‌ನಲ್ಲಿ ಇರು ಎಲ್ಲಾ ರೋಬೋಟ್‌ಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಇಲ್ಲಿಗೆ ಭೇಟಿ ನೀಡುವವರು ಮನುಷ್ಯರ ಬದಲಿಗೆ ರೋಬೋಗಳು ಹೇಗೇ ಹೊಟೇಲ್‌ ನಿರ್ವಹಿಸಬಲ್ಲವು ಎನ್ನುವುದನ್ನು ನೋಡಬಹುದು. ಈ ಥರದ ಹೊಟೇಲ್‌ ವಿಶ್ವದಲ್ಲಿ ಮೊದಲನೆಯದು ಎನ್ನುವ ವಿಷಯವೇ ಇದಕ್ಕೆ ಸಾಕಷ್ಟು ಪ್ರಚಾರ ನೀಡಿದ್ದು, ಜನರು ಈ ರೋಬೋಟ್‌ಗಳ ಕಾರ್ಯವೈಖರಿಯನ್ನು ನೋಡಲೆಂದೇ ಭೇಟಿ ನೀಡುತ್ತಿದ್ದಾರೆ. ಒಂದೆಡೆ ಆತಿಥ್ಯ ಮತ್ತೊಂದೆಡೆ ವಿಜ್ಞಾನ ಎರಡೂ ಒಟ್ಟಾದರೆ ಹೇಗಿರುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿ ನಿಂತಿದೆ.

ಹೇಗೆ ಕಾರ್ಯ ನಿರ್ವಹಿಸುತ್ತಿದೆ

ಪ್ರತಿಷ್ಠಿತ ಹೊಟೇಲ್‌, ರೆಸಾರ್ಟ್‌ಗಳಲ್ಲಿ ಅಲ್ಲಿನ ಎಲ್ಲಾ ವ್ಯವಸ್ಥೆಗಳ ಕುರಿತು ನಿಮಗೆ ತಿಳಿಸಲು ಒಬ್ಬ ಮಾಃಹಿತಿದಾರ ಇರುವುದು ಸಹಜ. ಅದರಂತೆ ಈ ಹೊಟೇಲ್‌ನಲ್ಲಿ ಲಭ್ಯವಿರುವ ಆಹಾರದ ಮೆನು, ಅದರ ಬೆಲೆ ಎಷ್ಟು, ಡಿಸ್ಕೌಂಟ್‌ ದರಗಳು, ಖಾಲಿ ಇರುವ ಟೇಬಲ್‌ಗಳು ಹೀಗೆ ಎಲ್ಲಾ ಮಾಹಿತಿಯನ್ನು ನೀವು ಇಲ್ಲಿ ಪಡೆಯಲಾದರೂ ಒಬ್ಬ ಮಾಹಿತಿದಾರ ಬೇಕು ಅಲ್ವಾ? ಈ ಕಾರ್ಯವನ್ನು ನಿರ್ವಹಿಸಲೂ ಇಲ್ಲಿ ರೋಬೋ ಇದೆ. ಅದರ ಮೂಲಕ ಗ್ರಾಹಕರು ಮಾಹಿತಿಯನ್ನು ಪಡೆಯಬಹುದು. ವೆಬ್‌ಸೈಟ್‌ನಲ್ಲೂ ಈ ಅವಕಾಶವಿದೆ. ಇಲ್ಲಿ ನೀವು ನಿಮ್ಮ ಭೇಟಿಯ ಸಮಯ, ಆಸನ, ಆಹಾರ ಎಲ್ಲವನ್ನು ಮೊದಲೇ ಬುಕ್‌ ಮಾಡಿಕೊಳ್ಳಬಹುದು. ಹಾ.. ಇದು ಕಡ್ಡಾಯವೂ ಹೌದು.

Untitled design - 2026-05-10T131134.295

ದಾರಿ ಹೇಗೆ?

ಒಸಾಕಾ ಪ್ರಿಫೆಕ್ಚರ್‌ ರಾಜ್ಯದ ಇಜುವಿಯೊಟ್ಸು ಸಿಟಿಯ ಹಿಗಾಶಿ- ಟೊಯೊನಾಕಾಚೊ ಬಳಿ ಈ ರೋಬೋ ಹೌಸ್‌ ಇದೆ.