• ಬಡೆಕ್ಕಿಲ ಪ್ರದೀಪ

ಎಲ್ಲೆಡೆ EV ಕಾರುಗಳು ಸದ್ದು ಮಾಡುತ್ತಿವೆ. ಹಾಗೆ ನೋಡಿದರೆ, ಉಳಿದ ಎಲ್ಲ ವಾಹನಗಳಿಗೆ ಹೋಲಿಸಿದರೆ ಅವುಗಳೇ ಅತಿ ಕಡಿಮೆ ಸದ್ದು ಹೊರಡಿಸುವುದು. ಆದರೂ ಹೀಗೆ ನಿಧಾನಕ್ಕೆ ತನ್ನ ಬೆಳವಣಿಗೆಯನ್ನು ತೋರುತ್ತಿರುವ EV ವಾಹನ ಮಾರುಕಟ್ಟೆಯಲ್ಲಿ ಇವುಗಳನ್ನು ದೂರ ಪ್ರಯಾಣಕ್ಕೆ ಹೊರಡಿಸುವುದು ಎಂದರೆ ಅದರಷ್ಟು ದೊಡ್ಡ ರಿಸ್ಕ್‌ ಇನ್ನೊಂದಿಲ್ಲ ಅನ್ನುವುದು ಸದ್ಯದ ಸತ್ಯ.

ಇದನ್ನೂ ಓದಿ: ಟ್ರಾವೆಲ್‌ ಡೀಪ್‌: ಮಾತು ಬೆಳ್ಳಿ, ಟ್ರಾವೆಲ್‌ ಬಂಗಾರ

ಇರುವೆಲ್ಲಾ ಅವಗುಣಗಳನ್ನು ಕಡೆಗಣಿಸಿ ನಾನು ಸುಮಾರು 2300 ಕಿಮೀ. ದೂರದ ದಕ್ಷಿಣ ಭಾರತದ ಪ್ರಯಾಣ ಮಾಡಿ ಬಂದಿದ್ದು, ಯಾವುದೇ ತೊಂದರೆಯನ್ನೇ ಕಾಣದೆ ಮತ್ತೆ ಮನೆ ಸೇರಿದ್ದು ಅಂದರೆ ದೊಡ್ಡ ಸಕ್ಸೆಸ್‌ ಅನ್ನಬಹುದು.
ಇದಕ್ಕಿಂತ ದೂರದ ಪ್ರಯಾಣ ಮಾಡಿದ ಸಾವಿರ ಉದಾಹರಣೆಗಳಿರಬಹುದು. ಆದರೆ, EV ಕಾರಿನ ಪ್ರಯಾಣದ ವಿಷಯಕ್ಕೆ ಬಂದಾಗ ಪ್ರತಿ ಪ್ರಯಾಣವೂ ಯಾವ ರೀತಿಯ ಚ್ಯಾಲೆಂಜ್‌ ನೀಡುತ್ತದೆ ಎನ್ನುವುದನ್ನು ನಾವು ಊಹಿಸಿಕೊಳ್ಳೋದಕ್ಕಾಗುವುದಿಲ್ಲ.
ಕಾಲವನ್ನು ಒಂದಷ್ಟು ದಶಕಗಳ ಹಿಂದಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಆಗ ಯಾವುದೇ ವಾಹನವಾಗಲಿ ದೂರದೂರಿಗೆ ಹೋಗೋದಕ್ಕೆ ಒಂದು ಪ್ಲಾನಿಂಗ್‌ ಇರಬೇಕಿತ್ತು, ಅದೂ ಟೆಕ್ನಾಲಜಿ ಸಹಾಯವಿಲ್ಲದೆ. ಯಾಕೆಂದರೆ ಇಂದು ನಾವು ಕಾಣುವ ಹಾಗೆ ಹೈವೇಗಳಲ್ಲಿ ಗಲ್ಲಿಗಲ್ಲಿಗೊಂದು ಪೆಟ್ರೋಲ್‌ ಪಂಪ್‌ ಇರಲಿಲ್ಲ. ಅದರಲ್ಲೂ ಹಳ್ಳಿಗಾಡಿಗೆ ಪ್ರಯಾಣ ಅಂದರೆ ಇನ್ನೂ ಕಷ್ಟ. ಹಾಗೆ ನೋಡುವುದಾದರೆ ಆಗ ಇಂದಿನ ಹಾಗೆ ಒಳ್ಳೆ ಮಾರ್ಗವಂತೂ ಇರಲೇ ಇಲ್ಲ. ಹಾಗಾಗಿ ಪ್ರಯಾಣ ಸುಖಕರವಾಗಿರುವುದಕ್ಕೆ ಯಾವುದೇ ಗ್ಯಾರಂಟಿ ಇರಲಿಲ್ಲ.
ಈಗ ಹಾಗಲ್ಲವಾದರೂ, ಒಬ್ಬ EV ಕಾರ್‌ ಮಾಲೀಕ ದೂರದೂರಿಗೆ ಪ್ರಯಾಣ ಮಾಡಬೇಕಾದರೆ ತನ್ನ ಕಾರಿನ ರೇಂಜ್‌ ಮೇಲೆ ಪೂರ್ತಿ ನಂಬಿಕೆ ಇಟ್ಟುಕೊಂಡು ಹೋಗುವುದರ ಜತೆಗೆ, ಹೋದ ಊರಿನಲ್ಲಿ ಇರುವ ಚಾರ್ಜಿಂಗ್‌ ವ್ಯವಸ್ಥೆಯಿಂದ ಹಿಡಿದು ಹವಾಮಾನ, ಅಲ್ಲಿ ಕರೆಂಟ್‌ ಇದ್ಯಾ ಇಲ್ವಾ ಅನ್ನೋದರಿಂದ ತೊಡಗಿ ಇನ್ನೂ ಹಲವು ವಿಚಾರಗಳು ತಾಳೆಗೆ ಇಟ್ಟುಕೊಂಡು, ನಮ್ಮ ತಾಳ್ಮೆ ಪರೀಕ್ಷೆಗೆ ತಯಾರಾಗಿಕೊಂಡು ಹೋಗಬೇಕಾಗುತ್ತದೆ.

ಮೊದಲಿಗೆ ಒಂದಷ್ಟು ಒಳ್ಳೆ ವಿಚಾರಗಳು

EV ಕಾರ್‌ನಲ್ಲಿ ಸಿಗುವ ಡ್ರೈವಿಂಗ್‌ ಸಂತೋಷ, ಜತೆಗೆ ಅದರ ಸೈಲೆನ್ಸ್‌ ನಮ್ಮನ್ನು ಟ್ರಾವೆಲಿಂಗ್‌ ಕಂಫರ್ಟ್‌ ವಿಚಾರದಲ್ಲಿ ಮುಂಚೂಣಿಯಲ್ಲಿಡೋದಂತೂ ನಿಜ. ಜತೆಗೆ ಅದರ ಎಂಜಿನ್‌ ಪವರ್‌ ನಮಗೆ ಮತ್ತಷ್ಟು ಖುಷಿ ನೀಡುವುದಂತೂ ನಿಜ. ಇದೆಲ್ಲಕ್ಕೂ ಕಲಶಪ್ರಾಯವಾಗಿ ಬೇಕಿರುವುದು ಒಳ್ಳೆ ರೇಂಜ್‌ (ಅಥವಾ ಪೆಟ್ರೋಲ್‌- ಡೀಸೆಲ್‌ ಕಾರ್‌ ಭಾಷೆಯ ಮೈಲೇಜ್‌). ಕನಿಷ್ಠವೆಂದರೂ 400ರಿಂದ 500 ಕಿಲೋಮೀಟರ್‌ ರೇಂಜ್‌ ನೀಡುವ ಕಾರ್‌ ಅಂದರೆ ನಿಮ್ಮ ದೂರ ಪ್ರಯಾಣಕ್ಕೆ ನೀವು ತಯಾರಾಗಬಹುದು.
EV ಕಾರ್‌ಗಳು ಇನ್ನಷ್ಟು ಪ್ರಯಾಣ ಸುಖವನ್ನು ನೀಡಬಹುದಾದರೂ ಇಂದಿನ ಪರಿಸ್ಥಿತಿಯಲ್ಲಿ ಅವಷ್ಟನ್ನೂ ನಿಶ್ಚಿಂತೆಯಿಂದ ಅನುಭವಿಸುವುದು ಸಾಧ್ಯವಿಲ್ಲದ್ದಕ್ಕೆ ಪಟ್ಟಿ ಇಲ್ಲಿಗೆ ನಿಲ್ಲುತ್ತದೆ.

Untitled Design - 2026-11-24T114130.976

ಏನೇನಕ್ಕೆ ತಯಾರಿರಬೇಕು?

ಮೊದಲಿಗೆ ನೀವು ತಂತ್ರಜ್ಞಾನದ ಗಂಧಗಾಳಿ ಗೊತ್ತಿಲ್ಲದವರಾದರೆ EV ಕಾರ್‌ಗಳನ್ನು ಬಳಸೋದು ಅಷ್ಟು ಸುಲಭವಲ್ಲ.
ನೀವು ಹೋಗುವ ಜಾಗಕ್ಕೆ ಹೊಂದಿಕೊಂಡು ನೀವು ನಿಮ್ಮ ಚಾರ್ಜಿಂಗ್‌ ಪ್ಲ್ಯಾನನ್ನು ಮಾಡಿಕೊಳ್ಳಬೇಕಾದ್ದು ಬಹಳ ಮುಖ್ಯ. ನನ್ನ ಕಾರ್‌ 400 ಕಿಮೀ. ರೇಂಜ್‌ ತೋರಿಸುತ್ತಿದೆ ಎಂದುಕೊಂಡು 350 ಕಿಮೀ. ಓಡಿಸಿದ ನಂತರ ಚಾರ್ಜಿಗಿಡುತ್ತೇನೆ ಅಂತ ಹೋದರೆ ಅದರಷ್ಟು ದೊಡ್ಟ ರಿಸ್ಕ್ ಇನ್ನೊಂದಿಲ್ಲ.
ಯಾವಾಗಲೂ ನಿಮ್ಮ ಕಾರ್‌ನ ಬ್ಯಾಟರಿ 50 ಅಥವಾ 40 ಶೇಕಡಾ ತಲುಪುವ ವೇಳೆಗೆ ಚಾರ್ಜ್‌ ಮಾಡಿಯೇ ತೀರುತ್ತೇನೆ ಎಂಬ ಶಪಥ ಮಾಡಿಕೊಂಡೇ ನಿಮ್ಮ ದೂರ ಪ್ರಯಾಣಕ್ಕೆ ಸಿದ್ಧರಾಗಿ. ಹಾಗೂ ನೀವು ಹೋಗುವ ಊರುಗಳ ದೂರವನ್ನು ಸರಿಯಾಗಿ ತಿಳಿದುಕೊಂಡು ಆ ಊರಿಗೆ ಹೋಗಬೇಕಾದರೆ ಎಷ್ಟು ಚಾರ್ಜ್‌ ಬೇಕಾಗಬಹುದು ಎನ್ನುವ ಲೆಕ್ಕಾಚಾರ ಹಾಕಿಕೊಳ್ಳಿ.
ಒಂದು ವೇಳೆ ನೀವು ಹೋಗುವ ಊರು ನಿಮ್ಮ ಕಾರ್‌ನ ರೇಂಜ್‌ಗಿಂತ ಹೆಚ್ಚು ದೂರದಲ್ಲಿದ್ದರೆ ಕನಿಷ್ಠ ಎರಡು ಬಾರಿಯಾದರೂ ಚಾರ್ಜ್‌ ಮಾಡಬಹುದಾದ ಸ್ಥಳಗಳು ದಾರಿ ಮಧ್ಯೆ ಸಿಗುವುದೇ ಎನ್ನುವುದನ್ನು ಮೊದಲೇ ಗುರುತಿಸಿಕೊಳ್ಳಿ. ನಿಮ್ಮ ಪ್ರಯಾಣದ ಮೂರೋ ನಾಲ್ಕೋ ಗಂಟೆಗೊಮ್ಮೆ ನಿಮ್ಮ ತಿಂಡಿ-ಊಟ ಹಾಗೂ ಸಂಜೆಯ ಕಾಫಿ ಬ್ರೇಕ್‌ಗಳು ಆ ಚಾರ್ಜಿಂಗ್‌ ಪಾಯಿಂಟ್‌ನಲ್ಲೇ ಸಿಗುವ ಹಾಗೆ ನೋಡಿಕೊಳ್ಳಿ.
ಹಾಗೋ ಹೀಗೋ ನೀವು ಆ ಚಾರ್ಜಿಂಗ್‌ ಪಾಯಿಂಟ್‌ ತಲುಪಿದಾಗ ಈ ಮುಂದಿನ ವಿಷಾದಗಳು ನಿಮ್ಮನ್ನು ಆಹ್ವಾನಿಸಬಹುದು ಎನ್ನುವ ವಿಷಯವನ್ನು ಮೊದಲೇ ಸ್ವೀಕರಿಸಿಟ್ಟುಕೊಳ್ಳುವುದು ಮುಖ್ಯ. ಒಂದೋ ಅಲ್ಲಿನ ಚಾರ್ಜಿಂಗ್‌ ಪಾಯಿಂಟ್‌ ಕೆಲಸ ಮಾಡದೇ ಇರಬಹುದು, ಆಗ ಹತ್ತಿರದಲ್ಲೇ ಇನ್ನೊಂದು ಪಾಯಿಂಟ್‌ ಇರುವುದರ ಬಗ್ಗೆ ನೀವು ಖಾತರಿ ಇರಿಸಿಕೊಂಡರೆ ಒಳ್ಳೇದು. ಎರಡನೆಯದು ಅಲ್ಲಿಗೆ ತಲುಪಿದಾಗ ಪವರ್‌ ಇಲ್ಲದೇ ಇರಬಹುದು. ಇಲ್ಲ ಆ ಚಾರ್ಜಿಂಗ್‌ ಪಾಯಿಂಟ್‌ನಲ್ಲಿ ಇನ್ನೊಂದೋ ಎರಡೋ ಕಾರ್‌ಗಳು ಚಾರ್ಜಿಗೆ ಇಟ್ಟಿರಲೂಬಹುದು. ನೀವು ಆ ಚಾರ್ಜಿಂಗ್‌ ಮುಗಿಯುವವರೆಗೆ ಕಾಯುವ ಅಥವಾ ಮುಂದೊಂದು ಕಡೆ ಇದೆ ಎನ್ನುವ ಖಾತರಿಯೊಂದಿಗೆ ಮುಂದೆ ನಡೆಯುವುದಕ್ಕೆ ತಯಾರಿರಬೇಕಾಗಬಹುದು. ಸಾಧಾರಣವಾಗಿ 6ರಿಂದ 8ಗಂಟೆಯ ಪ್ರಯಾಣವಾಗಿದ್ದರೆ ಈ ಕಾರಿನಲ್ಲಿ ಹೋಗುವಾಗ ಕನಿಷ್ಠ ಒಂದರಿಂದ ಎರಡು ಗಂಟೆ ಹೆಚ್ಚಿಗೆ ಇಟ್ಟುಕೊಂಡೇ ಪ್ಲ್ಯಾನ್‌ ಮಾಡಿಕೊಳ್ಳಿ.

ತಾಳ್ಮೆ ಕಲಿಸುವ EV

ನಾನು ಅಷ್ಟೊಂದು ತಾಳ್ಮೆಯವನಲ್ಲ. ಆದರೆ, ನನ್ನ ಈ ಬಾರಿಯ ಪ್ರಯಾಣ ನನಗೆ ಬಹಳಷ್ಟು ತಾಳ್ಮೆಯನ್ನು ಕಲಿಸಿದ್ದು ನಿಜ. ದಾರಿಯುದ್ದಕ್ಕೂ ಒಂದಿಲ್ಲೊಂದು ಪರಿಸ್ಥಿತಿಯನ್ನು analyse ಮಾಡಿಕೊಂಡು ಸರಿಯಾಗಿ ಪ್ಲ್ಯಾನ್‌ ಮಾಡಿಕೊಂಡು ಮುಂದೆ ಹೋಗಲೇಬೇಕು ಅನ್ನುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಲು ಬಾರದೇ ಹೋದರೆ ನಿಮ್ಮ EV ಕಾರನ್ನು ಹಿಡಿದು ದೂರ ಪ್ರಯಾಣ ಮಾಡಲೇಬೇಡಿ. ಜತೆಗೆ ನೀವು ಗಂಟೆಗೆ 120-140 ಕಿಮೀ. ವೇಗದಲ್ಲಿ ಕಾರನ್ನು ಓಡಿಸುವುದಾದರೆ ಅಷ್ಟೇ ಬೇಗ ಚಾರ್ಜ್‌ ಖಾಲಿಯಾಗುವ ಸತ್ಯ ನಿಮಗೆ ಗೊತ್ತಿರಲೇಬೇಕು.
ದೂರದ ಪ್ರಯಾಣದ ಸಾಥಿಯಾಗಿ ಬೆಳೆಯುವಲ್ಲಿ EV ಕಾರ್‌ಗಳು ನಮ್ಮೊಂದಿಗಿರಬೇಕಾದರೆ ಇನ್ನೂ ಹಲವು ವಿಚಾರಗಳು ಬೆಳೆದು ನಿಲ್ಲಬೇಕಿದೆ. ಅವುಗಳಲ್ಲಿ ಹಲವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಿದೆ. ಆದರೆ, ಇಂದಿಗೆ ಇಷ್ಟು ಸಾಕು. ಇನ್ನಷ್ಟು ಮಾಹಿತಿಯನ್ನು ನೀಡುವ ಆಸೆ ನನಗಿದೆ, ಆದರೆ, ನನ್ನ ಲೇಖನಿಯ ಚಾರ್ಜ್‌ ಖಾಲಿಯಾಗಿದೆ. ಒಂದಷ್ಟು ಚಾರ್ಜಿಗಿಟ್ಟು, ಮುಂದಿನ ಬಾರಿ ಇನ್ನೊಂದಷ್ಟನ್ನು ನಿಮಗೆ ಹೇಳುವ ಇರಾದೆಯೊಂದಿಗೆ ವಿರಮಿಸುತ್ತಿದ್ದೇನೆ.