• ಬಡೆಕ್ಕಿಲ ಪ್ರದೀಪ

ನೀವು ದೇವರನ್ನು ನಂಬ್ತೀರಾ? ಹಾಗಿದ್ರೆ ದೇವಸ್ಥಾನಗಳಿಗೆ ಹೋಗುವುದು ನಿಮ್ಮ ಟ್ರಾವೆಲ್‌ ಪ್ಲಾನ್‌ನಲ್ಲಿ ಆಗಾಗ ಬಂದೇ ಬರುತ್ತದೆ. ನಮ್ಮೊಳಗಿನ ಭಕ್ತಿಯ ಸಾಕ್ಷಾತ್ಕಾರಕ್ಕೆ ದಾರಿ ಮಾಡಿಕೊಡುವುದಕ್ಕೆ ಈ ದೇವಸ್ಥಾನಗಳನ್ನು ಕಟ್ಟಲಾಗಿತ್ತು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ.

ಒಂದೋ ಊರಿನ ದೇವಸ್ಥಾನಕ್ಕೆ ಹೋಗಿ ಬರುವುದು, ಜನ್ಮದಲ್ಲಿ ಒಂದೋ ಎರಡೋ ಬಾರಿ ಒಂದು ತೀರ್ಥ ಕ್ಷೇತ್ರವನ್ನು ನೋಡಿ ಬರುವುದು ಹಿಂದೆಲ್ಲಾ ನಡೆಯುತ್ತಿದ್ದ ಪದ್ಧತಿ. ಆದರೆ ಕಾಲ ಬದಲಾಗಿದೆ, ಕಾಲಲ್ಲೇ ನಡೆಯುತ್ತಿದ್ದ ನಮಗೆ ವೇಗದ ಪ್ರಯಾಣ ದೇವಾಲಯಗಳ ದರ್ಶನಕ್ಕೆ ಸುಲಭ ಮಾಡಿಕೊಟ್ಟಿದೆ.

ಇದನ್ನೂ ಓದಿ: ಕರ್ನಾಟಕ ಪ್ರವಾಸೋದ್ಯಮಕ್ಕೆ ಅರೇಬಿಯನ್ ಟ್ರಾವೆಲ್ ಮಾರ್ಕೆಟ್ ಕಲಿಸುವ ಪಾಠಗಳು

ಒಳ್ಳೆಯದೇ. ಹಿಂದೆಲ್ಲಾ ಒಂದು ತೀರ್ಥಯಾತ್ರೆ ಅಂದರೆ ಜನ್ಮ ಜನ್ಮಾಂತರದ ಆಕಾಂಕ್ಷೆಯ ಪೂರೈಕೆಯ ದಾರಿ ಹಾಗೂ ದರ್ಶನವೇ ಒಂದು ಜನ್ಮದ ಸಾರ್ಥಕತೆಯ ಕ್ಷಣ. ತಿಂಗಳುಗಟ್ಟಲೆ ನಡೆದೋ, ಎತ್ತಿನ ಗಾಡಿಯಲ್ಲೋ ಅಥವಾ ಬೇರೆ ಪ್ರಯಾಣದ ರೀತಿಯಲ್ಲೋ ದರ್ಶನಕ್ಕೆಂದು ಯಾತ್ರೆ ತೆರಳುತ್ತಿದ್ದ ರೀತಿ ಇಂದು ಸಹಜವಾಗಿಯೇ ಅಲ್ಲೋ ಇಲ್ಲೋ ನಡೆಯುವ ವಿಶೇಷ ಕಾರ್ಯಕ್ರಮವಾಗಿದೆ.

ಕಾರೋ, ಬೈಕೋ, ರೈಲೋ, ವಿಮಾನವೋ ಏರಿ ದಿನಗಟ್ಟಲೆಯ ಪ್ರಯಾಣವನ್ನು ಕೆಲವೇ ಗಂಟೆಗಳಲ್ಲಿ ಮುಗಿಸಿಬಿಡುವುದು ಈಗ ಕಾಮನ್ನಾಗಿದೆ. ಹಾಗಾಗಿ ಸಹಜವಾಗಿಯೇ ಈ ತೀರ್ಥಯಾತ್ರೆ ಅನ್ನುವುದು ಕೆಲವು ಕಂಪೆನಿಗಳ ಮಾರ್ಕೆಟಿಂಗ್‌ನ ಪದವಾಗಿ ಉಳಿದಿದೆಯೇ ಹೊರತು, ನಿಜ ರೂಪದಲ್ಲಿ ತೀರ್ಥಯಾತ್ರೆ ಅದರ ಅರ್ಥ ಕಳೆದುಕೊಂಡಿದೆ.

Untitled Design - 2026-10-05T155042.483

ಈಗೆಲ್ಲಾ ಟೆಂಪಲ್‌ ರನ್‌ನ ಕಾಲ

ದೇವಾಲಯಗಳನ್ನು ಸುತ್ತಿ ಬರುವುದು ಈಗ ಭಕ್ತಿಯನ್ನು ತೋರುವ ಕಾರ್ಯಕ್ರಮಕ್ಕಿಂತ ಹೆಚ್ಚು ಎಷ್ಟು ಟೆಂಪಲ್‌ಗಳನ್ನು ಕವರ್‌ ಮಾಡಿದ್ದೇವೆ ಅನ್ನುವತ್ತ ನಮ್ಮ ಫೋಕಸ್‌ ವಾಲಿದೆ. ಇದಕ್ಕೆ ಯಾರನ್ನೂ ದೂರಬೇಕಾಗಿಲ್ಲ. ಕಾಲವೇ ಇದಕ್ಕೆಲ್ಲಾ ದಾರಿ ಮಾಡಿಕೊಟ್ಟಿರುವುದು ನಮಗೆಲ್ಲಾ ಗೊತ್ತಿದೆ.

ಬೆಂಗಳೂರಿನವರಿಗಂತೂ ಅತ್ತ ತಿರುಪತಿ ಮತ್ತು ಸುತ್ತಲಿನ ಟೆಂಪಲ್‌ಗಳು ಒಂದೆಡೆಯಾದರೆ, ಇತ್ತ ಧರ್ಮಸ್ಥಳ, ಸುಬ್ರಹ್ಮಣ್ಯ, ಸೌತಡ್ಕ, ಕಟೀಲು, ಕುತ್ತಾರು ಕೊರಗಜ್ಜ, ಅತ್ತ ಉಡುಪಿ, ಕಟೀಲು, ಒಮ್ಮೊಮ್ಮೆ ಕೊಲ್ಲೂರು, ಎಲ್ಲಾ ಒಂದೋ ಎರಡೋ ದಿನದಲ್ಲಿ ಸುತ್ತಿ ಬರುವ ಪ್ರವಾಸಿ ತಾಣಗಳಂತಾಗಿವೆ ಎನ್ನುವುದನ್ನು ಹೇಳಿದರೆ ಅದು ಸತ್ಯದಿಂದ ದೂರದ ಮಾತೇನಲ್ಲ ಬಿಡಿ.

ವೀಕೆಂಡ್‌ ಬಂದರೆ ಸಾಕು ಮಂತ್ರಾಲಯ ಮತ್ತು ಸುತ್ತಲಿನ ದೇವಸ್ಥಾನಗಳು, ಹಾಗೇ ಧರ್ಮಸ್ಥಳ ಇತ್ಯಾದಿ ಸ್ಥಾನಗಳು ಜನಜಂಗುಳಿಯಿಂದ ತುಂಬಿರುತ್ತದೆ. ಮೊನ್ನೆ ಮೊನ್ನೆ ಭಾನುವಾರ ಸಂಜೆ ಮಂಗಳೂರಿನ ಕಡೆಗೆ ಹೋಗುತ್ತಿದ್ದವನಿಗೆ, ಗುಂಡ್ಯದಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್‌ ಕಂಡು ಏನಾದರೂ ಆಯ್ತಾ ಅಂತ ಅಂದುಕೊಂಡರೆ, ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಬರುವ ಧಾವಂತದಲ್ಲಿದ್ದ ನೂರಾರು ಕಾರುಗಳ ಸಾಲು ದಂಗುಬಡಿಸಿತ್ತು.

ಇದನ್ನೂ ಓದಿ: ಮೋದಿಯ ಪ್ರವಾಸಗಳು ಜಾಲಿ ಟ್ರಿಪ್‌ ಅಲ್ಲ.. ಇದು ಪ್ರಧಾನಿ ಪ್ರವಾಸ!

ದೇವಸ್ಥಾನಗಳು ಪಿಕ್‌ನಿಕ್‌ ಸ್ಪಾಟ್‌ಗಳಲ್ಲ

ದೇವಾಲಯಗಳನ್ನು ನೋಡುವುದಕ್ಕೆ ಹೋಗುವುದು ತಪ್ಪಲ್ಲ ಬಿಡಿ. ಆದರೆ, ದೇವಾಲಯಗಳನ್ನು ನೋಡುವುದಕ್ಕಾಗಿ, ಒಂದು ಕ್ಷಣದ ದರ್ಶನಕ್ಕಾಗಿ ಡಿಸೈನ್‌ ಮಾಡಿದ್ದಲ್ಲ. ಅವುಗಳು ಅಧ್ಯಾತ್ಮದ ಉತ್ತುಂಗಕ್ಕೆ ನಮ್ಮನ್ನು ಏರಿಸುವುದಕ್ಕೆ ಎದ್ದುನಿಂತವುಗಳು. ಇಡೀ ಜನಜಂಗುಳಿಯಲ್ಲಿ ಹೋಗಿ ಹತ್ತು ಸೆಕೆಂಡಿನ ದರ್ಶನಕ್ಕೆ ಗಂಟೆಗಟ್ಟಲೆ ಕಾಯುವುದು ಒಂದು ರೀತಿಯ ಮಹಾನ್‌ ತೀರ್ಥಯಾತ್ರೆ ಅನಿಸುವ ಈ ಕಾಲದಲ್ಲಿ, ಅದನ್ನೂ ಮೀರಿ ಒಂದಿಷ್ಟು ದುಡ್ಡು ಕೊಟ್ಟು ಶೀಘ್ರದರ್ಶನ ಮಾಡುವುದು ಇನ್ನೊಂದು ರೀತಿಯ ಫ್ಯಾಶನ್‌. ಯಾರಿಗೂ ಕಾಯುವುದಕ್ಕೆ ಸಮಯವಿಲ್ಲ. ತಿಂಗಳುಗಳ ಕಾಲ ಪ್ರಯಾಣ ಮಾಡಿ ದೇವರ ದರ್ಶನ ಮಾಡುವುದಕ್ಕೆ ತೆರಳುತ್ತಿದ್ದ ಮನಸ್ಥಿತಿ ಬೇಡ ಬಿಡಿ, ಒಂದಷ್ಟು ಹೊತ್ತು ಸರತಿ ಸಾಲಿನಲ್ಲಿ ಕಾಯುವುದಕ್ಕೂ ನಮಗೆ ಸಮಯವಿಲ್ಲ, ಅದಕ್ಕೂ ಹೆಚ್ಚು ತಾಳ್ಮೆ ಇಲ್ಲ.

ಎಲ್ಲಿ ಶುರುವಾಯ್ತು ಈ ಟೆಂಪಲ್‌ ರನ್‌

ಮೊದಲಿಗೆ, 2011ರ ಆಸುಪಾಸು ಈ ಟೆಂಪಲ್‌ ರನ್‌ ಅನ್ನುವ ಗೇಮ್‌ ಒಂದು ಮೊಬೈಲ್‌ಗೆ ಬಂತು. ಕಾಂಬೋಡಿಯಾದ ಆಂಕೋರ್‌ ವಾಟ್‌ ದೇವಾಲಯದಿಂದ ಇದು ಪ್ರೇರಿತವಾಗಿತ್ತು, ಮಿಲಿಯನ್‌ಗಟ್ಟಲೆ ಡೌನ್‌ಲೋಡನ್ನು ಕಂಡಿತು. ಈಗ ಆ ಗೇಮ್‌ ಇದ್ದರೂ ಅದರ ಅಂದಿನ ಫೇಮ್‌ ಈಗಿಲ್ಲ. ಆದರೆ ಆ ಪದ ಮಾತ್ರ ಎಲ್ಲೆಡೆ ಜನಜನಿತವಾಗಿದೆ.

ಒಂದೆಡೆ ಅದರ ಅರ್ಥ ಗೊತ್ತಿಲ್ಲದೇ, ನಾನು ಟೆಂಪಲ್‌ ರನ್‌ನಲ್ಲಿದ್ದೆ ಎನ್ನುವುದು ಕಂಡರೆ, ನಿಜ ಅರ್ಥದಲ್ಲಿ ಒಂದು ಟೆಂಪಲ್‌ನಿಂದ ಇನ್ನೊಂದಕ್ಕೆ ಓಡುವ ಧಾವಂತ ಇದೆಯಲ್ಲ. ಇದು ನಿಜ ಅರ್ಥದಲ್ಲಿ ಟೆಂಪಲ್‌ ರನ್ ಅನ್ನುವುದರಲ್ಲಿ ಎರಡು ಮಾತಿಲ್ಲ.

Untitled Design - 2026-10-05T155107.685

ಭಕ್ತಿಯ ಸ್ಕೋರ್‌ ಎಷ್ಟು

ನೀವು ಒಂದು ಟೆಂಪಲ್‌ನಿಂದ ಇನ್ನೊಂದಕ್ಕೆ ರನ್‌ ಮಾಡುತ್ತಾ (ಓಡುತ್ತಾ) ನೋಡಿದ ದೇವಸ್ಥಾನ, ಹೋದ ಜಾಗಗಳ ಪಟ್ಟಿ ದೊಡ್ಡದಾಗುತ್ತದೆ ಓಕೆ, ಆದರೆ ನಿಮ್ಮ ಭಕ್ತಿಯಲ್ಲಿ ಎಷ್ಟು ಆಳಕ್ಕೆ ಇಳಿಯುವುದಕ್ಕೆ ಇದು ಸಹಾಯ ಮಾಡುತ್ತದೆ.

ನಾನೂ ದೇವಾಲಯಗಳ ದರ್ಶನ ಮಾಡುತ್ತೇನೆ. ಅದು ಧರ್ಮಸ್ಥಳ, ತಿರುಪತಿ, ಮಂತ್ರಾಲಯದಂಥ ಬ್ಯುಸಿ ತೀರ್ಥಕ್ಷೇತ್ರಗಳೇ ಆಗಿರಬಹುದು. ಅಲ್ಲಿ ಕ್ಷಣ ಕಾಲ ಇದ್ದರೂ ಅದೊಂದು ರೀತಿಯ ಶಾಂತತೆಯನ್ನು, ನಮ್ಮೊಳಗೆ ಭಕ್ತಿಯ ಪರಾಕಾಷ್ಠೆಯನ್ನು, ಒಂದು ರೀತಿಯ ಧೈರ್ಯವನ್ನು, ನಂಬಿಕೆಯನ್ನೂ ಮೂಡಿಸುವ ಶಕ್ತಿ ಆ ಸ್ಥಳಗಳಿಗಿರುವುದರಲ್ಲಿ ಸಂಶಯವಿಲ್ಲ. ಆದರೆ ಅದೆಲ್ಲಾ ಶುರುವಾಗುವುದು ನಮ್ಮ ಮನಸಿನೊಳಗೆ ಅನ್ನುವುದನ್ನು ಮರೆಯುತ್ತಿರುತ್ತೇವೆ.

ಹಾಗೆ ನೋಡೋದಾದರೆ, ಈ ರೀತಿಯ ಟೆಂಪಲ್‌ ರನ್‌ ಮಾಡುವ ಬದಲು, ನಮ್ಮ ಹತ್ತಿರದ, ಹೆಚ್ಚಾಗಿ ಯಾರೂ ಬಾರದ ದೇವಸ್ಥಾನಗಳಿಗೆ ಹೋದರೆ, ನಮಗೆ ಅಲ್ಲಿ ಸಿಗುವ ಏಕಾಂತ, ಶಾಂತ ಕ್ಷಣ, ನಮ್ಮ ಭಕ್ತಿಯ ಸ್ಕೋರನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುವುದರಲ್ಲಿ ಸಂಶಯವೇ ಇಲ್ಲ.

ಸ್ಕೋರ್‌ ನೀವು ಹೋಗಿ ನೋಡುವ ದೇವಸ್ಥಾನಗಳ ಸಂಖ್ಯೆಯಿಂದಲ್ಲ, ನಿಮ್ಮೊಳಗೆ ಆ ಪರಮಾತ್ಮನ ಸಾಕ್ಷಾತ್ಕಾರದ ಹಾದಿಯಲ್ಲಿ ಎಷ್ಟು ದೂರ ಸಾಗುವುದರಲ್ಲಿ ಸಕ್ಸಸ್‌ ಕಂಡಿದ್ದೀರಿ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ.

ಪಂಚ್‌-ರ್‌ ಶಾಪ್‌

ಕೆಲವೊಮ್ಮೆ ನಮ್ಮ ಟೆಂಪಲ್‌ ರನ್‌ ಯಾವ ರೀತಿ ಇರುತ್ತದೆ ಅಂದರೆ, ನಾವು ದೇವರನ್ನು ನೋಡಿ ಬಂದ ಸ್ಪೀಡಿಗೆ, ಆ ದೇವರಿಗೆ ನಾವು ಬಂದು ಹೋಗಿದ್ದು ಗೊತ್ತಾಗಿರುತ್ತಾ ಅನ್ನುವ ಸಂಶಯ ಬರುತ್ತದೆ.