ಪ್ರಪಂಚದಾದ್ಯಂತದ ವಿಚಿತ್ರ 'ಊಟದ ಆಟಗಳು'
ನಮ್ಮ ಭಾರತದಲ್ಲಿ ಕೈಯಾರೆ ಕಲಸಿಕೊಂಡು ಊಟ ಮಾಡುವ ಸುಖವೇ ಬೇರೆ! ಆದರೆ, ನಮ್ಮ ಈ 'ಕೈ ರುಚಿ' ಪ್ರಪಂಚದ ಎಲ್ಲಾ ಕಡೆ ನಡೆಯಲ್ಲ. ಅರೇ, ಊಟ ಮಾಡೋಕೆ ಏನಪ್ಪಾ ಇಷ್ಟೊಂದು ರೂಲ್ಸ್ ಅಂತೀರಾ? ಹೌದು, ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಒಂದೊಂದು ಥರದ ವಿಚಿತ್ರ ಮತ್ತು ತಮಾಷೆಯ ಸಂಪ್ರದಾಯಗಳಿವೆ. ಮಕ್ಕಳಿಗೆ ಹೇಳೋಕೆ ಇವು ಸೂಪರ್ ಕಥೆಗಳಾಗುತ್ತವೆ. ಬನ್ನಿ, ಒಂದು ರೌಂಡ್ ಜಗತ್ತು ಸುತ್ತಿ ಅಲ್ಲಿನ ಊಟದ ಸಮಾಚಾರ ತಿಳಿಯೋಣ.
ಮಿಡಲ್ ಈಸ್ಟ್ನಲ್ಲಿ ಎಡಗೈ ಬಳಿಸಿದರೆ ಫಜೀತಿ!
ನೀವೇನಾದರೂ ದುಬೈ ಅಥವಾ ಸೌದಿ ಕಡೆ ಹೋದರೆ ನೆನಪಿಡಿ, ಅಲ್ಲಿ ಬಲಗೈಗೆ ಇರುವ ಬೆಲೆ ಎಡಗೈಗಿಲ್ಲ. ಅಲ್ಲಿ ಎಡಗೈಯನ್ನು ಶುಚಿತ್ವದ ಕೆಲಸಗಳಿಗೆ ಮಾತ್ರ ಬಳಸುತ್ತಾರೆ. ಹಾಗಾಗಿ, ಊಟ ಮಾಡುವಾಗ ಎಡಗೈ ಬಳಸಿದರೆ ಅಲ್ಲಿನ ಜನರಿಗೆ ಅದು ತುಂಬಾನೇ ಅಸಹ್ಯ ಅನಿಸುತ್ತದೆ. ತಪ್ಪಿಯೂ ಎಡಗೈಯಲ್ಲಿ ಆಹಾರ ಮುಟ್ಟಬಾರದು. ಇಲ್ಲಿ ಹೋದರೆ ʼಎಡಗೈಯೇ ಅಪಘಾತಕ್ಕೆ ಕಾರಣʼ ಆದರೂ ಆಗಬಹುದು. ಯಾರಾದರೂ ಲೆಫ್ಟ್ ಹ್ಯಾಂಡರ್ಸ್ ಇದ್ದರೆ ಇಲ್ಲಿಗೆ ಊಟಕ್ಕೆ ಹೋಗುವ ಮುನ್ನ ಸ್ವಲ್ಪ ಎಚ್ಚರಿಕೆ ವಹಿಸುವುದು ಒಳ್ಳೆಯದು.
ಇದನ್ನೂ ಓದಿ: ಕಾರ್ಮೋಡದ ನಡುವೆ ಅಲ್ಲ ಕಮೋಡಿನ ನಡುವೆ ಊಟ
ಥೈಲ್ಯಾಂಡ್: ಫೋರ್ಕ್ ಬಾಯಿಗೆ ಹಾಕಂಗಿಲ್ಲ!
ಥೈಲ್ಯಾಂಡ್‌ನಲ್ಲಿ ನೂಡಲ್ಸ್ ತಿನ್ನುವಾಗ ಫೋರ್ಕ್ ಕೊಟ್ಟೇ ಕೊಡುತ್ತಾರೆ. ಆದರೆ ಅಲ್ಲಿ ಒಂದು ಕಂಡೀಷನ್ ಇದೆ. ನೀವು ಫೋರ್ಕ್ ಬಳಸಿ ಆಹಾರವನ್ನು ನೇರವಾಗಿ ಬಾಯಿಗೆ ಹಾಕಿಕೊಳ್ಳಬಾರದು. ಫೋರ್ಕ್‌ನಿಂದ ಅನ್ನ ಅಥವಾ ನೂಡಲ್ಸ್ ಅನ್ನು ಚಮಚಕ್ಕೆ ತಳ್ಳಿ, ಆಮೇಲೆ ಚಮಚದಿಂದ ತಿನ್ನಬೇಕು. ಫೋರ್ಕ್ ಕೇವಲ 'ಹೆಲ್ಪರ್' ಅಷ್ಟೇ.

ಜಪಾನ್: ಜೋರಾಗಿ ಶಬ್ದ ಮಾಡಿದರೆ ಸೂಪರ್!
ನಮ್ಮಲ್ಲಿ ಊಟ ಮಾಡುವಾಗ ಚಪ್ಪರಿಸಿದರೆ ಅಥವಾ ಶಬ್ದ ಮಾಡಿದರೆ ʼಏನಪ್ಪಾ ಹಂಗೆ ಮಾಡ್ತೀಯಾ, ಸಮಾಧಾನವಾಗಿ ಊಟ ಮಾಡುʼ ಅಂತಾರೆ. ಆದರೆ ಜಪಾನ್‌ನಲ್ಲಿ ಉಲ್ಟಾ. ಅಲ್ಲಿ ನೂಡಲ್ಸ್ ತಿನ್ನುವಾಗ ಎಷ್ಟು ಜೋರಾಗಿ 'ಸ್ಲರ್ಪ್' ಅಂತ ಶಬ್ದ ಮಾಡ್ತೀರೋ, ಅಡುಗೆ ಅಷ್ಟು ರುಚಿಯಾಗಿದೆ ಅಂತ ಅರ್ಥ. ಜೋರಾಗಿ ಶಬ್ದ ಮಾಡಿದರೆ ಅಡುಗೆ ಮಾಡಿದವರಿಗೆ ಖುಷಿಯೋ ಖುಷಿ!
ಇಟಲಿ: ಮೀನಿನ ಜೊತೆ ಚೀಸ್?
ಇಟಲಿ ಅಂದ ತಕ್ಷಣ ನಮಗೆ ನೆನಪಾಗುವುದು ಪೀಜ್ಜಾ ಮತ್ತು ಪಾಸ್ತಾ. ಅಲ್ಲಿನವರಿಗೆ ಚೀಸ್ ಅಂದ್ರೆ ಪಂಚಪ್ರಾಣ. ಆದರೆ, ನೀವೇನಾದರೂ ಮೀನಿನ ಅಡುಗೆಗೆ ಚೀಸ್ ಹಾಕಿ ಅಂದ್ರೆ ಅವರು ನಿಮ್ಮನ್ನು ವಿಚಿತ್ರವಾಗಿ ನೋಡುತ್ತಾರೆ. ಅವರ ಪ್ರಕಾರ ಮೀನು ಮತ್ತು ಚೀಸ್ ಮಿಕ್ಸ್ ಮಾಡೋದು ಅಡುಗೆಯ ಲೋಕದ ದೊಡ್ಡ ಅಪರಾಧ!
ದಕ್ಷಿಣ ಕೊರಿಯಾ: ಹಿರಿಯರೇ ಮೊದಲು!
ಇಲ್ಲಿ ಮರ್ಯಾದೆಗೆ ಮೊದಲ ಆದ್ಯತೆ. ಮನೆಯಲ್ಲಿ ಯಾರಿಗೆ ಎಷ್ಟೇ ಹಸಿವಾಗಿದ್ದರೂ, ಟೇಬಲ್ ಮೇಲೆ ಅತಿ ಹಿರಿಯ ವ್ಯಕ್ತಿ ಮೊದಲ ತುತ್ತು ತಿನ್ನುವವರೆಗೂ ಉಳಿದವರು ಕಾಯಲೇಬೇಕು. ಇದು ಅವರ ಸಂಪ್ರದಾಯದ ಒಂದು ದೊಡ್ಡ ಭಾಗ. ಅವರು ಊಟ ಶುರು ಮಾಡಿದ ನಂತರವೇ ಉಳಿದವರು ಊಟ ಶುರು ಮಾಡಬಹುದು.

ಚೀನಾ (China): ಚಾಪ್‌ಸ್ಟಿಕ್ ಜೋಪಾನ!
ಚೀನಾದಲ್ಲಿ ಚಾಪ್‌ಸ್ಟಿಕ್‌ಗಳನ್ನು ಅನ್ನದ ಬೌಲ್‌ನಲ್ಲಿ ನೆಟ್ಟಗೆ ಚುಚ್ಚಿ ಇಡಬಾರದು. ಇದು ಸಾವು ಅಥವಾ ಅಂತ್ಯಕ್ರಿಯೆಯ ಸಂಕೇತವಂತೆ. ಹಾಗೆಯೇ ಚಾಪ್‌ಸ್ಟಿಕ್‌ನಿಂದ ಯಾರನ್ನೂ ಪಾಯಿಂಟ್ ಮಾಡಬಾರದು. ಇದು ತುಂಬಾ ಅವಮಾನಕರ ಅಂತ ಅವರಿಗೆ ಅನಿಸುತ್ತದೆ. ನಮ್ಮಲ್ಲಿ ಊಟದ ತಟ್ಟೆ ಖಾಲಿ ಮಾಡಿದರೆ ʼಅಬ್ಬಾ, ಮಗ ಚೆನ್ನಾಗಿ ತಿಂದ, ಅಡುಗೆ ಇಷ್ಟ ಆಯ್ತುʼ ಅಂತ ಖುಷಿ ಪಡುತ್ತಾರೆ. ಆದರೆ ಚೀನಾದಲ್ಲಿ ನೀವು ತಟ್ಟೆ ಪೂರ್ತಿ ಖಾಲಿ ಮಾಡಿದರೆ, ʼನೀವು ಬಡಿಸಿದ್ದ ಆಹಾರ ನನಗೆ ಸಾಕಾಗಲಿಲ್ಲ, ನನಗೆ ಇನ್ನೂ ಹಸಿವಿದೆʼ ಅಂತ ದೂರಿದ ಹಾಗೆ ಅಂತೆ! ಅಜೀಬು ಅಲ್ವಾ?
ಬ್ರಿಟನ್: ಟೀ ಕುಡಿಯೋಕೂ ಒಂದು ಸ್ಟೈಲ್ ಇದೆ!
ಬ್ರಿಟಿಷರಿಗೆ ಟೀ ಅಂದ್ರೆ ಪ್ರಾಣ. ಆದರೆ ಟೀ ಕಪ್‌ನಲ್ಲಿ ಚಮಚವನ್ನು ತಿರುಗಿಸುವಾಗ ಕಪ್‌ನ ಸೌಂಡ್ ಬರಬಾರದು. ಅಲ್ಲದೆ, ಸಕ್ಕರೆ ಹಾಕಿ ಮಿಕ್ಸ್ ಮಾಡಿದ ಮೇಲೆ ಚಮಚವನ್ನು ಕಪ್ ಒಳಗೇ ಇಡಬಾರದು, ಅದನ್ನು ಪಕ್ಕದ ಸಾಸರ್ ಮೇಲೆ ಎತ್ತಿಡಬೇಕು. ಇನ್ನು ಚಿಲಿ ದೇಶದಲ್ಲಿ ಯಾವುದನ್ನು ಕೈಯಲ್ಲಿ ಮುಟ್ಟುವ ಹಾಗಿಲ್ಲ. ಇಲ್ಲಿ ಎಲ್ಲವನ್ನೂ ಚಮಚ, ಫೋರ್ಕ್ ಮತ್ತು ಚಾಕುವಿನಲ್ಲೇ ತಿನ್ನಬೇಕು. ಚಿಕನ್ ವಿಂಗ್ಸ್ ಇರಲಿ ಅಥವಾ ಪಿಜ್ಜಾ ಇರಲಿ, ಕೈಯಲ್ಲಿ ಹಿಡಿದು ತಿನ್ನೋದು ಅಲ್ಲಿನವರಿಗೆ ಮ್ಯಾನರ್ಸ್ ಇಲ್ಲದಂತೆ ಕಾಣುತ್ತೆ.
ಈಜಿಪ್ಟ್ ಮತ್ತು ಪೋರ್ಚುಗಲ್: ಉಪ್ಪು ಕೇಳಬೇಡಿ!
ಊಟದಲ್ಲಿ ಉಪ್ಪು ಸ್ವಲ್ಪ ಕಡಿಮೆ ಇದ್ರೆ ನಾವು ತಕ್ಷಣ ʼಸ್ವಲ್ಪ ಉಪ್ಪು ಕೊಡಿʼ ಅಂತೀವಿ. ಆದರೆ ಈ ಎರಡು ದೇಶಗಳಲ್ಲಿ ನೀವು ಉಪ್ಪು ಅಥವಾ ಪೆಪ್ಪರ್ ಕೇಳಿದರೆ, ಅಡುಗೆ ಮಾಡಿದವರಿಗೆ ಅದು ದೊಡ್ಡ ಇನ್ಸಲ್ಟ್ ಅಂತೆ! ʼನಾನು ಮಾಡಿದ ಅಡುಗೆ ಸರಿಯಿಲ್ಲ ಅಂತ ಇವರು ಉಪ್ಪು ಕೇಳ್ತಿದ್ದಾರೆʼ ಅಂತ ಬೇಜಾರು ಮಾಡಿಕೊಳ್ಳುತ್ತಾರೆ. ಹೀಗೆ ಪ್ರಪಂಚದಾದ್ಯಂತ ಊಟದ ಸುತ್ತ ಇಷ್ಟೆಲ್ಲಾ ಮೋಜಿನ ವಿಷಯಗಳಿವೆ. ಮುಂದಿನ ಸಲ ನೀವು ಈ ಯಾವುದಾದರೂ ದೇಶಕ್ಕೆ ಹೋದರೆ ಈ ಟಿಪ್ಸ್ ನೆನಪಿಟ್ಟುಕೊಳ್ಳಿ. ಇಲ್ಲದಿದ್ದರೆ ಫಜೀತಿ ಗ್ಯಾರಂಟಿ!