• ಅಂಜಲಿ ರಾಮಣ್ಣ

ಪ್ರವಾಸದ ಕಲಿಕೆಗಳಲ್ಲಿ ಹೊಸ ನಕ್ಷೆಯನ್ನು ಓದುವುದು, ಮತ್ತೊಂದು ಭಾಷೆಯಲ್ಲಿ ʼಧನ್ಯವಾದʼ ಹೇಳುವುದು, ದಾರಿ ತಪ್ಪಿ ಮತ್ತೆ ಸರಿ ದಾರಿ ಕಂಡುಕೊಳ್ಳುವುದು ಹೊಸದೇನಲ್ಲ. ಆದರೆ, ಒಂದು ನಗರದಲ್ಲಿ ದಾರಿ ತಪ್ಪುವುದಕ್ಕಿಂತಲೂ ವೇಗವಾಗಿ ನಾವು ʼಹೊರಗಿನವರಂತೆʼ ಭಾಸವಾಗುವುದು ಊಟದ ಮೇಜಿನ ಬಳಿ. ಊಟ ಎಂದರೆ ಕೇವಲ ಹಸಿವು ತೀರಿಸಿಕೊಳ್ಳುವುದಲ್ಲ. ಪ್ರತಿ ನೆಲದಲ್ಲಿಯೂ ಊಟದ ಜತೆ ಅಲ್ಲಿನ ಜನರ ಇತಿಹಾಸ, ನಂಬಿಕೆಗಳು, ಸಂಪ್ರದಾಯ, ವಿಜ್ಞಾನ ಮತ್ತು ಅಲಿಖಿತ ನಿಯಮಗಳೂ ಪದಾರ್ಥಗಳಾಗುತ್ತವೆ. ಆ ನಿಯಮಗಳಲ್ಲಿ ಒಂದನ್ನು ತಪ್ಪಿದರೂ ಅದು ಕೇವಲ ಸಣ್ಣ ತಪ್ಪೆನಿಸುವುದಿಲ್ಲ. ಒಂದಿಡೀ ಸಂಸ್ಕೃತಿಗೆ ʼನೀನು ನನಗೆ ಅರ್ಥವಾಗುತ್ತಿಲ್ಲʼ ಎಂದು ಅವಮಾನಿಸಿದಂತೆ. ಆ ನಿಯಮಗಳ ಹಿಂದಿನ ಕಥೆ ತಿಳಿದಾಗ ಮಾತ್ರ ʼಪ್ರಪಂಚವೆಂಬ ಖಾನಾವಳಿಯಲ್ಲಿ ನಾವೆಲ್ಲರೂ ಬಂಧುಮಿತ್ರರುʼ ಎನಿಸದಿರದು.

ಇದನ್ನೂ ಓದಿ: ಪ್ರವಾಸ ನಡುವೆ ಆಹಾರದ ಬಗ್ಗೆ ಇರಲಿ ಗಮನ

ವಿಶ್ವದ ಊಟದ ತಟ್ಟೆಯ ಕಥೆಗಳಲ್ಲಿ ಬಲು ಭಾರವಾದದ್ದು ಇಟಲಿ. ಅವರು ಊಟವನ್ನು ಬಹುತೇಕ ಧರ್ಮಕ್ಕೆ ಪರ್ಯಾಯವಾಗಿ ಪರಿಗಣಿಸುತ್ತಾರೆ. ರೋಮ್‌ನ ಕೆಫೆಯಲ್ಲಿ ಊಟದ ನಂತರ ಕ್ಯಾಪುಚಿನೋ ಕಾಫಿ ಕೇಳಿಬಿಟ್ಟರೆ ಸಾಕು ಸ್ಠಳೀಯರು ಜೋರಾಗಿ ನಕ್ಕು ಬಿಡುತ್ತಾರೆ. ನಗುತ್ತಾ ಕಪ್ ನೀಡುತ್ತಾರೆ. ಆದರೆ, ಆ ನಗುವಿನ ಹಿಂದೆ ಒಂದು ಸಣ್ಣ ಮುಗುಳ್ನಗೆ ಮಿಶ್ರಿತ ನೋವೂ ಇರುತ್ತದೆ. ಇಟಲಿಯಲ್ಲಿ ಹಾಲು ಎಂದರೆ ʼಭಾರವಾದʼ ವಸ್ತು. ಹಾಲುಸಹಿತ ಕಾಫಿಯನ್ನು ಬೆಳಗಿನ ಲಘು ಉಪಾಹಾರದೊಂದಿಗೆ ಮಾತ್ರ ಸೇವಿಸಬೇಕು. ಊಟದ ನಂತರ ಕ್ಯಾಪುಚಿನೋ ಕುಡಿಯುವುದು ಚಳಿಗಾಲದ ಕೋಟನ್ನು ಬೇಸಗೆಯಲ್ಲಿ ಧರಿಸಿದಂತೆ. ಊಟ ಮುಗಿದ ಮೇಲೆ ಇಟ್ಯಾಲಿಯನ್ನರು ಎಸ್ಪ್ರೆಸ್ಸೋ ಕಾಫಿ ಕುಡಿಯುತ್ತಾರೆ. ಅದು ಬಾಯಿಯ ರುಚಿಯನ್ನು ಶುದ್ಧಗೊಳಿಸಿ ಜೀರ್ಣಕ್ಕೆ ಸಹಾಯ ಮಾಡುತ್ತಾ ದಿನದ ಲಯಕ್ಕೆ ಹದ ನೀಡುತ್ತದೆ ಎನ್ನುವುದು ಇಟ್ಯಾಲಿಯನ್ನರ ಸಾಮಾನ್ಯ ಜ್ಞಾನ.

Untitled Design - 2026-11-27T130329.034

ಅಲ್ಲಿಂದ ಜಪಾನ್‌ಗೆ ಹೋದರೆ ನಿಯಮಗಳು ಸಂಪೂರ್ಣವಾಗಿ ಬದಲಾಗುತ್ತವೆ. ಆದರೆ ಆಹಾರ ಗಾಂಭೀರ್ಯ ಹಾಗೆಯೇ ಇರುತ್ತದೆ. ರಾಮೆನ್ ತಿನ್ನಲು ಕುಳಿತರೆ ಸ್ಲರ್ಪ್... ಸ್ಲರ್ಪ್... ಎಂದು ಸೊರೆಯುವ ಸಪ್ಪಳ ಬಂದರೆ ಮಾತ್ರ ಅದು ಹೊಗಳಿಕೆ. ʼನೂಡಲ್ಸ್ ತಾಜಾ ಮತ್ತು ಬಿಸಿಯಾಗಿದೆ, ನಾನು ಅದನ್ನು ಆನಂದಿಸುತ್ತಿದ್ದೇನೆʼ ಎಂಬ ಸಂಕೇತ. ಆದರೆ, ಅನ್ನ ತಿನ್ನುವಾಗ ಎಂದಿಗೂ ಅನ್ನದ ಬೌಲ್‌ನಲ್ಲಿ ಚಾಪ್‌ಸ್ಟಿಕ್‌ಗಳನ್ನು ನೆಟ್ಟಗೆ ಚುಚ್ಚಬಾರದು. ಅದು ಬೌದ್ಧರ ಅಂತ್ಯಕ್ರಿಯೆಯಲ್ಲಿ ಸತ್ತವರಿಗೆ ಅರ್ಪಿಸುವ ಊಟದ ರೀತಿ. ಶುಭದ ಊಟದ ಮೇಜಿನಲ್ಲಿ ಅದನ್ನು ಮಾಡಿದರೆ, ಆಚರಣೆಯ ನಡುವೆ ಸಾವಿನ ನೆನಪನ್ನು ತಂದಂತಾಗಿ ಅದು ಅಶುಭದ ಸಂಕೇತವಾಗುತ್ತದೆ.

ಚೀನಾದ ಊಟದಲ್ಲಿದೆ ಒಂದು Tough job! ಚೈನೀಸ್ ಹೊಸ ವರ್ಷ ಮತ್ತಿತರ ಸಂತಸ ಸಮಾರಂಭಗಳಲ್ಲಿ ಒಂದಿಡೀ ಉದ್ದದ ಮೀನಿನ ಒಂದು ಭಾಗವನ್ನು ತಿನ್ನದೆ ಉಗಿಯುವ ಪದ್ಧತಿ ಇದೆ. ಅದು ಸಮೃದ್ಧಿಯ ಸಂಕೇತ ಎನ್ನುತ್ತಾರೆ. ಮೀನನ್ನು ಒಂದು ಕಡೆ ತಿಂದಾದ ಮೇಲೆ ತಿರುವಿ ಹಾಕಬಾರದು. ಮೀನುಗಾರ ಸಮುದಾಯಗಳಿಗೆ ಅದು ದೋಣಿ ಉಲ್ಟಾ ಆಗುವ ಅಪಶಕುನ. ಆದ್ದರಿಂದ ಮೂಳೆಗಳನ್ನು ಎಚ್ಚರಿಕೆಯಿಂದ ಮೇಲಕ್ಕೆತ್ತಿ ಇನ್ನೊಂದು ಕಡೆಯನ್ನು ಮಾತ್ರವೇ ತಿನ್ನಬೇಕಿರುತ್ತದೆ.

ದಕ್ಷಿಣಕ್ಕೆ ಥೈಲ್ಯಾಂಡ್‌ಗೆ ಹೋದರೆ ಅಲ್ಲಿ ಅನ್ನ ಕೇವಲ ತಿನಿಸಲ್ಲ. ಸಾಕ್ಷಾತ್ ಅನ್ನಪೂರ್ಣೇಶ್ವರಿ. ಅಲ್ಲಿ ಅವಳ ಹೆಸರು Mae Posop. ರೈತರು ಭತ್ತ ಬಿತ್ತುವ ಮೊದಲು ಆಕೆಗೆ ನಮಸ್ಕರಿಸುತ್ತಾರೆ. ತಿನ್ನುವವರು ತಟ್ಟೆಯಲ್ಲಿ ಅನ್ನ ಉಳಿಸಿದರೆ ಯಾರೂ ಬೈಯುವುದಿಲ್ಲ, ಆದರೆ ಅವರ ಕಣ್ಣಲ್ಲಿ ನಿರಾಸೆ ಕಾಣುತ್ತದೆ. ‘ಸ್ವಲ್ಪಸ್ವಲ್ಪವೇ ತೆಗೆದುಕೊಳ್ಳಿ, ಇನ್ನಷ್ಟು ಮತ್ತಷ್ಟು ತೆಗೆದುಕೊಂಡು ಧಾರಾಳವಾಗಿ ತಿನ್ನಿ, ಭೂಮಿ ಕೊಟ್ಟದ್ದಕ್ಕೆ ಕೃತಜ್ಞರಾಗಿರಿ’ ಇದು ಅವರ ಸರಳ ಸಂದೇಶ.

ಫ್ರಾನ್ಸ್‌ನಲ್ಲಿ ಗೌರವ ಸಿಕ್ಕಿರುವುದು ಬ್ರೆಡ್‌ಗೆ. ಯಾವುದೇ Boulangerie (ಬೇಕರಿ)ಗೆ ಹೋದರೆ Baguette ಬ್ರೆಡ್‍ಗಳನ್ನು ನಿಧಿಯಂತೆ ಜೋಪಾನವಾಗಿ ಜೋಡಿಸಿಟ್ಟಿರುತ್ತಾರೆ. ತಿನ್ನುವ ಮೇಜಿನ ಮೇಲೆ ಬ್ಯಾಗೆಟ್‌ ಅನ್ನು ಚಾಕುವಿನಿಂದ ಕತ್ತರಿಸಬಾರದು. ಕೈಯಿಂದ ಮುರಿಯಬೇಕು. ಅವರಿಗೆ ಕತ್ತರಿಸುವುದು ಯಾಂತ್ರಿಕವಾಗಿ ಕಾಣುತ್ತದೆ. ಮುರಿಯುವುದು ಮಾನವೀಯವಾಗಿ ಕಾಣುತ್ತದೆ ಮತ್ತು ಬ್ರೆಡ್‌ ಅನ್ನು ಎಸೆಯುವುದನ್ನು ಮಹಾಪಾಪ ಎನ್ನುತ್ತಾರೆ. ಫ್ರಾನ್ಸ್‌ನ ಇತಿಹಾಸದಲ್ಲಿ ಬ್ರೆಡ್ ದುರ್ಲಭವಾಗಿದ್ದ ಕಾಲವಿತ್ತು. ಆದ್ದರಿಂದ ಅದನ್ನು ವ್ಯರ್ಥ ಮಾಡುವುದು ಜೀವನವನ್ನೇ ವ್ಯರ್ಥ ಮಾಡಿದಂತೆ ಎನ್ನುತ್ತಾರೆ.

Untitled Design - 2026-11-27T130551.212

ದಕ್ಷಿಣ ಕೊರಿಯಾದ ಎನ್ನುವ ಬಿಳಿಚರ್ಮದ ಮಮಕಾರದ ದೇಶದಲ್ಲಿ ನಿಯಮಗಳಿರುವುದು ಆಹಾರದ ಬಗ್ಗೆಯಲ್ಲ, ಜತೆಗಿರುವ ಜನರ ಬಗ್ಗೆ! ಯಾರಾದರೂ ನಮ್ಮ ಲೋಟಕ್ಕೆ ಸೋಜು (ಸ್ಥಳೀಯ ಮದ್ಯ) ಬಗ್ಗಿಸಿದರೆ ಮುಂದಿನ ಸುತ್ತಿನಲ್ಲಿ ನಾವೇ ಖುದ್ದು ಬಗ್ಗಿಸಿಕೊಳ್ಳಬಾರದು. ಟೇಬಲ್‍ನಲ್ಲಿ ಕುಳಿತಿರುವವರೆಲ್ಲರೂ ಪರಸ್ಪರ ಹಾಕಬೇಕು. ಇದೊಂದು ಕಾಳಜಿಯ ವೃತ್ತ. ಹಿರಿಯರಿಗೆ ಹಾಕುವಾಗ ಎರಡೂ ಕೈ ಬಳಸಬೇಕಿರುತ್ತದೆ. ಅವರ ಮುಂದೆ ಕುಡಿಯುವಾಗ ಸ್ವಲ್ಪ ತಲೆ ತಗ್ಗಿಸಿರಬೇಕು. ಈ ಶಿಷ್ಟಾಚಾರಕ್ಕೆ ಅವರು ಕೊಡುವ ಅರ್ಥ ‘ನಾನು ನಿನ್ನನ್ನು ಗೌರವಿಸುತ್ತೇನೆ’. ಆಹಾರಕ್ಕಾಗಿ ಹಪಹಪಿಸುವ ದೇಶ ಎಂದೇ ಪರಿಚಯಿಸಿಕೊಂಡಿರುವ ಇಥಿಯೋಪಿಯಾದಲ್ಲಿ ತಟ್ಟೆ ಮತ್ತು ಚಮಚದ ಪರಿಕಲ್ಪನೆಯೇ ಮಾಯವಾಗಿದೆ. ದೊಡ್ಡ ಸಾಮೂಹಿಕ ತಟ್ಟೆಯ ಮೇಲೆ ಇಂಜೆರಾ ಎಂಬ ಹುಳಿ ರುಚಿಯ ಫ್ಲಾಟ್‌ಬ್ರೆಡ್ ಹಾಸಿರುತ್ತದೆ. ಇಂಜೆರಾವೇ ತಟ್ಟೆ, ಇಂಜೆರಾವೇ ಚಮಚ. ಬಲಗೈಯಿಂದ ಒಂದು ತುಂಡು ಹರಿದು ಅದರಿಂದಲೇ ತರಕಾರಿ ಸಾಗು ತೆಗೆದು ತಿನ್ನಬೇಕು. ಒಂದೇ ತಟ್ಟೆಯಿಂದ ತಿನ್ನುವುದು ಇಲ್ಲಿ ಅಶುದ್ಧವಲ್ಲ ಅನ್ಯೋನ್ಯತೆ. ʼನಾವು ಕುಟುಂಬ, ನಾವು ಹಂಚಿಕೊಳ್ಳುತ್ತೇವೆ. ಫೋರ್ಕ್ ಚಮಚ ನಮ್ಮ ನಡುವೆ ಗೋಡೆ ಕಟ್ಟಿದಂತೆʼ ಎನ್ನುತ್ತಾರೆ.

ಮಧ್ಯಪ್ರಾಚ್ಯದಲ್ಲಿ ಕಾಫಿಗೆ ತನ್ನದೇ ಆದ ಭಾಷೆ ಇದೆ. ಅರೇಬಿಕ್ ಕಾಫಿಯನ್ನು ಹಿಡಿಕೆಯಿಲ್ಲದ ಸಣ್ಣ ಕಪ್‌ಗಳಲ್ಲಿ ಸುರಿಯುತ್ತಾರೆ. ಸಾಕು ಎಂದು ಹೇಳುವವರೆಗೂ ಹಾಕುತ್ತಿರುತ್ತಾರೆ. ಹಾಗಂತ ಸಾಕು ಎನ್ನುವುದನ್ನು ಮಾತಿನಲ್ಲಿ ಹೇಳುವ ಹಾಗಿಲ್ಲ. ಕಪ್‌ಅನ್ನು ನಿಧಾನವಾಗಿ ಅಲುಗಾಡಿಸಿದರೆ ಅದು ʼಸಾಕುʼ ಎಂಬ ಸಂಜ್ಞೆ. ಹಾಗೆ ಮಾಡದಿದ್ದರೆ ಒಂದು ಕಪ್ ಬಯಸಿ ಐದು ಕಪ್ ಕುಡಿಯುವಂತಾಗುತ್ತದೆ. ಕಾಫಿ ಕಹಿ ಆದರೆ ಅದರ ಸುತ್ತಲಿನ ಆಚರಣೆ ಸಿಹಿಯಾಗಿರುತ್ತದೆ.

ಅಮೆರಿಕದಲ್ಲಿ ಐಸ್ ಹಾಕಿಸಿ ಕೊಳ್ಳುವುದು ತಿನ್ನುವವನ ಹಕ್ಕು. ನೀರು, ಕೋಲ್ಡ್ ಡ್ರಿಂಕ್, ಐಸ್ಡ್ ಟೀ, ಕೆಲವೊಮ್ಮೆ ಬಿಯರ್ ಕೂಡ ಐಸ್ ತುಂಬಿದ ಗ್ಲಾಸ್‌ನಲ್ಲಿ ಬರುತ್ತದೆ. ʼಐಸ್ ಬೇಡʼ ಎಂದರೂ ಐಸ್ ಬರುತ್ತದೆ. ಏಕೆಂದರೆ ಅಮೆರಿಕನ್ನರಿಗೆ ಐಸ್ ಇಲ್ಲದ ಪಾನೀಯ ಅಪೂರ್ಣ. ಮೆಕ್ಸಿಕೋದಲ್ಲಿ ಟ್ಯಾಕೋ ಅಂಗಡಿಗೆ ಹೋಗಿ ಕೆಚಪ್ ಕೇಳಿದರೆ ಅವರು ಕೊಡುತ್ತಾರೆ. ಆದರೆ ಹಿಂದೆ ಸಾಲಿನಲ್ಲಿ ನಿಂತವರೆಲ್ಲರಿಗೂ ಕೇಳಿದವನು ಪ್ರವಾಸಿ ಎಂದು ಗೊತ್ತಾಗುತ್ತದೆ. ಯಾಕೆಂದರೆ ಟ್ಯಾಕೋ ಜನಕರು ಬಳಸುವುದು ಸಾಲ್ಸಾ, ನಿಂಬೆ, ಕೊತ್ತಂಬರಿ ಮತ್ತು ಈರುಳ್ಳಿ ಅಷ್ಟೇ.

ಅರ್ಜೆಂಟೀನಾದ Yerba Mate ಪಾನೀಯ ಒಂದು ಪಾನೀಯಕ್ಕಿಂತ ಹೆಚ್ಚಾಗಿ ಸಾಮಾಜಿಕ ಒಪ್ಪಂದವಾಗಿದೆ. Cebador ಎನ್ನುವವನು ಕುಂಬಳಕಾಯಿ ಚಿಪ್ಪಿನಲ್ಲಿ ಚಹಾ ಮಾಡಿ ಲೋಹದ ನಳಿಕೆಯಿಂದ ಸುತ್ತಲೂ ಹಂಚುತ್ತಾನೆ. ಎಲ್ಲರೂ ಒಂದೇ ಸ್ಟ್ರಾದಿಂದ ಕುಡಿಯುತ್ತಾರೆ. ಮೊದಲ ಕಪ್ ಅನ್ನು cebador ಸ್ವತಃ ಕುಡಿಯುತ್ತಾನೆ. ʼಧನ್ಯವಾದʼ ಎಂದು ಹೇಳುವುದು ʼನನಗಿದು ಇನ್ನು ಬೇಡʼ ಎಂದರ್ಥ. ಭಾರತದಲ್ಲಿ ಎಡಗೈಯಲ್ಲಿ ತಿನ್ನುವುದು ಅಶುಚಿ ಅದಕ್ಕೇ ಅಸಭ್ಯ. ಹೆಜ್ಜೆಯಿಂದ ಹೆಜ್ಜೆಗೆ ಪದಾರ್ಥಗಳನ್ನು ಬಡಿಸುವ ರೀತಿಯಿಂದ ತಿನ್ನುವ ಆಂಗಿಕ ಚಲನೆಯವರೆಗೂ, ಎಲೆ ಮುದುರೆತ್ತುವುದರಲ್ಲೂ ವಿಭಿನ್ನ ಆಚರಣೆಗಳು.

Untitled Design - 2026-11-27T130834.061

ಹಿಮಪ್ರದೇಶಗಳಲ್ಲಿ ಪದ್ಧತಿಗಳು ಮತ್ತಷ್ಟು ವಿಚಿತ್ರ. ಐಸ್‌ಲ್ಯಾಂಡ್‌ನಲ್ಲಿ hákarl ತಿನ್ನುತ್ತಾರೆ. ಶಾರ್ಕ್ ಮಾಂಸವನ್ನು ತಿಂಗಳುಗಟ್ಟಲೆ ಹೂತಿಟ್ಟು, ಹುದುಗು ಬರಿಸಿ ತಿನ್ನುತ್ತಾರೆ. ಹಿಮಗೆಡ್ಡೆಯ ದೇಶದಲ್ಲಿ ಹವಾಮಾನವನ್ನೂ ವ್ಯರ್ಥ ಮಾಡಬಾರದೆಂಬ ನಿಯಮ. ನಾರ್ವೆಯಲ್ಲಿ ಬೆಳಗಿನ ತಿಂಡಿಗೆ ಸುಟ್ಟಿರುವ brunost ಎಂಬ ಕಂದು ಚೀಸ್‍ನ ಗೆಡ್ಡೆ ತಿನ್ನುತ್ತಾರೆ. ಸಂಸ್ಕೃತಿಯನ್ನು ಆರೋಗ್ಯದ ತಕ್ಕಡಿಯಲ್ಲಿ ಮಾತ್ರ ಅಳೆಯಲು ಸಾಧ್ಯವಿಲ್ಲ. ಕೆಲವೊಮ್ಮೆ ಅನಾರೋಗ್ಯಕರವೆನಿಸುವುದರಲ್ಲೂ ಮನುಷ್ಯ ತನ್ನ ಸ್ವಾತಂತ್ರ್ಯ, ಸಂತೋಷ ಮತ್ತು ಒಳಗೊಳ್ಳುವಿಕೆಯನ್ನು ಹುಡುಕುತ್ತಾನೆ. ಗ್ರೀನ್‌ಲ್ಯಾಂಡ್‌ನಲ್ಲಿ 500 ಸಣ್ಣ ಪಕ್ಷಿಗಳನ್ನು ಸೀಲ್ ಚರ್ಮದಲ್ಲಿ ತುಂಬಿ ತಿಂಗಳುಗಟ್ಟಲೆ ಹೂತಿಡುತ್ತಾರೆ. ಚಳಿಗಾಲದಲ್ಲಿ ತಾಜಾ ಆಹಾರ ಸಿಗದಿದ್ದಾಗ ಈ kiviak ಅನ್ನು ತಿನ್ನುತ್ತಾರೆ.

ಹೊರಗಿನವರಿಗೆ ಇವೆಲ್ಲ ವಿಪರೀತವಾಗಿ ಕಾಣುತ್ತದೆ. ಆದರೆ ಅಲ್ಲಿ ಹುಟ್ಟಿ ಬೆಳೆದವರಿಗೆ ಇದು ಪರಂಪರೆ. ಭೂಮಿ ಕೊಟ್ಟದ್ದನ್ನು ತೆಗೆದುಕೊಂಡು ಅದನ್ನು ಬದುಕಿನ ಸಾಧನವನ್ನಾಗಿ ಮತ್ತು ಜನರನ್ನು ಬೆಸೆಯುವ ಕೊಂಡಿಯನ್ನಾಗಿ ಮಾಡಿಕೊಂಡಿರುವ ಮಾನವನ ಕಥೆ ಇದೆ ಪ್ರತಿ ಊಟದ ತಟ್ಟೆಯಲ್ಲಿ. ಅದಕ್ಕಾಗಿಯೇ ಊಟದ ನಿಯಮಗಳು, ಚಿಕ್ಕಚಿಕ್ಕ ನಿಷೇಧಗಳು ಇಷ್ಟು ಮುಖ್ಯವಾಗಿವೆ. ಅವು ಕೇವಲ ಸಭ್ಯತೆಗಾಗಿ ಇರುವುದಲ್ಲ, ಊಟದ ಹಿಂದಿನ ಗಾಥೆಯೊಂದನ್ನು ತಟ್ಟೆಯಲ್ಲಿ ನಾವು ನೋಡುತ್ತಿದ್ದೀವಿ ಎನ್ನುವುದರ ನಿಶಾನೆ. ಪ್ರವಾಸಿಯೊಬ್ಬ ಇವೆಲ್ಲವನ್ನೂ ತಿಳಿದಿರಬೇಕೆಂದು ಯಾರೂ ನಿರೀಕ್ಷಿಸುವುದಿಲ್ಲ. ಆದರೆ ಪ್ರವಾಸಿ ಸ್ಥಳೀಯರ ಪದ್ಧತಿಯನ್ನು ಪ್ರಯತ್ನಿಸಿದಾಗ ಅಲ್ಲಿನವರ ಅವರ ಮುಖ ಅರಳುತ್ತದೆ. ಊಟವು ಒಂದು ಸಂಸ್ಕೃತಿಯ ಒಳಗೆ ಹೋಗಲು ಅತ್ಯಂತ ಸುಲಭದ ದಾರಿ. ಪಾಸ್‌ಪೋರ್ಟ್ ಜತೆಗೆ ಜಿಜ್ಞಾಸೆಯು ಸೇರಿಕೊಂಡಾಗ ಆಹಾರದ ರುಚಿಯು ಪ್ರವಾಸಿಯ ಅಭಿರುಚಿಯಾಗುವ ಮ್ಯಾಜಿಕ್ ಘಟಿಸಿಬಿಡುತ್ತದೆ.