ಗೊರೂರು ರಾಮಸ್ವಾಮಿ ಅಯ್ಯಂಗಾರ್ ( 1904- 1991) ಕನ್ನಡದ ಖ್ಯಾತ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಗಾಂಧಿವಾದಿಯಾಗಿದ್ದರು, ಹಾಸ್ಯ ಹಾಗೂ ವ್ಯಂಗ್ಯ ಬರಹಕ್ಕೂ ಹೆಸರಾಗಿದ್ದರು. 1977ರಲ್ಲಿ ಮಗ ಶ್ರೀನಿವಾಸನ ಕರೆಯ ಮೇರೆಗೆ ಅಮೆರಿಕಗೆ ಹೋಗಿ ಸುಮಾರು ಆರು ತಿಂಗಳು ಅಲ್ಲಿದ್ದರು. ಆ ಸಮಯದಲ್ಲಿ ಚಿಕಾಗೋ, ಕ್ಯಾಲಿಫೋರ್ನಿಯಾ ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್ ಮುಂತಾದ ಕಡೆ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿದ್ದರು. ನಯಾಗರಾ ಜಲಪಾತ ನೋಡಲು ಸಹ ಹೋಗಿದ್ದರು. ಅಲ್ಲಿಂದ ಬಂದಮೇಲೆ 1979ರಲ್ಲಿ ‘ಅಮೆರಿಕದಲ್ಲಿ ಗೋರೂರು’ ಎಂಬ ತಮ್ಮ ಅನುಭವದ ಪ್ರವಾಸಿ ಕಥನ ಬರೆದರು. ಈ ಕೃತಿಯು ಕನ್ನಡ ಪ್ರವಾಸ ಸಾಹಿತ್ಯ ಲೋಕದ ಒಂದು ಅದ್ಭುತ ಮೈಲಿಗಲ್ಲು. ಅಪ್ಪಟ ದೇಸಿತನ, ಹಳ್ಳಿಯ ಮುಗ್ಧತೆ ಮತ್ತು ಹಾಸ್ಯ ಪ್ರವೃತ್ತಿಯ ಕಣ್ಣುಗಳಿಂದ ಜಗತ್ತಿನ ಅತ್ಯಂತ ಆಧುನಿಕ ದೇಶವನ್ನು ಅಳೆದ ಪರಿಯೇ ಅನನ್ಯ. ಈ ಕೃತಿಗೆ 1980ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.

ಇದನ್ನೂ ಓದಿ: ಪ್ರೀತಿಗೆ ಈಗ ಹೊಸ ವಿಳಾಸ

ಪ್ರವಾಸ ಮಾಡುವುದು ಕೇವಲ ಹೊಸ ಸ್ಥಳಗಳನ್ನು ನೋಡುವುದಷ್ಟೇ ಅಲ್ಲ; ಅದು ಹೊಸ ಸಂಸ್ಕೃತಿಯನ್ನು ನಮ್ಮದೇ ಆದ ದೃಷ್ಟಿಕೋನದಿಂದ ಆವಾಹಿಸಿಕೊಳ್ಳುವ ಪ್ರಕ್ರಿಯೆ. ಕನ್ನಡ ಸಾಹಿತ್ಯದಲ್ಲಿ ಎಷ್ಟೋ ಪ್ರವಾಸ ಕಥನಗಳು ಬಂದಿವೆ, ಹೋಗಿವೆ. ಆದರೆ, ಇಂದಿಗೆ ಐದು ದಶಕಗಳ ಹಿಂದೆ ಪ್ರಕಟವಾದರೂ ಇಂದಿಗೂ ಓದುಗನನ್ನು ನಗೆಗಡಲಲ್ಲಿ ತೇಲಿಸುತ್ತಾ, ಆಲೋಚನೆಗೆ ಹಚ್ಚುವ ಅಪರೂಪದ ಕೃತಿ ‘ಅಮೆರಿಕದಲ್ಲಿ ಗೋರೂರು.’

ಗೋರೂರರು ಅಮೆರಿಕದಲ್ಲಿನ ಗಗನಚುಂಬಿ ಕಟ್ಟಡಗಳು, ಆಧುನಿಕ ತಂತ್ರಜ್ಞಾನ ಮತ್ತು ವೇಗದ ಬದುಕನ್ನು ಕಂಡು ಬೆರಗಾಗುವುದಕ್ಕಿಂತ ಹೆಚ್ಚಾಗಿ, ಅದನ್ನು ತಮ್ಮದೇ ಆದ ಹಳ್ಳಿಯ ಮುಗ್ಧ ಕಣ್ಣುಗಳಿಂದ ಮತ್ತು ವಿಶಿಷ್ಟ ಹಾಸ್ಯ ಪ್ರಜ್ಞೆಯಿಂದ ವಿಶ್ಲೇಷಿಸಿದ ರೀತಿ ಅದ್ಭುತ.

ಗೋರೂರರ ಬರಹದ ಮುಖ್ಯ ತಾಕತ್ತೇ ಅವರ ಸಹಜ ಹಾಸ್ಯ ಮತ್ತು ಹೋಲಿಕೆಗಳು. ಹೇಮಾವತಿ ನದಿಯ ತೀರದ ಗೋರೂರು ಹಳ್ಳಿಯ ಬದುಕಿಗೂ, ಮಿಸಿಸಿಪ್ಪಿ ನದಿಯ ದಂಡೆಯ ಅಮೆರಿಕದ ಮಹಾನಗರಗಳಿಗೂ ಇರುವ ವ್ಯತ್ಯಾಸಗಳನ್ನು ಅವರು ಚಿತ್ರಿಸಿರುವ ಸಾಲುಗಳು ಓದುಗರನ್ನು ನಗೆಗಡಲಲ್ಲಿ ತೇಲಿಸುತ್ತವೆ.

ಅಮೆರಿಕದ ಸ್ವಯಂಚಾಲಿತ ಯಂತ್ರಗಳು, ತಾವಾಗಿಯೇ ತೆರೆದುಕೊಳ್ಳುವ ಬಾಗಿಲುಗಳು, ಸೂಪರ್ ಮಾರ್ಕೆಟ್‌ಗಳು (ಭಾರತ ಆ ಸಮಯದಲ್ಲಿ ಈಗಿನಷ್ಟು ಪ್ರಗತಿ ಹೊಂದಿದ ರಾಷ್ಟ್ರವಾಗಿರಲಿಲ್ಲ) ಮತ್ತು ಅಲ್ಲಿನ ಜನರ ಶಿಸ್ತನ್ನು ಅವರು ಮುಕ್ತವಾಗಿ ಪ್ರಶಂಸಿಸುತ್ತಾರೆ. ಆದರೆ, ಅದೇ ಸಮಯದಲ್ಲಿ ಆ ಯಾಂತ್ರಿಕ ಬದುಕಿನ ನಡುವೆ ಕಳೆದುಹೋಗುತ್ತಿರುವ ಮಾನವೀಯ ಸಂಬಂಧಗಳ ಬಗ್ಗೆ ವಿಷಾದವನ್ನೂ ವ್ಯಕ್ತಪಡಿಸುತ್ತಾರೆ. ತಂತ್ರಜ್ಞಾನ ಎಷ್ಟು ಮುಂದುವರಿದರೂ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಹಜ ಬಾಂಧವ್ಯವೇ ಶ್ರೇಷ್ಠ ಎಂಬುದು ಅವರ ದೃಢ ನಂಬಿಕೆಯಾಗಿತ್ತು.

ಅಪ್ಪಟ ಸಸ್ಯಾಹಾರಿಯಾಗಿದ್ದ ಗೋರೂರರು ಅಮೆರಿಕದ ಹೊಟೇಲ್‌ಗಳಲ್ಲಿ ಶುದ್ಧ ಶಾಖಾಹಾರಿ ಆಹಾರವನ್ನು ಹುಡುಕಲು ಪಟ್ಟ ಪಾಡು, ಅಲ್ಲಿನವರ ಭಾಷಾ ಶೈಲಿಯನ್ನು ಅರ್ಥೈಸಿಕೊಳ್ಳಲು ಅನುಭವಿಸಿದ ಕಷ್ಟಗಳು ಕೇವಲ ವೈಯಕ್ತಿಕ ಅನುಭವಗಳಾಗಿ ಉಳಿಯದೆ, ಪ್ರತಿಯೊಬ್ಬ ಸಾಮಾನ್ಯ ಭಾರತೀಯ ಪ್ರವಾಸಿಯ ಪ್ರಾತಿನಿಧಿಕ ಧ್ವನಿಯಾಗಿ ಮೂಡಿಬಂದಿದೆ.

ಜಗತ್ಪ್ರಸಿದ್ಧ ನಯಾಗರಾ ಜಲಪಾತದ ಬಳಿ ಹೋದಾಗ, ಕಿವಡಾಗಿಸುವಂತೆ ಧುಮುಕುವ ಆ ಅಗಾಧ ಜಲರಾಶಿ ಮತ್ತು ಗಾಳಿಯಲ್ಲಿ ತೇಲುವ ಮಂಜಿನಂಥ ನೀರಿನ ತುಂತುರು ಹನಿಗಳನ್ನು ಕಂಡು ಗೊರೂರರು ಮಂತ್ರಮುಗ್ಧರಾಗುತ್ತಾರೆ. ಪ್ರಕೃತಿಯ ಈ ಅಗಾಧ ಶಕ್ತಿ ಮತ್ತು ಭವ್ಯತೆಯ ಮುಂದೆ ಮನುಷ್ಯನೆಷ್ಟು ಕುಬ್ಜ ಎಂಬುದನ್ನು ಅವರು ಅತ್ಯಂತ ಕಾವ್ಯಾತ್ಮಕವಾಗಿ ವರ್ಣಿಸುತ್ತಾರೆ. ಗೋರೂರರು ಈ ಜಲಪಾತವನ್ನು ನೋಡಿದಾಗ ತಟ್ಟನೆ ಅವರ ನೆನಪಿಗೆ ಬರುವುದು ಭಾರತದ ಪುಣ್ಯಕ್ಷೇತ್ರಗಳು ಹಾಗೂ ಗಂಗಾ- ಯಮುನಾ ನದಿಗಳು.

ʼಇಂಥ ಪ್ರಚಂಡ ಹಾಗೂ ಪವಿತ್ರವಾದ ಜಲಪಾತವೇನಾದರೂ ನಮ್ಮ ಭಾರತದಲ್ಲಿದ್ದಿದ್ದರೆ, ಇದರ ಸುತ್ತಲೂ ಇಷ್ಟೊತ್ತಿಗೆ ನೂರಾರು ಆಶ್ರಮಗಳು, ದೇವಾಲಯಗಳು, ಯಜ್ಞ-ಯಾಗಾದಿಗಳು ನಡೆಯುವ ಧಾರ್ಮಿಕ ಕೇಂದ್ರಗಳು ಸ್ಥಾಪನೆಯಾಗುತ್ತಿದ್ದವು. ನಾವು ಪ್ರಕೃತಿಯ ಶಕ್ತಿಯಲ್ಲಿ ದೈವತ್ವವನ್ನು (ಈಶ್ವರತ್ವವನ್ನು) ಕಾಣುತ್ತೇವೆʼ ಎಂದು ಮಾರ್ಮಿಕವಾಗಿ ಹೇಳುತ್ತಾರೆ.

ಅದೇ ಸಮಯದಲ್ಲಿ, ಅಮೆರಿಕನ್ನರು ಆ ಬೃಹತ್ ಜಲಪಾತವನ್ನು ಕೇವಲ ಒಂದು ಆಕರ್ಷಕ ಪ್ರವಾಸಿ ತಾಣವಾಗಿ (Tourist Attraction) ಮತ್ತು ಜಲವಿದ್ಯುತ್ ಉತ್ಪಾದಿಸುವ ಬೃಹತ್ ಯಾಂತ್ರಿಕ ಸಂಪನ್ಮೂಲವಾಗಿ ಬಳಸಿಕೊಳ್ಳುತ್ತಿರುವ ವೈಜ್ಞಾನಿಕ ಹಾಗೂ ಲೌಕಿಕ ಮನೋಭಾವವನ್ನು ಅವರು ಸೂಕ್ಷ್ಮವಾಗಿ ಗಮನಿಸುತ್ತಾರೆ.

ನಯಾಗರಾದ ತೇಲುವ ದೋಣಿಯಾದ 'ಮೇಡ್ ಆಫ್ ದಿ ಮಿಸ್ಟ್' ಏರಿ ಜಲಪಾತದ ತೀರಾ ಹತ್ತಿರಕ್ಕೆ ಹೋದಾಗ, ಜಲಪಾತದ ಧುಮುಕುವ ರಭಸಕ್ಕೆ ಮೈಮೇಲೆ ಬೀಳುವ ನೀರಿನ ಹನಿಗಳ ಸಿಂಚನ, ಅಲ್ಲಿನ ಚಳಿ ಮತ್ತು ಆ ಕ್ಷಣದ ರೋಮಾಂಚನವನ್ನು ಅವರು ವರ್ಣಿಸಿರುವ ಶೈಲಿ ಓದುಗರನ್ನೂ ಆ ಜಲಪಾತದ ದಂಡೆಯ ಮೇಲೆ ಕೊಂಡೊಯ್ದು ನಿಲ್ಲಿಸುತ್ತದೆ.

ಎಷ್ಟೇ ಭವ್ಯವಾದ ಪ್ರಕೃತಿಯ ದೃಶ್ಯವಿದ್ದರೂ, ಗೊರೂರರು ತಮ್ಮ ಹಳ್ಳಿಯ ಮುಗ್ಧತೆ ಮತ್ತು ಹಾಸ್ಯ ಪ್ರಜ್ಞೆಯನ್ನು ಬಿಟ್ಟುಕೊಡುವುದಿಲ್ಲ. ಅಮೆರಿಕನ್ನರು ಜಲಪಾತವನ್ನು ವೀಕ್ಷಿಸಲು ಮಾಡಿರುವ ರಕ್ಷಣೆಗಳು, ಪ್ರವಾಸಿಗರಿಗೆ ನೀಡುವ ವಾಟರ್‌ಪ್ರೂಫ್ ಕೋಟ್‌ಗಳು ಮತ್ತು ಅಲ್ಲಿನ ವ್ಯಾಪಾರೀಕರಣವನ್ನು ತಮ್ಮದೇ ಆದ ಶೈಲಿಯಲ್ಲಿ ವಿನೋದವಾಗಿ ಚರ್ಚಿಸುತ್ತಾರೆ.

‘ಅಮೆರಿಕದಲ್ಲಿ ಗೋರೂರು’ ಕೇವಲ ಒಂದು ದೇಶದ ಭೌಗೋಳಿಕ ವರ್ಣನೆಯಲ್ಲ. ಅದೊಂದು ಸಾಂಸ್ಕೃತಿಕ ಸಂಘರ್ಷ ಮತ್ತು ಸಾಮರಸ್ಯದ ದಾಖಲೆ. ಒಂದು ದೇಶವನ್ನು ದ್ವೇಷಿಸದೆ, ಅತಿಯಾಗಿ ಆರಾಧಿಸದೆ, ಅದರ ಒಳ್ಳೆಯದನ್ನು ಒಪ್ಪಿಕೊಂಡು, ನಮ್ಮತನವನ್ನು ಕಳೆದುಕೊಳ್ಳದೆ ಹೇಗೆ ಗೌರವಿಸಬೇಕು ಎಂಬುದನ್ನು ಗೋರೂರರು ಇಡೀ ಕೃತಿಯುದ್ದಕ್ಕೂ ಅತ್ಯಂತ ಮನೋಜ್ಞವಾಗಿ ಉದಾಹರಣೆ ಸಮೇತ ತೋರಿಸಿಕೊಟ್ಟಿದ್ದಾರೆ.

ಇದೊಂದು ಕನ್ನಡ ಪ್ರವಾಸ ಸಾಹಿತ್ಯದ ಪ್ರಮುಖ ಕೃತಿ. ಇಂದಿನ ತಲೆಮಾರಿನ ಪ್ರವಾಸಿಗರೂ, ಬರಹಗಾರರೂ ಓದಲೇ ಬೇಕಾದ ಪುಸ್ತಕ. ಜಗತ್ತನ್ನು ನೋಡುವ ನಮ್ಮ ಕಣ್ಣುಗಳಿಗೆ ಈ ಪುಸ್ತಕ ಹೊಸದೊಂದು ದೃಷ್ಟಿಕೋನವನ್ನು ನೀಡಬಹುದು.

ಕೃತಿಯ ಬಗೆಗೆ ಮಾಹಿತಿ:

ಹೆಸರು: ಅಮೆರಿಕದಲ್ಲಿ ಗೊರೂರು
ಪ್ರಕಾಶಕರು: IGP ಪ್ರಕಾಶನ ಬೆಂಗಳೂರು
ಪುಟಗಳು: 328
ಬೆಲೆ: 350 ರು.
ಆನ್ಲೈನ್ ಹಾಗೂ ಸಪ್ನಾ ಬುಕ್ ಹೌಸ್‌ಗಳಲ್ಲಿ ಲಭ್ಯವಿದೆ.