ಸಾಮಾನ್ಯವಾಗಿ ಯಾರೇ ಹೊಟೇಲ್‌ಗೆ ಹೋದರೆ ಮೊದಲು ಮಾಡುವ ಕೆಲಸವೆಂದರೆ ಅಲ್ಲಿನ ಮೆನು ಕಾರ್ಡ್ ನೋಡಿ ಆರ್ಡರ್ ಮಾಡುವುದು. ಆಮೇಲೆ ತಟ್ಟೆ ಮುಂದೆ ಬಂದ ತಕ್ಷಣ ಫೋನಿನಲ್ಲಿ ಒಂದು ಸೂಪರ್ ಫೊಟೋ ತೆಗೆದುಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡುವುದು! ಆದರೆ, ನೀವೆಲ್ಲಾದರೂ ಸಂಪೂರ್ಣ ಕತ್ತಲಲ್ಲಿ ಕೂತು, ಪಕ್ಕದಲ್ಲಿ ಯಾರು ಕೂತಿದ್ದಾರೆ ಅಂತಲೂ ತಿಳಿಯದೆ, ತಟ್ಟೆಯಲ್ಲಿ ಏನಿದೆ ಅಂತಲೂ ಕಾಣದೆ ಊಟ ಮಾಡಿದ್ದೀರಾ? ಕೇಳೋಕೇ ಒಂಥರಾ ಮಜ ಅನಿಸುತ್ತದೆ ಅಲ್ಲವೇ? ಇದೇ ಈ ಜಗತ್ಪ್ರಸಿದ್ಧ 'ಡಾನ್ಸ್ ಲೆ ನುವಾರ್' (Dans le Noir) ಕೆಫೆಯ ಕಥೆ.

ಇದನ್ನೂ ಓದಿ:ಹೊಟ್ಟೆ ತುಂಬ್ಸಿ ಸಾಯಿಸೋ ಸೀರಿಯಲ್‌ ಕಿಲ್ಲರ್‌ ಕೆಫೆ

ಫ್ರೆಂಚ್ ಭಾಷೆಯಲ್ಲಿ 'ಡಾನ್ಸ್ ಲೆ ನುವಾರ್' ಎಂದರೆ ‘ಕತ್ತಲೆಯಲ್ಲಿ’ ಎಂದರ್ಥ. 2004ರಲ್ಲಿ ಪ್ಯಾರಿಸ್‌ನಲ್ಲಿ ಶುರುವಾದ ಈ ವಿಭಿನ್ನ ರೆಸ್ಟೋರೆಂಟ್, ಇವತ್ತು ಲಂಡನ್, ಮ್ಯಾಡ್ರಿಡ್, ಜಿನೀವಾ ಸೇರಿದಂತೆ ಪ್ರಪಂಚದ 17ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ಧೂಳೆಬ್ಬಿಸುತ್ತಿದೆ. ಮನೆಯಲ್ಲಿ ಊಟ ಮಾಡುವಾಗ ಕರೆಂಟ್‌ ಹೋದಾಗ ತಲೆಬಿಸಿಯಾಗುತ್ತದೆ. ಆದರೆ, ಇಲ್ಲಿ ಕತ್ತಲೆಯಲ್ಲೇ ಊಟ ಮಾಡಲು ದುಡ್ಡು ಕೊಡಬೇಕಾಗುತ್ತದೆ. ಮಜ ಎಂದರೆ ಎಷ್ಟೇ ಕತ್ತಲೆ ಇದ್ದರೂ ಕೈ ಮಾತ್ರ ಸರಿಯಾಗಿ ಬಾಯಿಗೇ ಹೋಗುತ್ತದೆ. ಈ ಮಾತು ಕೇಳಿ ಎದ್ದೇಳು ಮಂಜುನಾಥ ಸಿನಿಮಾ ಡೈಲಾಗ್‌ ನೆನಪಾದರೆ ನಾನು ಹೊಣೆಗಾರನಲ್ಲ!

Untitled design (14)

ಏನು ಇಲ್ಲಿನ ಸ್ಪೆಷಾಲಿಟಿ?

ನೀವು ಈ ಕೆಫೆಗೆ ಕಾಲಿಡುತ್ತಿದ್ದಂತೆ ನಿಮ್ಮ ಫೋನ್, ಸ್ಮಾರ್ಟ್ ವಾಚ್, ಲೈಟರ್ ಸೇರಿದಂತೆ ಸಣ್ಣ ಬೆಳಕನ್ನು ಪಸರಿಸುವ ಪ್ರತಿಯೊಂದು ವಸ್ತುವನ್ನು ಲಾಕರ್‌ನಲ್ಲಿ ಇಡಬೇಕಾಗುತ್ತದೆ. ಅಂದರೆ, ಇಲ್ಲಿ ಮೊಬೈಲ್ ನೋಡುತ್ತಾ ಊಟ ಮಾಡುವ ಅವಕಾಶವೇ ಇಲ್ಲ! ಅಲ್ಲಿಂದ ನಿಮ್ಮನ್ನು ಸಂಪೂರ್ಣ ಕತ್ತಲೆಯಿರುವ ಡೈನಿಂಗ್ ಹಾಲ್‌ಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಅಮಾವಾಸ್ಯೆಯ ನಡುರಾತ್ರಿಯ ಹಾಗೆ ಕಡುಕತ್ತಲಿರುತ್ತದೆ. ನಿಮ್ಮ ಕೈ ಬೆರಳುಗಳೇ ನಿಮಗೆ ಕಾಣಿಸುವುದಿಲ್ಲ!

ಇಲ್ಲಿನ ಅತಿದೊಡ್ಡ ಹೈಲೈಟ್ ಎಂದರೆ, ನಿಮಗೆ ದಾರಿತೋರಿಸಿ, ಊಟ ಬಡಿಸುವ ವೇಟರ್ಸ್ ಮತ್ತು ಗೈಡ್‌ಗಳು ಯಾರು ಗೊತ್ತಾ? ಅವರಲ್ಲಿ ಯಾರಿಗೂ ಕಣ್ಣು ಕಾಣಿಸುವುದಿಲ್ಲ. ಹೊರಗಿನ ಪ್ರಪಂಚದಲ್ಲಿ ಅವರು ಇನ್ನೊಬ್ಬರ ಸಹಾಯ ಕೇಳಬಹುದು, ಆದರೆ ಈ ಕತ್ತಲೆಯ ಸಾಮ್ರಾಜ್ಯದಲ್ಲಿ ಅವರೇ ರಾಜರು! ಅವರು ಅತ್ಯಂತ ಪ್ರೀತಿಯಿಂದ ನಿಮ್ಮ ಹೆಗಲ ಮೇಲೆ ಕೈಹಾಕಿ, ನಿಮ್ಮ ಸೀಟಿನವರೆಗೆ ಕರೆದೊಯ್ದು ಕೂರಿಸುತ್ತಾರೆ.

ತಟ್ಟೆಯಲ್ಲೇನಿದೆ? ಅದೇ ಒಂದು ಸಸ್ಪೆನ್ಸ್!

ಇಲ್ಲಿನ ಮೆನು ಕಾರ್ಡ್ ಅತಿ ದೊಡ್ಡ ಸಸ್ಪೆನ್ಸ್ ಗೇಮ್. ನಿಮಗೆ ಏನು ಬಡಿಸುತ್ತಾರೆ ಎಂಬುದು ಮುಂಚಿತವಾಗಿ ತಿಳಿಯುವುದೇ ಇಲ್ಲ. ಕೇವಲ ವೆಜ್, ನಾನ್-ವೆಜ್ ಅಥವಾ ಸೀಫುಡ್ ಎಂಬ ಆಯ್ಕೆ ಮಾತ್ರ ನಿಮಗಿರುತ್ತದೆ. ಕಣ್ಣು ಕಾಣಿಸದಿದ್ದಾಗ ನಮ್ಮ ಮೂಗು ಮತ್ತು ನಾಲಗೆಯ ಶಕ್ತಿ ಡಬಲ್ ಆಗುತ್ತದೆ ಗೊತ್ತಾ? ಕತ್ತಲಲ್ಲಿ ಚಮಚ ಹಿಡಿದು ತಡಕಾಡುತ್ತಾ, ಬಾಯಿಗೆ ಹಾಕಿಕೊಂಡ ಪದಾರ್ಥ ಪನೀರಾ ಅಥವಾ ಆಲೂಗಡ್ಡೆಯಾ ಎಂದು ಗೆಸ್ ಮಾಡುವುದೇ ಒಂದು ದೊಡ್ಡ ಸಾಹಸ ಮತ್ತು ಮಜ. ಕೆಲವೊಮ್ಮೆ ಸ್ಪೂನ್‌ನಲ್ಲಿ ಏನೂ ಇರದೆ ಬರೀ ಖಾಲಿ ಸ್ಪೂನ್ ಅನ್ನೇ ಬಾಯಿಗೆ ಇಟ್ಟುಕೊಂಡು ನಗುವ ಪ್ರಸಂಗಗಳೂ ನಡೆಯುತ್ತವೆ.

Untitled design (17)

ಅಪರಿಚಿತರೊಂದಿಗೆ ಹರಟೆ

ಇಲ್ಲಿ ಸಣ್ಣ ಸಣ್ಣ ಟೇಬಲ್‌ಗಳಿರುವುದಿಲ್ಲ, ಬದಲಿಗೆ ದೊಡ್ಡ ಶೇರಿಂಗ್ ಟೇಬಲ್‌ಗಳಿರುತ್ತವೆ. ನಿಮ್ಮ ಪಕ್ಕದಲ್ಲಿ ಯಾರು ಕೂತಿದ್ದಾರೆ, ಅವರು ಯಾರು, ಅವರ ಬಣ್ಣವೇನು, ಅವರು ಶ್ರೀಮಂತರೋ ಬಡವರೋ ಎಂಬ ಯಾವ ಹಣೆಪಟ್ಟಿಗಳೂ ಕತ್ತಲಲ್ಲಿ ಕಾಣಿಸುವುದಿಲ್ಲ. ಕೇವಲ ಕಂಠದ ಧ್ವನಿಯ ಆಧಾರದ ಮೇಲೆ ಅಪರಿಚಿತರ ಜತೆ ನಗುತ್ತಾ, ಜೋಕ್ಸ್ ಕಮೆಂಟ್ ಮಾಡುತ್ತಾ ಊಟ ಮಾಡುವುದು ಲೈಫ್‌ನಲ್ಲೇ ಮರೆಯಲಾಗದ ಅನುಭವ ನೀಡುತ್ತದೆ. ಯಾವುದೇ ಸಾಮಾಜಿಕ ಒತ್ತಡವಿಲ್ಲದೆ, ಫೋನಿನ ನೋಟಿಫಿಕೇಶನ್ ಕಿರಿಕಿರಿ ಇಲ್ಲದೆ ನೆಮ್ಮದಿಯಾಗಿ ಊಟ ಸವಿಯಬಹುದು.

ಇದೊಂದು ಸಾಮಾಜಿಕ ಕಳಕಳಿ

ಊಟ ಮುಗಿಸಿ ಹೊರಬಂದಾಗ ನಿಮಗೆ ಬಡಿಸಿದ ಆಹಾರವೇನು ಎಂಬುದನ್ನು ಫೊಟೋ ಸಮೇತ ತೋರಿಸುತ್ತಾರೆ. ಆಗ ʼಅಯ್ಯೋ, ನಾನು ತಿಂದಿದ್ದು ಇದನ್ನಾ!ʼ ಎಂದು ಹೌಹಾರುವ ಸರದಿ ನಿಮ್ಮದು. ಈ ಕೆಫೆ ಕೇವಲ ಎಂಟರ್ಟೈನ್‌ಮೆಂಟ್ ಅಷ್ಟೇ ಅಲ್ಲ, ದೃಷ್ಟಿ ಇಲ್ಲದವರ ಅದ್ಭುತ ಪ್ರತಿಭೆ ಮತ್ತು ಜವಾಬ್ದಾರಿಯನ್ನು ಜಗತ್ತಿಗೆ ಪರಿಚಯಿಸುವ ಒಂದು ಸಮಾಜಮುಖಿ ಪ್ರಯತ್ನವಾಗಿದೆ. ಲೈಫ್‌ನಲ್ಲಿ ಏನಾದರೂ ಡಿಫರೆಂಟ್ ಆಗಿ, ಸ್ವಲ್ಪ ಫನ್ ಹಾಗೂ ಥ್ರಿಲ್ ಇರುವ ಜಾಗಕ್ಕೆ ಹೋಗಬೇಕು ಅನಿಸಿದರೆ 'ಡಾನ್ಸ್ ಲೆ ನುವಾರ್' ಬೆಸ್ಟ್ ಚಾಯ್ಸ್. ಕಣ್ಣು ಮುಚ್ಚಿ, ನಿಮ್ಮ ಉಳಿದ ಇಂದ್ರಿಯಗಳ ಮಜವನ್ನು ಇಲ್ಲಿ ಆನಂದಿಸಿ!