• ರವಿ ಮಡೋಡಿ

ಸಾಮಾನ್ಯರಾದ ನಾವು ಬದುಕಿನುದ್ದಕ್ಕೂ ಒಂದಲ್ಲೊಂದು ಕಾರಣಕ್ಕೆ ಅಲೆದಾಡುತ್ತಲೇ ಇರುತ್ತೇವೆ. ನಮ್ಮ ಸಂಚಾರದ ಹಿಂದೆ ಬದುಕಿನ ಅನಿವಾರ್ಯತೆ, ಉದ್ಯೋಗ, ಕುಟುಂಬ, ಕರ್ತವ್ಯ ಅಥವಾ ವೈಯಕ್ತಿಕ ಅಗತ್ಯಗಳು ಇದ್ದೇ ಇರುತ್ತವೆ. ಆದರೆ ಸಂತಪುರುಷರ ಜೀವನದಲ್ಲಿ ಪ್ರವಾಸಕ್ಕೆ ಬೇರೆಯದೇ ಅರ್ಥವಿದೆ. ಅವರು ತಮ್ಮ ಬದುಕನ್ನು ರೂಪಿಸಿಕೊಳ್ಳುವುದಕ್ಕಿಂತ ಇತರರ ಬದುಕಿಗೆ ದಿಕ್ಕು ನೀಡಲು ಸಂಚರಿಸುತ್ತಾರೆ ಎಂಬುದನ್ನು ನಮ್ಮ ಪುರಾಣ, ಇತಿಹಾಸಗಳ ಅನೇಕ ಉದಾಹರಣೆಗಳು ಸಾರುತ್ತವೆ. ಆದ್ದರಿಂದಲೇ ಅವರ ಪ್ರವಾಸಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಡೆದ ಭೌತಿಕ ಚಲನೆಯಾಗಿ ಮಾತ್ರ ಉಳಿಯುವುದಿಲ್ಲ. ಅವರು ಹಾದುಹೋದ ಕಡೆ ಆಧ್ಯಾತ್ಮಿಕ ಚಿಂತನೆಗೆ ಹೊಸ ದಿಕ್ಕು ಸಿಗುತ್ತದೆ. ಈ ದೃಷ್ಟಿಯಿಂದ ಜಿ.ಟಿ. ಶ್ರೀಧರ ಶರ್ಮರ ‘ಶ್ರೀಧರ ಮಹಾತ್ಮೆ’ ಕೃತಿಯನ್ನು ಓದಿದಾಗ ಶ್ರೀ ಶ್ರೀಧರ ಸ್ವಾಮಿಗಳ ಜೀವನಚರಿತ್ರೆಯ ಜತೆಗೆ ಅವರ ವಿಶಾಲವಾದ ಪ್ರವಾಸಚರಿತ್ರೆಯೂ ನಮ್ಮ ಮುಂದೆ ನಿಧಾನವಾಗಿ ತೆರೆದುಕೊಳ್ಳುತ್ತದೆ.

ಇದನ್ನೂ ಓದಿ: ಇಲ್ಲಿ ಶಾಸ್ತ್ರ ಹೇಳಲಾಗುವುದು: ಪುಸ್ತಕ ವಿಮರ್ಶೆ

ಸಿದ್ಧಪುರುಷರಾದ ಶ್ರೀಧರ ಸ್ವಾಮಿಗಳು ಇಂದು ನಮ್ಮೊಂದಿಗಿಲ್ಲ. ಅವರು ಐಕ್ಯರಾಗಿ ಹಲವು ದಶಕಗಳೇ ಕಳೆದಿವೆ. ಆದರೂ ಅವರು ಕ್ರಮಿಸಿದ ಪಯಣ, ಸಂದರ್ಶಿಸಿದ ಕ್ಷೇತ್ರಗಳು, ಭೇಟಿಯಾದ ಜನರು ಮತ್ತು ಆ ಭೇಟಿಗಳ ಸುತ್ತ ಬೆಳೆದ ಅನುಭವಗಳು ಇಂದಿಗೂ ಕುತೂಹಲ ಹುಟ್ಟಿಸುತ್ತವೆ. ಜಿ.ಟಿ. ಶ್ರೀಧರ ಶರ್ಮರ ‘ಶ್ರೀಧರ ಮಹಾತ್ಮೆ’, ಸ್ವಾಮಿಗಳು ಸಂದರ್ಶಿಸಿದ ಪ್ರದೇಶಗಳು, ಅಲ್ಲಿ ನಡೆದ ಘಟನೆಗಳು, ಅವರನ್ನು ಭೇಟಿಯಾದ ಜನರು, ಆ ಭೇಟಿಯಿಂದ ಹುಟ್ಟಿದ ಅನುಭವಗಳು, ಶಿಷ್ಯರ ನೆನಪುಗಳು ಮತ್ತು ಸ್ಥಳಗಳೊಂದಿಗೆ ಬೆಸೆದುಕೊಂಡ ಆಧ್ಯಾತ್ಮಿಕ ಸಂದರ್ಭಗಳ ಮೂಲಕ ಅವರ ಪ್ರವಾಸ ನಮ್ಮ ಮುಂದೆ ಜೀವಂತವಾಗುತ್ತದೆ. ಈ ಕಾರಣದಿಂದ ‘ಶ್ರೀಧರ ಮಹಾತ್ಮೆ’ಯಲ್ಲಿನ ಪ್ರವಾಸಚರಿತ್ರೆ ಜನರ ಮನಸಿನಲ್ಲಿ ಉಳಿದ ಹೆಜ್ಜೆಗಳ ಚರಿತ್ರೆ.

ಶ್ರೀಧರ ಸ್ವಾಮಿಗಳ ಸಂಚಾರದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಸಜ್ಜನಗಡದಂಥ ಸ್ಥಳಗಳಿಗೆ ಸಂಬಂಧಿಸಿದ ಪ್ರಸಂಗಗಳು ವಿಶೇಷ ಮಹತ್ವ ಪಡೆಯುತ್ತವೆ. ಸಜ್ಜನಗಡವೆಂದರೆ ಸಮರ್ಥ ರಾಮದಾಸರ ಪರಂಪರೆಯೊಂದಿಗೆ ಅವರ ಆಧ್ಯಾತ್ಮಿಕ ನಂಟನ್ನು ಅರಿಯುವ ಪ್ರಮುಖ ನೆಲೆ.

ಈ ಪ್ರವಾಸಗಳಲ್ಲಿ ಮತ್ತೊಂದು ಮುಖ್ಯ ಅಂಶವೆಂದರೆ ಜನಸಂಪರ್ಕ. ಶ್ರೀಧರ ಸ್ವಾಮಿಗಳು ಸಾಗಿದ ದಾರಿಯಲ್ಲಿ ನಾನಾ ರೀತಿಯ ಜನರೂ ಸಿಗುತ್ತಾರೆ. ಭಕ್ತರು, ಸಾಧಕರು, ಬಡವರು, ಕಷ್ಟಸಂಕಟದಲ್ಲಿರುವವರು, ವಿದ್ಯಾರ್ಥಿಗಳು, ಕುಟುಂಬದ ತೊಂದರೆಯಿಂದ ಬಳಲುವವರು, ಮನಸಿನ ಅಶಾಂತಿಯಲ್ಲಿರುವವರು ಹೀಗೆ ವಿವಿಧ ಹಿನ್ನೆಲೆಯ ಜನರೊಂದಿಗೆ ಅವರ ಸಂಪರ್ಕ ಏರ್ಪಡುತ್ತದೆ. ಹೀಗಾಗಿ ಸ್ವಾಮಿಗಳ ಪ್ರವಾಸವೆಂದರೆ ಕೇವಲ ಕ್ಷೇತ್ರದಿಂದ ಕ್ಷೇತ್ರಕ್ಕೆ ಸಾಗಿದ ಯಾತ್ರೆಯಷ್ಟೇ ಅಲ್ಲ. ಅದು ಮನುಷ್ಯರಿಂದ ಮನುಷ್ಯರ ಕಡೆಗೆ ನಡೆದ ಮಾನವೀಯ ಯಾತ್ರೆಯೂ ಹೌದು.

ಜಿ.ಟಿ. ಶ್ರೀಧರ ಶರ್ಮರ ನಿರೂಪಣಾ ಶೈಲಿಯು ಇಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತದೆ. ಸ್ವಾಮಿಗಳು ಯಾವ ಊರಿಗೆ ಹೋದರು ಎನ್ನುವುದಕ್ಕಿಂತ, ಅಲ್ಲಿ ಯಾರನ್ನು ಭೇಟಿಯಾದರು, ಆ ಭೇಟಿಯಲ್ಲಿ ಏನು ನಡೆಯಿತು, ಆ ಕ್ಷಣ ಯಾರ ಮನಸಿನಲ್ಲಿ ಯಾವ ಬದಲಾವಣೆ ಉಂಟಾಯಿತು ಎಂಬುದಕ್ಕೆ ಅವರು ಹೆಚ್ಚು ಪ್ರಾಮುಖ್ಯ ನೀಡುತ್ತಾರೆ. ಇದರಿಂದಾಗಿಯೇ ಕೃತಿಯಲ್ಲಿನ ಪ್ರವಾಸಕ್ಕೆ ವಿಶಿಷ್ಟ ಅರ್ಥ ದೊರೆಯುತ್ತದೆ. ಇಲ್ಲಿ ಪ್ರತಿಯೊಂದು ಸ್ಥಳವೂ ಒಂದು ಘಟನೆಗೆ ಹಿನ್ನೆಲೆಯಾದರೆ, ಪ್ರತಿಯೊಂದು ಘಟನೆಯೂ ಶ್ರೀಧರ ಸ್ವಾಮಿಗಳ ವ್ಯಕ್ತಿತ್ವದ ಮತ್ತೊಂದು ಮುಖವನ್ನು ತೆರೆದಿಡುತ್ತದೆ.

ಪ್ರವಾಸಚರಿತ್ರೆಯ ದೃಷ್ಟಿಯಿಂದ ಈ ಕೃತಿಯಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ ಸ್ಥಳ ಮತ್ತು ಸ್ಮೃತಿಯ ನಡುವಿನ ಸಂಬಂಧ. ಸಂತನೊಬ್ಬರು ಯಾವುದೋ ಊರಿಗೆ ಭೇಟಿ ನೀಡಿದಾಗ ಆ ಭೇಟಿ ಅಷ್ಟಕ್ಕೇ ಮುಗಿದುಹೋಗುವುದಿಲ್ಲ. ಅವರನ್ನು ಕಂಡವರು ಆ ಅನುಭವವನ್ನು ತಮ್ಮಲ್ಲಿ ಉಳಿಸಿಕೊಂಡು ಮುಂದಿನ ತಲೆಮಾರಿಗೆ ಹೇಳುತ್ತಾರೆ. ಅವರ ಮಾತುಗಳು ಕಾಲಕ್ರಮೇಣ ಸ್ಥಳೀಯ ಸ್ಮೃತಿಯ ಭಾಗವಾಗುತ್ತವೆ. ಅವರೊಂದಿಗೆ ನಂಟಿರುವ ಮನೆ, ಮಠ, ತೀರ್ಥ, ಗುಹೆ ಅಥವಾ ದೇವಸ್ಥಾನಕ್ಕೂ ಹೊಸ ಅರ್ಥವೊಂದು ಸೇರುತ್ತದೆ. ಹೀಗೆ ಶ್ರೀಧರ ಸ್ವಾಮಿಗಳ ಸಂಚಾರದೊಂದಿಗೆ ಒಂದು ಸ್ಮೃತಿಯ ಭೂಗೋಳವೇ ನಿರ್ಮಾಣವಾಗುತ್ತದೆ. ಈ ಕಾರಣದಿಂದಲೇ ‘ಶ್ರೀಧರ ಮಹಾತ್ಮೆ’ಯನ್ನು ಓದುವಾಗ ವಿಶಿಷ್ಟ ಅನುಭವ ಉಂಟಾಗುತ್ತದೆ

‘ಶ್ರೀಧರ ಮಹಾತ್ಮೆ’ಯಲ್ಲಿನ ಅನೇಕ ಸಣ್ಣ ಪ್ರಸಂಗಗಳನ್ನು ಪ್ರವಾಸಚರಿತ್ರೆಯ ದೃಷ್ಟಿಯಿಂದ ಓದಿದಾಗ ಅವುಗಳಿಗೆ ಹೊಸ ಆಯಾಮ ಸಿಗುತ್ತದೆ. ʼಮಗು ಏನಿದು, ಮನಸಿನಂತೆ ಮನೆಯನ್ನೂ ಶುಚಿಯಾಗಿಟ್ಟುಕೊಳ್ಳಬೇಕಲ್ಲವೇ?ʼ ಎಂಬ ಸರಳ ಮಾತು ಯಾವುದೋ ಒಂದು ಸಾಮಾನ್ಯ ಮನೆಯಲ್ಲಿ ಆಡಿದ ಮಾತಾಗಿರಬಹುದು. ಆದರೆ ಇಂಥ ಕ್ಷಣಗಳೇ ಸ್ವಾಮಿಗಳ ಪ್ರವಾಸದ ನಿಜವಾದ ಜೀವಾಳ.

ಕೃತಿಯ ಅಂತ್ಯದ ಭಾಗದಲ್ಲಿ ಬರುವ ನಂತರದ ಕಾಲದ ಅನುಭವಗಳೂ ಈ ದೃಷ್ಟಿಯಿಂದ ಗಮನಾರ್ಹ. ಶ್ರೀಧರ ಸ್ವಾಮಿಗಳ ಭೌತಿಕ ಸಂಚಾರಕ್ಕೆ ವಿರಾಮ ಬಂದರೂ, ಅವರ ನೆನಪುಗಳ ಸಂಚಾರ ನಿಂತಿಲ್ಲ. ಭಕ್ತರ ಅನುಭವಗಳು, ಪಾದಪೂಜೆ, ನಾಮಸ್ಮರಣೆ, ಅವರೊಂದಿಗೆ ನಂಟಿರುವ ಕ್ಷೇತ್ರಗಳಿಗೆ ನಡೆಯುವ ಯಾತ್ರೆಗಳು ಇವುಗಳ ಮೂಲಕ ಅವರ ಸಾನ್ನಿಧ್ಯ ಇಂದಿಗೂ ಮುಂದುವರಿದಿದೆ.

ಪುಸ್ತಕದ ಹೆಸರು: ಶ್ರೀಧರ ಮಹಾತ್ಮೆ

ಲೇಖಕರು: ಜಿ.ಟಿ ಶ್ರೀಧರ ಶರ್ಮ

ಪ್ರಕಾಶಕರು: ಪೂಜಾ ಪ್ರಕಾಶನ ಬೀದರ

ಪುಟಗಳು:600

ಬೆಲೆ: 800 ರೂಪಾಯಿ

ಸಂಪರ್ಕ: 9480473568, 9964511663