ವಿಮಾನ ಹತ್ತಿದಾಕ್ಷಣ ಕೆಲವರಿಗೆ ತಾವು ಪ್ರಯಾಣಿಕರಲ್ಲ, ಯಾವುದೋ ಪ್ರೇಮಕಥೆಯ ನಾಯಕರು ಎಂಬ ಭ್ರಮೆ ಶುರುವಾಗುತ್ತದೆ! ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಪಾಸ್ ಕೈಗೆ ಸಿಕ್ಕಿದ್ದೇ ತಡ, ಇವರು ಮೊದಲು ಹುಡುಕುವುದು ತಮ್ಮ ಸೀಟನ್ನಲ್ಲ… ಗಗನಸಖಿಯ ಮುಖವನ್ನು! ಆಕೆ ಗುಡ್ ಮಾರ್ನಿಂಗ್ ಅಂದರೆ ಸಾಕು. ಈತನ ಮನಸಿನಲ್ಲಿ ತಕ್ಷಣವೇ ಹಿನ್ನೆಲೆ ಸಂಗೀತ ಶುರು. ಇರೋ ನೂರೆಂಬತ್ತು ಮಂದಿಗೂ ಗುಡ್ ಮಾರ್ನಿಂಗ್ ಹೇಳಿರ್ತಾಳೆ. ಈತ ಮಾತ್ರ ತನಗೆ ಮಾತ್ರ ಹೇಳಿದ್ದಾಳೆ, ಆಕೆಗೆ ಲವ್ ಅಟ್ ಫಸ್ಟ್ ಸೈಟ್ ಆಗೋಯ್ತು ಅನ್ನೋ ರೇಂಜಿಗೆ ಭ್ರಮೆಗೆ ಜಾರುತ್ತಾನೆ.

ಇದನ್ನೂ ಓದಿ: ಆದಾಯ ಹೆಚ್ಚಳಕ್ಕೆ ಬೆಲೆ ಏರಿಕೆಯೊಂದೇ ದಾರಿಯೇ?

ಕೆಲ ಪ್ರಯಾಣಿಕರ ಕಲ್ಪನಾಶಕ್ತಿ ಅಷ್ಟು ವೇಗವಾಗಿ ಹಾರುತ್ತದೆ ಎಂದರೆ, ವಿಮಾನವೇ ಇನ್ನೂ ರನ್‌ವೇ ಬಿಟ್ಟಿರುವುದಿಲ್ಲ; ಇವರ ಮನಸು ಮಾತ್ರ ಪ್ರೇಮದ ಮೋಡಗಳ ಮೇಲೆ ಹಾರುತ್ತಿರುತ್ತದೆ. ಸುಖಾಸುಮ್ಮನೆ ಗಗನಸಖಿಯನ್ನು ಮಾತಿಗೆಳೆಯಲು ಪ್ರಯತ್ನಿಸುತ್ತಾರೆ. ಮೇಡಂ, ಈ ಸೀಟ್ ತುಂಬಾ ಕಂಫರ್ಟೇಬಲ್ ಇದೆ. ನಿಮ್ಮ ಹೆಸರೇನು, ಹೀಗೆ ಕೇಳುತ್ತಾ ಗ್ಯಾಪಲ್ಲಿ ನೀವು ತುಂಬಾ ಚೆನ್ನಾಗಿದೀರ ಎಂಬ ಡೈಲಾಗೂ ಹೊಡೆದುಬಿಡುತ್ತಾರೆ. ಇವನು ಹೇಳಿ ಆಕೆಗೆ ಗೊತ್ತಾಗಬೇಕಿದೆ ನೋಡಿ. ಇನ್ನು ಆಕೆಯ ಹೆಸರು ಗೊತ್ತಾಗ್ತಾ ಇದ್ದ ಹಾಗೇ ಮುಂದಿನ ಸಲ ಇದೇ ಫ್ಲೈಟ್‌ನಲ್ಲಿ ಬುಕ್ ಮಾಡಬೇಕು ಅಂತ ಕನಸು ಕಾಣೋಕೆ ಶುರು. ಪೋನ್ ನಂಬರ್, ಇನ್‌ಸ್ಟಾಗ್ರಾಂ ಐಡಿ ಕೇಳುವ ವರೆಗೆ ಹೋಗಿಬಿಡ್ತಾನೆ. ವಿಮಾನವನ್ನು ಇವರು ಡೇಟಿಂಗ್ ಅಪ್ಲಿಕೇಶನ್ ಅಂದ್ಕೊಂಡಿರ್ತಾರಾ? ವಿಮಾನದಲ್ಲಿ ಗಗನಸಖಿಯರು ಇರುವುದು ಪ್ರಯಾಣಿಕರ ಸುರಕ್ಷತೆ, ಸೇವೆ, ಆತಿಥ್ಯಕ್ಕಾಗಿ. ಆದರೆ ಕೆಲವರಿಗೆ ಅದು ಅರ್ಥವಾಗುವುದೇ ಇಲ್ಲ. ಕೆಲವರು ಪದೇಪದೆ ನೀರು ಕೇಳೋ ನೆಪದಲ್ಲಿ ಗಗನಸಖಿಯನ್ನು ಕರೆಯುವ ತಂತ್ರ ಬಳಸುತ್ತಾರೆ. ಗಗನಸಖಿಗೆ ಗೊತ್ತಾಗೋದಿಲ್ವಾ? ಈತನಿಗೆ ನೀರಿನ ದಾಹಕ್ಕಿಂತ ಬೇರೆ ದಾಹ ಜಾಸ್ತಿ ಇದೆ ಅಂತ! ಇನ್ನು, ವಿಮಾನದಲ್ಲಿ ಗಗನಸಖಿಯೊಬ್ಬರು ತಮ್ಮ ಕಡೆ ನೋಡಿದರು ಅಂದರೆ ಅದಕ್ಕೆ ಸಾವಿರ ಅರ್ಥ ಹುಡುಕುವವರಿದ್ದಾರೆ.

Untitled design (45)

ಸೀಟ್‌ಬೆಲ್ಟ್ ಹಾಕಿದಾರಾ, ಪ್ರಯಾಣಿಕರಿಗೆ ಏನಾದರೂ ಅಗತ್ಯವಿದೆಯಾ ಎಂಬುದು ಅವಳ ಕಾಳಜಿಯಾಗಿರುತ್ತದೆ.

ಆದರೆ ಇವ್ರು ಸೀದಾ ಡ್ಯುಯೆಟ್ ಹಾಡಲು ರೆಡಿ ಆಗಿರ್ತಾರೆ. ಕೆಲವರು ಗಗನಸಖಿಗಾಗಿಯೇ ಅದೇ ವಿಮಾನ ಹುಡುಕಿ ಹೋಗುವ ಸಿರಿವಂತ ಜೊಲ್ಲುಪಾರ್ಟಿಗಳಿದ್ದಾರೆ. ಚಾಕೊಲೆಟ್, ಗಿಫ್ಟ್ ಹೊತ್ತು ಒಯ್ಯುವವರು. ಇಂಥವರು ಗಗನಸಖಿಯ ಕೆಲಸಕ್ಕೇ ಸಂಚಕಾರ ತಂದರೂ ಅಚ್ಚರಿ ಇಲ್ಲ. ಗಗನಸಖಿಯರೊಂದಿಗೆ ಸ್ನೇಹದಿಂದ ಮಾತನಾಡುವುದರಲ್ಲಿ ತಪ್ಪೇನಿಲ್ಲ. ಮಾತನಾಡಿ. ನಗಿ. ಧನ್ಯವಾದ ಹೇಳಿ. ಅವರ ಸೇವೆಯನ್ನು ಗೌರವಿಸಿ.

ಆದರೆ ವೃತ್ತಿಪರ ನಗುವನ್ನು ವೈಯಕ್ತಿಕ ಆಹ್ವಾನವೆಂದು, ಸೌಜನ್ಯದ ಮಾತನ್ನು ಪ್ರೇಮದ ಸಂಕೇತವೆಂದು, ಸೇವೆಯನ್ನು ಸಲುಗೆಯೆಂದು ಭಾವಿಸುವುದು ಮಾತ್ರ ಅತಿರೇಕದ ಪರಮಾವಧಿ! ಗಗನಸಖಿ ನಮ್ಮೊಂದಿಗೆ ನಗುತ್ತಾ ಮಾತನಾಡುವುದು ಅವರ ವೃತ್ತಿಪರ ಸೌಜನ್ಯ. ಅವರು ನಮ್ಮ ಸೀಟಿಗೆ ಬಂದು ವಿಚಾರಿಸುವುದು ಅವರ ಕರ್ತವ್ಯ.

ನೀರು ಕೊಡುವುದು ಸೇವೆ. ಸುರಕ್ಷತೆ ನೋಡಿಕೊಳ್ಳುವುದು ಜವಾಬ್ದಾರಿ. ಇವೆಲ್ಲವನ್ನೂ ಸೇರಿಸಿ ಅವಳಿಗೆ ನನ್ನ ಮೇಲೆ ಏನೋ ಫೀಲಿಂಗ್ಸ್ ಇದೆ ಎಂದು ನಿರ್ಧರಿಸಿಕೊಂಡರೆ ಅದನ್ನು ಮೂರ್ಖತನ ಅಥವಾ ಹುಚ್ಚು ಅನ್ನುತ್ತಾರೆ. ಆಕಾಶದಲ್ಲಿ ಹೋಗುವಾಗ ವಿಮಾನ ಚಿಕ್ಕದಾಗಿ ಕಾಣುವುದು ಓಕೆ. ವಿಮಾನದಲ್ಲಿರುವವರು ವ್ಯಕ್ತಿತ್ವದಿಂದ ಚಿಕ್ಕವರಾಗುವುದು ಬೇಡ.