- ರಂಗಸ್ವಾಮಿ ಮೂಕನಹಳ್ಳಿ


ಇಂಡಸ್ ವ್ಯಾಲಿ ಸಿವಿಲೈಸೇಷನ್ ಮತ್ತು ಈಜಿಪ್ಟಿನ ಇತಿಹಾಸ ಎರಡಕ್ಕೂ ವಯಸ್ಸು ಹೆಚ್ಚು ಕಡಿಮೆ ಸೇಮ್ ಎಂದು ಹೇಳಬಹುದು. ನಾವಿಲ್ಲಿ ಅತ್ಯದ್ಭುತ ಮಂದಿರಗಳ ನಿರ್ಮಾಣ ಮಾಡುತ್ತಾ, ವಿಗ್ರಹದಲ್ಲಿನ ಕೈಬಳೆ ತಿರುಗುವಂತೆ ಕೆತ್ತನೆ ಮಾಡುತ್ತಿರುವ ಸಮಯದಲ್ಲಿ ಅವರೂ ಪಿರಮಿಡ್ಡುಗಳಿಗೆ ಅಡಿಗಲ್ಲು ಹಾಕುತ್ತಿದ್ದರು. ಜಗತ್ತಿಗೆ ಇಂದಿಗೂ ಅಚ್ಚರಿಯಾಗಿ ಉಳಿದುಕೊಂಡಿರುವ ಪಿರಮಿಡ್ಡುಗಳನ್ನು ಕಣ್ಣು ತುಂಬಿಕೊಳ್ಳಬೇಕು ಎನ್ನುವ ಆಸೆಗೆ ಜತೆಯಾದದ್ದು ಸಹೋದರ ನಾಗೇಂದ್ರ. ನಿಜ ಹೇಳಬೇಕೆಂದರೆ ಇಡೀ ಈಜಿಪ್ಟ್ ಪ್ರವಾಸದ ರೂವಾರಿ ಅವರು. ಮೊದಲು ಎಲ್ಲಿಗೆ ಹೋಗಬೇಕು? ಏನನ್ನು ನೋಡಬೇಕು? ಹೀಗೆ ಪ್ರತಿ ದಿನದ ಕಾರ್ಯಸೂಚಿ ಪಟ್ಟಿಯನ್ನು ತಯಾರು ಮಾಡಿದ್ದು ಅವರು. ನಾನು ಸಾಮಾನ್ಯವಾಗಿ ಅಷ್ಟು ಸುಲಭವಾಗಿ ಯಾರನ್ನೂ ನಂಬುವುದಿಲ್ಲ . ವಿಶ್ವಾಸ ಮೂಡುವುದು ವ್ಯಕ್ತಿಯ ವ್ಯಕ್ತಿತ್ವದಿಂದ! ಅಲ್ಲದೆ ಪ್ರವಾಸ ಎಲ್ಲರೊಂದಿಗೂ ಮಾಡಲು ಕೂಡ ಸಾಧ್ಯವಿಲ್ಲ. ದಿನ ನಿತ್ಯದ ಬದುಕಿನಲ್ಲಿ ಸಹಜೀವಿಯಾಗಿ ಬದುಕುವುದಕ್ಕೂ ಪ್ರವಾಸದಲ್ಲಿ ಜತೆಯಾಗುವುದಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಪ್ರವಾಸಕ್ಕೆ ಜತೆಯಾಗಿ ಹೋಗಲು ಸಮಾನಮನಸ್ಕರು ಸಿಕ್ಕರೆ ಅದೇ ಸ್ವರ್ಗ.

ಮೊದಲಿಗೆ ನಾವು ಅಲೆಗ್ಸಾಂಡ್ರಿಯಗೆ ಹೋಗೋಣ, ಗೀಸಾದಲ್ಲಿನ ಪಿರಮಿಡ್ಡು , ಕೈರೋ ನಗರ ಮುಗಿಸೋಣ ಆಮೇಲೆ ಒಂದು ದಿನ ಸೂಯೆಜ್ ಕಾಲುವೆಯನ್ನು ನೋಡೋಣ, ಆಮೇಲೆ ಲಕ್ಸರ್ ಕಡೆಗೆ ಪ್ರಯಾಣ ಬೆಳೆಸೋಣ ಎಂದು ನಾಗೇಂದ್ರ ಹೇಳಿದಾಗ ನಾನು ತಲೆಯಾಡಿಸಿದ್ದು ಬಿಟ್ಟರೆ ಬೇರೇನೂ ಕೇಳಲು ಹೋಗಲಿಲ್ಲ. ನಾವು ಹೋಗಬೇಕು ಎಂದುಕೊಂಡಿದ್ದ ಲಕ್ಸರ್, ಅಲೆಗ್ಸಾಂಡ್ರಿಯ ಎರಡೂ ದಕ್ಷಿಣಕ್ಕೊಂದು ಉತ್ತರಕ್ಕೊಂದು ಇದ್ದರೆ ಮಧ್ಯದಲ್ಲಿರೋದು ಕೈರೋ! ನಾವು ಕೈರೋದಲ್ಲಿ ಸಂಜೆ ಐದಕ್ಕೆ ಇಳಿಯುವುದು ಎಂದಾಗಿತ್ತು. ಹೀಗಾಗಿ ಆ ದಿನ ವೃಥಾ ಕಳೆಯುವುದಕ್ಕಿಂತ ಅಲೆಗ್ಸಾಂಡ್ರಿಯಗೆ ಹೋದರೆ ಮರುದಿನ ಬೆಳಗ್ಗೆಯಿಂದ ಆ ನಗರವನ್ನು ನೋಡಲು ಅನುಕೂಲವಾಗುತ್ತದೆ ಎನ್ನುವುದು ನಾಗೇಂದ್ರನ ಪ್ಲಾನ್ ಆಗಿತ್ತು. ಕೈರೋದಿಂದ ಅಲೆಗ್ಸಾಂಡ್ರಿಯ ನಗರಕ್ಕೆ ಮೂರೂವರೆ ಗಂಟೆಗಳ ಕಾರು ಪ್ರಯಾಣ. ಪ್ರವಾಸಿಗಳಾಗಿ ಹೋದವರು ಟೈಮ್ ಮ್ಯಾನೇಜ್‌ಮೆಂಟ್ ಮಾಡಬೇಕು. ಇಲ್ಲದಿದ್ದರೆ ವೇಳೆ ಎನ್ನುವುದು ನಮ್ಮ ಹಿಡಿತಕ್ಕೆ ಸಿಕ್ಕುವುದಿಲ್ಲ.

ಟಿಪ್ಸ್ ಕೇಳುವುದು ಈಜಿಪ್ಟಿನ ಕಲ್ಚರ್! ಪ್ರವಾಸಿಗರಿಗೆ ಶಾಕ್!

ನಿಗದಿತ ಸಮಯಕ್ಕಿಂತ ಅರ್ಧಗಂಟೆ ಮುಂಚೆ ನಮ್ಮನ್ನು ಹೊತ್ತು ಹೋಗಿದ್ದ ಒಮಾನ್ ಏರ್ ಲೈನ್ಸ್ ಕೈರೋ ನಗರದಲ್ಲಿ ನಮ್ಮನ್ನು ಇಳಿಸಿತು. ಒಮಾನ್ ವಿಮಾನದಲ್ಲಿ ಇದು ನನ್ನ ಎರಡನೆಯ ಪ್ರಯಾಣ. ಹೇಳಿಕೊಳ್ಳುವ ಸೌಕರ್ಯಗಳು ಇಲ್ಲದಿದ್ದರೂ, ಪ್ರಯಾಣ ಸುಖಕರವಾಗಿತ್ತು. ನಾಗೇಂದ್ರ ಒಬ್ಬ ಅತ್ಯುತ್ತಮ ಚಾಲಕ. ಒಂದೆರಡು ಬಾರಿ ಅವರೊಂದಿಗೆ ಕೊಡಗಿಗೆ ಕಾರಿನಲ್ಲಿ ಹೋಗಿದ್ದ ಅನುಭವ ನನ್ನ ಜತೆಗಿತ್ತು. ಎಂಥ ತಿರುವುಗಳಲ್ಲೂ ಅವರು ವಾಹನದ ಮೇಲಿನ ನಿಯಂತ್ರಣ ಇಂಚಷ್ಟೂ ಕಳೆದುಕೊಳ್ಳುವುದಿಲ್ಲ. ನಿಜ ಹೇಳಬೇಕೆಂದರೆ ಅವರ ವಾಹನ ಚಲಾಯಿಸುವ ರೀತಿಯ ಬಗ್ಗೆ ಒಂದು ಅಧ್ಯಾಯ ಬರೆಯಬಹುದು. ಇರಲಿ.

Egypt Tourism (2)

ನಾಗೇಂದ್ರ ಮುಂಗಡವಾಗಿ ಕಾರನ್ನು ಬಾಡಿಗೆಗೆ ಬುಕ್ ಮಾಡಿದ್ದರು. ಅವೀಸ್ ಎನ್ನುವ ಕಾರು ಬಾಡಿಗೆಗೆ ನೀಡುವ ಸಂಸ್ಥೆಯಲ್ಲಿ ಕಾರನ್ನು ಕಾಯ್ದಿರಿಸಿದ್ದರು. ಈಜಿಪ್ಟ್ ದೇಶಕ್ಕೆ ಹೋಗಲು ಭಾರತೀಯರಿಗೆ ವೀಸಾ ಬೇಕು. ಕಾನೂನಿನ ಪ್ರಕಾರ ಸ್ಪ್ಯಾನಿಶ್ ನಾಗರಿಕನಾಗಿರುವ ನನಗೆ ಬಹಳಷ್ಟು ದೇಶಕ್ಕೆ ವೀಸಾ ಅವಶ್ಯಕತೆಯಿಲ್ಲ. ಆದರೆ ಈಜಿಪ್ಟ್ ನಿನಗೂ ವೀಸಾ ಬೇಕು ಎಂದದ್ದರ ಕಾರಣ ಇ-ವೀಸಾ ಮಾಡಿಸಿಕೊಂಡು ಹೋಗಿದ್ದೆವು. ಇಮಿಗ್ರೇಷನ್‌ನಲ್ಲಿ ನನ್ನನ್ನು ಸುಲಭವಾಗಿ ಬಿಟ್ಟರು. ಏಳು ದಿನಗಳ ಮೇಲೆ ಈಜಿಪ್ಟಿನಲ್ಲಿ ಇರುವುದಾದರೆ ಇನ್ನೊಂದು ಹದಿನೈದು ಅಮೆರಿಕನ್ ಡಾಲರ್ ಶುಲ್ಕ ನೀಡಬೇಕು ಎಂದು ನಾಗೇಂದ್ರನನ್ನು ಇನ್ನೊಂದು ಕೌಂಟರಿಗೆ ಕಳುಹಿಸಿದರು. ಅವರಿಗೆ ಆ ಹಣ ಸಂದಾಯ ಮಾಡಿ, ನಮ್ಮ ಬ್ಯಾಗ್ ತೆಗೆದುಕೊಂಡು ಅವೀಸ್ ಕಾರನ್ನು ಪಡೆಯಲು ಅವರ ಕೌಂಟರಿಗೆ ಹೋದೆವು. ಕರ್ನಾಟಕದಲ್ಲಿ ಇಂಟರ್ ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ ಈಗ ಪುಸ್ತಕ ರೂಪದಲ್ಲಿ ಕೊಡುವುದಿಲ್ಲ. ಅದೀಗ ಒಂದು ಪೇಪರ್ ಅದೂ ಪಿಡಿಎಫ್ ಪೇಪರ್ ಮೂಲಕ ನೀಡುತ್ತಾರೆ. ಇದನ್ನು ಅವೀಸ್ ಕಾರು ಬಾಡಿಗೆ ನೀಡುವ ಸಂಸ್ಥೆ ಒಪ್ಪಲಿಲ್ಲ. ಇಲ್ಲದಿರುವುದನ್ನು ಎಲ್ಲಿಂದ ತರೋಣ? ನಮ್ಮ ದೇಶದಲ್ಲಿ ಈ ರೀತಿ ಬುಕ್ ನೀಡುವುದು ನಿಲ್ಲಿಸಿ ಮೂರು ವರ್ಷವಾಯ್ತು ಎಂದು ಎಷ್ಟೇ ಹೇಳಿದರೂ ಅವರು ನಮ್ಮ ಮಾತನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಅಲ್ಲಿ ಒಂದು ತಾಸು ಸುಮ್ಮನೆ ಕಳೆದು ಕೊಂಡೆವು. ಕಾರು ಬಾಡಿಗೆ ನೀಡುವ ಗ್ರೀನ್ ಮೋಶನ್ ಎನ್ನುವ ಇನ್ನೊಂದು ಸಂಸ್ಥೆ ಅಲ್ಲೇ ಇತ್ತು; ನಮ್ಮ ಪುಣ್ಯ. ಅವರ ಬಳಿ ವಿಚಾರಿಸಿದಾಗ ಅವರು ನೀಡಲು ಒಪ್ಪಿಕೊಂಡರು. ಅವೀಸ್‌ನಲ್ಲಿ ನೀಡಬೇಕಾಗಿದ್ದ ಹಣದ ದುಪ್ಪಟ್ಟು ನೀಡಿ ಕಾರನ್ನು ಬಾಡಿಗೆ ಪಡೆದು ಕೈರೋ ಏರ್ ಪೋರ್ಟ್ ಬಿಟ್ಟಾಗ ಸಂಜೆ ಏಳೂವರೆ! ಇದನ್ನು ಸಂಜೆ ಅನ್ನಬೇಕೋ ಅಥವಾ ರಾತ್ರಿ ಅನ್ನಬೇಕೋ ಎಂಬಷ್ಟು ದಟ್ಟವಾಗಿ ಕತ್ತಲೆ ಆವರಿಸಿತ್ತು. ದಿನ ಕಳೆದಂತೆ ನವೆಂಬರ್ ತಿಂಗಳಲ್ಲಿ ಐದೂವರೆಗೆ ಸೂರ್ಯ ತನ್ನ ಕೆಲಸಕ್ಕೆ ಬಾಯ್ ಹೇಳಿ ಹೋಗಿಬಿಡುತ್ತಾನೆ ಎನ್ನುವ ಅಂಶ ತಿಳಿಯಿತು. ಮುಂದಿನದ್ದು ನಾಗೇಂದ್ರನ ಸಾಹಸದ ಕಥೆ. ಅದನ್ನೂ ವಿವರವಾಗಿ ಬರೆಯುವೆ. ಕಂಡಿರದ ದೇಶದಲ್ಲಿ ಅದೂ ಲೆಫ್ಟ್ ಹ್ಯಾಂಡ್ ಡ್ರೈವ್ ಕಾರನ್ನು ಇದು ನನ್ನದೇ ನೆಲ ಎನ್ನುವಂತೆ, ಅಲ್ಲಿಯೇ ಹುಟ್ಟಿ ಬೆಳೆದು, ಅಲ್ಲಿನ ಡ್ರೈವಿಂಗ್ ಲೈಸೆನ್ಸ್ ಪಡೆದವರಂತೆ ನಾಗೇಂದ್ರ ಚಲಾಯಿಸತೊಡಗಿದರು. ಬರೋಬ್ಬರಿ 25/30 ವರ್ಷದ ಹಿಂದೆ ನಾನೂ ಹೀಗೇ ಇದ್ದೆ ಎನ್ನುವುದನ್ನು ನಾಗೇಂದ್ರ ನೆನಪಿಸಿದರು. ಇವತ್ತಿಗೆ ಹೋದ ದೇಶದಲ್ಲೆಲ್ಲಾ ಡ್ರೈವ್ ಮಾಡುವ ಸಾಹಸ ಮಾಡುವುದಿಲ್ಲ.

Alexandria city

ಒಂದೆರಡು ಕಡೆ ಬ್ರೇಕ್ ನೀಡಿ, ವಾಹನಕ್ಕೆ ಪೆಟ್ರೋಲ್ ಮತ್ತು ನಮ್ಮ ದೇಹಕ್ಕೆ ಕಾಫಿ ತುಂಬಿದೆವು. ಇಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ 40 ರುಪಾಯಿ! ಟೊಯೋಟಾ ಕರೋಲಾ ಕಾರು ಸುಸ್ಥಿಯಲ್ಲಿತ್ತು. ಜತೆಗೆ ಅದನ್ನು ಚಲಾಯಿಸುತ್ತಿದ್ದ ನಾಗೇಂದ್ರ ಅದಕ್ಕಿಂತ ಹೆಚ್ಚು ಸುಸ್ಥಿತಿಯಲ್ಲಿದ್ದರು. ಹೀಗಾಗಿ ನಾವು ಮೊದಲೇ ಏರ್ ಬಿ ಎನ್ ಬಿ ಮೂಲಕ ಬುಕ್ ಮಾಡಿದ್ದ ನಮ್ಮ ವಿಲ್ಲಾವನ್ನು ಸುಮಾರು ಹನ್ನೊಂದರ ಹೊತ್ತಿಗೆ ತಲುಪಿದೆವು.

ಅಲೆಗ್ಸಾಂಡರ್ ದಿ ಗ್ರೇಟ್ ಕಟ್ಟಿದ ಅಲೆಗ್ಸಾಂಡ್ರಿಯ ನಗರ !

ಕ್ರಿಸ್ತ ಪೂರ್ವ 331ರಲ್ಲಿ ಈ ನಗರವನ್ನು ಅಲೆಗ್ಸಾಂಡರ್ ಕಟ್ಟಿಸಿದರು ಎನ್ನುವ ಕಾರಣಕ್ಕೆ ಈ ನಗರಕ್ಕೆ ಅಲೆಗ್ಸಾಂಡ್ರಿಯ ಎನ್ನುವ ಹೆಸರು ಬಂದಿದೆ. ಇದನ್ನು ಬ್ರೈಡ್ ಆಫ್ ಮೆಡಿಟರೇನಿಯನ್, ಪರ್ಲ್ ಆಫ್ ಮೆಡಿಟರೇನಿಯನ್ ಎನ್ನುವ ಉಪನಾಮಗಳಿಂದ ಕೂಡ ಕರೆಯುತ್ತಾರೆ. ಇತಿಹಾಸದಲ್ಲಿ ಅಲೆಗ್ಸಾಂಡ್ರಿಯ ನಗರಕ್ಕೆ ಬಹಳ ಎತ್ತರದ ಸ್ಥಾನವಿದೆ. ಇದು ಹಿಂದೆ ಈಜಿಪ್ಟಿನ ರಾಜಧಾನಿ ಕೂಡ ಆಗಿತ್ತು. ಇಂದಿಗೂ ಇದು ಈಜಿಪ್ಟಿನ ಅತಿ ಬ್ಯುಸಿ ಪೋರ್ಟ್ ಸಿಟಿ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದೆ. ಇದರ ಜತೆಗೆ ಇದು ಅನೇಕ ಕೈಗಾರಿಕೆಗಳಿಗೆ ಕೂಡ ಆಶ್ರಯ ನೀಡಿದೆ. ಸರಿಸುಮಾರು 55 ಲಕ್ಷ ಜನರನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಸಾಕುತ್ತಿದೆ. ಈಜಿಪ್ಟಿನ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಅರಬ್‌ನಲ್ಲಿ ಆರನೇ ಪ್ರಮುಖ ನಗರವಾಗಿ ಗುರುತಿಸಲಾಗಿದೆ.

ಈ ನಗರದಲ್ಲಿ ಓಡಾಡುವಾಗ ನಾವು ವೇಳೆಯಲ್ಲಿ ಹಿಮ್ಮುಖವಾಗಿ ಚಲಿಸಿದೆವು ಎನ್ನಿಸುತ್ತದೆ. ಹಳೆಯದನ್ನು ಜತನದಿಂದ ಕಾಪಾಡಿದ್ದಾರೆ. ಇಲ್ಲಿ ಎಲ್ಲವನ್ನೂ ವಿವರವಾಗಿ ನೋಡಬೇಕೆಂದರೆ ಐದಾರು ದಿನ ಖಂಡಿತ ಬೇಕು. ನಾವು ಇಲ್ಲಿ ಕೇವಲ ಎರಡು ರಾತ್ರಿಯ ಅತಿಥಿಗಳು. ಹೀಗಾಗಿ ಎಲ್ಲವನ್ನೂ ನೋಡಬೇಕು ಎನ್ನುವ ಹಪಾಹಪಿಗೆ ನಾವು ಬೀಳಲಿಲ್ಲ. ಪಾರ್ಕುಗಳು, ಆಭರಣಗಳ ಮ್ಯೂಸಿಯಂ, ಪ್ರಸಿದ್ಧ ತಿನಿಸುಗಳ ಅಂಗಡಿಗಳು, ನೆನಪಿನ ಕಾಣಿಕೆ ಶಾಪಿಂಗ್ ಇತ್ಯಾದಿಗಳಿಗೆ ಕೊಕ್ ಕೊಟ್ಟೆವು. ನಿಜ ಹೇಳಬೇಕೆಂದರೆ ಅಲೆಗ್ಸಾಂಡ್ರಿಯಗೆ ನಾವು ಹೋದದ್ದು ಮೂರು ಮುಖ್ಯ ಕಾರಣಗಳಿಂದ! ಒಂದು ಕ್ಲಿಯೋಪಾತ್ರ ಎನ್ನುವ ಮಹಿಳೆ, ಎರಡು ಅಲ್ಲಿನ ಪ್ರಸಿದ್ಧ ಗ್ರಂಥಾಲಯ, ಮೂರು ಬೇಡವೆಂದರೂ ಇಂದಿಗೂ ಕಾಡುವ ಜೂಲಿಯಸ್ ಸೀಸರ್ ಮತ್ತು ಮಾರ್ಕ್ ಅಂಥೋನಿ.

Egypt city


ಅಲೆಗ್ಸಾಂಡ್ರಿಯ ನಗರವನ್ನು ಫಾರೋ ಅಂದರೆ ಮುಖ್ಯಸ್ಥೆಯಾಗಿ ಆಳಿದ ಕ್ಲಿಯೋಪಾತ್ರ ಎನ್ನುವ ಮಹಿಳೆಯ ಬಗೆಗಿನ ಬಣ್ಣ ಬಣ್ಣದ ಕಥೆಗಳು, ಸಾಹಸಗಾಥೆಗಳು, ಜೂಲಿಯಸ್ ಸೀಸರ್ ಬಗ್ಗೆ ಪುಸ್ತಕ ಓದಿ ಹತ್ತಿಸಿಕೊಂಡಿದ್ದ ಅಮಲು, ಇಂಥವರೆಲ್ಲಾ ನಡೆದಾಡಿದ ಜಾಗದಲ್ಲಿ ಬದಲಾದ ಕಾಲಘಟ್ಟದಲ್ಲಿ ನಾವೂ ನಡೆದಾಡಬಹುದು ಎನ್ನುವ ಕಲ್ಪನೆ ಅಲೆಗ್ಸಾಂಡ್ರಿಯ ನಗರಕ್ಕೆ ನಮ್ಮನ್ನು ಕರೆತಂದಿತ್ತು. ಇತಿಹಾಸದಲ್ಲಿ ಹೆಚ್ಚು ಆಸಕ್ತಿ ಉಳ್ಳವರು ಈ ನಗರದಲ್ಲಿ ಆರಾಮಾಗಿ ವಾರದಿಂದ ಹತ್ತು ದಿನ ಕಳೆಯಬಹುದು. ಕೆದಕುತ್ತಾ ಹೋದಂತೆಲ್ಲಾ ತೆರೆದುಕೊಳ್ಳುವ ಇತಿಹಾಸ ಇರುವ ನಗರಗಳಲ್ಲಿ ಸಮಯ ಮಿತಿ ಇಟ್ಟುಕೊಂಡು ಪ್ರವಾಸ ಹೋಗಬಾರದು. ಆದರೆ ನಾವೆಲ್ಲರೂ ನಮ್ಮ ಮಿತಿಗಳಲ್ಲಿ ಬಂಧಿಗಳು. ಹೀಗಾಗಿ ನಮಗಿದ್ದ ಸಮಯದಲ್ಲಿ ಅಲೆಗ್ಸಾಂಡ್ರಿಯ ನಮಗೆ ಬಿಟ್ಟುಕೊಟ್ಟದ್ದು ಎಷ್ಟು? ನಮಗೆ ದಕ್ಕಿದ್ದು ಎಷ್ಟು? ಎನ್ನುವುದರ ಲೆಕ್ಕಾಚಾರವನ್ನು ವಿವರವಾಗಿ ಮುಂದಿನ ವಾರ ಬರೆಯುವೆ. ವಿರಮಿಸುವಕ್ಕೆ ಮುಂಚೆ ಅಲೆಗ್ಸಾಂಡ್ರಿಯ ನಗರಕ್ಕೆ ಭೇಟಿ ನೀಡಬೇಕೇ? ಎನ್ನುವ ಪ್ರಶ್ನೆ ಉದ್ಭವಿಸಿದ್ದರೆ, ಹೌದು ಈ ನಗರವನ್ನು ನಾವು ತಪ್ಪಿಸುವಂತಿಲ್ಲ. ಪ್ರತಿ ಅನುಭವವೂ ಅನನ್ಯ. ಸುಟ್ಟು ಹೋಗಿದ್ದ ಹಳೆಯ ಗ್ರಂಥಾಲಯದ ಜಾಗದಲ್ಲಿ ಅಂದರೆ ನಿಖರವಾಗಿ ಗ್ರೌಂಡ್ ಜೀರೋ ಇದೆ ಎನ್ನುವುದೇ ಯಾರಿಗೂ ಗೊತ್ತಿಲ್ಲದಿದ್ದರೂ , ಈ ಜಾಗದಲ್ಲಿ ಹೀಗಾಗಿತ್ತು ಎನ್ನುವ ಅಂದಾಜಿನ ಮೇಲೆ ಮಾಡರ್ನ್ ಲೈಬ್ರರಿ ತಲೆ ಎತ್ತಿ ನಿಂತಿದೆ. ಫಸ್ಟ್‌ ವರ್ಲ್ಡ್‌ಗಳಲ್ಲಿ ಕೂಡ ಬಹಳಷ್ಟು ಕಡೆ ಕಾಣದಂಥ ಈ ಲೈಬ್ರರಿಗಾಗಿಯಾದರೂ ಈ ನಗರಕ್ಕೆ ಭೇಟಿ ನೀಡಬೇಕು.

ಪುಸ್ತಕಗಳೆಂದರೆ ನನಗೆ ವಿಶೇಷ ಆಸಕ್ತಿ. ಹೈ ಸ್ಕೂಲ್ ಮತ್ತು ಕಾಲೇಜಿನ ಬಹಳಷ್ಟು ದಿನಗಳು ಕಳೆದದ್ದು ಮಲ್ಲೇಶ್ವರಂ ಲೈಬ್ರರಿಯಲ್ಲಿ! ಹೀಗಾಗಿ ಇಲ್ಲಿನ ಗ್ರಂಥಾಲಯದ ಬಗ್ಗೆ ವಿಶೇಷ ಸೆಳೆತವಿತ್ತು. ನಾಗೇಂದ್ರ ಕೂಡ ಮಹಾನ್ ಸಾಹಿತ್ಯ ಪ್ರೇಮಿ. ತನಗಿಷ್ಟವಾದ ಲೇಖಕರ ಪುಸ್ತಕಗಳನ್ನು ಹತ್ತಾರು ಸಂಖ್ಯೆಯಲ್ಲಿ ಖರೀದಿಸಿ ಅವುಗಳನ್ನು ಬಂಧು ಮಿತ್ರರಿಗೆ ಹಂಚುವ ವಿಶೇಷ ಗುಣ ಅವರದ್ದು. ಸಹಜವಾಗೇ ನಮ್ಮಿಬ್ಬರ ಅಭಿರುಚಿ ಒಂದೇ ಆಗಿದ್ದರ ಕಾರಣ, ಅಲೆಗ್ಸಾಂಡ್ರಿಯ ನಗರದಲ್ಲಿ ನಮ್ಮ ಪ್ರಥಮ ಭೇಟಿ ಗ್ರಂಥಾಲಯವೇ ಆಗಿತ್ತು. ಮುಂದಿನವಾರ ಅಲೆಗ್ಸಾಂಡ್ರಿಯ ನಗರದಲ್ಲಿ ನಾವು ಕಂಡದ್ದು ನಿಮಗೂ ಉಣಬಡಿಸುವ ಪ್ರಯತ್ನ ಮಾಡುವೆ.