ವಿಸ್ಮಯಗಳ ಮಾಯಾ ನಗರಿ ಪಟಿಯಾಲಾ ಪೆಗ್
ಮಾಯನ್ನರು ಹುಟ್ಟು ಸಾವಿನ ಚಕ್ರವನ್ನು ಬಹುತೇಕ ಹಿಂದೂಗಳ ಹಾಗೆ ನಂಬಿದವರು. ಮೃತ್ಯುವಿನ ನಂತರ ಮಾನವ ಮೊದಲು ಪಾತಾಳಕ್ಕೆ ಹೋಗಿ ಆಮೇಲೆ ಆಕಾಶಕ್ಕೆ ಹೋಗಿ ಮತ್ತೆ ಭೂಮಿಗೆ ಬರುತ್ತಾನಂತೆ. ಸೃಷ್ಟಿ ಸ್ಥಿತಿ ಲಯಗಳಿಗೆ ಮಾಯನ್ನರಿಗೂ ಹಿಂದೂಗಳ ಹಾಗೆ ಮೂರು ದೇವತೆಗಳಿದ್ದರು. ಭಾರತೀಯರ ಹಾಗೆಯೇ ಕಾಲಚಕ್ರವನ್ನು ನಂಬಿದ ಮಾಯನ್ನರು 166 ದೇವತೆಗಳನ್ನು ಪೂಜಿಸುತ್ತಿದ್ದರು.
- ಕವಿತಾ ಹೆಗಡೆ ಅಭಯಂ
ನಿವೃತ್ತ ಐಪಿಎಸ್ ಅಧಿಕಾರಿಯೂ ಕನ್ನಡದ ಜನಪ್ರಿಯ ಅಂಕಣಕಾರರೂ ಲೇಖಕರೂ ಆದ ಡಿ.ವಿ. ಗುರುಪ್ರಸಾದ್ ಅವರ 'ಪಟಿಯಾಲಾ ಪೆಗ್' ಕೃತಿ ಅವರ ಅನುಭವ ಕಥನ. ಅವರ ಕೆಲವು ಪ್ರವಾಸಗಳು, ಪೊಲೀಸ್ ಇಲಾಖೆಯ ರೋಚಕ ಲೋಕ, ಅಲ್ಲಿನ ವಿಶಿಷ್ಟ ವ್ಯಕ್ತಿತ್ವಗಳು ಮತ್ತು ತಮ್ಮ ವೃತ್ತಿಜೀವನದ ಅನುಭವಗಳ ಸಾರವನ್ನು ಇಲ್ಲಿ ಓದಬಹುದು. ಹೆಸರೇ ಸೂಚಿಸುವಂತೆ 'ಪಟಿಯಾಲಾ ಪೆಗ್' ಮುದ ನೀಡುವಂಥ ಶೈಲಿಯಲ್ಲಿರುವ ಲವಲವಿಕೆ ತುಂಬಿದ ಪ್ರಬಂಧಗಳ ಸಂಗ್ರಹ.
ಅವರ ಈ ಪುಸ್ತಕದಲ್ಲಿ ಬಹಳ ಆಸಕ್ತಿ ಹುಟ್ಟಿಸುವ ಒಂದು ಅಧ್ಯಾಯವೇ ʻಮಾಯನ್ನರ ಮಾಯಾ ನಗರಿʼ ಎಂಬುದು. ಭಾರತೀಯ ನಾಗರಿಕತೆಗೂ ಮಾಯನ್ನರ ನಾಗರಿಕತೆಗೂ ಹಲವಾರು ಸಾಮ್ಯತೆಗಳಿರುವುದನ್ನು ಅರಿತ ಲೇಖಕರು ಅವುಗಳನ್ನು ಇಲ್ಲಿ ಉಲ್ಲೇಖಿಸುತ್ತಾರೆ. ಅವರು, ಮಹಾಭಾರತದ ಕಾಲದಲ್ಲಿ ಅರ್ಜುನ ತನಗೆ ಮಾಡಿಕೊಟ್ಟ ಉಪಕಾರಕ್ಕಾಗಿ ಮಯನ ಪಾಂಡವರಿಗಾಗಿ ಭವ್ಯ ಇಂದ್ರಪ್ರಸ್ಥ ನಗರವನ್ನು ಕಟ್ಟಿದನಂತೆ. ಈ ಮಯನ ವಂಶಸ್ಥರೇ ಸಮುದ್ರದ ಮೂಲಕ ಅಮೆರಿಕ ಖಂಡಕ್ಕೆ ಹೋಗಿ ಮಾಯನ್ನರು ಎಂದು ಹೆಸರಾದರು ಎಂಬ ಪ್ರತೀತಿಯಿದೆ. ಕೊಲಂಬಸ್ ಅಮೆರಿಕದ ಅನ್ವೇಷಣೆಯನ್ನು ಮಾಡುವ ಮೊದಲೇ ಭಾರತೀಯರು ಆ ಖಂಡದೊಡನೆ ಸಂಪರ್ಕ ಇಟ್ಟುಕೊಂಡಿದ್ದರು ಎಂದು ಕೆಲವರು ಹೇಳುತ್ತಾರೆ. ಅವರ ನಂಬಿಕೆಯಂತೆ ಮಾಯನ್ನರ ಆಚಾರ ವಿಚಾರಗಳು ಹಿಂದೂಗಳ ಹಾಗೆಯೇ ಇರುವುದರಿಂದ ಇದು ಸಾಧ್ಯ ಎನ್ನುತ್ತಾರೆ. ಇಂಥ ಹಲವು ವಿಶೇಷಗಳನ್ನು ಗುರುತಿಸಲು ತಾವು ಮೆಕ್ಸಿಕೋ ದೇಶಕ್ಕೆ ಹೋದದ್ದು ಎಂದು ಲೇಖಕರು ಹೇಳುತ್ತಾರೆ. ಅವರು ದಾಖಲಿಸಿರುವ ಪ್ರಕಾರ ಮಾಯನ್ನರ ನಂಬಿಕೆಗಳು ಹಾಗೂ ಜೀವನಶೈಲಿ ಭಾರತೀಯರಿಗೆ ತುಂಬಾ ಹತ್ತಿರವಾದದ್ದು.
ಮಾಯನ್ನರು ಹುಟ್ಟು ಸಾವಿನ ಚಕ್ರವನ್ನು ಬಹುತೇಕ ಹಿಂದೂಗಳ ಹಾಗೆ ನಂಬಿದವರು. ಮೃತ್ಯುವಿನ ನಂತರ ಮಾನವ ಮೊದಲು ಪಾತಾಳಕ್ಕೆ ಹೋಗಿ ಆಮೇಲೆ ಆಕಾಶಕ್ಕೆ ಹೋಗಿ ಮತ್ತೆ ಭೂಮಿಗೆ ಬರುತ್ತಾನಂತೆ. ಸೃಷ್ಟಿ ಸ್ಥಿತಿ ಲಯಗಳಿಗೆ ಮಾಯನ್ನರಿಗೂ ಹಿಂದೂಗಳ ಹಾಗೆ ಮೂರು ದೇವತೆಗಳಿದ್ದರು. ಭಾರತೀಯರ ಹಾಗೆಯೇ ಕಾಲಚಕ್ರವನ್ನು ನಂಬಿದ ಮಾಯನ್ನರು 166 ದೇವತೆಗಳನ್ನು ಪೂಜಿಸುತ್ತಿದ್ದರು. ಸೂರ್ಯ ಚಂದ್ರ ಗುರು ಅವರ ಮುಖ್ಯದೇವತೆಗಳಾಗಿದ್ದರು. ಶಿವ, ಗಣೇಶ, ಇಂದ್ರ, ವಿಷ್ಣು, ಹನುಮಾನ್ ಮತ್ತು ಕೂರ್ಮನನ್ನು ದೇವತೆಗಳೆಂದು ಮಾಯನ್ನರು ಪರಿಗಣಿಸಿದ್ದರು. ಕುಕುಲ್ ಕಾನ್ ಎಂಬ ರೆಕ್ಕೆ ಪುಕ್ಕಗಳು ಇರುವ ಸರ್ಪ ಅವರ ಪ್ರಮುಖ ದೇವತೆಯಾಗಿತ್ತು. ಭಾರತೀಯರು ಸಾವಿನ ರಾಜನನ್ನು ಯಮ ಎಂದು ಕರೆದರೆ ಮಾಯನ್ನರು ಅವನನ್ನು ಯಮ್ ಚಿಮಿಲ್ ಎಂದು ಕರೆದಿದ್ದರು. ನರಬಲಿ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಿ ಬಲಿ ಕೊಡಬೇಕಾದ ವ್ಯಕ್ತಿಯ ಎದೆಯನ್ನು ಸೀಳಿ ಅವನ ರಕ್ತ ಹರಿಯುತ್ತಿರುವ ಹೃದಯವನ್ನು ಹೊರ ತೆಗೆದು ದೇವರಿಗೆ ಅರ್ಪಿಸುವ ದೃಶ್ಯವನ್ನು ಮಾಯನರ ಹಲವು ಶಿಲ್ಪಗಳಲ್ಲಿ ಕಾಣಬಹುದು.
ಇದನ್ನೂ ಓದಿ: ಮೂರು ಭೂಖಂಡಗಳು,ಇಪ್ಪತ್ಮೂರು ದೇಶಗಳನ್ನು ಸುತ್ತಿಸುವ ಕಥನ
16ನೇ ಶತಮಾನದಲ್ಲಿ ಅಲ್ಲಿಗೆ ಕಾಲಿಟ್ಟ ಸ್ಪಾನಿಷರು ಮಾಯನರ ಜೀವನ ಶೈಲಿಯನ್ನು ಕಂಡು ವಿಸ್ಮಯಗೊಂಡಿದ್ದರು. ಆದರೂ ಮಾಯನ್ನರು ಭಾರತೀಯ ಮೂಲದವರು ಎನ್ನಲು ಯಾವುದೇ ವೈಜ್ಞಾನಿಕ ಪುರಾವೆ ದೊರೆತಿಲ್ಲ ಎಂದು ಲೇಖಕರು ಹೇಳುತ್ತಾರೆ. ಮಾಯನ್ನರ ಬಗ್ಗೆ ಇಂಥ ಹಲವು ವಿಷಯಗಳನ್ನು ಅರಿತುಕೊಂಡಿದ್ದ ಗುರುಪ್ರಸಾದ್ ಅವರು ಮಾಯನ್ನರ ಪ್ರಮುಖ ನಗರವಾಗಿದ್ದ ಚೆಚೆನ್ ಇಟ್ಸಾವನ್ನು ನೋಡಬೇಕೆಂಬ ಆಸೆಯಿಂದ ಮೆಕ್ಸಿಕೋಗೆ ಹೋಗುತ್ತಾರೆ.
ನಮ್ಮ ದೇಶದ ಗೋವಾದಂತೆಯೇ ಬೀಚುಗಳಿಗಾಗಿ ಪ್ರಸಿದ್ಧವಾದ ಕ್ಯಾನ್ ಕೂನ್ ನಗರಕ್ಕೆ ಮೊದಲು ಹೋಗಿ ಆ ದಿನ ಅದನ್ನು ನೋಡಿ, ಮರು ದಿನ ಮರುಭೂಮಿಯಂಥ ಚೆಚೆನ್ ಇಟ್ಸಾಗೆ ಹೋಗುತ್ತಾರೆ. ಆ ನಗರದ ಆಕರ್ಷಣೆ ಎಂದರೆ ಹಲವಾರು ಸಿನೋಟೆ ಬಾವಿಗಳು. ಹಲವು ಅಜ್ಞಾತ ನೀರಿನ ಝರಿಗಳು ಹರಿವ ಇಲ್ಲಿನ ಕೆಲವು ಜಾಗಗಳಲ್ಲಿ ಅವುಗಳ ಮೇಲಿರುವ ಸುಣ್ಣದ ಕಲ್ಲಿನ ಬಂಡೆಗಳು ಇದ್ದಕ್ಕಿದ್ದ ಹಾಗೆ ಕುಸಿದು ಬಿದ್ದು ಇಂಥ ಬಾವಿಗಳು ಗೋಚರವಾಗುತ್ತವಂತೆ.
ಹಂಪಿಯಂತೆ ವಿಶಾಲವಾದ ಈ ಪ್ರದೇಶದಲ್ಲಿ ಹಲವು ಅವಶೇಷಗಳಿವೆಯಂತೆ. ಯುನೆಸ್ಕೋ ಪಾರಂಪರಿಕ ತಾಣವಾದ ಈ ಪಟ್ಟಣ ಹತ್ತು ಸಾವಿರ ಚದರ ಕಿಮೀ. ವಿಸ್ತೀರ್ಣ ಹೊಂದಿದ್ದು ನೋಡಲು ಇಡೀ ದಿನವೇ ಬೇಕು ಎನ್ನುತ್ತಾರೆ.
ಎಲ್ ಕಾಸಿಯೋ ಎಂಬ ಪಿರಮಿಡ್ ಮಾಯನರ ಇನ್ನೊಂದು ಅದ್ಭುತ ದೇವಸ್ಥಾನ. ವಾಸ್ತುಶಿಲ್ಪಕ್ಕೆ ಹೆಸರಾದ ಈ ಪಿರಮಿಡ್ ವಿಶ್ವದ ಏಳು ಹೊಸ ಅದ್ಭುತಗಳಲ್ಲಿ ಒಂದು. ಮಾರ್ಚ್ 21 ಹಾಗೂ ಸೆಪ್ಟೆಂಬರ್ 21 ರಂದು ಮಧ್ಯಾಹ್ನ 3 ಗಂಟೆಗೆ ಸೂರ್ಯನ ಬೆಳಕು ಬಿದ್ದಾಗ ಸರ್ಪವೊಂದು ಈ ಪಿರಮಿಡ್ಡಿನ ಮೇಲೆ ಹರಿದಾಡುವಂತೆ ಭಾಸವಾಗುತ್ತದೆ. ಆ ದಿನ ಸರ್ಪ ದೇವತೆ ನನ್ನ ಗುಡಿಯಿಂದ ಕೆಳಗಿಳಿದು ಬರುತ್ತದೆ ಎಂದು ಮಾಯನ್ನರು ನಂಬಿದ್ದರು.
ಪೂಕ್ ಅ ಟಾಕ್ ಎಂಬ ಫುಟ್ಬಾಲ್ ರೀತಿಯ ಆಟದಲ್ಲಿ ಸೋತ ತಂಡದ ನಾಯಕನನ್ನು ಅಥವಾ ಒಮ್ಮೊಮ್ಮೆ ಗೆದ್ದ ತಂಡದ ನಾಯಕನನ್ನು ನರಬಲಿಯಾಗಿ ಕೊಡುತ್ತಿದ್ದರಂತೆ. ಆದರೆ ಸ್ವರ್ಗಕ್ಕೆ ಹೋಗುತ್ತೇವೆಂಬ ನಂಬಿಕೆ ಜನರಲ್ಲಿದ್ದ ಕಾರಣ ನರಬಲಿಗೆ ವ್ಯಾಪಕ ಬೆಂಬಲವಿತ್ತು. ಇನ್ನೊಂದು ಸಂಪ್ರದಾಯವೆಂದರೆ ಯುದ್ಧದಲ್ಲಿ ಸೋತ ಶತ್ರು ಸೈನ್ಯದ ಸದಸ್ಯರ ತಲೆಗಳನ್ನು ಇದು ಅವನು ಉದ್ದವಾದ ಕೋಲಿಗೆ ಹಾಕಿ ಪ್ರದರ್ಶನಕ್ಕೆ ಇಡುವುದು. ಮೆಕ್ಸಿಕೋದ ಪುರಾತನ ದೇವಾಲಯಗಳಲ್ಲಿ ಇಂತಹ ಹಲವಾರು ಶಿಲ್ಪಗಳನ್ನು ಲೇಖಕರು ಕಾಣುತ್ತಾರೆ.
ಒಟ್ಟಿನಲ್ಲಿ ಅವರ ಈ ಮೆಕ್ಸಿಕೋ ಭೇಟಿ ಸಿಂಧೂ ನಾಗರಿಕತೆಗೂ ಮಾಯನ್ ನಾಗರಿಕತೆಗೂ ಇರುವ ಸಾಮ್ಯತೆಯನ್ನು ತಿಳಿಸುತ್ತವೆ.
ಸರಳ ಶೈಲಿಯಲ್ಲಿ ತಾವು ಕಂಡ ವಿಶೇಷ ಸಂಗತಿಗಳನ್ನು ನಿರೂಪಿಸುತ್ತ ತಮ್ಮ ವಿಸ್ಮಯಕರ ಮಾಯಾನಗರಿಯ ಭೇಟಿಯನ್ನು ಅಕ್ಷರಗಳಲ್ಲಿ ಅಮರಗೊಳಿಸುತ್ತಾರೆ.
-
ಪುಸ್ತಕ ಮಾಹಿತಿ
ಲೇಖಕರು: ಡಿ.ವಿ.ಗುರುಪ್ರಸಾದ್
ಪುಟ ಸಂಖ್ಯೆ: 202
ಬೆಲೆ: 225 ರು.
ಪ್ರಕಾಶನ: ಸಪ್ನಾ ಬುಕ್ ಹೌಸ್