• ಅನಂತ್‌ ಹರಿತ್ಸ

ಕ್ಯಾಮೆರಾದ ಆವಿಷ್ಕಾರವು ನಿರಂತರವಾಗಿ ನೆಡೆಯುತ್ತ ಬಂದು ಡೆಗ್ಗೊರೆ ಟೈಪ್‌ ಕ್ಯಾಮೆರಾ, ಕ್ಯಾಲೋ ಟೈಪ್‌ ಕ್ಯಾಮೆರಾ, ಈಸ್ಟ್ ಮನ್‌ ಕೊಡಾಕ್‌ ಕ್ಯಾಮೆರಾ, ಜರ್ಮನಿಯ ಲಾಯಿಟ್ಜ್‌ ಕಂಪನಿಯ ಲೈಕ ಕ್ಯಾಮೆರಾಗಳ ಉದಯವಾಯಿತು. ವೆಟ್‌ ಪ್ಲೇಟ್‌, ಡ್ರೈ ಪ್ಲೇಟ್‌ ನಂತರ ಫಿಲಂರೋಲ್‌ಗಳು ಬಂದು, ಒಂದರ ನಂತರ ಒಂದರಂತೆ ತಾಂತ್ರಿಕವಾಗಿ ಉತೃಷ್ಟವಾಗುತ್ತ ಕ್ಯಾಮೆರಾವು ಬೆಳವಣಿಗೆ ಕಂಡಿತು. ಮಸೂರಗಳ ರಚನೆಯಲ್ಲೂ ಅಭಿವೃದ್ಧಿಯಾಯಿತು. ಕ್ಯಾಮೆರಾದಲ್ಲೂ ವಿಧ ವಿಧವಾದ ಮಾಡೆಲ್‌ಗಳು ಬರಲು ಶುರುವಾಯಿತು.

ಲಂಡನ್‌ ಸ್ಟಿರೀಯೋಸ್ಕೋಪಿಕ್‌ ಕಂಪನಿಯು 1889ರಲ್ಲಿ ಮರದ ಪಟ್ಟಿಗೆಯಿಂದ ಮಾಡಿದ ಒಂದು ಚಿಕ್ಕ ಕ್ಯಾಮೆರವೊಂದನ್ನು ಆವಿಷ್ಕರಿಸುತ್ತದೆ. ಅದು ಎರೆಡು ಮಸೂರಗಳನ್ನು ಬಳಸಿ ತಯಾರಿಸಲಾದ ಕ್ಯಾಮೆರಾವಾಗಿತ್ತು. ಅದಕ್ಕೆ ಕಾರ್ಲಟನ್‌ ಎಂದು ಹೆಸರಿಡಲಾಗಿತ್ತು.

ಇದನ್ನೂ ಓದಿ: ಐಪೋನ್‌ ಓಕೆ..ಕ್ಯಾಮೆರಾ ಯಾಕೆ?

ಇದರ ಮುಂದಿನ ಬೆಳವಣಿಗೆಯೇ TLR ಅನಲಾಗ್‌ ಕ್ಯಾಮೆರಾಗಳು. TLR ಎಂದರೆ Twin Lens Reflex. 1929, ಜರ್ಮನಿಯಲ್ಲಿ ರೋಲಿಫ್ಲೆಕ್ಸ್‌ TLR ಕ್ಯಾಮೆರ ಮಾರುಕಟ್ಟೆಗೆ ಬಿಡುಗಡೆಗೊಂಡಿತು. ಪೌಲ್‌ ಫ಼್ರಾಂಕ್ ಮತ್ತು ಹೈಡೆಕ ಇದರ ಜನಕರು. ಕ್ಯಾಮೆರಾದ ಪೆಟ್ಟಿಗೆಯ ಮೇಲೆ ಮತ್ತು ಕೆಳಗೆ ಎರಡು ಮಸೂರಗಳನ್ನು ಅಳವಡಿಸಲಾಗಿರುತ್ತದೆ. ಮೇಲಿನ ಮಸೂರದಲ್ಲಿ ಸೆರೆಹಿಡಿಯಲಾಗುವ ಚಿತ್ರವನ್ನು ನೋಡಲು ಹಾಗೂ ಕೆಳಗಿನ ಮಸೂರದಲ್ಲಿ ಚಿತ್ರವನ್ನು ಸೆರೆಹಿಡಿಯಲು ಬಳಸಲಾಯಿತು. ಮೇಲಿನ ಮಸೂರದಲ್ಲಿ ತಿರುಗಣಿ ಇದ್ದು ಅದರಿಂದ ಸೆರೆಹಿಡಿಯುವ ಚಿತ್ರವನ್ನು ಫೋಕಸ್‌ ಮಾಡಲು ವಿನ್ಯಾಸ ಮಾಡಿದ್ದರು. ಮೇಲಿನ ಮಸೂರವನ್ನು ತಿರುಗಿಸಿದಾಗ ಕೆಳಗಿನ ಮಸೂರವೂ ಗೇರ್‌ನ ಸಹಾಯದಿಂದ ಅದರೊಟ್ಟಿಗೆ ಫೋಕಸ್‌ಗೆ ಸರಿಯಾಗಿ ತಿರುಗುತ್ತಿತ್ತು. ಮೇಲಿನ ಮಸೂರದಿಂದ ಕಾಣುವ ಚಿತ್ರವು 45 ಡಿಗ್ರಿ ಕೋನದಲ್ಲಿ ಒಳಗೆ ಅಳವಡಿಸಲಾದ ಕನ್ನಡಿಯಿಂದ ಪ್ರತಿಫಲನಗೊಂಡು ಮೇಲೆ ಇರುವ ಭೂತಗನ್ನಡಿಯ ಚಿತ್ರದರ್ಶಕದಲ್ಲಿ ಎಡ ಬಲವಾಗಿ ತೋರುತ್ತದೆ. ಇದರಿಂದಾಗಿ ಉತ್ತಮ ಚಿತ್ರವನ್ನು ಪಡೆಯಲು ಸಾಧ್ಯವಾಗುತ್ತಿತ್ತು. ಈ ಕ್ಯಾಮೆರಾದಲ್ಲಿ 120MM ಫಿಲಂ ರೋಲನ್ನು ಬಳಸುತ್ತಿದ್ದರಿಂದ 8 ರಿಂದ 16 ಚಿತ್ರಗಳನ್ನ ಪಡೆಯಬಹುದಾಗಿದ್ದು, ಅದು 55mm X 55mm (6 X 6) ಗಾತ್ರದ ಚಿತ್ರಗಳಾಗಿತ್ತು.

Untitled Design (16)

TLR ಹಾಗೂ SLR (Single Lens Reflex) ಕ್ಯಾಮೆರಾದ ರಚನೆಯ ವ್ಯತ್ಯಾಸವೇನೆಂದರೆ SLR ಕ್ಯಾಮೆರದಲ್ಲಿ ಒಂದೇ ಮಸೂರವಿದ್ದು, ಅದರಲ್ಲಿ ಕಾಣುವ ಚಿತ್ರವು 45 ಡಿಗ್ರಿ ಕೋನದಲ್ಲಿ ಒಳಗೆ ಅಳವಡಿಸಲಾದ ಕನ್ನಡಿಯಿಂದ ಪ್ರತಿಫಲನಗೊಂಡು ಮೇಲೆ ಇರುವ ಭೂತಗನ್ನಡಿಯಲ್ಲಿ ತೋರುವಂತೆ ಮಾಡಲಾದ ರಚನೆಯಾಗಿದೆ. ಚಿತ್ರ ತೆಗೆಯುವಾಗ ಕ್ಯಾಮೆರಾದ ಶಟರ್‌ ಕ್ಲಿಕ್‌ ಆಗುತ್ತದ್ದಂತೆ ಕನ್ನಡಿಯು ಮೇಲಕ್ಕೆ ಚಲಿಸುತ್ತದೆ ಹಾಗೂ ಮಸೂರದ ಮೂಲಕ ಚಿತ್ರದ ಬಿಂಬವು ಬೆಳಕಿನ ಸಹಾಯದಿಂದ ಫಿಲಂ ರೋಲ್‌ನಲ್ಲಿ ಮುದ್ರಿತವಾಗುತ್ತದೆ. ಚಿತ್ರ ಸೆರೆಯಾದ ನಂತರ ಕನ್ನಡಿಯು ಪುನಃ ತನ್ನ ಸ್ವಸ್ಥಾನಕ್ಕೆ ಮರಳುತ್ತದೆ. TLR ಕ್ಯಾಮೆರಾದಲ್ಲಿ ಬೆಳಕಿನ ಹರಿವನ್ನು ನಿಯಂತ್ರಿಸಲು ಲೀಫ್‌ ಶಟರ್‌ ಅಪಾರ್ಚರ್‌ ತಾಂತ್ರಿಕತೆಯನ್ನು ಬಳಸಲಾಗಿರುವುದರಿಂದ ಚಿತ್ರವನ್ನು ಸೆರೆ ಹಿಡಿಯುವಾಗಿನ ನಡುಕವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಇದರಲ್ಲಿ ಚಿತ್ರವನ್ನು ಪ್ರತಿಫಲಿಸುವ ಕನ್ನಡಿಯು SLR ಕ್ಯಾಮೆರಾದ ಕನ್ನಡಿಯಂತೆ ಚಲಿಸದೆ ಸ್ಥಿರವಾಗಿರುತ್ತದೆ.

Untitled Design (15)

TLR ಕ್ಯಾಮೆರಾದಲ್ಲಿ ಬಳಸಲಾಗುವ ಎರೆಡೂ ಮಸೂರಗಳು ಒಂದೆ ರೀತಿಯದ್ದಾಗಿರಬೇಕು. ಒಂದು ಮಸೂರ ಬೇರೆಯ ವಿಧದ್ದಾಗಿದ್ದರೂ ಸರಿಯಾದ ಚಿತ್ರ ಸೆರೆಹಿಡಿಯಲು ಸಾಧ್ಯವಿಲ್ಲ. ಕ್ಯಾಮೆರಾದ ರೋಲ್‌ನ್ನು ಮುಂದಿನ ಪ್ರೇಮಿಗೆ ಅಳವಡಿಸಲು ಕ್ರಾಂಕ್‌ ತಿರುಗಿಸಬೇಕು ಅಥವಾ ತಿರುಗಣಿಯಿಂದ ಮುಂದೆ ಚಲಿಸುವಂತೆ ಮಾಡಲಾಗುತ್ತದೆ. ಅಲ್ಲದೆ ಪ್ರೇಮಿನ ಸಂಖ್ಯೆಯನ್ನು ನಮೂದಾಗುವಂತೆ ಮಾಡಿರುವುದರಿಂದ ಛಾಯಾಗ್ರಾಹಕರಿಗೆ ತಾವು ಸೆರೆಹಿಡಿದ ಚಿತ್ರಗಳ ಸಂಖ್ಯೆಯು ತಿಳಿಯುವಂತಾಯಿತು.

TLR ಕ್ಯಾಮೆರಾಗಳಲ್ಲಿ ಕೇವಲ 120mm ಫಿಲಂ ರೋಲ್‌ ಮಾತ್ರ ಬಳಸಬೇಕಾಗುವಂತೆ ತಯಾರಿಸಲಾಗಿದ್ದರೂ, ಮಮೀಯಾ ಕ್ಯಾಮೆರಾದಲ್ಲಿ ಕೆಲವು ಅಳವಡಕ (Adapter) ಅಳವಡಿಸಿದರೆ 35mm ಫಿಲಂ ರೋಲ್‌ನಲ್ಲೂ ಕೂಡಾ ಚಿತ್ರ ಸೆರೆಹಿಡಿಯಬಹುದಾಗಿದೆ. 35mm ಫಿಲಂ ರೋಲಿನಲ್ಲಿ 24 ರಿಂದ 36 ಚಿತ್ರಗಳನ್ನು ಸೆರೆಹಿಡಿಯಬಹುದು.

Untitled Design (17)

ಸೊಂಟದ ಭಾಗದ ಬಳಿ ಕ್ಯಾಮೆರಾ ಹಿಡಿದು ಮೇಲಿನ ಚಿತ್ರದರ್ಶಕದಲ್ಲಿ ಚಿತ್ರದ ಫ್ರೇಮ್‌ ನೋಡುವಂಥ ವಿಭಿನ್ನ ರೀತಿಯ ಕ್ಯಾಮೆರ, TLR ಕ್ಯಾಮೆರ ಆಗಿದೆ.

ಜಪಾನಿನ ಮಮೀಯಾ TLR ಕ್ಯಾಮೆರಾ ಗಾತ್ರದಲ್ಲಿ ಚೂರು ದೊಡ್ಡದಾದರೂ ಅನೇಕ ಉತ್ತಮ ಅಂಶಗಳನ್ನು ಒಳಗೊಂಡ ಬೆಲ್ಲೋ ಕ್ಯಾಮೆರ. ಇದರಲ್ಲಿನ ಮಸೂರಗಳನ್ನು ಬದಲಾಯಿಸಲು ಅವಕಾಶವಿದ್ದು, ಇದರಿಂದಾಗಿ ಟೆಲಿ, ವೈಡ್‌ ಆಂಗಲ್‌, ಅಲ್ಲದೆ ಮ್ಯಾಕ್ರೋ ಚಿತ್ರಗಳನ್ನೂ ಸಹ ಇದರಿಂದ ತೆಗೆಯಬಹುದಾಗಿದೆ. ಅಲ್ಲದೆ ಇದರಲ್ಲಿ ಪ್ಯಾರಲಾಕ್ಸ್‌ ಸಮಸ್ಯೆ ಕಡಿಮೆಯಿದೆ. TLR ಕ್ಯಾಮೆರಾದಲ್ಲಿ ಮೇಲೊಂದು ಕೆಳಗೊಂದು ಮಸೂರ ಇರುವ ಕಾರಣ ಚಿತ್ರದರ್ಶಕದಲ್ಲಿ ಕಾಣುವ ಚಿತ್ರಕ್ಕೂ, ಸೆರೆಹಿಡಿಯಲಾದ ಚಿತ್ರಕ್ಕೂ ಫ್ರೇಮಿನಲ್ಲಿ ಬರುವ ವ್ಯತ್ಯಾಸಕ್ಕೆ ʼಪ್ಯಾರಲಾಕ್ಸ್‌ ಸಮಸ್ಯೆʼ ಎನ್ನುವರು. ಮೇಲಿನ ಮಸೂರ ಕೇವಲ ಚಿತ್ರವನ್ನು ನೋಡಲು ಇದ್ದು ಚಿತ್ರವನ್ನು ಸೆರೆಹಿಡಿಯುವ ಮಸೂರವು ಕೆಳಗಿರುವುದರಿಂದ ಹತ್ತಿರದಿಂದ ತೆಗೆಯಲಾಗುವ ಚಿತ್ರದ ಫ್ರೇಮಿನಲ್ಲಿ ವ್ಯತ್ಯಾಸ ಉಂಟಾಗುವುದು.

ಇದನ್ನೂ ಓದಿ: ಕ್ಯಾಮೆರಾ & ಛಾಯಾಗ್ರಹಣ ಒಂದು ಹಿನ್ನೋಟ

TLR ಕ್ಯಾಮೆರಾದ ಶಟರ್‌ ವೇಗ ಕೇವಲ 1/500 ಸೆಕೆಂಡ್‌ಗಳಿರುವುದರಿಂದ ಕ್ರೀಡೆ ಅಥವಾ ವೇಗವಾಗಿ ಚಲಿಸುತ್ತಿರುವ ಚಿತ್ರಗಳನ್ನು ತೆಗೆಯಲು ಅಸಮರ್ಥವಾಗಿದೆ. ಆದರೆ, ಬೀದಿಯ ಛಾಯಾಗ್ರಹಣ, ಭಾವಚಿತ್ರಗಳನ್ನು ಅದ್ಭುತವಾಗಿ ಸೆರೆಹಿಡಿಯಬಹುದು. ಚಲಿಸುವ ಕನ್ನಡಿ ಇರದ ಕಾರಣ, ಅಲ್ಲದೆ ಲೀಫ್‌ ಶಟರ್‌ ಇರುವುದರಿಂದ ಇದೊಂದು ಉತ್ತಮವಾದ ಕ್ಯಾಮೆರಾವಾಗಿದೆ.

ಜರ್ಮನಿಯ ರೋಲಿಫ್ಲೆಕ್ಸ್‌, ಜಪಾನಿನ ಯಾಶಿಕ, ಮಿನೋಲ್ಟಾ, ಕೋನಿಕ, ಮಮೀಯ, ಚೆಕೋಸ್ಲೋವಾಕಿಯಾದ ಮಿಯೋಪ್ಟ – ಫ್ಲೆಕ್ಸಾರೆಟ್‌, ಸೋವಿಯತ್‌ ರಷ್ಯಾದ ಲೋಮೋ, ಲೂಬಿಟೆಲ್‌, ಚೈನಾದ ಸೀಗಲ್‌ ಪ್ರಮುಖ TLR ಕ್ಯಾಮೆರಾಗಳು.