ರಾಜ ಇಂದ್ರದ್ಯುಮ್ನನು ಒಬ್ಬ ಧರ್ಮನಿಷ್ಠ ಮತ್ತು ಪ್ರಭಾವಶಾಲಿ ಆಡಳಿತಗಾರನಾಗಿದ್ದವನು. ಅವನು ಭಗವಾನ್ ವಿಷ್ಣುವಿನ ಪರಮ ಭಕ್ತನಾಗಿದ್ದ. ತನ್ನ ಜೀವನದಲ್ಲಿ ಅನೇಕ ಯಜ್ಞಗಳು, ದಾನ-ಧರ್ಮಗಳು ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ಶ್ರದ್ಧೆಯಿಂದ ಮಾಡುತ್ತಿದ್ದ. ಇಷ್ಟೆಲ್ಲಾ ಪುಣ್ಯಕಾರ್ಯಗಳನ್ನು ಮಾಡಿದ ಹೊರತಾಗಿಯೂ, ಅವನ ಮನಸ್ಸಿನಲ್ಲಿ ಇನ್ನೂ ಹೆಚ್ಚಿನ ಆಧ್ಯಾತ್ಮಿಕ ಸತ್ಯವನ್ನು ಅನುಭವಿಸಬೇಕೆಂಬ ಹಂಬಲ ಉಂಟಾಯಿತು. ಕೇವಲ ಧಾರ್ಮಿಕ ವಿಧಿಗಳು ಸಾಕಾಗುವುದಿಲ್ಲ ಎಂದು ಅವನಿಗೆ ಅನಿಸಿತು. ಭಗವಂತನ ಸಾಕ್ಷಾತ್ಕಾರವನ್ನು ನೇರವಾಗಿ ಪಡೆಯಬಹುದಾದ ಯಾವುದೋ ಒಂದು ಪರಮ ಪವಿತ್ರ ಕ್ಷೇತ್ರ ಈ ಭೂಮಿಯ ಮೇಲೆ ಇರಲೇಬೇಕು ಎಂದು ಅವನೊಳಗೆ ಗಾಢವಾದ ಯೋಚನೆ ಶುರುವಾಯಿತು. ಈ ಹಂಬಲದೊಂದಿಗೆ, ಅವನು ಋಷಿಮುನಿಗಳು ಮತ್ತು ಪುರೋಹಿತರೊಂದಿಗೆ ಅಂಥ ಪವಿತ್ರ ಕ್ಷೇತ್ರವನ್ನು ಹುಡುಕುತ್ತಾ ಯಾತ್ರೆಗೆ ಹೊರಟನು.

ಇದನ್ನೂ ಓದಿ: ಗುರುದಕ್ಷಿಣೆ ತರಲು ಹೊರಟ ಉತ್ತಂಕನ ಪಯಣ

ಸಾಮಾನ್ಯವಾಗಿ ವಯಸ್ಸಾದ ಮೇಲೆ ತೀರ್ಥಯಾತ್ರೆಗೆ ಹೋಗುವುದು ಎಂಬ ರೂಢಿಯಿದೆ. ಆದರೆ, ಅದನ್ನೂ ಅಷ್ಟಕ್ಕೇ ಸೀಮಿತಗೊಳಿಸುವ ಅಗತ್ಯವಿಲ್ಲ. ಯಾವಾಗ ಮನಸು ಹಗುರವಾಗಬೇಕೋ ಆಗೆಲ್ಲ ಒಂದು ಪ್ರಯಾಣ ಕೈಗೊಳ್ಳಬಹುದು. ಭಾರತದ ಶ್ರೇಷ್ಠತೆ ಎಂದರೆ ಹೋದ ಜಾಗಗಳೆಲ್ಲವೂ ತೀರ್ಥಕ್ಷೇತ್ರವೇ ಆಗಿರುತ್ತದೆ.

ತನ್ನ ಪ್ರಯಾಣದ ಸಂದರ್ಭದಲ್ಲಿ, ರಾಜನು ಅಸಾಧಾರಣ ಸೌಂದರ್ಯ ಮತ್ತು ಆಧ್ಯಾತ್ಮಿಕ ಕಂಪನಗಳಿಂದ ಕೂಡಿದ ಒಂದು ಪ್ರದೇಶಕ್ಕೆ ಬಂದನು. ಆ ಪ್ರದೇಶವೇ ಪುರಿ. ಅಲ್ಲಿನ ವಾತಾವರಣವೇ ಪವಿತ್ರತೆಯಿಂದ ತುಂಬಿತ್ತು. ಗಾಳಿಯು ಶಾಂತವಾಗಿತ್ತು. ಪರಿಸರವು ಪ್ರಶಾಂತವಾಗಿತ್ತು ಮತ್ತು ಆ ದೇಶವು ದೈವಿಕ ಶಕ್ತಿಯಿಂದ ಆಶೀರ್ವದಿಸಲ್ಪಟ್ಟಂತೆ ಕಾಣುತ್ತಿತ್ತು. ನದಿಗಳು ನಾದಮಯವಾಗಿ ಹರಿಯುತ್ತಿದ್ದವು, ಪವಿತ್ರ ವೃಕ್ಷಗಳು ಭವ್ಯವಾಗಿ ನಿಂತಿದ್ದವು ಮತ್ತು ಧ್ಯಾನದಲ್ಲಿ ಮಗ್ನರಾಗಿದ್ದ ತಪಸ್ವಿಗಳ ಉಪಸ್ಥಿತಿಯು ಆ ಸ್ಥಳದ ಪಾವಿತ್ರ್ಯತೆಯನ್ನು ಹೆಚ್ಚಿಸಿತ್ತು. ಇಂದ್ರದ್ಯುಮ್ನನು ಆ ಪ್ರದೇಶವನ್ನು ಪ್ರವೇಶಿಸಿದ ತಕ್ಷಣ, ಹಿಂದೆಂದೂ ಅನುಭವಿಸದ ಅನಿರ್ವಚನೀಯ ಶಾಂತಿ ಅವನ ಹೃದಯದಲ್ಲಿ ಉಂಟಾಯಿತು.

Untitled design - 2026-05-06T132544.014

ಆ ಸ್ಥಳವನ್ನು ಸೂಕ್ಷ್ಮವಾಗಿ ಗಮನಿಸಿದ ರಾಜನಿಗೆ, ಅಲ್ಲಿ ವಾಸಿಸುವ ಸಾಮಾನ್ಯ ಜನರು ಕೂಡ ಭಕ್ತಿ ಮಾರ್ಗದಲ್ಲಿ ತೊಡಗಿರುವುದು ಕಂಡುಬಂದಿತು. ಅವರು ಪೂಜೆಗಳನ್ನು ಮಾಡುತ್ತಿದ್ದರು, ಪವಿತ್ರ ಮಂತ್ರಗಳನ್ನು ಪಠಿಸುತ್ತಿದ್ದರು. ಶಿಸ್ತುಬದ್ಧ ಜೀವನವನ್ನು ನಡೆಸುತ್ತಿದ್ದರು. ಅವನ ಜತೆಯಲ್ಲಿದ್ದ ಋಷಿಗಳು, ʼಇದು ಸಾಮಾನ್ಯ ನಗರವಲ್ಲ, ಇದು ದೇವತೆಗಳು, ಋಷಿಗಳು ಮತ್ತು ಯುಗಯುಗಗಳಿಂದ ನಡೆದ ಅಸಂಖ್ಯಾತ ತಪಸ್ಸುಗಳಿಂದ ಪವಿತ್ರವಾದ ಮಹಾಕ್ಷೇತ್ರʼ ಎಂದು ವಿವರಿಸಿದರು. ಪುರಿಯು ಬೇರೆಡೆ ಸಿಗುವ ಪುಣ್ಯಕ್ಕಿಂತಲೂ ಹೆಚ್ಚಿನ ಆಧ್ಯಾತ್ಮಿಕ ಫಲವನ್ನು ನೀಡುವ ಸಾಮರ್ಥ್ಯ ಹೊಂದಿದೆ ಎಂದು ಅವರು ರಾಜನಿಗೆ ತಿಳಿಸಿದರು.

ಇದನ್ನು ಕೇಳಿದ ಇಂದ್ರದ್ಯುಮ್ನನು ಭಕ್ತಿಯಿಂದ ಮೈಮರೆತು, ಅಲ್ಲಿಯೇ ಕೆಲವು ಕಾಲ ನೆಲೆಸಲು ನಿರ್ಧರಿಸಿದನು. ಅವನು ಅಲ್ಲಿನ ಪವಿತ್ರ ಜಲದಲ್ಲಿ ಸ್ನಾನ ಮಾಡಿ, ಕಠಿಣ ವ್ರತಗಳನ್ನು ಆಚರಿಸುತ್ತಾ ಭಗವಾನ್ ವಿಷ್ಣುವನ್ನು ಏಕಾಗ್ರತೆಯಿಂದ ಪೂಜಿಸಲು ಪ್ರಾರಂಭಿಸಿದನು. ಯಜ್ಞಗಳನ್ನು ಮಾಡಿದನು, ಉದಾರವಾಗಿ ದಾನ ನೀಡಿದನು ಮತ್ತು ತನ್ನ ದಿನಗಳನ್ನು ಪ್ರಾರ್ಥನೆ ಹಾಗೂ ಧ್ಯಾನದಲ್ಲಿ ಕಳೆದನು. ಆದಾಗ್ಯೂ, ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ, ಅವನು ಹುಡುಕುತ್ತಿದ್ದ ದೈವಿಕ ದರ್ಶನ ಅಥವಾ ಸಾಕ್ಷಾತ್ಕಾರವು ತಕ್ಷಣವೇ ಅವನಿಗೆ ಲಭಿಸಲಿಲ್ಲ.

ಇದು ರಾಜನನ್ನು ಆಳವಾದ ಆತ್ಮಾವಲೋಕನಕ್ಕೆ ಹಚ್ಚಿತು. ʼನನ್ನ ಭಕ್ತಿಯು ನಿಜವಾಗಿಯೂ ಶುದ್ಧವಾಗಿದೆಯೇ? ಅಥವಾ ನನ್ನ ರಾಜವೈಭವ ಮತ್ತು ಹಿಂದಿನ ಪುಣ್ಯಕಾರ್ಯಗಳ ಬಗ್ಗೆ ನನಗಿರುವ ಅಹಂಕಾರವು ನನ್ನ ಭಕ್ತಿಯೊಂದಿಗೆ ಬೆರೆತಿದೆಯೇ?ʼ ಎಂದು ಅವನು ತನ್ನನ್ನೇ ಪ್ರಶ್ನಿಸಿಕೊಳ್ಳತೊಡಗಿದನು. ಆಗ ಋಷಿಗಳು ಅವನಿಗೆ, ʼನಿಜವಾದ ಭಕ್ತಿಗೆ ಸಂಪೂರ್ಣ ಶರಣಾಗತಿ ಮತ್ತು ನಮ್ರತೆ ಅಗತ್ಯʼ ಎಂದು ಬೋಧಿಸಿದರು. ಭಗವಂತನು ಕೇವಲ ವಿಧಿವಿಧಾನಗಳಿಂದ ಅಥವಾ ಬಾಹ್ಯ ಕಾರ್ಯಗಳಿಂದ ಒಲಿಯುವುದಿಲ್ಲ, ಅಹಂಕಾರವಿಲ್ಲದ ಹೃದಯ ಮತ್ತು ಅಂತರಂಗದ ಶುದ್ಧತೆಯಿಂದ ಮಾತ್ರ ಲಭಿಸುತ್ತಾನೆ ಎಂದು ಅವರು ವಿವರಿಸಿದರು.

ಈ ಬೋಧನೆಯನ್ನು ಹೃದಯಕ್ಕೆ ತಂದುಕೊಂಡ ಇಂದ್ರದ್ಯುಮ್ನನು ತನ್ನ ಭಕ್ತಿಯ ಹಾದಿಯನ್ನು ಬದಲಿಸಿಕೊಂಡನು. ಅವನು ತನ್ನೆಲ್ಲಾ ರಾಜಗರ್ವವನ್ನು ತ್ಯಜಿಸಿ, ತನ್ನನ್ನು ತಾನು ಒಬ್ಬ ರಾಜನೆಂದು ನೋಡುವ ಬದಲು ಭಗವಂತನ ಸೇವಕನೆಂದು ಭಾವಿಸಿ ನಮ್ರತೆಯಿಂದ ಪೂಜಿಸಲು ಆರಂಭಿಸಿದನು. ಅವನ ಭಕ್ತಿಯು ಸರಳ, ಪ್ರಾಮಾಣಿಕ ಮತ್ತು ಶರಣಾಗತಿಯಿಂದ ಕೂಡಿತ್ತು. ಅವನು ಆಡಂಬರದ ವಿಧಿಗಳಿಗಿಂತ ದೈವದ ಮೇಲಿನ ತನ್ನ ಪ್ರೀತಿಯ ಆಳಕ್ಕೆ ಹೆಚ್ಚು ಗಮನ ಹರಿಸಿದನು.ಈ ಬದಲಾವಣೆಯಿಂದ ಪ್ರಸನ್ನನಾದ ಭಗವಂತನ ಕೃಪೆ ಅಂತಿಮವಾಗಿ ಅವನ ಮೇಲೆ ಉಂಟಾಯಿತು. ಅವನ ನಿಷ್ಕಲ್ಮಶ ಭಕ್ತಿಗೆ ಮೆಚ್ಚಿದ ಭಗವಂತನು ಅವನಿಗೆ ಆಧ್ಯಾತ್ಮಿಕವಾಗಿ ಆಶೀರ್ವದಿಸಿದನು. ಇಲ್ಲಿ ದೈವಿಕ ದರ್ಶನಕ್ಕಿಂತಲೂ ಅಂತರಂಗದ ಸಾಕ್ಷಾತ್ಕಾರಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ರಾಜನು ಒಂದು ಉನ್ನತ ಆಧ್ಯಾತ್ಮಿಕ ಸ್ಥಿತಿಯನ್ನು ತಲುಪಿದನು ಎಂಬುದು ಸ್ಪಷ್ಟವಾಗುತ್ತದೆ. ಅವನ ಎಲ್ಲಾ ಸಂಶಯಗಳು ಮಾಯವಾದವು, ಮನಸು ಪ್ರಶಾಂತವಾಯಿತು ಮತ್ತು ಭಕ್ತಿಯ ನಿಜವಾದ ಸ್ವರೂಪವನ್ನು ಅವನು ಅರ್ಥಮಾಡಿಕೊಂಡನು.

ಆ ಕ್ಷೇತ್ರದಲ್ಲಿದ್ದ ಕಡಲಿನ ತೀರ್ಥವು ತೀರ್ಥಗಳಲ್ಲೇ ಶ್ರೇಷ್ಠವಾದುದು. ಅಲ್ಲಿ ಸಾಲುಮರ, ಈಚಲು, ಪುನ್ನಾಗ, ಹಲಸು, ತೆಂಗು, ನಾಗಸಂಪಿಗೆ, ಅಶೋಕ, ಕರ್ಣಿಕಾರ, ಬೇಲ ಸೇರಿದಂತೆ ಹಲವು ಹಣ್ಣಿನ ಮರಗಳಿದ್ದವು. ಧೂಪ, ಚಂದನ, ಅರಗು, ನಿಂಬೆ ಸೇರಿದಂತೆ ಮೊದಲಾದ ಗಿಡಮರಗಳೂ ಬಳ್ಳಿಗಳೂ ಫಲಪುಷ್ಪಗಳನ್ನು ಬಿಡುವ ಮಂದಾರ ಕಲ್ಪವೃಷ್ಕಗಳೂ ಅಲ್ಲಿ ಹೇರಳವಾಗಿದ್ದವು. ಪ್ರಾಣಿ ಪಕ್ಷಿಗಳು ಸುಖವಾಗಿ ಬದುಕುತ್ತಿದ್ದವು. ಆ ಕ್ಷೇತ್ರವು ಹತ್ತು ಯೋಜನ ವಿಸ್ತಾರವಾಗಿ ಹಾಗೂ ಐದು ಯೋಜನ ಅಗಲವಾಗಿತ್ತು. ಅದೇ ಜಾಗದಲ್ಲಿ ಇಂದ್ರದ್ಯಮ್ನ ಕೃಷ್ಣ, ಬಲಾರಮ ಹಾಗೂ ಸುಭದ್ರಾದೇವಿಯ ಮೂರ್ತಿಯನ್ನು ಮೂರ್ತಿಯನ್ನು ಸ್ಥಾಪನೆ ಮಾಡಿದನು.

ಭಾರತದ ಪ್ರತಿ ಜಾಗಕ್ಕೂ ಒಂದು ಕಥೆಯಿದೆ. ಭಕ್ತಿಯ ಕಥೆ, ಸಾಧನೆಯ ಕಥೆ, ಕರುಣೆಯ ಕಥೆ, ಸಾಹಸದ ಕಥೆ. ಯಾವುದೇ ಜಾಗವು ಮನಸ್ಸಿನ ಮೇಲೆ ಪ್ರಭಾವ ಬೀರಲು ಅಲ್ಲಿನ ಕಥೆಗಳೇ ಕಾರಣ. ನಂತರ ಆಗುವ ಅನುಭವಗಳು ಬೋನಸ್‌ ಇದ್ದಂತೆ. ಆ ಕಥೆಗಳೆಲ್ಲದರ ಮುಖ್ಯ ಉದ್ದೇಶವೇ ಮನುಷ್ಯನನ್ನು ಇನ್ನಷ್ಟು ವಿನಮ್ರಗೊಳಿಸುವುದು, ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಮಾಡುವುದು. ಅದಕ್ಕಾಗಿಯಾದರೂ ಪ್ರವಾಸ ಹೋಗಿ ಅಲ್ಲಿನ ಕಥೆ ಕೇಳಬೇಕು.