ಆರಾಮದಾಯಕ ವಾಸ್ತವ್ಯದ ಅನುಭವ ಪಡೆಯುವುದು ಪ್ರತಿಯೊಬ್ಬ ಪ್ರವಾಸಿಯ ಕನಸು. ಬೆಂಗಳೂರಿನ ಆಸುಪಾಸಿನಲ್ಲಷ್ಟೇ ಅಲ್ಲದೆ ದೇಶದ ಗಡಿ ದಾಟಿ ವಿದೇಶಿ ನೆಲಕ್ಕೆ ಪ್ರಯಾಣ ಬೆಳೆಸಿದರೂ ಅಲ್ಲಿನ ವಿಭಿನ್ನವಾದ ರೆಸಾರ್ಟ್‌, ಹೋಮ್‌ ಸ್ಟೇಗಳಲ್ಲಿ ಒಂದು ದಿನವಾದರೂ ಕಳೆಯಲೇ ಬೇಕು ಎನ್ನುವವರು ಅನೇಕರು. ಅಂಥವರು ತಪ್ಪದೇ ಭೇಟಿ ನೀಡಬೇಕಿರುವ ತಾಣ ಕೋಕೋನೆಸ್ಟ್ ಫ್ಲೋಟಿಂಗ್‌ ಏರ್‌ಬಿಎನ್‌ಬಿ.

ಇದನ್ನೂ ಓದಿ:ದೇವರ ನಾಡಿನಲ್ಲೊಂದು ಸ್ವರ್ಗದಂಥ ರೆಸಾರ್ಟ್‌

ಮಲೇಷ್ಯಾದ ವಾಯುವ್ಯ ಕರಾವಳಿಯಲ್ಲಿರುವ ಸುಂದರವಾದ ದ್ವೀಪಗಳ ಸಮೂಹ ಲಾಂಗ್ಕಾವಿ. ಯುನೆಸ್ಕೋ ಜಾಗತಿಕ ಜಿಯೋಪಾರ್ಕ್ ಸ್ಥಾನಮಾನವನ್ನು ಪಡೆದಿರುವ ಈ ದ್ವೀಪ ಸಮೂಹದ ನಡುವೆ ತಂಜುಂಗ್ ರು ಬೀಚ್‌ ಇದ್ದು, ಇಲ್ಲಿನ ಕಿಲಿಮ್ ಜಿಯೋಪಾರ್ಕ್ ಮ್ಯಾಂಗ್ರೋವ್‌ಗಳು ಜಗತ್ತಿನಾದ್ಯಂತ ಹೆಸರು ಮಾಡಿದೆ. ಮ್ಯಾಂಗ್ರೋವ್‌ಗಳಿಗೆ ಹೊಂದಿಕೊಂಡಂತೆ ನಿರ್ಮಿಸಲಾದ ಪರಿಸರ ಸ್ನೇಹಿ ವಾಸ್ತವ್ಯ ಈ ʻಕೋಕೋನೆಸ್ಟ್ ಫ್ಲೋಟಿಂಗ್‌ ಏರ್‌ಬಿಎನ್‌ಬಿʼ. ತೇಲುವ ತೆಂಗಿನಕಾಯಿ ಸಿಪ್ಪೆಯಿಂದ ಪ್ರೇರಿತವಾದ ಈ ರೆಸಾರ್ಟ್‌ ಪರಿಸರದ ನಡುವೆ ಕಾಲಕಳೆಯಲು ಸೂಕ್ತವಾದ ಜಾಗ. ‌

Untitled design (8)

ದ್ವೀಪದ ನಡುವೆ ತೇಲುವ ಮನೆಗಳು

ʻಕೋಕೋನೆಸ್ಟ್‌ʼ ಎಂಬ ಹೆಸರೇ ಅದರ ರೂಪವನ್ನು ವಿವರಿಸುತ್ತದೆ. ಇದು ತೆಂಗಿನಕಾಯಿ ಆಕಾರದಲ್ಲಿ ವಿನ್ಯಾಸಗೊಂಡಿರುವ ತೇಲುವ ಮನೆಗಳಿವು. ಹೊರಗೆ ತಿಳಿನೀಲ ಬಣ್ಣದ ಸಮುದ್ರ, ಹಚ್ಚ ಹಸಿರಿನ ಮ್ಯಾಂಗ್ರೋವ್ ಕಾಡುಗಳ ಸುಂದರ ಚಿತ್ರಣವಿದ್ದರೆ, ಒಳಗೆ ಆರಾಮದಾಯಕ ವಾಸ್ತವ್ಯವು ಹೊಸ ಅನುಭವಗಳನ್ನು ಕಟ್ಟಿಕೊಡುತ್ತವೆ. ಪರಿಸರದ ದೃಷ್ಟಿಯಿಂದ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುವ ಮಾಂಗ್ರೋವ್‌ ಕಾಡುಗಳು ಸಮುದ್ರ ಅಲೆಗಳ ಪ್ರಭಾವವನ್ನು ಕಡಿಮೆ ಮಾಡುತ್ತವೆ, ಕರಾವಳಿ ಪ್ರದೇಶವನ್ನು ರಕ್ಷಿಸುತ್ತವೆ ಹಾಗೂ ಹಲವು ಜೀವಿಗಳ ಆಶ್ರಯವಾಗಿವೆ. ʻಕೋಕೋನೆಸ್ಟ್‌ʼ ಈ ನೈಸರ್ಗಿಕ ವ್ಯವಸ್ಥೆಗೆ ಹಾನಿ ಮಾಡದೆ, ಅದರೊಂದಿಗೆ ಹೊಂದಾಣಿಕೆಯಿಂದ ತೇಲುವಂತೆ ವಿನ್ಯಾಸಗೊಳಿಸಲಾಗಿದೆ.

ಪರಿಸರ ಸ್ನೇಹಿ ವಸ್ತುಗಳಿಂದ ನಿರ್ಮಿತವಾಗಿರುವ ಈ ವಾಸ್ತವ್ಯದಲ್ಲಿ ಅತಿಥಿಗಳಿಗಾಗಿ ವಿಶೇಷ ಸೌಕರ್ಯಗಳನ್ನು ಮಾಡಲಾಗಿದೆ. ಸುಸಜ್ಜಿತವಾದ ಕೋಣೆಗಳು,ಸಾಂಪ್ರದಾಯಿಕ ಕಲೆಗಳನ್ನು ಪ್ರತಿಬಿಂಬಿಸುವ ಚಿತ್ತಾರಗಳು, ಕಲಾಕೃತಿಗಳು ಎಂಥವರನ್ನೇ ಮರುಳಾಗಿಸುತ್ತವೆ. ಇನ್ನು ಸೌರಶಕ್ತಿ ಬಳಕೆ, ಮಳೆನೀರು ಸಂಗ್ರಹಣೆ ಮತ್ತು ತ್ಯಾಜ್ಯ ನಿರ್ವಹಣೆ ವ್ಯವಸ್ಥೆಗಳನ್ನು ಇಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ.

Untitled design (9)

ʻಕೋಕೋನೆಸ್ಟ್‌ʼ ರೂವಾರಿಗಳು

ಮಲೇಷಿಯಾ ಮೂಲದವರೇ ಆದ ಹಕೀಂ ಹಾಗೂ ರೀನಾ ದಂಪತಿ ಈ ವಿಭಿನ್ನ ವಾಸ್ತವ್ಯದ ಕನಸನ್ನು ನನಸಾಗಿಸಿದವರು. ವಾಸ್ತುಶಿಲ್ಪದ ಹಿನ್ನೆಲೆಯವರಾದ ಹಕೀಂ ಹಾಗೂ ʻH2Ocean Resourcesʼ ಎಂಬ ವಾಟರ್‌ಸ್ಪೋರ್ಟ್ಸ್‌ ಕಂಪೆನಿ ನಡೆಸುತ್ತಿದ್ದ ರೀನಾ ಜತೆ ಸೇರಿ ಇಂಥದ್ದೊಂದು ವಿಭಿನ್ನ ಪರಿಕಲ್ಪನೆಗೆ ರೂಪ ನೀಡಿದರು.

ಅಷ್ಟಕ್ಕೂ ಈ ಯೋಜನೆ ಹುಟ್ಟಿಕೊಂಡಿದ್ದು ಹೇಗೆ ಗೊತ್ತಾ? ಏರ್‌ಬಿಎನ್‌ಬಿ ಸಂಸ್ಥೆಯ 2022 ರಲ್ಲಿ ಪ್ರಾರಂಭಸಿದ್ದ OMG! Fund ಎಂಬ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಈ ದಂಪತಿ ತಮ್ಮ ಯೋಜನೆಯ ರೂಪುರೇಷೆಯನ್ನು ಪ್ರಸ್ತುತಪಡಿಸಿದ್ದರು. 500ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ 100 ವಿಜೇತರ ಪೈಕಿ ಆಯ್ಕೆಯಾಗಿದ್ದ ಈ ಜೋಡಿಗೆ ಸಂಸ್ಥೆಯೇ ಆರ್ಥಿಕ ಸಹಾಯ ನೀಡಿ ಪ್ರೋತ್ಸಾಹಿಸಿತ್ತು.

ಒಟ್ಟಿನಲ್ಲಿ, ಮ್ಯಾಂಗ್ರೋವ್ ಕಾಡಿನ ನಡುವೆ ತೇಲುವ ʻಕೋಕೋನೆಸ್ಟ್‌ʼ ಪ್ರಕೃತಿ ಮತ್ತು ಮಾನವನ ಸೃಜನಶೀಲತೆಯ ಸಂಗಮವಾಗಿದೆ. ಇದು ಕೇವಲ ವಾಸಸ್ಥಳವಷ್ಟೇ ಅಲ್ಲದೆ ಪ್ರಕೃತಿಯೊಂದಿಗೆ ಹೊಂದಾಣಿಕೆ ಸಾಧಿಸುವ ಜೀವನಶೈಲಿಯ ಸಂಕೇತವೆನಿಸಿದೆ.

ಮಾಂಗ್ರೋವ್‌ ಕಾಡುಗಳ ಸಮೀಪದಲ್ಲಿಯೇ ಈ ಶೆಲ್‌ ಸ್ಟೇಗಳು ನಿರ್ಮಾಣಗೊಂಡಿದ್ದು, ಸೀಸನ್‌ಗೆ ತಕ್ಕಂತೆ ಇದರ ದರದಲ್ಲಿ ಏರಿಳಿತ ಕಾಣಲಿದೆ. ಇಲ್ಲಿ ಉಳಿದುಕೊಳ್ಳಲು ಒಂದು ರಾತ್ರಿಗೆ ಅಂದಾಜು 15,000 ರು. ಭರಿಸಬೇಕಾಗುತ್ತದೆ. ಉಪಾಹಾರ, ದೋಣಿ ವಿಹಾರ, ವೈಪೈ, ಎಸಿ ಸೇರಿದಂತೆ ಅನೇಕ ಸವಲತ್ತುಗಳು ಅತಿಥಿಗಳಿಗೆ ಉಚಿತವಾಗಿ ಸಿಗಲಿದೆ. ಆದರೆ ನೀರಿನಲ್ಲಿಯೇ ತೇಲುವ ಅನುಭವ ಕಷ್ಟವೆನ್ನುವವರಿಗಿದು ಸೂಕ್ತ ತಾಣವಲ್ಲ.

ಸಾಮಾನ್ಯ ಹೊಟೇಲ್ ಅಥವಾ ರೆಸಾರ್ಟ್‌ಗಳಿಂದ ವಿಭಿನ್ನವಾಗಿ, ಕೋಕೋನೆಸ್ಟ್ ನಿರ್ಮಿಸಿದ್ದೇವೆ. ಪ್ರಕೃತಿಯ ಮಧ್ಯೆ ಏಕಾಂತವಾಗಿ ಕಾಲಕಳೆಯಲು, ವಿಶಿಷ್ಟ ಅನುಭವ ಪಡೆಯಲು ಬಯಸುವವರಿಗಾಗಿ ನಿರ್ಮಿಸಲಾದ ಹೊಸ ತಲೆಮಾರಿನ ಪ್ರವಾಸಿ ತಾಣವಿದು. ಸಮುದ್ರದ ನಡುವೆ ತೇಲುವ ಈ ತೆಂಗಿನಕಾಯಿಯಂತಿರುವ ವಾಸ್ತವ್ಯ ಕೇಂದ್ರಗಳಿಗೆ ದೇಶವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇಲ್ಲಿನ ಹಿತವಾದ ನೆನಪುಗಳ ಜತೆಗೆ ತಮ್ಮ ಊರುಗಳಿಗೆ ಮರಳುತ್ತಾರೆಂಬುದು ಖುಷಿಯ ವಿಚಾರ.
- ಹಕೀಂ ಹಾಗೂ ರೀನಾ ದಂಪತಿ, ಮಾಲೀಕರು, ಕೋಕೋನೆಸ್ಟ್

ವಿಳಾಸ:

ಜಲನ್ ತಂಜುಂಗ್ ರು, 07000 ಲಂಕಾವಿ, ಕೆಡಾ, ಮಲೇಶಿಯಾ

ಫೋನ್: +60 17-403 7193