ಕಣ್ಣಂಚಿನ ಕನಸಿಗೆ ಹೊಸ ವಿಳಾಸ: ‘ಸ್ಲೀಪ್ ಟೂರಿಸಂ’
ಸ್ಕ್ರೀನ್ಗಳ ಜಂಜಾಟ ಮತ್ತು ದಣಿವರಿಯದ ನಗರದ ಬದುಕಿನಲ್ಲಿ ನಾವಿಂದು ಕಳೆದುಕೊಂಡಿರುವುದು ಪ್ರಶಾಂತ ನಿದ್ರೆಯನ್ನು. ಈ ನಿದ್ರಾಹೀನತೆಯ ತೊಳಲಾಟಕ್ಕೆ ಆತಿಥ್ಯ ಲೋಕ ಕಂಡುಕೊಂಡ ಹೊಸ ಮಾರ್ಗವೇ ‘ಸ್ಲೀಪ್ ಟೂರಿಸಂ’. ಸುಖನಿದ್ರೆಯನ್ನೇ ಪ್ರವಾಸದ ಕೇಂದ್ರಬಿಂದುವಾಗಿಸಿದ ಈ ಟ್ರೆಂಡ್ ಜಗತ್ತನ್ನೀಗ ಸೆಳೆಯುತ್ತಿದೆ.
- ಹೊಸ್ಮನೆ ಮುತ್ತು
ಇಂದಿನ ಡಿಜಿಟಲ್ ಯುಗದಲ್ಲಿ ಕೆಲಸದ ಒತ್ತಡ, ತಡರಾತ್ರಿಯವರೆಗಿನ ಮೊಬೈಲ್ ಸ್ಕ್ರೀನ್ಗಳ ನೀಲಿ ಬೆಳಕು ಹಾಗೂ ನಗರದ ಗದ್ದಲಗಳ ನಡುವೆ ಮನುಷ್ಯ ಕಳೆದುಕೊಂಡಿರುವುದು ಅತ್ಯಮೂಲ್ಯವಾದ ನಿದ್ರೆಯನ್ನು. ಹಾಸಿಗೆಯಲ್ಲಿ ಮಲಗಿದರೂ ನಿದ್ರೆಬಾರದೆ ಹೊರಳಾಡುವವರ ಸಂಖ್ಯೆ ಹೆಚ್ಚುತ್ತಿದ್ದು, ನಿದ್ರಾಹೀನತೆ ಇಂದು ಜಾಗತಿಕ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಜನರ ಈ ತೊಳಲಾಟಕ್ಕೆ ಆತಿಥ್ಯ ಮತ್ತು ಸ್ವಾಸ್ಥ್ಯ ಕ್ಷೇತ್ರಗಳು ಒಗ್ಗೂಡಿ ಹೊಸದೊಂದು ಪರಿಹಾರವನ್ನು ಕಂಡುಕೊಂಡಿದ್ದು, ಅದುವೇ ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ‘ಸ್ಲೀಪ್ ಟೂರಿಸಂ’ (Sleep Tourism) ಅಥವಾ ‘ನಿದ್ರಾ ಪ್ರವಾಸೋದ್ಯಮ’.
ಇದನ್ನೂ ಓದಿ: ಇಕೋ-ಟೂರಿಸಂ: ಪ್ರವಾಸೋದ್ಯಮದ ಹಸಿರು ಹಾದಿ..!
‘ಸ್ಲೀಪ್ಕೇಶನ್’ ಅಥವಾ ‘ನ್ಯಾಪ್ಕೇಶನ್’ ಎಂದೂ ಕರೆಯಲಾಗುವ ಈ ಮಾದರಿಯಲ್ಲಿ, ಪ್ರವಾಸದ ಮುಖ್ಯ ಉದ್ದೇಶವೇ ‘ಆಳವಾದ ಮತ್ತು ಗುಣಮಟ್ಟದ ನಿದ್ರೆ’ಯನ್ನು ಮರಳಿ ಪಡೆಯುವುದು. ಇದು ಕೇವಲ ಐಷಾರಾಮಿ ಹೊಟೇಲ್ ಕೋಣೆಯ ಹಾಸಿಗೆಯ ಮೇಲೆ ಕಾಲ ಕಳೆಯುವುದಲ್ಲ, ಬದಲಿಗೆ ಪ್ರಶಾಂತ ನೈಸರ್ಗಿಕ ಪರಿಸರ, ವೈಜ್ಞಾನಿಕ ವಿಧಾನಗಳು ಮತ್ತು ಸ್ವಾಸ್ಥ್ಯ (wellness) ಚಿಕಿತ್ಸೆಗಳ ಮೂಲಕ ನಿದ್ರೆಯ ಗುಣಮಟ್ಟವನ್ನು ಸುಧಾರಿಸಿ, ದಣಿದ ದೇಹ-ಮನಸಿಗೆ ನವಚೈತನ್ಯ ತುಂಬುವ ವಿಶಿಷ್ಟ ಅನುಭವ.
ದೈನಂದಿನ ಜಂಜಾಟಗಳಿಂದ ಮುಕ್ತಿ ನೀಡುವ ಈ ಪ್ರವಾಸಗಳು ಒತ್ತಡ ಮತ್ತು ಆತಂಕವನ್ನು ನೈಸರ್ಗಿಕವಾಗಿ ಶಮನಗೊಳಿಸುತ್ತವೆ. ಇಲ್ಲಿ ದೊರೆಯುವ ಗಾಢ ವಿಶ್ರಾಂತಿಯು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಮೈಮನಗಳನ್ನು ನೈಸರ್ಗಿಕವಾಗಿ ಡಿಟಾಕ್ಸ್ ಮಾಡುತ್ತದೆ. ಪರಿಣಾಮವಾಗಿ ಆಂತರಿಕ ಸಮತೋಲನ ಮರಳಿ, ಸ್ಮರಣಶಕ್ತಿ ಹಾಗೂ ಏಕಾಗ್ರತೆ ಚುರುಕುಗೊಳ್ಳುತ್ತವೆ. ಪ್ರವಾಸ ಮುಗಿಸಿ ಮರಳಿದಾಗ ಕೆಲಸ- ಕಾರ್ಯಗಳಲ್ಲಿ ದುಪ್ಪಟ್ಟು ಹುರುಪಿನೊಂದಿಗೆ ತೊಡಗಿಸಿಕೊಳ್ಳಲು ಇದು ಹೊಸ ಶಕ್ತಿ ತುಂಬುತ್ತದೆ.

ಈ ಪರಿಕಲ್ಪನೆಯಲ್ಲಿ ಹೊಟೇಲ್ಗಳು ಮತ್ತು ರೆಸಾರ್ಟ್ಗಳು ಪ್ರವಾಸಿಗರಿಗೆ ಕೇವಲ ತಂಗುವ ಕೋಣೆಯನ್ನು ನೀಡುವುದಕ್ಕೆ ಸೀಮಿತವಾಗಿಲ್ಲ, ಬದಲಾಗಿ ಗಾಢ ಮತ್ತು ಗುಣಮಟ್ಟದ ನಿದ್ರೆಗೆ ಪೂರಕವಾದ ಸಂಪೂರ್ಣ ಪರಿಸರ ಮತ್ತು ವಿಶಿಷ್ಟ ವ್ಯವಸ್ಥೆಗಳನ್ನು ಸೃಷ್ಟಿಸುತ್ತವೆ. ಇಲ್ಲಿನ ಕೊಠಡಿಗಳು ಹೊರಗಿನ ಯಾವುದೇ ಗೌಜು- ಗದ್ದಲ ತಟ್ಟದಂತೆ ಸೌಂಡ್ಪ್ರೂಫ್ ವ್ಯವಸ್ಥೆ, ಬೆಳಕನ್ನು ತಡೆಯುವ ದಪ್ಪ ಬ್ಲ್ಯಾಕ್ ಔಟ್ ಪರದೆಗಳು, ದೇಹದ ಜೈವಿಕ ಗಡಿಯಾರಕ್ಕೆ (Circadian Rhythm) ಹೊಂದಿಕೊಳ್ಳುವ ಮೃದು ಬೆಳಕು ಹಾಗೂ ಸೂಕ್ತ ತಾಪಮಾನ ನಿಯಂತ್ರಣವನ್ನು ಒಳಗೊಂಡಿರುತ್ತವೆ. ಆರಾಮದಾಯಕ ಅನುಭವಕ್ಕಾಗಿ ಬೆನ್ನುನೋವು ತಡೆಯುವ ಎಐ ತಂತ್ರಜ್ಞಾನದ ಸ್ಮಾರ್ಟ್ ಹಾಸಿಗೆಗಳು, ವೈಯಕ್ತಿಕ ಆದ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದಾದ ‘ಪಿಲ್ಲೋ ಮೆನು’ (ವಿವಿಧ ರೀತಿಯ ದಿಂಬುಗಳು) ಮತ್ತು ಮನಸನ್ನು ಪ್ರಶಾಂತಗೊಳಿಸುವ ಲ್ಯಾವೆಂಡರ್ನಂಥ ನೈಸರ್ಗಿಕ ಸುಗಂಧ ದ್ರವ್ಯಗಳ (ಆರೋಮಾಥೆರಪಿ) ಸೌಲಭ್ಯವಿರುತ್ತದೆ.
ಅಷ್ಟೇ ಅಲ್ಲದೆ, ನಿದ್ರಾ ತಜ್ಞರು ಹಾಗೂ 'ಸ್ಲೀಪ್ ಕೋಚ್'ಗಳು ಪ್ರವಾಸಿಗರ ದಿನಚರಿಯನ್ನು, ನಿದ್ರೆಯ ಮಾದರಿಯನ್ನೂ ವೈಜ್ಞಾನಿಕವಾಗಿ ಪರಿಶೀಲಿಸಿ ವೈಯಕ್ತಿಕ ನಿದ್ರಾ ಯೋಜನೆಗಳನ್ನು ರೂಪಿಸುತ್ತಾರೆ. ಇದರ ಅಂಗವಾಗಿ ಯೋಗ, ಧ್ಯಾನ, ಪ್ರಾಣಾಯಾಮ, ಯೋಗನಿದ್ರಾ, ಸೌಂಡ್ ಥೆರಪಿ ಹಾಗೂ ಸ್ಪಾ ಚಿಕಿತ್ಸೆಗಳನ್ನು ನೀಡಲಾಗುತ್ತದೆ.
ಭಾರತೀಯ ಪರಿಸರದಲ್ಲಿ ಈ ರಿಟ್ರೀಟ್ಗಳು ಆಯುರ್ವೇದದ ಶಿರೋಧಾರ, ಪಂಚಕರ್ಮ ಹಾಗೂ ಸಾಂಪ್ರದಾಯಿಕ ಚಿಕಿತ್ಸೆಗಳನ್ನು ಸಂಯೋಜಿಸಿ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತವೆ. ಜತೆಗೆ ಸಂಜೆಯ ವೇಳೆ ಕೆಫೀನ್ ಮುಕ್ತ ಹರ್ಬಲ್ ಟೀ, ಸುಲಭವಾಗಿ ಜೀರ್ಣವಾಗುವ ಸಾತ್ವಿಕ ಆಹಾರ ಹಾಗೂ ಡಿಜಿಟಲ್ ಪರದೆಗಳಿಂದ ಸಂಪೂರ್ಣ ದೂರವಿರುವ ‘ಡಿಜಿಟಲ್ ಡಿಟಾಕ್ಸ್’ ಕಾರ್ಯಕ್ರಮಗಳು ಈ ಪ್ರಕ್ರಿಯೆಯ ಪ್ರಮುಖ ಅಂಗವಾಗಿದೆ. ಪರ್ವತಶ್ರೇಣಿಗಳು, ದಟ್ಟ ಕಾಡುಗಳು ಅಥವಾ ಸಮುದ್ರತೀರಗಳಂಥ ನಿಸರ್ಗದ ಮಡಿಲಿನಲ್ಲಿ ನೆಲೆಸಿರುವ ಈ ಕೇಂದ್ರಗಳು ನಗರದ ಕಲುಷಿತ ವಾತಾವರಣ ಮತ್ತು ಜಂಜಾಟಗಳಿಂದ ಮುಕ್ತಿ ಹೊಂದಿದ್ದು, ತಂತ್ರಜ್ಞಾನ, ವಿಜ್ಞಾನ ಹಾಗೂ ಪ್ರಾಚೀನ ಚಿಕಿತ್ಸಾ ಪದ್ಧತಿಗಳ ಸಮ್ಮಿಲನವಾಗಿ ಕೆಲಸ ಮಾಡುತ್ತವೆ.
ಇದನ್ನೂ ಓದಿ: ಮತ್ತೆ ಚೇತರಿಸಿಕೊಳ್ಳಲು ಪ್ರಕೃತಿಗೂ ಬ್ರೇಕು ಬೇಕು!
ಜಾಗತಿಕ ಮಟ್ಟದಲ್ಲೂ ‘ಸ್ಲೀಪ್ ಟೂರಿಸಂ’ ಪರಿಕಲ್ಪನೆ ವ್ಯಾಪಕವಾಗಿ ಬೆಳೆಯುತ್ತಿದ್ದು, ವಿಶ್ವದ ಹಲವು ದೇಶಗಳು ತಮ್ಮದೇ ಆದ ನೈಸರ್ಗಿಕ ಸೌಂದರ್ಯ ಹಾಗೂ ತಾಂತ್ರಿಕ ವೈಶಿಷ್ಟ್ಯಗಳೊಂದಿಗೆ ಇದನ್ನು ಅಳವಡಿಸಿಕೊಂಡಿವೆ. ಜಪಾನ್ನ ಒನ್ಸೆನ್ ಬಿಸಿನೀರಿನ ಬುಗ್ಗೆಗಳಿರುವ ತಾಣಗಳು, ಕ್ಯೋಟೋ ಮತ್ತು ಕರುಯಿಜಾವಾದ ದಟ್ಟ ಅರಣ್ಯ ಪ್ರದೇಶಗಳಲ್ಲಿ ನಡೆಯುವ ನಿದ್ರಾ ಕಾರ್ಯಕ್ರಮಗಳು, ಆಧುನಿಕ ಕ್ಯಾಪ್ಸೂಲ್ ಹೊಟೇಲ್ಗಳು ಹಾಗೂ ವಿಶ್ರಾಂತಿ ಕೆಫೆಗಳೂ ಅಪಾರ ಖ್ಯಾತಿಗಳಿಸಿವೆ. ಇತ್ತ ಯುರೋಪ್ನ ಸ್ವಿಟ್ಜರ್ಲ್ಯಾಂಡ್ ಮತ್ತು ನಾರ್ವೆಗಳು ಆಲ್ಪ್ಸ್ ಪರ್ವತಶ್ರೇಣಿಯ ಪ್ರಶಾಂತತೆ ಹಾಗೂ ನೈಸರ್ಗಿಕ ಕತ್ತಲ ರಾತ್ರಿಗಳ (Dark Skies) ನೆಮ್ಮದಿಗೆ ಹೆಸರಾಗಿದ್ದರೆ, ಫಿನ್ಲ್ಯಾಂಡ್ನಲ್ಲಿ ಗ್ಲಾಸ್ ಇಗ್ಲೂಗಳ ಮೂಲಕ ನಾರ್ದರ್ನ್ ಲೈಟ್ಸ್ ವಿಸ್ಮಯವನ್ನು ಕಣ್ತುಂಬಿಕೊಳ್ಳುತ್ತಲೇ ನಿದ್ರಿಸುವ ವಿಶಿಷ್ಟ ವ್ಯವಸ್ಥೆಯಿದೆ. ಪೋರ್ಚುಗಲ್ನಲ್ಲಿ ಹ್ಯಾಸ್ಟೆನ್ಸ್ ಸ್ಲೀಪ್ ಸ್ಪಾ ಹಾಗೂ ಸ್ಪೇನ್ನಲ್ಲಿ ವೈದ್ಯಕೀಯ ತಜ್ಞರ ನೇತೃತ್ವದ ವೆಲ್ನೆಸ್ ಕ್ಲಿನಿಕ್ಗಳು, ಮಾಲ್ಡೀವ್ಸ್ನ ಸೋನೆವಾ ರೆಸಾರ್ಟ್ಗಳು, ದಕ್ಷಿಣ ಕೊರಿಯಾದ ʼಸ್ಲೀಪ್ ಮ್ಯೂಸಿಯಂʼಗಳು ಹಾಗೂ ಥೈಲ್ಯಾಂಡ್ನ ಬೌದ್ಧ ಧ್ಯಾನ ಮತ್ತು ಮೌನ ರಿಟ್ರೀಟ್ಗಳು ಪ್ರಶಾಂತ ನಿದ್ರಾ ಪ್ಯಾಕೇಜ್ಗಳಿಗೆ ಖ್ಯಾತಿ ಪಡೆದ್ದು, ವಿಶ್ವದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಇನ್ನೊಂದೆಡೆ, ಪುರಾತನ ಆಯುರ್ವೇದ, ಯೋಗ ಹಾಗೂ ಧ್ಯಾನದ ಭದ್ರ ಬುನಾದಿ ಹೊಂದಿರುವ ಭಾರತದಲ್ಲೂ ನಿದ್ರಾ ಪ್ರವಾಸೋದ್ಯಮಕ್ಕೆ ಅತ್ಯಂತ ಪೂರಕ ವಾತಾವರಣವಿದೆ. ಉತ್ತರದ ಋಷಿಕೇಶದ ಯೋಗ ಆಶ್ರಮಗಳು ಹಾಗೂ ಧರ್ಮಶಾಲಾದ ಮೌನ ರಿಟ್ರೀಟ್ಗಳು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿದ್ದರೆ, ರಾಜಸ್ಥಾನ ಮತ್ತು ಚಂಡೀಗಢದ ಹೆರಿಟೇಜ್ ರೆಸಾರ್ಟ್ಗಳು ರಾಜಮನೆತನದ ಮಾದರಿಯ ಪ್ರಶಾಂತ ವಿಶ್ರಾಂತಿಗೆ ಹೆಸರಾಗಿವೆ.
ದಕ್ಷಿಣ ಭಾರತ ಮತ್ತು ಕರ್ನಾಟಕದ ಕಡೆಗೆ ಬಂದರೆ, ಕೊಡಗು, ಚಿಕ್ಕಮಗಳೂರು ಹಾಗೂ ಮಲೆನಾಡಿನ ಕಾಫಿ ತೋಟಗಳ ತಂಪು ಹವೆ, ಮಳೆಯ ಸದ್ದು ಮತ್ತು ಪಕ್ಷಿಗಳ ಕಲರವವು ನೈಸರ್ಗಿಕ ಜೋಗುಳದ ಅನುಭವ ನೀಡುತ್ತವೆ. ಗೋಕರ್ಣ ಹಾಗೂ ಕೇರಳಂನ ಕುಮಾರಕೋಮ್ ಕಡಲತೀರಗಳಲ್ಲಿ ಅಲೆಗಳ ನಿನಾದದ ನಡುವೆ ನಿದ್ರಾ ಶಿಬಿರಗಳು ನಡೆಯುತ್ತಿದ್ದರೆ, ಬೆಂಗಳೂರು ಮತ್ತು ಮುಂಬಯಿನಂಥ ಮಹಾನಗರಗಳಲ್ಲಿ ದೈನಂದಿನ ದಣಿವು ನೀಗಿಸಿಕೊಳ್ಳಲು ‘ಸ್ಲೀಪ್ ಸ್ಟುಡಿಯೋ’ಗಳು ಆರಂಭವಾಗುತ್ತಿವೆ.

ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಶೇ.70ರಷ್ಟು ಪ್ರಯಾಣಿಕರು ಕೇವಲ ಸ್ಥಳ ವೀಕ್ಷಣೆಗಿಂತ ಸಮಗ್ರ ಕ್ಷೇಮದ ಅನುಭವಗಳನ್ನು ಬಯಸುತ್ತಿದ್ದು, ಅರ್ಧಕ್ಕೂ ಹೆಚ್ಚು ಜನರು ತಮ್ಮ ರಜಾದಿನಗಳಲ್ಲಿ ವಿಶ್ರಾಂತಿಗೆ ಮೊದಲ ಆದ್ಯ ನೀಡುತ್ತಿದ್ದಾರೆ. ಹೀಗಾಗಿ ಸ್ಲೀಪ್ ಟೂರಿಸಂ ಕೇವಲ ಒಂದು ಐಷಾರಾಮಿ ಪ್ರವೃತ್ತಿಯಾಗಿರದೆ, ಒತ್ತಡದ ಬದುಕಿಗೆ ದೊರೆತ ಸಮರ್ಥ ಪರಿಹಾರವಾಗಿದೆ. ನಿದ್ರಾಹೀನತೆ, ನಿತ್ಯದ ಜೀವನದ ಜಂಜಾಟ, ನಿರಂತರ ಸ್ಕ್ರೀನ್ ದಣಿವು ಹಾಗೂ ಜೆಟ್ಲ್ಯಾಗ್ನಿಂದ ಬಳಲುವ ಆಧುನಿಕ ಜಗತ್ತಿನ ಜನರಿಗೆ ಈ ‘ಸ್ಲೀಪ್ ಟೂರಿಸಂ’ ಒಂದು ಅತ್ಯುತ್ತಮ ಪರಿಹಾರವಾಗಿ ಹೊರಹೊಮ್ಮಿದೆ.
ʼಉತ್ತಮ ನಿದ್ದೆಯೇ ಔಷಧʼ ಎಂಬ ನಮ್ಮ ಹಿರಿಯರ ಮಾತನ್ನು ಮರೆತು ಓಡುತ್ತಿರುವ ಈ ಕಾಲದಲ್ಲಿ, ನಿದ್ರೆಗಾಗಿ ಮಾಡುವ ಹೂಡಿಕೆಯು ಕೆಟ್ಟುಹೋದ ಆರೋಗ್ಯವನ್ನು ಸರಿಪಡಿಸಿಕೊಳ್ಳುವ ಅತ್ಯಗತ್ಯ ಹೆಜ್ಜೆಯಾಗಿದೆ. ಇದಕ್ಕಾಗಿ ದುಬಾರಿ ತಾಣಗಳಿಗೇ ಹೋಗಬೇಕೆಂದಿಲ್ಲ, ಮೊಬೈಲ್ ಪಕ್ಕಕ್ಕಿಟ್ಟು ಪ್ರಕೃತಿಯ ಮಡಿಲಲ್ಲಿ ಕಳೆಯುವ ನಿಶ್ಶಬ್ದ ಕ್ಷಣಗಳೂ ಇದರ ಸರಳ ರೂಪಗಳೇ ಆಗಿವೆ. ಪ್ರವಾಸ ಮುಗಿಸಿ ಮರಳುವಾಗ ತೆಗೆದ ಛಾಯಾಚಿತ್ರಗಳು ಅಥವಾ ಖರೀದಿಸಿದ ವಸ್ತುಗಳಿಗಿಂತ, ಮನಸಿನಲ್ಲಿ ಉಳಿಯುವ ನೆಮ್ಮದಿ ಮತ್ತು ದೇಹದಲ್ಲಿ ತುಂಬುವ ಹೊಸ ಚೈತನ್ಯವೇ ಹೆಚ್ಚು ಮೌಲ್ಯಯುತ. ಆದ್ದರಿಂದ ಮುಂದಿನ ಬಾರಿ ಪ್ರವಾಸ ಯೋಜಿಸುವಾಗ ‘ಎಲ್ಲಿಗೆ ಹೋಗಿ ಏನು ನೋಡುವುದು?’ ಎನ್ನುವುದಕ್ಕಿಂತ, ‘ಎಲ್ಲಿ ಹೋಗಿ ಹೇಗೆ ನೆಮ್ಮದಿಯ ವಿಶ್ರಾಂತಿ ಪಡೆಯುವುದು?’ ಎಂದು ಯೋಚಿಸುವುದು ಹೆಚ್ಚು ಅರ್ಥಪೂರ್ಣ.