ಸ್ತ್ರೀಯರಿಗೆ ತಟ್ಟೆ ಪುರುಷರಿಗೆ ಕಪ್! ವಿಂಬಲ್ಡನ್ನಲ್ಲಿ ಇದೆಂಥ ತಾರತಮ್ಯ?
ಕ್ಲಬ್‌ನ ಒಳಗೆ, ಲಾನ್ ಟೆನ್ನಿಸ್ ಮ್ಯೂಸಿಯಂ ಮೌನವನ್ನು ಮಾರ್ದನಿಸುವ ಗ್ರಂಥಾಲಯದಂತೆ ಇದೆ. ಇದು ಪ್ರಪಂಚದಲ್ಲಿಯೇ ಅತಿದೊಡ್ಡ ಟೆನ್ನಿಸ್ ಮ್ಯೂಸಿಯಂ. ಅದರೊಳಗೆ ನಡೆಯುವುದು ಎಂದರೆ ರಾಕೆಟ್ ಕೈಯಲ್ಲಿ ಹಿಡಿದು ಕಾಲದೊಳಗೆ ಹೆಜ್ಜೆ ಇಟ್ಟಂತೆ. 1555ರಿಂದಲೂ ಸಂಗ್ರಹಿಸಿಟ್ಟ ನಲವತ್ತು ಸಾವಿರಕ್ಕೂ ಹೆಚ್ಚು ವಸ್ತುಗಳಿಲ್ಲಿ ಸಂಭಾಷಣೆಗೆ ಕೂರುತ್ತವೆ. ಪುರುಷರಿಗೆ ನೀಡುವ ಕಪ್ ಮಹಿಳೆಯರಿಗೆ ಕೊಡಲಾಗುವ ಗುಲಾಬಿ ಬಣ್ಣದ ತಟ್ಟೆ ಪ್ರಶ್ನೆಗಳನ್ನು ಹುಟ್ಟಿಸುವ ಎರಡು ಬಹುಮಾನಗಳು. ಜಂಟಲ್‌ಮೆನ್ ಸಿಂಗಲ್ಸ್ ಟ್ರೋಫಿ ಎತ್ತರವಾದ, ಚಿನ್ನದ ಕಪ್. 1887ರಲ್ಲಿ ಮೊದಲು ನೀಡಲಾಯಿತು.
- ಅಂಜಲಿ ರಾಮಣ್ಣ
ಭೂಪಟ ನೋಡಿಕೊಂಡೋ ಅಥವಾ ಸಿನಿಮಾ, ವಿಡಿಯೋದಲ್ಲಿ ನೋಡಿಯೋ ಅಥವಾ ಓದಿಯೋ, ಸ್ನೇಹಿತರ ಮಾತುಗಳಲ್ಲಿ ಕೇಳಿಯೋ ಕೆಲವು ಸ್ಥಳಗಳಿಗೆ ಪ್ರವಾಸಕ್ಕೆ ಹೋಗುತ್ತೇವೆ. ಆದರೆ ಇನ್ನು ಕೆಲವು ಸ್ಥಳಗಳಿಗೆ ನಮ್ಮ ಹೃದಯ ಬಹಳ ಹಿಂದೆಯೇ ಅಲ್ಲಿಗೆ ಹೋಗಿ ನೆಲೆಸಿಬಿಟ್ಟಿರುತ್ತದೆ. ನನ್ನ ಪಾಲಿಗೆ ವಿಂಬಲ್ಡನ್ ಭೇಟಿ ಹಾಗೆ ಹೃದಯ ಹೋಗಿ ನಿಂತಿದ್ದ ಸ್ಥಳವಾಗಿತ್ತು.
ಈ ವರ್ಷದ ಚಾಂಪಿಯನ್ ಜಾನಿಕ್ ಸಿನ್ನರ್ ಮೊದಮೊದಲ ಸುತ್ತುಗಳಲ್ಲಿ ಗಂಭೀರವಾಗಿ ಬಿದ್ದು ತನ್ನ ಬಲಗಾಲಿಗೆ ಪೆಟ್ಟು ಮಾಡಿಕೊಂಡು. ನೋವಿನಿಂದ ಕಿರುಚಿ ಕೆಲ ಕ್ಷಣಗಳ ಕಾಲ ಹಾಗೇ ಇದ್ದು ಎದ್ದು ನಿಂತಾಗ ಆತನ ಬಿಳಿ ಶೂನಿಂದ ರಕ್ತ ಸೋರತೊಡಗಿತು, ಕ್ಯಾಮೆರಾಗಳು ಮತ್ತು ವಿವರಗಾರರು ಅದನ್ನು ಗಮನಿಸಿದರು. ಆದರೆ ಸಿನ್ನರ್ ತರಬೇತುದಾರನನ್ನು ಕರೆಯಲಿಲ್ಲ, ವೈದ್ಯಕೀಯ ವಿರಾಮವನ್ನೂ ತೆಗೆದುಕೊಳ್ಳಲಿಲ್ಲ. ನಿಧಾನವಾಗಿ ಆಡತೊಡಗಿ ಆಟ ಗೆದ್ದ. ರಕ್ತ ಸೋರಿದರೂ, ನೋವಿದ್ದರೂ ಶಾಂತವಾಗಿ ಆಡಿ ಗೆದ್ದ ಆತನ ಮನೋಭಾವಕ್ಕಾಗಿಯೇ ವಿಂಬಲ್ಡನ್ ಇತಿಹಾಸದಲ್ಲಿ ಇದನ್ನು ‘Bloodied But Unbowed’ ಎಂದು ದಾಖಲಿಸಲಾಯಿತು.
ಇದನ್ನೂ ಓದಿ: ಜಪಾನ್ ಸೇತುವೆಗಳ ಹಿಂದಿರುವ ಸಾಂಸ್ಕೃತಿಕ ಪರಂಪರೆ
ಇದೆಲ್ಲಾ ನಡೆಯುವಾಗ ಬೆಕರ್ ನನ್ನ ಕಿವಿಗಳಲ್ಲಿ ತನ್ನ ಎಂದಿನ ಶೈಲಿಯಲ್ಲಿ ಘರ್ಜಿಸುತ್ತಿದ್ದ. ಅದು ನನ್ನ ಹುಡುಗಿತನದ ದಿನಗಳು. ಅಡುಗೆ ಮನೆಯ ಕಟ್ಟೆಗಿಂತ ಎತ್ತರವಿಲ್ಲದ ನನ್ನ ಕಿವಿಗೆ ಬೋರಿಸ್ ಬೆಕರ್‌ನ ಸರ್ವ್‌ನ ಸದ್ದು ಶಾಲೆಯ ಪಾಠಗಳಿಗಿಂತ ಮೊದಲು ತಲುಪುತ್ತಿತ್ತು. ಹೊಂಬಣ್ಣದ ತಲೆಗೂದಲಿಗೆ ತನ್ನ ಆಟದಷ್ಟೇ ಖ್ಯಾತನಾದ ಹುಡುಗ. ಹೆದರಿಕೆ ಎಂಬುದನ್ನೇ ಅರಿಯದವ, ಆತ ಟೆನ್ನಿಸ್ ಆಡುತ್ತಿರಲಿಲ್ಲ, ಆಟವನ್ನೇ ಮರುಸೃಷ್ಟಿಸುತ್ತಿದ್ದ. ಗೆದ್ದ ಕ್ಷಣದಲ್ಲಿ ನೋಡುತ್ತಿದ್ದ ನನ್ನ ಹೃದಯವು ಕಂಪಿಸುವಂತೆ ಘರ್ಜಿಸುತ್ತಿದ್ದ. ಆ ದನಿಯ ಸೆಳೆತದಲ್ಲೇ ಶುರುವಾಗಿತ್ತು ವಿಂಬಲ್ಡನ್ ಕಡೆಗೆ ನನ್ನ ಪ್ರಯಾಣ.

ಪ್ರವಾಸ ಒಂದು ಹವ್ಯಾಸ ಎನ್ನುವುದು ಸತ್ಯ. ಆದರೆ ತನ್ನ ಆಟದ ಮೂಲಕ ಅನೂಹ್ಯ ಪ್ರೀತಿಗೆ ಬೀಳಿಸಿಕೊಂಡಿದ್ದ ಹುಡುಗನ ಜಾಡು ಹಿಡಿಯುವ ವಿಧವೂ ಒಂದು ಪ್ರವಾಸವೇ ಆಗಿತ್ತು ನನ್ನ ಪಾಲಿಗೆ. ಯಾವಾಗಲೇ ಲಂಡನ್‍ಗೆ ಹೋದರೂ ವಿಂಬಲ್ಡನ್ ನೋಡದೆ ಹಿಂದಿರುಗಲಾರೆ ಎನ್ನುವ ಪಣ ತೊಟ್ಟಿದ್ದಾಗಿತ್ತು. ಅವನ ಕನಸುಗಳು ಬೀಳುವುದು ನಿಲ್ಲುವಷ್ಟು ಸಮಯ ಸರಿದು ಹೋಗಿತ್ತು, ಅವನು ಆಟದಿಂದ ನಿವೃತ್ತಿಯೂ ಹೊಂದಿದ್ದ. ಆಗ ನಿಂತಿದ್ದೆ ಲಂಡನ್ ನೆಲದಲ್ಲಿ. ಹೊಟೇಲಿನಲ್ಲಿ ಲಗೇಜ್ ಇಟ್ಟು ಅಲ್ಲಿನ ಟ್ಯೂಬ್ ರೈಲು ಟಿಕೆಟ್ ತೆಗೆದುಕೊಂಡು ಹೊರಟಿದ್ದು ವಿಂಬಲ್ಡನ್‍ಗೆ.
ಅಲ್ಲಿ ಪಂದ್ಯವನ್ನು ನೋಡಲು ಟಿಕೆಟ್‍ಗಳನ್ನು ನಾಲ್ಕು ಐದು ವರ್ಷಗಳ ಮೊದಲೇ ಕಾದಿರಿಸಬೇಕು. ಅದೂ ಕೂಡ ಭಾರತೀಯ ಮಧ್ಯಮವರ್ಗದ ಮಿತಿಯನ್ನು ಮೀರಿದ ದರದಲ್ಲಿ. ಅಲ್ಲಿ ಮುಂದೆಯೇ ಕುಳಿತು ನೋಡಬೇಕು ಎಂದರೆ ಆ ಟಿಕೆಟ್‍ಗಳ ದರವನ್ನು ಸಾಮಾನ್ಯರಿಂದ ಊಹಿಸಲೂ ಅಸಾಧ್ಯ. ನಾನು ಅಲ್ಲಿಗೆ ಹೋದದ್ದು ಪಂದ್ಯ ನೋಡಲು ಅಲ್ಲ ಬೋರಿಸ್ ಬೆಕರ್ ನಿಂತಿದ್ದ ಜಾಗದಲ್ಲಿ ನಿಲ್ಲಬೇಕು ಮತ್ತು ನೆನಪುಗಳಲ್ಲಿ ಮತ್ತೊಮ್ಮೆ ಹೊಸ ಹುಡುಗಿಯಾಗಬೇಕು ಎನ್ನುವ ಉತ್ಕಟತೆಯಿಂದ.
ಆಲ್ ಇಂಗ್ಲೆಂಡ್ ಕ್ಲಬ್‌ನ ಬಾಗಿಲಿನಲ್ಲಿ ಮೊದಲು ಸ್ವಾಗತಿಸಿದ್ದು ಒಂದು ಲಾಂಛನ. ಟಿ.ವಿಯಲ್ಲಿ ಹತ್ತಾರು ಬಾರಿ ನೋಡಿದ್ದ, ಆದರೆ ಎದುರು ನಿಂತು ನೋಡುವವರೆಗೂ ಅರ್ಥವಾಗದ ಲಾಂಛನ. ಎರಡು ಟೆನ್ನಿಸ್ ರಾಕೆಟ್‌ಗಳು ಅಡ್ಡಲಾಗಿ, ನಡುವೆ ಒಂದು ಚೆಂಡು. ಸುತ್ತಲೂ ನವಿರಾದ ನೇರಳೆ ಮತ್ತು ವಿಂಬಲ್ಡನ್ ಅಂಗಳದ ಹುಲ್ಲಿನ ಹಸಿರು. ಅದರ ಮೇಲೆ ಅಚ್ಚಾಗಿತ್ತು ‘ದಿ ಚಾಂಪಿಯನ್‌ಷಿಪ್ಸ್, ವಿಂಬಲ್ಡನ್.’ ಹತ್ತೊಂಬತ್ತನೆಯ ಶತಮಾನದಿಂದಲೂ ಇದು ಟೆನ್ನಿಸ್ ಕ್ಲಬ್‌ನ ಸಂಕೇತ. ನೇರಳೆ ಬಣ್ಣ ರಾಜಮನೆತನದ ಗೌರವದ ಸಂಕೇತ. ಹಸಿರು ಬಣ್ಣ ಹುಲ್ಲಿನ ಸಂಕೇತ. ಇಂದಿಗೂ ಅದೇ ಸಂಪ್ರದಾಯ ಮುಂದುವರಿದಿದೆ. ವಿಂಬಲ್ಡನ್ ಆ ಲೋಗೋವನ್ನು ಕಟ್ಟುನಿಟ್ಟಾಗಿ ಕಾಪಾಡುತ್ತಿದೆ. ಚಾಂಪಿಯನ್‌ಷಿಪ್‌ನ ಹದಿನಾಲ್ಕು ದಿನಗಳ ಕಾಲ ಅದು ಎಲ್ಲೆಲ್ಲೂ ಇರುತ್ತದೆ. ಪ್ರತಿ ಬಾರಿ ಕಾಣಿಸಿದಾಗಲೂ ಟೆನಿಸ್ ಪ್ರಿಯರ ಹೆಮ್ಮೆಯ ಚಿಹ್ನೆಯಂತೆ ಎನಿಸುತ್ತದೆ.

ಕ್ಲಬ್‌ನ ಒಳಗೆ, ಲಾನ್ ಟೆನ್ನಿಸ್ ಮ್ಯೂಸಿಯಂ ಮೌನವನ್ನು ಮಾರ್ದನಿಸುವ ಗ್ರಂಥಾಲಯದಂತೆ ಇದೆ. ಇದು ಪ್ರಪಂಚದಲ್ಲಿಯೇ ಅತಿದೊಡ್ಡ ಟೆನ್ನಿಸ್ ಮ್ಯೂಸಿಯಂ. ಅದರೊಳಗೆ ನಡೆಯುವುದು ಎಂದರೆ ರಾಕೆಟ್ ಕೈಯಲ್ಲಿ ಹಿಡಿದು ಕಾಲದೊಳಗೆ ಹೆಜ್ಜೆ ಇಟ್ಟಂತೆ. 1555ರಿಂದಲೂ ಸಂಗ್ರಹಿಸಿಟ್ಟ ನಲವತ್ತು ಸಾವಿರಕ್ಕೂ ಹೆಚ್ಚು ವಸ್ತುಗಳಿಲ್ಲಿ ಸಂಭಾಷಣೆಗೆ ಕೂರುತ್ತವೆ. ಪುರುಷರಿಗೆ ನೀಡುವ ಕಪ್ ಮಹಿಳೆಯರಿಗೆ ಕೊಡಲಾಗುವ ಗುಲಾಬಿ ಬಣ್ಣದ ತಟ್ಟೆ ಪ್ರಶ್ನೆಗಳನ್ನು ಹುಟ್ಟಿಸುವ ಎರಡು ಬಹುಮಾನಗಳು. ಜಂಟಲ್‌ಮೆನ್ ಸಿಂಗಲ್ಸ್ ಟ್ರೋಫಿ ಎತ್ತರವಾದ, ಚಿನ್ನದ ಕಪ್. 1887ರಲ್ಲಿ ಮೊದಲು ನೀಡಲಾಯಿತು. ಅದರ ಪಕ್ಕದಲ್ಲಿ 1886ರಲ್ಲಿ ಮಹಿಳಾ ಚಾಂಪಿಯನ್‌ಗೆ ಮೊದಲು ನೀಡಲಾದ ಬೆಳ್ಳಿಯ ಸುಂದರ ಪ್ಲೇಟ್.
ಈಗಲೂ ಪುರುಷರಿಗೆ ನೀಡುವ ಕಪ್ ಶ್ರೇಷ್ಠ, ಮಹಿಳೆಯರಿಗೆ ತಟ್ಟೆ ಕೊಡುವುದು ಕಡಿಮೆ ದರ್ಜೆ ಎನ್ನುವ ಚರ್ಚೆ ಟೆನಿಸ್ ಬಗ್ಗೆ ತಿಳಿಯದವರಲ್ಲಿ ನಡೆಯ್ತುತ್ತಿರುತ್ತದೆ. ಆದರೆ, ‘ಮಹಿಳೆಯರಿಗೆ ಯಾಕೆ ತಟ್ಟೆ?’ ಎಂಬ ಪ್ರಶ್ನೆಗೆ ಇಲ್ಲಿನ ಗೋಡೆಗಳೇ ಉತ್ತರ ಕೊಡುತ್ತವೆ. ವಿಕ್ಟೋರಿಯನ್ ಯುಗದ ಬ್ರಿಟನ್‌ನಲ್ಲಿ ಅಲಂಕಾರಿಕ ಬೆಳ್ಳಿ ತಟ್ಟೆ ಎಂದರೆ ಗೌರವದ ಪರಮಾವಧಿ. ಇಂದು ಬಹುಮಾನದ ಹಣವೂ ಸಮಾನ, ಗೌರವವೂ ಸಮಾನ. ಕಪ್ ಮತ್ತು ತಟ್ಟೆ ಎರಡು ಬೇರೆ ಬೇರೆ ಆಕಾರಗಳಲ್ಲಿ ಒಂದೇ ತೂಕದ ಜಯವನ್ನು ಎತ್ತಿಹಿಡಿಯುತ್ತಿವೆ.
ಮೊಟ್ಟೆಯಾಕಾರದ ಕೋಣೆಯಲ್ಲಿ ಚೌಕಾಕಾರದ ಗೋಡೆಗಳ ಮೇಲೆ ಸಮಯ ಸರಿಯುತ್ತಿರುತ್ತದೆ ಅಲ್ಲಿ. ಬಿಳಿಯರು ಮಾತ್ರ ಟೆನಿಸ್ ಆಡುತ್ತಿದ್ದ ಕಾಲದ ಗ್ಯಾಲರಿಯನ್ನು ‘ವಿಂಬಲ್ಡನ್‌ನ ಬಿಳಿಯರು’ ಎಂದು ಹೆಸರಿಸಲಾಗಿದೆ. ನಂತರದ ದಿನಗಳಲ್ಲಿ ವಿಂಬಲ್ಡನ್ ವರ್ಣಭೇದ ತೊರೆದಿದ್ದು ರೋಚಕ ಕಥೆ. ಮೊದಲೆಲ್ಲಾ ಆಟಗಾರರ ಬಟ್ಟೆ ಐದು ಕಿಲೋಗ್ರಾಂ ತೂಗುತ್ತಿದ್ದವು ಅದನ್ನು ನೋಡಿ ಮುಂದಡಿ ಇಡುವಾಗಲೇ ಸಿಗುತ್ತದೆ 2004ರಲ್ಲಿ ಮಾರಿಯಾ ಶರ್ಪೋವಾ ಧರಿಸಿದ್ದ ಗರಿಯಂತೆ ಹಗುರವಾದ ಉಡುಗೆ. ನಡಾಲ್‌ನ ಪ್ಯಾಂಟ್, ಬೋರ್ಗ್‌ನ ಹೆಡ್‌ಬ್ಯಾಂಡ್, ಸೆರೆನಾಳ ಕ್ಯಾಟ್‌ಸೂಟ್ ಹೀಗೆ ಬಟ್ಟೆಗಳು ಬದಲಾಗುತ್ತವೆ, ಆಟ ಬದಲಾಗುತ್ತದೆ, ಆದರೆ ಹುಲ್ಲು ಮಾತ್ರ ಹಾಗೆಯೇ ಉಳಿಯುತ್ತದೆ.
ಫೆಡರರ್ ಫೋರ್‌ಹ್ಯಾಂಡ್ ಹೊಡೆಯುವ ಭಂಗಿ, ಜೋಕೋವಿಚ್‌ನ ಭುಜಚಾಚಿದ ಹೊಡೆತ, ಸೆರೆನಾಳ ಸರ್ವ್, ನವ್ರಾಟಿಲೋವಾಳ ವಾಲಿ ಮತ್ತು ಬೋರಿಸ್ ಬೆಕರ್‌ನ ಬಾಗು ಜಿಗಿತ ಎಲ್ಲದರ ದೊಡ್ಡ ದೊಡ್ಡ ಚಿತ್ರಪಟಗಳು ನೋಡುತ್ತಾ ಅವುಗಳ ಮೇಲಿರುವ ವಿವರಗಳನ್ನು ಓದುತ್ತಾ ಹೃದಯದ ಆಯಸ್ಸು ಹೆಚ್ಚುವುದು ಖಚಿತ. ಆಟಗಾರರ ನಿಜವಾದ ಅಳತೆ, ಉಡುಗೆಯನ್ನೇ ಬಳಸಿ ಮಾಡಿದ ಶಿಲ್ಪಗಳಂತೂ ಟೈಮ್ ಮೆಷಿನ್‍ನಲ್ಲಿ ಕುಳಿತು ಪರ್ಯಟನೆ ಮಾಡಿಸಿದ ಅನುಭವ ಕೊಡುತ್ತವೆ.
ಇಲ್ಲಿ ಯಾರೂ ಕೇವಲ ನೋಡುಗರಾಗಿ ಉಳಿಯಲು ಆಗುವುದಿಲ್ಲ. ಚಾಂಪಿಯನ್‌ಷಿಪ್‌ನ ಇತಿಹಾಸದೊಳಗೆ, ಹುಲ್ಲುಗಾವಲಿನ ವಿಜ್ಞಾನದೊಳಗೆ ಸಾಗುತ್ತಿರುತ್ತೇವೆ. ಜಾನ್ ಮೆಕೆನ್ರೋನ ಪ್ರೊಜೆಕ್ಷನ್, ನಿಷಿದ್ಧ ಡ್ರೆಸ್ಸಿಂಗ್ ಕೊಠಡಿಗಳನ್ನು ತೋರಿಸುತ್ತದೆ. 360 ಡಿಗ್ರಿ ಪರದೆಯು ಅಂಕಣ ಖಾಲಿಯಿದ್ದರೂ ತುಂಬಿರುವ ಸೆಂಟರ್ ಕೋರ್ಟ್‌ನಲ್ಲಿ ನಮ್ಮನ್ನು ಕೂರಿಸುತ್ತದೆ. ನುರಿತ ಆಟಗಾರರ ಆಟದ ವೇಗಕ್ಕೆ, ವೈಖರಿಗೆ ನಮ್ಮ ರಿಯಾಕ್ಷನ್ ಅನ್ನು ಪರೀಕ್ಷಿಸುವ ಯಂತ್ರವೊಂದಿದೆ ಅಲ್ಲಿ.

ಒಮ್ಮೆಯೂ ಆಟವನ್ನು ನೇರವಾಗಿ ನೋಡಿರದವರೂ ಉತ್ಕಟ ಪ್ರೇಕ್ಷಕರಾಗಿ ಕರಗುವುದು ಮಾರ್ಗದರ್ಶಕರೊಂದಿಗಿನ ತೊಂಬತ್ತು ನಿಮಿಷದ ಪ್ರವಾಸದಲ್ಲಿ. ಪತ್ರಿಕಾಗೋಷ್ಠಿ ಕೋಣೆ, ಆಟಗಾರರ ಪ್ರವೇಶ ದ್ವಾರ, ರಾಯಲ್ ಬಾಕ್ಸ್‌ನ ಎದುರಿನ ಆಸನ, ಕಮೆಂಟೇಟರ್ ಕುರ್ಚಿ ಎಲ್ಲವೂ ಕ್ರೀಡಾಪ್ರಿಯರಿಗೆ ಸ್ವಪ್ನಲೋಕವನ್ನು ಅನಾವರಣಗೊಳಿಸುತ್ತದೆ. ಅಂತಿಮವಾಗಿ ಸೆಂಟರ್ ಕೋರ್ಟ್ ದರ್ಶನ. ವಾಹ್, ’ಸೈಲೆನ್ಸ್ ಪ್ಲೀಸ್’ ಎನ್ನುವ ಎಚ್ಚರಿಕೆ, ಅಂಪೈರ್‌ನ ಧ್ವನಿ ಏನೂ ಇಲ್ಲ. ಕೇವಲ ಹುಲ್ಲು, ಅಚ್ಚುಕಟ್ಟಾಗಿ ಕತ್ತರಿಸಿದ ಹುಲ್ಲು ಮತ್ತು ಆ ದೊಡ್ಡ ಅಂಕಣದಲ್ಲಿ ಇರುವ ಮೌನ ಮತ್ತು ಅದರಲ್ಲಿ ಲಬ್‍ಡಬ್ ಎನ್ನುವ ಟೆನಿಸ್ ಪ್ರಿಯರ ಹೃದಯದ ಸದ್ದು.
ಇಲ್ಲಿ ಪ್ರವಾಸ ಬರುವುದು ಕೇವಲ ಪ್ರವಾಸವಲ್ಲ ಅದೊಂದು ಯಾತ್ರೆ. ಟ್ರೋಫಿಗಳು ಹೇಳುವ ಸಮಾನತೆ ಎಂದರೆ ಒಂದೇ ಆಕಾರವಲ್ಲ ಎನ್ನುವ ಕಥೆ, ನೆಚ್ಚಿನ ಆಟಗಾರರು ಕ್ರೀಡೆಯ ಹೊರತಾಗಿಯೂ ನಮ್ಮಲ್ಲಿ ಎಬ್ಬಿಸಿದ ನವಿರಾದ ಭಾವನೆ ಮತ್ತು ವಿಂಬಲ್ಡನ್ ಎನ್ನುವ ನಿರಂತರತೆ. ಈ ಪ್ರವಾಸದಲ್ಲಿ ನಾನು ಬೋರಿಸ್ ಬೆಕರ್‌ನನ್ನು ಭೇಟಿಯಾಗಲಿಲ್ಲ. ಅದರ ಅವಶ್ಯಕತೆಯೂ ಇರಲಿಲ್ಲ. ಆತನನ್ನು ರೂಪಿಸುತ್ತಲೇ ನನ್ನನ್ನು ಜಾಗೃತಗೊಳಿಸಿದ ಜಾಗಕ್ಕೆ ಪ್ರವಾಸ ಮಾಡಿದ್ದೆ. ಆ ಮೂಲಕ ಬೋರಿಸ್‍ನನ್ನು ಮೊದಲು ಪ್ರೀತಿಸಿದ ಹುಡುಗಿಯನ್ನು ಮತ್ತೆ ಭೇಟಿಯಾದೆ. ಪ್ರವಾಸ ಎಂದರೆ ಯಾವಾಗಲೂ ದೇವಾಲಯಗಳು, ನದಿ ಪರ್ವತಗಳು, ರೆಸಾರ್ಟ್ ಚಟುವಟಿಕೆಗಳು ಆಗಿರಬೇಕೆಂದಿಲ್ಲ. ಒಮ್ಮೆಯಾದರೂ ನಮ್ಮ ಹೃದಯ ಮೊದಲೇ ರೂಪಿಸಿಕೊಂಡಿರುವ ಜಾಗಕ್ಕೆ ಹೋಗಲೇ ಬೇಕು ಉಳಿದೆಲ್ಲಾ ಜಾಗಗಳಿಗೆ ಹೋಗುವ ಪ್ರವಾಸ ಸಾರ್ಥಕವಾಗಲು.