ಪ್ರೀತಿ ಹುಟ್ಟುವ ತಾಣಕ್ಕೀಗ ಹೊಸ ವಿಳಾಸವೊಂದು ಸಿಕ್ಕಿದೆ. ಈ ಊರಿನ ಹೆಸರೇ ʼಪ್ರೇಮʼ. ಈ ಊರಿನಲ್ಲಿ ಸುರಿಯುವ ಮಳೆಯೂ, ಬೀಸುವ ಗಾಳಿಯೂ, ಹರಿವ ನದಿಯೂ ಎಲ್ಲವೂ ಪ್ರೇಮದ ಹಾಡನ್ನು ಹೇಳುತ್ತದೆ. ದಶಕಗಳ ಹಿಂದೆ ಮುಂಗಾರು ಮಳೆ ಸಿನಿಮಾ ರಿಲೀಸ್‌ ಆದಾಗ ಯಾವುದೇ ನಿರೀಕ್ಷೆ ಇರಲಿಲ್ಲ. ಈ ಸಿನಿಮಾ ಯಾವ ರೀತಿಯಲ್ಲಿ ಜನರನ್ನು ಸೆಳೆಯಬಹುದು ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಸೂಪರ್‌ ಹಿಟ್‌ ಆಗಿ ಕನ್ನಡದ ಕ್ಲಾಸಿಕ್‌ ಸಿನಿಮಾ ಆಗಬಹುದು ಎನ್ನುವುದು ಕೂಡ ಯಾರೂ ಊಹಿಸಿರಲಿಲ್ಲ. ಆದರೆ, ಆ ಸಿನಿಮಾ ಅವೆಲ್ಲವನ್ನೂ ಮೀರಿ ಪ್ರೇಕ್ಷಕರ ಮನಸಿನಲ್ಲಿ ಮನೆ ಮಾಡಿತು. ಸಿನಿಮಾ ಅಷ್ಟಕ್ಕೇ ಸೀಮಿತವಾಗಲಿಲ್ಲ. ಸಿನಿಮಾದ ಬಹಳ ಮುಖ್ಯವಾದ ಪಾತ್ರವಾಗಿದ್ದ ಸುಂದರವಾದ ತಾಣ ಜೋಗ್‌ ಫಾಲ್ಸ್‌ ಕೂಡ ಪ್ರೇಕ್ಷಕರನ್ನು ಸೆಳೆಯಿತು. ಜೋಗ್‌ ಫಾಲ್ಸ್‌ ಒಂದು ಐಕಾನಿಕ್‌ ತಾಣವಾಗಲು ʼಮುಂಗಾರು ಮಳೆʼ ಬರಬೇಕಾಯಿತು. ಈಗ ಅಂಥದ್ದೇ ಒಂದು ಕೆಲಸ ʼಪ್ರೇಮದ ಊರಲಿʼ ಸಿನಿಮಾ ಮಾಡುತ್ತಿದೆ.

ಇದನ್ನೂ ಓದಿ: ಕಾನುನಾಡಿನ ಜಾಡು ಹಿಡಿದು ಸಾಗುವ ಕಾನ್ಧಾರಿ

ಈ ಊರಲಿ ಎಲ್ಲೇ ಹೋದರೂ, ಎಲ್ಲೇ ನಿಂತರೂ ಸಿಗುವುದು ಪ್ರೇಮ ಮಾತ್ರ! ಇಡೀ ಸಿನಿಮಾ ನೋಡಿ ಮನೆಗೆ ವಾಪಸ್‌ ಬರುವಾಗ ಆ ಪ್ರೇಮದ ಊರಿನಲ್ಲೇ ಇನ್ನೂ ಗಾಡಿ ಓಡಿಸುತ್ತಿದ್ದೇವೋ ಏನೋ ಎಂಬಂತೆ ಹಿನ್ನೆಲೆ ಸಂಗೀತವನ್ನೂ ನಮಗೇ ಅರಿವಿಲ್ಲದಂತೆ ಗುನುಗುತ್ತಿರುತ್ತೇವೆ. ರುಕ್ಮಿಣಿ, ವಸಂತಾ ಹಾಗೂ ಸಂತು ಎಂಬ ಮೂವರು ಮುಗ್ಧ ಮನಸುಗಳ ನಡುವೆ ಹುಟ್ಟುವ ಪ್ರೀತಿ ಮಳೆ ಸುರಿದು ನಿಂತ ಮೇಲೂ ನೆನಪಿನಲ್ಲಿ ಉಳಿಯುತ್ತದೆ. ಇವೆಲ್ಲದರ ಜತೆಗೆ ಇನ್ನೂ ಒಂದು ವಿಷಯ ಪ್ರೇಕ್ಷಕರ ಮನಸಿನಲ್ಲಿ ಉಳಿಯುತ್ತದೆ. ಚಿತ್ರದ ಬಹಳ ಮುಖ್ಯವಾದ ಸನ್ನಿವೇಶವನ್ನು ಚಿತ್ರೀಕರಣ ಮಾಡಿದ ಜಾಗ. ಇದೇ ಜಾಗದಲ್ಲಿ ವಸಂತಾ ತನ್ನ ಪ್ರೇಮ ನಿವೇದನೆ ಮಾಡಲು ಕಾಯುತ್ತಾಳೆ. ಇದೇ ಜಾಗದಲ್ಲಿ ಸಂತು ತನ್ನ ಪ್ರೇಮ ನಿವೇದನೆ ಮಾಡುತ್ತಾನೆ. ಸುತ್ತಲೂ ಹಸಿರಿನ ಹೊದಿಕೆ ಹೊದ್ದುಕೊಂಡಿರುವ ಗುಡ್ಡಗಳು, ಇಲ್ಲಿನ ಬೆಟ್ಟದ ತುತ್ತತುದಿಯಲ್ಲಿ ಇರುವ ಈಶ್ವರನ ಸುಂದರವಾದ ದೇವಸ್ಥಾನ, ತಂಪಾದ ಗಾಳಿ ಮತ್ತು ಮಂಜಿನಿಂದ ಕೂಡಿರುವ ವಾತಾವರಣ, ನೋಡಿದರೆ ಸಾಕು ಮನಸಿಗೆ ಹಿತವಾದ ಅನುಭವ ಆಗುತ್ತದೆ. ಇದೇ ಹಾಸನದ ಸೀಗೇ ಗುಡ್ಡದಲ್ಲಿರುವ ಮಲೆ ಮಲ್ಲೇಶ್ವರ ಸ್ವಾಮಿದೇವಾಲಯ. ಶಿವನ ದೇವಸ್ಥಾನದ ಜತೆಗೆ ಬೃಹತ್‌ ಶಿವನ ಪ್ರತಿಮೆಯು ಈ ಸ್ಥಳದ ವಿಶೇಷ ಆಕರ್ಷಣೆ. ಸಿನಿಮಾ ನೋಡಿದ್ದರೆ ಈ ಜಾಗ ಎಷ್ಟು ಅದ್ಭುತವಾಗಿದೆ ಎನ್ನುವುದು ಗೊತ್ತಾಗುತ್ತದೆ.

Untitled design - 2026-10-19T163907.768

ಈ ಜಾಗದ ಮೊದಲೇ ಜನರಿಗೆ ಗೊತ್ತಿರಬಹುದು. ಆದರೆ, ಈಗ ಈ ಸಿನಿಮಾದಲ್ಲಿ ನೋಡಿದ ಮೇಲೆ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ. ಮಲೆನಾಡಿನ ಸಿರಿಗೆ ಜಾಗವೆಂದರೆ ಅದು ಹಾಸನ ಜಿಲ್ಲೆ. ಇಲ್ಲಿ ಐತಿಹಾಸಿಕ ತಾಣಗಳೂ ಸಿಗುತ್ತವೆ ಮತ್ತು ಪ್ರಾಕೃತಿಕ ಸೌಂದರ್ಯವೂ ಇದೆ. ಈ ಜಿಲ್ಲೆಯ ಮಡಿಲಲ್ಲಿ ಅಡಗಿರುವ ರಮಣೀಯ ಮತ್ತು ಪ್ರಶಾಂತ ತಾಣವೇ ಈ 'ಸೀಗೆ ಗುಡ್ಡ'. ಸಿದ್ದೇಶ್ವರ ಬೆಟ್ಟ ಅಂತಲೂ ಇದನ್ನು ಜನರು ಕರೆಯುತ್ತಾರೆ.

ಹಾಸನ ನಗರದಿಂದ ಸುಮಾರು 15 ರಿಂದ 16 ಕಿಲೋಮೀಟರ್ ದೂರದಲ್ಲಿರುವ ಸೀಗೆ ಗುಡ್ಡದ ವಿಡಿಯೋ ತುಣುಕುಗಳನ್ನು ನೋಡಿದರೆ ಸಾಕು ಯಾರಿಗೇ ಆದರೂ ಒಮ್ಮೆ ಭೇಟಿ ನೀಡಬೇಕು ಅಂತ ಅನಿಸದೆ ಇರಲು ಸಾಧ್ಯವಿಲ್ಲ. ಈ ಸ್ಥಳದಿಂದ ಕಾಣಸಿಗುವ ಸೂರ್ಯಾಸ್ತ ಮತ್ತು ಸೂರ್ಯೋದಯದ ದೃಶ್ಯಗಳು ಕಣ್ಣಿಗೆ ಹಬ್ಬವನ್ನು ಉಂಟುಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಜಾಗದಲ್ಲಿ ನಿಂತು ಸಂತು ಬರುತ್ತಾನೆ ಎಂದು ಕಾಯುವ ವಸಂತಾ ಜತೆಗೆ ನಾವೂ ಅಲ್ಲೇ ಇದ್ದೇವೆ ಎನ್ನುವ ಭಾವನೆ ಮೂಡುವಂತೆ ಮಾಡಿರುವುದೇ ಈ ಚಿತ್ರದ ಶಕ್ತಿ. ಒಮ್ಮೆ ನಾವೇ ಆ ಜಾಗಕ್ಕೆ ಹೋಗಿ ವಸಂತಾ ಪರವಾಗಿ ಪ್ರಾರ್ಥನೆ ಮಾಡಿಬಿಡಬಹುದೇ ಎಂಬ ಯೋಚನೆ ಬರುತ್ತದೆ. ಅದು ಆ ದೃಶ್ಯದ ಶಕ್ತಿ, ಆ ಜಾಗದ ವಿಶೇಷತೆ. ಅಲ್ಲಿಗೆ ಹೋಗುವ ದಾರಿ ಕೂಡ ಆಕರ್ಷಕವಾಗಿದೆ. ಅದನ್ನು ಅಷ್ಟೇ ಸುಂದರವಾಗಿ ನಿರ್ದೇಶಕರು ಚಿತ್ರದಲ್ಲಿ ತೋರಿಸಿದ್ದಾರೆ. ಸಾಮಾನ್ಯವಾಗಿ ಕಥೆ, ದೃಶ್ಯ, ಸನ್ನಿವೇಶ ಹಾಗೂ ಚಿತ್ರೀಕರಣದ ಕ್ರಿಯೇಟಿವಿಟಿಯಲ್ಲಿ ಸ್ಥಳದ ಸೌಂದರ್ಯ ಮರೆಯಾಗಿಹೋಗುತ್ತದೆ. ಆದರೆ, ಈ ʼಪ್ರೇಮದ ಊರಲಿʼ ಈ ಜಾಗವು ಕಥೆ ಹೇಳುತ್ತದೆ. ಅಷ್ಟು ಸುಂದರವಾಗಿ ಈ ಜಾಗವನ್ನು ಛಾಯಾಗ್ರಾಹಕ ಸೆರೆ ಹಿಡಿದಿದ್ದಾರೆ. ನಿರ್ದೇಶಕರು ಅಷ್ಟೇ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಈ ಜಾಗವನ್ನು, ಕಥೆಯನ್ನು ಹಾಗೂ ಸನ್ನಿವೇಶವನ್ನು ಇನ್ನಷ್ಟು ಆಪ್ತವಾಗಿಸಿದ್ದು ಎಂದರೆ ಅದು ಸುನಾದ್‌ ಗೌತಮ್‌ ಸಂಗೀತ.

ಮಳೆಗಾಲ ಹಾಗೂ ಚಳಿಗಾಲದ ಸಮಯದಲ್ಲಿ ಇಲ್ಲಿನ ಪರಿಸರವು ಮತ್ತಷ್ಟು ಕಳೆಕಟ್ಟುತ್ತದೆ. ಬೆಟ್ಟದ ತುದಿಯಿಂದ ಸುತ್ತಮುತ್ತಲಿನ ಹಸಿರು ಕಣಿವೆಗಳು ಮತ್ತು ನಿಸರ್ಗದ ರಮಣೀಯ ನೋಟವು ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ನಗರದ ಗದ್ದಲದಿಂದ ದೂರವಿರುವ ಈ ಪ್ರಶಾಂತ ತಾಣದಲ್ಲಿ ಕೆಲವು ಗಂಟೆಗಳನ್ನು ಕಳೆಯುವುದು ಮನಸಿಗೆ ಅಪಾರ ನೆಮ್ಮದಿಯನ್ನು ನೀಡುತ್ತದೆ. ಈ ನೆಮ್ಮದಿಯನ್ನು ಹುಡುಕಿಕೊಂಡೇ ವಸಂತಾ ಮತ್ತು ಸಂತು ಇಬ್ಬರೂ ಈ ಜಾಗಕ್ಕೆ ಹೋಗುತ್ತಾರೆ. ನೆಮ್ಮದಿ ಅಷ್ಟೇ ಅಲ್ಲ ಈ ಜಾಗದಲ್ಲಿ ಪ್ರೀತಿಯೂ ಸಿಗುತ್ತದೆ.

ಹಾಸನದ ಐತಿಹಾಸಿಕ ತಾಣಗಳಾದ ಬೇಲೂರು ಮತ್ತು ಹಳೇಬೀಡಿಗೆ ಪ್ರಯಾಣಿಸುವ ಪ್ರವಾಸಿಗರು ಸಾಮಾನ್ಯವಾಗಿ ಸೀಗೆ ಗುಡ್ಡಕ್ಕೂ ಭೇಟಿ ನೀಡಬಹುದು. ಯಾವುದೇ ತೊಂದರೆಯಿಲ್ಲದೆ ಸುಲಭವಾಗಿ ತಲುಪಬಹುದಾದ ಈ ಬೆಟ್ಟವು ಸಾಹಸಮಯ ಚಾರಣ ಪ್ರಿಯರಿಗೂ ಹಾಗೂ ಆಧ್ಯಾತ್ಮಿಕ ಒಲವುಳ್ಳವರಿಗೂ ಅತ್ಯಂತ ಸೂಕ್ತವಾದ ಸ್ಥಳ. ಕರ್ನಾಟಕದ ಗುಪ್ತ ರತ್ನಗಳಲ್ಲಿ ಒಂದಾಗಿರುವ ಈ ತಾಣವು ಪ್ರಕೃತಿಯ ಮಡಿಲಲ್ಲಿ ಕೆಲವು ಕ್ಷಣಗಳನ್ನು ಕಳೆಯಲು ಅತ್ಯುತ್ತಮವಾದ ಆಯ್ಕೆ.

ಸಿನಿಮಾ ವಿವರ:

ಚಿತ್ರ: ಪ್ರೇಮದ ಊರಲಿ

ತೆರೆಕಂಡ ವರ್ಷ: 2026

ನಿರ್ದೇಶನ: ಮನೋಜ್‌ ಕುಮಾರ್‌

ತಾರಾಗಣ: ಶ್ರೀ ರಾಮ್‌, ರಮಿಕಾ ಶಿವು, ತಪಸ್ವಿನಿ ಪೂಣಚ್ಚ, ರಂಗಾಯಣ ರಘು