ಗಾಳಿಯಲ್ಲಿ ತೇಲುತ್ತಾ, ಆಕಾಶದ ಎತ್ತರದಲ್ಲಿ ಮಲಗೋದಕ್ಕೆ ರೆಡಿ ಇದ್ದೀರಾ?
ಇಲ್ಲಿಗೆ ದೊಡ್ಡ ದೊಡ್ಡ ಫ್ಯಾಶನ್ ಡಿಸೈನರ್ಗಳು, ಮ್ಯೂಸಿಕ್ ಆರ್ಟಿಸ್ಟ್ಗಳು ಮತ್ತು ವಿಚಿತ್ರ ಅನುಭವ ಬಯಸುವ ಸೆಲೆಬ್ರಿಟಿಗಳೇ ಹೆಚ್ಚು ಹೋಗುತ್ತಾರೆ. ಇಲ್ಲಿನ ಇಂಟೀರಿಯರ್ ಡಿಸೈನ್ ಎಷ್ಟು ಫೊಟೋಜೆನಿಕ್ ಆಗಿದೆ ಅಂದರೆ, ಪ್ರತಿಯೊಂದು ಫೊಟೋ ಕೂಡ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುವುದು ಗ್ಯಾರಂಟಿ.
ನೀವು ಹೊಟೇಲ್ ಅಂದಾಕ್ಷಣ ಏನು ಯೋಚನೆ ಮಾಡ್ತೀರಾ? ಒಂದು ದೊಡ್ಡ ಬಿಲ್ಡಿಂಗ್, ಸುಂದರವಾದ ಲಾಬಿ, ಆರಾಮದಾಯಕ ಬೆಡ್ ಅಲ್ವಾ? ಆದರೆ ಆಮ್‌ಸ್ಟೆರ್‌ಡ್ಯಾಮ್‌ನಲ್ಲಿ ಒಂದು ರೆಸಾರ್ಟ್ ಇದೆ. ಅದು ನಿಮ್ಮ ಕಲ್ಪನೆಗೂ ಮೀರಿದ್ದು! ಹೌದು, ಇದು ಯಾವುದೋ ಕಟ್ಟಡದ ಒಳಗಿಲ್ಲ. ಆಕಾಶಕ್ಕೆ ಮುಖ ಮಾಡಿ ನಿಂತಿರೋ ಒಂದು ಬೃಹತ್ ಇಂಡಸ್ಟ್ರಿಯಲ್ ಕ್ರೇನ್ ಒಳಗಿದೆ! ಇದರ ಹೆಸರು ʼಕ್ರೇನ್ ಹೊಟೇಲ್ ಫರಾಲ್ಡಾ'.
ಆಮ್‌ಸ್ಟೆರ್‌ಡ್ಯಾಮ್‌ನ ಎನ್‌ಡಿಎಸ್‌ಎಂ ಹಡಗು ಕಟ್ಟೆಯ ಹತ್ತಿರ ಹೋದರೆ, ಸುಮಾರು 50 ಮೀಟರ್ ಎತ್ತರದ ಈ ಹಳೆಯ ಕಾಲದ ಬೃಹತ್ ಕ್ರೇನ್ ನಿಮ್ಮ ಕಣ್ಣಿಗೆ ಬೀಳುತ್ತದೆ. ಇದನ್ನು ದೂರದಿಂದ ನೋಡಿದರೆ ಯಾವುದೋ ಸೈನ್ಸ್-ಫಿಕ್ಷನ್ ಸಿನಿಮಾದ ಸೆಟ್ ಹಾಗೆ ಕಾಣುತ್ತದೆ. ಇಲ್ಲಿ ಮಲಗುವುದು ಅಂದರೆ ಅಂತಿಂಥ ಅನುಭವ ಅಲ್ಲ. ಇಲ್ಲಿ ಇರುವುದು ಕೇವಲ ಮೂರು ಲಕ್ಸುರಿ ಸೂಟ್‌ಗಳು. ಅವುಗಳ ಹೆಸರುಗಳೂ ಅಷ್ಟೇ ಮಜವಾಗಿವೆ. 'ಮಿಸ್ಟಿಕ್', 'ಸೀಕ್ರೆಟ್' ಮತ್ತು 'ಫ್ರೀ ಸ್ಪಿರಿಟ್'. ಪ್ರತಿಯೊಂದು ರೂಮ್ ಕೂಡ ಎರಡು ಮಹಡಿಗಳನ್ನು ಹೊಂದಿದ್ದು, ವಿನ್ಯಾಸ ಮಾತ್ರ ಅದ್ಭುತ. ಒಳಗೆ ಹೋದರೆ ನಿಮಗೆ ಇದೊಂದು ಕ್ರೇನ್ ಎನ್ನುವುದು ಮರೆತು ಹೋಗುತ್ತದೆ.
ಇದನ್ನೂ ಓದಿ: ಹಳ್ಳಿಯ ಅಜ್ಜಿಮನೆಯನ್ನು ಮಿಸ್ ಮಾಡಿಕೊಂಡ್ರಾ..?
ರಾಜಾತಿಥ್ಯ
ಕಿಂಗ್ ಸೈಜ್ ಬೆಡ್‌ಗಳು, ಮಸ್ತ್ ಸ್ನಾನದ ಮನೆಗಳು, ಮತ್ತು ಜಟ್ಟೆಡ್ ಬಾತ್‌ಟಬ್‌ಗಳು ಇಲ್ಲಿವೆ. ವ್ಯೂ ನೋಡಿ ಮಜಾ ಮಾಡಬಹುದು. ನೆಲದಿಂದ ಛಾವಣಿಯವರೆಗೂ ಇರುವ ದೊಡ್ಡ ಗಾಜಿನ ಕಿಟಕಿಗಳ ಮೂಲಕ ಇಡೀ ಆಮ್‌ಸ್ಟೆರ್‌ಡ್ಯಾಮ್ ನಗರದ ಸ್ಕೈಲೈನ್ ಮತ್ತು ಐಜೆ ನದಿಯ ಸೌಂದರ್ಯವನ್ನು ಆರಾಮವಾಗಿ ಬೆಡ್ ಮೇಲೆ ಮಲಗಿಕೊಂಡೇ ನೋಡಬಹುದು. ಬೆಳಗ್ಗೆ ಸೂರ್ಯೋದಯ ನೋಡುವುದಂತೂ ಒಂಥರಾ ಸ್ವರ್ಗಕ್ಕೆ ಹೋದ ಅನುಭವ ಆಗುತ್ತದೆ.

ಅಡ್ರೆನಲಿನ್ ರಶ್ ಪಕ್ಕಾ
ಇಲ್ಲಿ ಬರಿ ಮಲಗುವುದು ಅಷ್ಟೇ ಅಲ್ಲ, ಸ್ವಲ್ಪ ಸಾಹಸ ಕೂಡ ಮಾಡಬಹುದು. ಈ ರೆಸಾರ್ಟ್‌ನ ತುತ್ತತುದಿಯಲ್ಲಿ ರೂಫ್‌ಟಾಪ್ ಸ್ವಿಂಗ್ (ಉಯ್ಯಾಲೆ) ಇದೆ. ಅಷ್ಟೇ ಅಲ್ಲ, ಧೈರ್ಯ ಇರೋರಿಗೆ ಇಲ್ಲಿಂದ ಬಂಜಿ ಜಂಪಿಂಗ್ ಮಾಡುವ ಅವಕಾಶ ಕೂಡ ಇದೆ. ಅದರ ಜತೆಗೆ ಇಲ್ಲಿ ಒಂದು ನೈಟ್‌ಕ್ಲಬ್ ಮತ್ತು ಆರ್ಟ್ ಗ್ಯಾಲರಿ ಕೂಡ ಇದೆ. ಅಂದರೆ, ಎಂಜಾಯ್ ಮಾಡೋಕೆ ಇಲ್ಲಿ ಎಲ್ಲವೂ ಇದೆ.
ಇಲ್ಲಿಗೆ ಹೋಗೋದು ಹೇಗೆ?
ಈ ಹೊಟೇಲ್‌ಗೆ ಹೋಗುವುದೇ ಒಂದು ಸಾಹಸ. ಆಮ್‌ಸ್ಟೆರ್‌ಡ್ಯಾಮ್ ಸಿಟಿಯಿಂದ ಒಂದು ಫೆರಿ (ದೋಣಿ) ಹತ್ತಿ ನದಿ ದಾಟಿಕೊಂಡು ಹೋಗಬೇಕು. ಆ ದೋಣಿ ಪ್ರಯಾಣವೇ ಪ್ರವಾಸಕ್ಕೆ ಒಂದು ಅದ್ಭುತ ಸ್ಟಾರ್ಟ್ ಕೊಡುತ್ತದೆ. ಹೊಟೇಲ್ ಸುತ್ತಮುತ್ತಲಿನ ಏರಿಯಾ ಪಕ್ಕಾ ಕ್ರಿಯೇಟಿವ್ ಹಬ್. ಗೋಡೆಗಳ ಮೇಲೆಲ್ಲಾ ಅದ್ಭುತ ಸ್ಟ್ರೀಟ್ ಆರ್ಟ್, ಪಕ್ಕದಲ್ಲೇ ದೊಡ್ಡ ಮ್ಯೂಸಿಯಂ ಮತ್ತು ಟ್ರೆಂಡಿ ಕೆಫೆಗಳಿವೆ. ಇಷ್ಟೆಲ್ಲಾ ವಿಶೇಷತೆ ಇರುವ ಜಾಗ ಅಂದಮೇಲೆ ಬೆಲೆ ಸ್ವಲ್ಪ ಜಾಸ್ತಿನೇ ಇರುತ್ತದೆ. ಇಲ್ಲಿ ಒಂದು ರಾತ್ರಿ ಕಳೆಯಲು ಸುಮಾರು 900 ರಿಂದ 1,200 ಡಾಲರ್ ವರೆಗೆ ಖರ್ಚಾಗಬಹುದು (ಅಂದ್ರೆ ನಮ್ಮ ಇಂಡಿಯನ್ ರುಪಾಯಿಯಲ್ಲಿ ಸುಮಾರು 75,000 ದಿಂದ 1 ಲಕ್ಷದವರೆಗೆ!). ಇದು ಸ್ವಲ್ಪ ಕಾಸ್ಟ್ಲಿ ಅನಿಸಬಹುದು. ಆದರೆ ಜೀವನದಲ್ಲಿ ಒಮ್ಮೆಯಾದರೂ ಅನುಭವಿಸಲೇಬೇಕಾದ ಅತಿ ವಿಶಿಷ್ಟವಾದ ಜಾಗವಿದು. ಮದುವೆ ವಾರ್ಷಿಕೋತ್ಸವ ಅಥವಾ ಯಾವುದೋ ಸ್ಪೆಷಲ್ ಡೇ ಸೆಲೆಬ್ರೇಟ್ ಮಾಡುವುದಕ್ಕೆ ಇದಕ್ಕಿಂತ ಬೆಸ್ಟ್ ಜಾಗ ಬೇರೆ ಇಲ್ಲ.

ಗಾಳಿಯಲ್ಲಿ ತೇಲುವ ಗ್ಲಾಮರ್!
ಈ ಹೊಟೇಲ್‌ನ ಮತ್ತೊಂದು ತಲೆತಿರುಗುವ ವಿಷಯ ಅಂದರೆ, ಗಾಳಿ ಬೀಸಿದಾಗ ಈ ಇಡೀ ಕ್ರೇನ್ ನಿಧಾನವಾಗಿ ತಿರುಗುತ್ತದೆ! ನೀವು ರೂಮ್ ಒಳಗಡೆ ವೈನ್ ಕುಡಿಯುತ್ತಾ ಕೂತಿದ್ದರೆ, ಕಿಟಕಿಯ ಆಚೆ ಇರುವ ನೋಟ ತಾನಾಗಿಯೇ ಬದಲಾಗುತ್ತಿರುತ್ತದೆ. ಅಂದರೆ, ಒಮ್ಮೆ ನಿಮಗೆ ನದಿ ಕಾಣಿಸಿದರೆ, ಸ್ವಲ್ಪ ಹೊತ್ತಿನ ನಂತರ ನಗರದ ಸ್ಕೈಲೈನ್ ಕಾಣಿಸುತ್ತದೆ. ಇನ್ನು ಇಲ್ಲಿನ ಬಾತ್‌ಟಬ್ ವಿಷಯಕ್ಕೆ ಬಂದರೆ ಹೊಟೇಲ್‌ನ ತುತ್ತತುದಿಯಲ್ಲಿ ಅಂದರೆ ಆಕಾಶಕ್ಕೆ ಮುಖ ಮಾಡಿದಂತೆ ಒಂದು ಓಪನ್-ಏರ್ ಹಾಟ್ ಟಬ್ ಇದೆ. ಮೈ ಕೊರೆಯುವ ಚಳಿಯಲ್ಲಿ, ಬಿಸಿ ಬಿಸಿ ನೀರಿನ ಟಬ್ ಒಳಗೆ ಕುಳಿತು, ಕೈಯಲ್ಲೊಂದು ಗ್ಲಾಸ್ ಹಿಡಿದು ಇಡೀ ಆಮ್‌ಸ್ಟೆರ್‌ಡ್ಯಾಮ್ ನಗರವನ್ನು ಮೇಲಿಂದ ನೋಡುವುದು ಅಪ್ಪಟ ಶ್ರೀಮಂತಿಕೆ ಫೀಲ್ ಕೊಡುತ್ತದೆ.
ಇದು ʼಒನ್ಸ್ ಇನ್ ಎ ಲೈಫ್ ಟೈಮ್ʼ ಎಕ್ಸ್‌ಪೀರಿಯನ್ಸ್! ನೀವು ಎತ್ತರ ಅಂದರೆ ಹೆದರೋರಾಗಿದ್ದರೆ ಸ್ವಲ್ಪ ಯೋಚನೆ ಮಾಡಿ. ಆದರೆ ಅಡ್ವೆಂಚರ್ ಪ್ರಿಯರಿಗಂತೂ ಇದು ಒಂದು ಕನಸಿನ ಲೋಕ. ಹಳೆಯ ಕಾಲದ ಕಬ್ಬಿಣದ ಕ್ರೇನ್ ಅನ್ನು ಇಷ್ಟು ಸುಂದರವಾದ ಲಕ್ಸುರಿ ಹೊಟೇಲ್ ಆಗಿ ಬದಲಿಸಿರುವುದು ಮನುಷ್ಯನ ಕ್ರಿಯೇಟಿವಿಟಿಗೆ ಒಂದು ದೊಡ್ಡ ಉದಾಹರಣೆ. ನೀವು ಸಾಂಪ್ರದಾಯಿಕ ಹೊಟೇಲ್‌ಗಳಿಂದ ಬೇಸತ್ತಿದ್ದರೆ, ಸ್ವಲ್ಪ ಥ್ರಿಲ್ ಮತ್ತು ಲಕ್ಸುರಿ ಎರಡನ್ನೂ ಒಟ್ಟಿಗೆ ಅನುಭವಿಸಬೇಕು ಅನಿಸಿದರೆ, ಆಮ್‌ಸ್ಟೆರ್‌ಡ್ಯಾಮ್‌ನ ಈ ಕ್ರೇನ್ ಹೊಟೇಲ್‌ಗೆ ಒಮ್ಮೆ ಭೇಟಿ ಕೊಡಿ.