ಕೌತುಕದ ಕಣಜ ‘ಗಿರಿ ಗಿರಿ ಪಾತ್ತರ್’
ಒಂದು ಕಾಲದಲ್ಲಿ ಸ್ಥಳಿಯರಿಂದ ಗಿರಿ ಗಿರಿ ಪಾತ್ತರ್ನಲ್ಲಿ ಯಾರು ಅತ್ಯಾಚಾರ ಮಾಡಿರುತ್ತಾರೋ, ಯಾರು ಸುಲಿಗೆ, ವಂಚನೆ, ಕೊಲೆ, ದರೋಡೆ ಮಾಡಿರುತ್ತಾರೋ ಅಂಥವರನ್ನು ಕಣ್ಣಿಗೆ ಬಟ್ಟೆಕಟ್ಟಿ ಈ ಗಿರಿ ಗಿರಿ ಪಾತ್ತರ್ನಲ್ಲಿ ಒಗೆದು ಕಾಳಿನದಿಯ ಮೊಸಳೆಗಳಿಗೆ ಆಹಾರವಾಗಲೆಂದು ಹಾರೈಸುತ್ತಿದ್ದರು. ಆಗ ಆ ಸ್ಥಳವನ್ನು ‘ಬಂದಿ ಬಾಂದ್’ ಎಂದು ಕರೆಯುತ್ತಿದ್ದರು ಎನ್ನಲಾಗಿದೆ. ಅದರಲ್ಲಿ ಒಗೆಯಲ್ಪಟ್ಟವರು ಗಿರಿ ಗಿರಿ ತಿರುಗುತ್ತ ಮೇಲೆ ಬಂದದ್ದನ್ನು ನೋಡಿ ಒಗೆದವರೇ ಹೌಹಾರಿದರಂತೆ.
- ಬೀರಣ್ಣ ನಾಯಕ ಮೊಗಟಾ
ಉತ್ತರ ಕನ್ನಡ ಜಿಲ್ಲೆ ನಿಸರ್ಗದ ಕೊಡುಗೆ. ಈ ಜಿಲ್ಲೆಯ ಹತ್ತು ಹಲವು ನಿಸರ್ಗ ರಮಣೀಯ ತಾಣಗಳು ಕೌತುಕದ ಕಣಜಗಳೂ ಹೌದು. ಜಿಲ್ಲೆಯ ಯಲ್ಲಾಪುರ ತಾಲೂಕಿನ ಗೊಂಡಾರಣ್ಯದಲ್ಲಿರುವ ‘ಗಿರಿ ಗಿರಿ ಪಾತ್ತರ್’ ಇವುಗಳಲ್ಲಿ ಹೆಚ್ಚು ಕೌತುಕ ಮೂಡುವ ತಾಣವಾಗಿದೆ. ಗಿರಿ ಗಿರಿ ಪಾತ್ತರಿನ ಹತ್ತಿರದವರಾದ ಅರುಣ ಭಟ್ಟ, ಗುಡ್ಡೆ ಅಲ್ಲಿಯ ಚಿತ್ರ ತೋರಿಸಿದ ನಂತರ, ಲೇಖಕ ಅಚ್ಚುತ ಕುಮಾರ ಹಾಗೂ ರವಿ ಕೈಟಕರ ಗಿರಿ ಗಿರಿ ಪಾತ್ತರಿನ ಬಗ್ಗೆ ವಿವರಿಸುತ್ತಿದ್ದರು. ಇದರಿಂದ ನನಗೂ ಅಲ್ಲಿಗೆ ಹೋಗುವ ಕೌತುಕ ಹೆಚ್ಚಾಯಿತು. ಯಲ್ಲಾಪುರ ನಗರದಿಂದ ಸುಮಾರು 22 ಕಿಮೀ ದೂರದಲ್ಲಿ ಕಣ್ಣಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಗಿರಿ ಗಿರಿ ಪಾತ್ತರ್ ಇದೆ. ಇದು ವಿಜ್ಞಾನಕ್ಕೆ ಸವಾಲಾಗಿ ನಿಂತಿರುವ ಸುಂದರ ಹಾಗೂ ಅಷ್ಟೇ ಅಪಾಯಕಾರಿ ತಾಣ. ಸುಮಾರು 300 ಅಡಿ ಆಳದಲ್ಲಿ ಕಾಳಿ ನದಿಯ ಕಣಿವೆಗೆ ಹೊಂದಿಕೊಂಡಿರುವ ಈ ಗಿರಿ ಗಿರಿ ಪಾತ್ತರಿನಲ್ಲಿ ಯಾವುದೇ ವಸ್ತುವನ್ನು ಒಗೆದರೂ ಅದು ಆಳ ಸೇರದೆ ಮತ್ತೆ ಶರ ವೇಗದಲ್ಲಿ ಮೇಲೆ ಬರುವುದು ಇಲ್ಲಿನ ವಿಶೇಷ ಆಕರ್ಷಣೆ. ನಾವು ಗಿರಿ ಗಿರಿ ಪಾತ್ತರಿನಲ್ಲಿ ತೂರಿದ ವಸ್ತುಗಳು ಗಾಳಿಯ ವೇಗಕ್ಕೆ ಮರಳಿ ಬರುತ್ತವೆ. ಪ್ರಕೃತಿ ಸೌಂದರ್ಯದ ಸಹ್ಯಾದ್ರಿ ಸಾಲುಗಳ ಮಡಿಲಿನಲ್ಲಿ ಹಾಗೂ ಕಾಳಿ ನದಿಯ ಕಣಿವೆಗೆ ಹೊಂದಿಕೊಂಡಿರುವ ಈ ತಾಣ ನಿಜಕ್ಕೂ ಪ್ರವಾಸಿಗರ ಸ್ವರ್ಗ.

ಈ ತಾಣದ ಬಗ್ಗೆ ಅನೇಕ ದಂತ ಕಥೆಗಳಿದ್ದು, ಅರುಣ ಭಟ್ಟ ಗುಡ್ಡೆ ಹಾಗೂ ಅಚ್ಚುತಕುಮಾರ ಅವರು ನನಗೆ ಸ್ವಾರಸ್ಯವಾಗಿ ವಿವರಿಸಿದರು. ಒಂದು ಕಾಲದಲ್ಲಿ ಸ್ಥಳಿಯರಿಂದ ಗಿರಿ ಗಿರಿ ಪಾತ್ತರಿನಲ್ಲಿ ಯಾರು ಅತ್ಯಾಚಾರ ಮಾಡಿರುತ್ತಾರೋ, ಯಾರು ಸುಲಿಗೆ, ವಂಚನೆ, ಕೊಲೆ, ದರೋಡೆ ಮಾಡಿರುತ್ತಾರೋ ಅಂಥವರನ್ನು ಕಣ್ಣಿಗೆ ಬಟ್ಟೆಕಟ್ಟಿ ಈ ಗಿರಿ ಗಿರಿ ಪಾತ್ತರಿನಲ್ಲಿ ಒಗೆದು ಕಾಳಿನದಿಯ ಮೊಸಳೆಗಳಿಗೆ ಆಹಾರವಾಗಲೆಂದು ಹಾರೈಸುತ್ತಿದ್ದರು. ಆಗ ಆ ಸ್ಥಳವನ್ನು ‘ಬಂದಿ ಬಾಂದ್’ ಎಂದು ಕರೆಯುತ್ತಿದ್ದರು ಎನ್ನಲಾಗಿದೆ. ಅದರಲ್ಲಿ ಒಗೆಯಲ್ಪಟ್ಟವರು ಗಿರಿ ಗಿರಿ ತಿರುಗುತ್ತ ಮೇಲೆ ಬಂದದ್ದನ್ನು ನೋಡಿ ಒಗೆದವರೇ ಹೌಹಾರಿದರಂತೆ. ಬ್ರಿಟಿಷ್ ಅಧಿಕಾರಿಯೊಬ್ಬ ಗಿರಿ ಗಿರಿ ಪಾತ್ತರಿನಿಂದ ಕಾಳಿ ಕಣಿವೆ ವೀಕ್ಷಿಸುತ್ತಿದ್ದಾಗ ಅವರ ತಲೆಯ ಮೇಲಿನ ಟೋಪಿ ಗಿರಿ ಗಿರಿ ಪಾತ್ತರಿನಲ್ಲಿ ಬಿದ್ದಿತು. ನಂತರ ಅಷ್ಟೇ ವೇಗದಲ್ಲಿ ಮರಳಿ ಅಧಿಕಾರಿಯ ತಲೆಯ ಮೇಲೆ ಕುಳಿತಿತು ಎನ್ನಾಗಿದೆ.
ಯಲ್ಲಾಪುರ ನಗರದಿಂದ ಕೊಡಸೆ ಮಾರ್ಗವಾಗಿ ಗೋಟ್ಗುಳಿ ದೇವಸ್ಥಾನಕ್ಕೆ ಬಂದು, ಅಲ್ಲಿಂದ ಕಾಲನಡಿಗೆಯಲ್ಲಿ 3 ಕಿಮೀ ಸಾಗಿದರೆ ಗಿರಿ ಗಿರಿ ಪಾತ್ತರ್ ತಲುಪಬಹುದು. ಇದಕ್ಕೆ ನಿರ್ದಿಷ್ಟವಾದ ರಸ್ತೆ ಇಲ್ಲ. ಹಾಗಾಗಿ ಮಾರ್ಗ ತಿಳಿದಿರುವ ಸ್ಥಳಿಯರನ್ನೇ ಕರೆದುಯ್ಯಬೇಕು. ಆನೆ, ಕರಡಿ, ಚಿರತೆ ಮುಂತಾದ ಪ್ರಾಣಿಗಳು ಮತ್ತು ಉಂಬಳಗಳ ಕುರಿತು ಎಚ್ಚರದಿಂದ ಇರುವುದು ಉತ್ತಮ.
ಇದನ್ನೂ ಓದಿ: ಯಾನಕ್ಕೊಂದು ಸುಂದರ ತಾಣ ಯಾಣ
ಈ ಗಿರಿ ಗಿರಿ ಪಾತ್ತರ್ ಹತ್ತಿರವೇ ‘ಬಿಸ್ಕಿ ಪತ್ತರ’ ಹಾಗೂ ಹನುಮಂತ ಕೋಟೆ ಇದೆ. ಸರಿಯಾದ ರಸ್ತೆ, ರಕ್ಷಣಾ ಗೋಡೆ, ಸರಿಯಾದ ಕಾಲುದಾರಿ ನಿರ್ಮಿಸಿದರೆ ಈ ಗಿರಿ ಗಿರಿ ಪಾತ್ತರ್ ತಾಣ ಅದ್ಭುತ ಪ್ರವಾಸಿ ತಾಣವಾಗಿ ಮೈದಳೆಯುತ್ತದೆ.