• ಹರ್ಷ ಡಿ. ಎನ್

ʼಆರೋಗ್ಯವೇ ಭಾಗ್ಯʼ ಎಂಬ ಮಾತಿನ ಮಹತ್ವವನ್ನು ಇತ್ತೀಚಿನ ವರ್ಷಗಳಲ್ಲಿ ಇಡೀ ಜಗತ್ತು ಮತ್ತೊಮ್ಮೆ ಅರಿತುಕೊಂಡಿದೆ. ಕಂಡು ಕೇಳರಿಯದ ಕೊರೊನಾ ಮಹಾಮಾರಿಯ ನಂತರ, ಜನರ ಜೀವನಶೈಲಿ, ಆರೋಗ್ಯದ ಕುರಿತಾದ ಚಿಂತನೆ ಮತ್ತು ಪ್ರವಾಸದ ಆದ್ಯತೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನಗರ ಜೀವನದ ಒತ್ತಡದಿಂದ ಹೊರಬಂದು, ಪ್ರಕೃತಿಯ ಮಡಿಲಿನಲ್ಲಿ ಒಂದಿಷ್ಟು ಸಮಯ ಕಳೆಯಬೇಕು, ಶುದ್ಧ ಗಾಳಿ ಸೇವಿಸಬೇಕು, ನೈಸರ್ಗಿಕ ಆಹಾರ ಸೇವಿಸಬೇಕು ಎಂಬ ಬಯಕೆ ಜನರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಬದಲಾದ ಮನೋಭಾವವೇ ಕೃಷಿ ಪ್ರವಾಸೋದ್ಯಮಕ್ಕೆ ಹೊಸ ಅವಕಾಶಗಳ ಬಾಗಿಲು ತೆರೆದಿದೆ.

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಜೇನು ಕೃಷಿ ಹಾಗೂ ಪ್ರವಾಸೋದ್ಯಮದ ಹೊಸ ದಾರಿ

ಪ್ರವಾಸೋದ್ಯಮವು ಇಂದು ಜಾಗತಿಕ ಆರ್ಥಿಕತೆಯ ಪ್ರಮುಖ ಅಂಗವಾಗಿದೆ. ಇದು ನೇರವಾಗಿ ಮಾತ್ರವಲ್ಲದೆ, ಸಾರಿಗೆ, ಆಹಾರ, ವಸತಿ, ಸ್ಥಳೀಯ ಉತ್ಪನ್ನಗಳು, ಮಾರ್ಗದರ್ಶಕರು, ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಮತ್ತು ಆದಾಯದ ಅವಕಾಶಗಳನ್ನು ಸೃಷ್ಟಿಸುತ್ತದೆ.

Untitled Design - 2026-11-06T162053.765

ಜಪಾನ್, ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿ ಕೃಷಿ ಪ್ರವಾಸೋದ್ಯಮವು ಬೆಳೆಯುತ್ತಿರುವ ಕ್ಷೇತ್ರವಾಗಿದೆ. ರೈತರ ಕೃಷಿ ಚಟುವಟಿಕೆಗಳನ್ನು ಪ್ರವಾಸಿಗರಿಗೆ ಪರಿಚಯಿಸುವುದರ ಜತೆಗೆ, ಗ್ರಾಮೀಣ ಜೀವನಶೈಲಿ, ಸ್ಥಳೀಯ ಆಹಾರ, ಜಾನಪದ ಕಲೆ, ಸಂಸ್ಕೃತಿ ಮತ್ತು ಪ್ರಕೃತಿಯೊಂದಿಗೆ ಜನರನ್ನು ಬೆಸೆಯುವ ಪ್ರಯತ್ನ ಇದಾಗಿದೆ. ಭಾರತದಂಥ ಕೃಷಿ ಪ್ರಧಾನ ದೇಶಕ್ಕೆ ಕೃಷಿ ಪ್ರವಾಸೋದ್ಯಮ ಇನ್ನಷ್ಟು ಮಹತ್ವದ್ದಾಗಿದೆ.

ಕೃಷಿ ಕ್ಷೇತ್ರದ ದೊಡ್ಡ ಸವಾಲುಗಳಲ್ಲಿ ಪ್ರಮುಖವಾದದ್ದು ಬೆಲೆಯ ಅಸ್ಥಿರತೆ. ರೈತರು ಉತ್ತಮ ಬೆಳೆ ಬೆಳೆದರೂ, ಮಾರುಕಟ್ಟೆಯ ಪರಿಸ್ಥಿತಿ ಅನುಕೂಲಕರವಾಗಿರದ ಸಂದರ್ಭದಲ್ಲಿ ಸೂಕ್ತ ಬೆಲೆ ಸಿಗದಿರುವುದು ಸಾಮಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಮಾವು, ಈರುಳ್ಳಿ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳ ಬೆಲೆ ಏರಿಳಿತಗಳು ಈ ಸಮಸ್ಯೆಯನ್ನು ಮತ್ತೆ ಮತ್ತೆ ನಮ್ಮ ಮುಂದೆ ತಂದಿವೆ.

ಇಂಥ ಸಂದರ್ಭದಲ್ಲಿ ರೈತನು ಕೇವಲ ಕೃಷಿ ಉತ್ಪನ್ನವನ್ನು ಮಾರಾಟ ಮಾಡುವುದರಲ್ಲೇ ತನ್ನ ಆದಾಯವನ್ನು ಸೀಮಿತಗೊಳಿಸದೆ, ತನ್ನ ಕೃಷಿ ಭೂಮಿಯನ್ನೇ ಒಂದು ಅನುಭವದ ತಾಣವನ್ನಾಗಿ ಪರಿವರ್ತಿಸಿಕೊಂಡು ಹೆಚ್ಚುವರಿ ಆದಾಯಗಳಿಸುವ ಅವಕಾಶ ಕೃಷಿ ಪ್ರವಾಸೋದ್ಯಮದಿಂದ ದೊರೆಯುತ್ತದೆ.

Untitled Design - 2026-11-06T162233.756

ಒಂದು ಎಕರೆ ಜಮೀನಿನಲ್ಲಿ ಬೆಳೆಯುವ ಬೆಳೆ ಒಂದು ಆದಾಯ ನೀಡಬಹುದು. ಅದೇ ಜಮೀನಿಗೆ ಪ್ರವಾಸಿಗರನ್ನು ಕರೆತಂದು, ಕೃಷಿ ಅನುಭವ, ಗ್ರಾಮೀಣ ಆಹಾರ, ಎತ್ತಿನಗಾಡಿ ಸವಾರಿ, ದೇಶಿ ಆಟಗಳು, ಹಣ್ಣು ಕೀಳುವ ಅನುಭವ, ನಾಟಿ, ಕೊಯ್ಲು, ಜಾನಪದ ಕಲೆಗಳ ಪರಿಚಯ ಮುಂತಾದ ಚಟುವಟಿಕೆಗಳನ್ನು ರೂಪಿಸಿದರೆ, ಅದೇ ಜಮೀನು ಹಲವು ರೀತಿಯ ಆದಾಯವನ್ನು ಸೃಷ್ಟಿಸಬಲ್ಲದು. ಇದೇ ಕೃಷಿ ಪ್ರವಾಸೋದ್ಯಮದ ಶಕ್ತಿ.

ಇಂದು ನಗರೀಕರಣ ವೇಗವಾಗಿ ನಡೆಯುತ್ತಿದೆ. ನಗರಗಳಲ್ಲಿ ಬೆಳೆಯುತ್ತಿರುವ ಹೊಸ ತಲೆಮಾರಿನ ಬಹಳಷ್ಟು ಮಕ್ಕಳಿಗೆ ಕೃಷಿಯ ಬಗ್ಗೆ ನೇರ ಅನುಭವ ಕಡಿಮೆಯಾಗುತ್ತಿದೆ. ʼಅಕ್ಕಿ ಎಲ್ಲಿಂದ ಬರುತ್ತದೆ?ʼ, ʼತರಕಾರಿ ಹೇಗೆ ಬೆಳೆಯುತ್ತದೆ?ʼ, ʼಹಾಲು ಎಲ್ಲಿಂದ ಬರುತ್ತದೆ?ʼ, ʼರೈತರು ಆಹಾರವನ್ನು ಹೇಗೆ ಉತ್ಪಾದಿಸುತ್ತಾರೆ?ʼ ಎಂಬ ಮೂಲಭೂತ ಪ್ರಶ್ನೆಗಳಿಗೂ ಪ್ರಾಯೋಗಿಕ ಅನುಭವ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಕೃಷಿ ಪ್ರವಾಸೋದ್ಯಮವು ನಗರ ಮತ್ತು ಗ್ರಾಮಗಳ ನಡುವಿನ ಈ ಅಂತರವನ್ನು ಕಡಿಮೆ ಮಾಡಬಲ್ಲದು.

Untitled Design - 2026-11-06T162946.134

ಶಾಲಾ ಮಕ್ಕಳು ಹೊಲಕ್ಕೆ ಹೋಗಿ ಬೀಜ ಬಿತ್ತುವುದನ್ನು, ಸಸಿಗಳನ್ನು ನೆಡುವುದನ್ನು, ಬೆಳೆ ಬೆಳೆಯುವುದನ್ನು, ಹಾಲು ಕರೆಯುವುದನ್ನು ಅಥವಾ ದೇಶೀ ಆಹಾರ ತಯಾರಿಸುವುದನ್ನು ನೇರವಾಗಿ ನೋಡಿದಾಗ, ಪಠ್ಯಪುಸ್ತಕದಲ್ಲಿ ಓದಿದ ಜ್ಞಾನವು ಜೀವನದ ಅನುಭವವಾಗಿ ಪರಿವರ್ತನೆಯಾಗುತ್ತದೆ. ʼಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲುʼ ಎಂಬ ಕನ್ನಡದ ಗಾದೆಯ ನಿಜವಾದ ಅರ್ಥವನ್ನು ಕೃಷಿ ಪ್ರವಾಸೋದ್ಯಮದ ಮೂಲಕ ಅನುಭವಿಸಬಹುದು.

ಕೊರೊನಾ ನಂತರ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚಾಗಿದೆ. ನಗರ ಜೀವನದ ಒತ್ತಡ, ಮಾಲಿನ್ಯ, ಪರದೆಗಳ ಮುಂದೆ ಕಳೆಯುವ ಸಮಯ, ಆನ್‌ಲೈನ್ ಗೇಮ್‌ಗಳು ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳ ನಡುವೆ ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸುವ ಅಗತ್ಯ ಹೆಚ್ಚಾಗಿದೆ. ಕೃಷಿ ಪ್ರವಾಸೋದ್ಯಮವು ಇದಕ್ಕೆ ಒಂದು ಸುಂದರ ಪರ್ಯಾಯವನ್ನು ನೀಡುತ್ತದೆ.

ಮಣ್ಣಿನೊಂದಿಗೆ ಕೆಲಸ ಮಾಡುವುದು, ಹೊಲದಲ್ಲಿ ನಡೆಯುವುದು, ಮರಗಳ ನೆರಳಿನಲ್ಲಿ ಸಮಯ ಕಳೆಯುವುದು, ದೇಶೀ ಆಟಗಳಲ್ಲಿ ಭಾಗವಹಿಸುವುದು, ಗ್ರಾಮೀಣ ಜೀವನವನ್ನು ಅನುಭವಿಸುವುದು ಮತ್ತು ಸ್ಥಳೀಯವಾಗಿ ತಯಾರಿಸಿದ ಆಹಾರ ಸೇವಿಸುವುದು—ಇವೆಲ್ಲವೂ ಪ್ರವಾಸವನ್ನು ಕೇವಲ ಮನೋರಂಜನೆಯಿಂದ ಅನುಭವ ಮತ್ತು ಕಲಿಕೆಯ ಚಟುವಟಿಕೆಯಾಗಿ ಪರಿವರ್ತಿಸುತ್ತವೆ. ಅದರಲ್ಲೂ ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಗಳಾದ ರಾಗಿ ಮುದ್ದೆ, ಸಿರಿಧಾನ್ಯಗಳ ಅಡುಗೆ, ಸ್ಥಳೀಯ ತರಕಾರಿ, ಸೊಪ್ಪು, ಬೆಲ್ಲ ಆಧಾರಿತ ಆಹಾರಗಳು ಮುಂತಾದವುಗಳನ್ನು ಪರಿಚಯಿಸುವ ಮೂಲಕ ಸ್ಥಳೀಯ ಆಹಾರ ಸಂಸ್ಕೃತಿಗೂ ಹೊಸ ಮಾರುಕಟ್ಟೆ ಸೃಷ್ಟಿಸಬಹುದು.

ಕೃಷಿ ಪ್ರವಾಸೋದ್ಯಮ ಕೇವಲ ರೈತನಿಗೆ ಆದಾಯ ತಂದುಕೊಡುವ ಉದ್ಯಮವಲ್ಲ. ಇದು ಗ್ರಾಮೀಣ ಸಂಸ್ಕೃತಿಯ ಸಂರಕ್ಷಣೆಯ ಒಂದು ಸಾಧನವೂ ಹೌದು. ದೇಶೀ ಆಟಗಳು, ಜಾನಪದ ಕಲೆಗಳು, ಗ್ರಾಮೀಣ ಆಚರಣೆಗಳು, ಸ್ಥಳೀಯ ಆಹಾರ ಪದ್ಧತಿಗಳು, ಸಾಂಪ್ರದಾಯಿಕ ಕೃಷಿ ಪದ್ಧತಿಗಳು, ಎತ್ತಿನಗಾಡಿ, ಜಾನುವಾರು ಸಾಕಣೆ, ಹಳ್ಳಿಯ ಜೀವನಶೈಲಿ—ಇವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ವೇದಿಕೆಯಾಗಿ ಕೃಷಿ ಪ್ರವಾಸೋದ್ಯಮ ಕೆಲಸ ಮಾಡಬಹುದು.

ಒಂದು ಕಾಲದಲ್ಲಿ ಸಾಮಾನ್ಯವಾಗಿದ್ದ ಅನೇಕ ಗ್ರಾಮೀಣ ಪದ್ಧತಿಗಳು ಇಂದು ನಿಧಾನವಾಗಿ ಮರೆಯಾಗುತ್ತಿವೆ. ಅವುಗಳಿಗೆ ಪ್ರವಾಸೋದ್ಯಮದ ಮೂಲಕ ಆರ್ಥಿಕ ಮೌಲ್ಯವನ್ನು ಜೋಡಿಸಿದಾಗ, ಸಂಸ್ಕೃತಿಯ ಸಂರಕ್ಷಣೆಯ ಜತೆಗೆ ಗ್ರಾಮೀಣ ಕುಟುಂಬಗಳಿಗೆ ಆದಾಯದ ಅವಕಾಶವೂ ದೊರೆಯುತ್ತದೆ.

Untitled Design - 2026-11-06T163104.659

ಕೃಷಿ ಪ್ರವಾಸೋದ್ಯಮದ ಮತ್ತೊಂದು ಪ್ರಮುಖ ಅಂಶವೆಂದರೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ. ಆತಿಥ್ಯ, ಅಡುಗೆ, ಸ್ಥಳೀಯ ಉತ್ಪನ್ನಗಳ ಮಾರಾಟ, ಪ್ರವಾಸಿಗರಿಗೆ ಮಾರ್ಗದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕೈಮಗ್ಗ ಮತ್ತು ಕರಕುಶಲ ವಸ್ತುಗಳು, ಆಹಾರ ಸಂಸ್ಕರಣೆ, ಡಿಜಿಟಲ್ ಮಾರ್ಕೆಟಿಂಗ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗ್ರಾಮೀಣ ಯುವಕರು ಮತ್ತು ಮಹಿಳೆಯರು ಉದ್ಯಮಿಗಳಾಗಬಹುದು. ಹೀಗಾಗಿ ಕೃಷಿ ಪ್ರವಾಸೋದ್ಯಮವು ಕೇವಲ ʼರೈತನ ಜಮೀನಿಗೆ ಪ್ರವಾಸಿಗರನ್ನು ಕರೆತರುವʼ ಪರಿಕಲ್ಪನೆಯಲ್ಲ. ಇದು ಗ್ರಾಮೀಣ ಆರ್ಥಿಕತೆಯನ್ನು ಹಲವು ಚಟುವಟಿಕೆಗಳ ಮೂಲಕ ಬಲಪಡಿಸುವ ವ್ಯವಸ್ಥೆ.

ಜಾಗತಿಕ ಕೃಷಿ ಪ್ರವಾಸೋದ್ಯಮ ಮಾರುಕಟ್ಟೆಯ ಕುರಿತು ವಿವಿಧ ಮಾರುಕಟ್ಟೆ ಅಧ್ಯಯನಗಳು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವೆಂದು ಸೂಚಿಸುತ್ತವೆ. 2019ರಲ್ಲಿ ಜಾಗತಿಕ ಕೃಷಿ ಪ್ರವಾಸೋದ್ಯಮ ಮಾರುಕಟ್ಟೆಯ ಮೌಲ್ಯ ಸುಮಾರು 69 ಶತಕೋಟಿ ಡಾಲರ್‌ಗಳಷ್ಟಿದ್ದು, ಮುಂದಿನ ವರ್ಷಗಳಲ್ಲಿ ಇದು 100 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಮಟ್ಟಕ್ಕೆ ಬೆಳೆಯುವ ನಿರೀಕ್ಷೆ ಇದೆ ಎಂದು ಕೆಲವು ವರದಿಗಳು ಅಂದಾಜಿಸಿವೆ. ಈ ಬೆಳವಣಿಗೆಯನ್ನು ಗಮನಿಸಿದರೆ, ಕೃಷಿ ಪ್ರವಾಸೋದ್ಯಮವು ಭಾರತದಲ್ಲೂ ಮುಂದಿನ ದಿನಗಳಲ್ಲಿ ಗಮನಾರ್ಹ ಉದ್ಯಮವಾಗಿ ಬೆಳೆಯುವ ಸಾಧ್ಯತೆ ಹೊಂದಿದೆ.

ಭಾರತದ ಕೃಷಿ ವೈವಿಧ್ಯತೆ, ಗ್ರಾಮೀಣ ಸಂಸ್ಕೃತಿ, ಸ್ಥಳೀಯ ಆಹಾರ, ಜೈವಿಕ ವೈವಿಧ್ಯತೆ ಮತ್ತು ಸಾವಿರಾರು ವರ್ಷಗಳ ಕೃಷಿ ಪರಂಪರೆ ನಮ್ಮ ದೊಡ್ಡ ಸಂಪತ್ತು. ಈ ಸಂಪತ್ತನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸುವ ಮೂಲಕ ರೈತರಿಗೆ ಹೊಸ ಆದಾಯದ ದಾರಿಯನ್ನು ತೆರೆಯಬಹುದು.

ಕರ್ನಾಟಕ ರಾಜ್ಯದ ಮೊದಲ ಕೃಷಿ ಪ್ರವಾಸೋದ್ಯಮ ಕಂಪನಿ ಅಗ್ರಿಯಾನ ಟೂರಿಸಂ ಪ್ರವೈಟ್ ಲಿಮಿಟೆಡ್. ಕರ್ನಾಟಕದಲ್ಲಿ ಕೃಷಿ ಪ್ರವಾಸೋದ್ಯಮವನ್ನು ಸಂಘಟಿತ ರೀತಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ Agriyana Tourism Pvt. Ltd. ಕಾರ್ಯನಿರ್ವಹಿಸುತ್ತಿದೆ.

ಕರ್ನಾಟಕದ ವಿವಿಧ ಭಾಗಗಳಲ್ಲಿರುವ ಕೃಷಿ ಪ್ರವಾಸೋದ್ಯಮ ಕೇಂದ್ರಗಳನ್ನು ಸಂಪರ್ಕಿಸುವುದು, ರೈತರಿಗೆ ಕೃಷಿ ಪ್ರವಾಸೋದ್ಯಮದ ಅವಕಾಶಗಳನ್ನು ಪರಿಚಯಿಸುವುದು, ನಗರ ಜನರು ಮತ್ತು ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನದ ಅನುಭವ ಕಲ್ಪಿಸುವುದು ಹಾಗೂ ಕೃಷಿ, ಪ್ರವಾಸೋದ್ಯಮ ಮತ್ತು ಗ್ರಾಮೀಣ ಉದ್ಯಮಶೀಲತೆಯನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ಪ್ರಯತ್ನವನ್ನು ಅಗ್ರಿಯಾನ ಮಾಡುತ್ತಿದೆ.

ಇದನ್ನೂ ಓದಿ: ಕೃಷಿ ಪ್ರವಾಸೋದ್ಯಮ: ಪ್ರಕೃತಿಯ ಮಡಿಲಿಗೆ ಒಂದು ಪಯಣ

ರೈತನ ಜಮೀನು ಕೇವಲ ಬೆಳೆ ಬೆಳೆಯುವ ಸ್ಥಳವಾಗಿರದೆ, ಕಲಿಕೆ, ಅನುಭವ, ಆರೋಗ್ಯ, ಸಂಸ್ಕೃತಿ ಮತ್ತು ಆದಾಯದ ಕೇಂದ್ರವಾಗಬೇಕು ಎಂಬುದು ಕೃಷಿ ಪ್ರವಾಸೋದ್ಯಮದ ಮೂಲ ಆಶಯ. ಭವಿಷ್ಯದ ಕೃಷಿ ಪ್ರವಾಸೋದ್ಯಮದಲ್ಲಿ ರೈತನು ಕೇವಲ ಉತ್ಪಾದಕನಾಗಿರದೆ, ಆತಿಥೇಯ, ಮಾರ್ಗದರ್ಶಕ, ಉದ್ಯಮಿ ಮತ್ತು ತನ್ನದೇ ಸಂಸ್ಕೃತಿಯ ರಾಯಭಾರಿಯಾಗುವ ಅವಕಾಶವಿದೆ.

ಒಂದು ಕಡೆ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಹುಡುಕುವ ಸವಾಲು ಇದ್ದರೆ, ಮತ್ತೊಂದು ಕಡೆ ಪ್ರಕೃತಿ, ಆರೋಗ್ಯ, ಗ್ರಾಮೀಣ ಜೀವನ ಮತ್ತು ಅನುಭವಕ್ಕಾಗಿ ನಗರ ಜನರು ಹಳ್ಳಿಯತ್ತ ಬರುತ್ತಿದ್ದಾರೆ. ಈ ಎರಡು ಅಗತ್ಯಗಳನ್ನು ಸಂಪರ್ಕಿಸುವ ಸೇತುವೆಯೇ ಕೃಷಿ ಪ್ರವಾಸೋದ್ಯಮ. ಆದ್ದರಿಂದ ಕೃಷಿ ಪ್ರವಾಸೋದ್ಯಮವನ್ನು ಕೇವಲ ಪ್ರವಾಸದ ಹೊಸ ರೂಪವೆಂದು ನೋಡುವ ಬದಲು, ರೈತರ ಪರ್ಯಾಯ ಆದಾಯ, ಗ್ರಾಮೀಣ ಉದ್ಯೋಗ, ದೇಶಿ ಸಂಸ್ಕೃತಿಯ ಸಂರಕ್ಷಣೆ, ಆರೋಗ್ಯಕರ ಜೀವನಶೈಲಿ ಮತ್ತು ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಗೆ ಸಹಾಯಕವಾಗುವ ಭವಿಷ್ಯದ ಉದ್ಯಮವಾಗಿ ನೋಡಬೇಕಾಗಿದೆ. ಇದು ರೈತನಿಗೆ ಕೇವಲ ಹೆಚ್ಚುವರಿ ಆದಾಯದ ಭರವಸೆಯಲ್ಲ.ಇದು ರೈತನ ಭೂಮಿಗೆ ಹೊಸ ಮೌಲ್ಯ ನೀಡುವ ಅವಕಾಶ.ಇದು ಹಳ್ಳಿಗೆ ಹೊಸ ಆರ್ಥಿಕತೆ ನೀಡುವ ಅವಕಾಶ. ಇದು ಮುಂದಿನ ಪೀಳಿಗೆಗೆ ನಮ್ಮ ಕೃಷಿ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಅವಕಾಶ.

ಕೃಷಿ ಉಳಿದರೆ ಗ್ರಾಮ ಉಳಿಯುತ್ತದೆ. ಗ್ರಾಮ ಉಳಿದರೆ ಸಂಸ್ಕೃತಿ ಉಳಿಯುತ್ತದೆ. ಕೃಷಿಗೆ ಪ್ರವಾಸೋದ್ಯಮದ ಸ್ಪರ್ಶ ಸಿಕ್ಕಾಗ—ರೈತನ ಭವಿಷ್ಯಕ್ಕೆ ಹೊಸ ದಾರಿ ತೆರೆಯುತ್ತದೆ.

ಹೆಚ್ಚಿನ ಮಾಹಿತಿಗಾಗಿ: www.agriyana.com ಗೆ ಭೇಟಿ ನೀಡಬಹುದು.

ಹರ್ಷ ಡಿ. ಎನ್.

ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ,

ಅಗ್ರಿಯಾನ ಟೂರಿಸಂ ಪ್ರವೈಟ್ ಲಿಮಿಟೆಡ್, ಮೈಸೂರು

ಮೊಬೈಲ್:9945051194

ಇಮೇಲ್: agriyana25@gmail.com