ಬೆಂಗಳೂರು ಹೆರಿಟೇಜ್ ವಾಕ್ – ಸಂಸ್ಕೃತಿಯ ಮೂಲಕ ಒಂದು ಪ್ರವಾಸ
‘ಹೆರಿಟೇಜ್ ವಾಕ್’ ಎಂದರೆ ಕೇವಲ ನಡೆದು ನೋಡುವ ಕಾರ್ಯಕ್ರಮವಲ್ಲ. ಅದು ಕಥೆಗಳನ್ನು ಹೇಳುತ್ತಾ ನಗರದ ಸುತ್ತಾಟ ಮಾಡಿಸುವ ಒಂದು ಜೀವಂತ ಅನುಭವ. ನಗರದ ಪ್ರತಿಯೊಂದು ರಸ್ತೆ, ಕಟ್ಟಡ, ಚರ್ಚ್, ಕ್ಲಬ್, ಬ್ಯಾಂಕ್, ಉದ್ಯಾನ, ಸ್ಮಾರಕ ಮತ್ತು ಪಾರಂಪರಿಕ ಸ್ಥಳದ ಹಿಂದೆ ಅಡಗಿರುವ ಇತಿಹಾಸವನ್ನು ಕಥಾರೂಪದಲ್ಲಿ ಪರಿಚಯಿಸುವುದೇ ಹೆರಿಟೇಜ್ ವಾಕ್‌ನ ವಿಶೇಷತೆ.
ಕೆ. ರಾಧಾಕೃಷ್ಣ ಹೊಳ್ಳ
ಅಧ್ಯಕ್ಷರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಕಾರ್ಯಾಚಾರಕರ ಸಂಘ
ನಿರ್ದೇಶಕರು – FKCCI
-
ಬೆಂಗಳೂರು ಕೇವಲ ಭಾರತದ ಸಿಲಿಕಾನ್ ವ್ಯಾಲಿ ಮಾತ್ರವಲ್ಲ; ಇದು ನಾಲ್ಕು ಶತಮಾನಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ನಗರ. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರಿನ ಪರಂಪರೆ, ಮೈಸೂರು ಸಂಸ್ಥಾನದ ಆಡಳಿತ, ಬ್ರಿಟಿಷ್ ಕ್ಯಾಂಟೋನ್ಮೆಂಟ್ ಮತ್ತು ಆಧುನಿಕ ಭಾರತದ ಬೆಳವಣಿಗೆ—ಇವೆಲ್ಲವೂ ಒಂದೇ ನಗರದಲ್ಲಿ ಒಂದಕ್ಕೊಂದು ಬೆಸೆದುಕೊಂಡಿವೆ. ಇದೇ ಕಾರಣದಿಂದ ಬೆಂಗಳೂರು ಇತಿಹಾಸ, ಸಂಸ್ಕೃತಿ, ವಾಸ್ತುಶಿಲ್ಪ, ಆತಿಥ್ಯ ಮತ್ತು ವಿಶ್ವನಾಗರಿಕ ಜೀವನಶೈಲಿಯು ಶ್ರೀಮಂತ ಮತ್ತು ಅದ್ಭುತ ಸಂಗಮವಾಗಿದೆ.
‘ಹೆರಿಟೇಜ್ ವಾಕ್’ ಎಂದರೆ ಕೇವಲ ನಡೆದು ನೋಡುವ ಕಾರ್ಯಕ್ರಮವಲ್ಲ. ಅದು ಕಥೆಗಳನ್ನು ಹೇಳುತ್ತಾ ನಗರದ ಸುತ್ತಾಟ ಮಾಡಿಸುವ ಒಂದು ಜೀವಂತ ಅನುಭವ. ನಗರದ ಪ್ರತಿಯೊಂದು ರಸ್ತೆ, ಕಟ್ಟಡ, ಚರ್ಚ್, ಕ್ಲಬ್, ಬ್ಯಾಂಕ್, ಉದ್ಯಾನ, ಸ್ಮಾರಕ ಮತ್ತು ಪಾರಂಪರಿಕ ಸ್ಥಳದ ಹಿಂದೆ ಅಡಗಿರುವ ಇತಿಹಾಸವನ್ನು ಕಥಾರೂಪದಲ್ಲಿ ಪರಿಚಯಿಸುವುದೇ ಹೆರಿಟೇಜ್ ವಾಕ್‌ನ ವಿಶೇಷತೆ. ವಿವಿಧ ಕಾಲಘಟ್ಟಗಳಲ್ಲಿ ನಗರವನ್ನು ಆಳಿದ ರಾಜರು, ಬ್ರಿಟಿಷ್ ಆಡಳಿತ, ನಗರಾಭಿವೃದ್ಧಿಗೆ ಕೊಡುಗೆ ನೀಡಿದ ಅಧಿಕಾರಿಗಳು, ಉದ್ಯಮಿಗಳು ಹಾಗೂ ಸಮಾಜದ ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಪ್ರವಾಸಿಗರಿಗೆ ನೀಡುವ ಅತ್ಯುತ್ತಮ ಮಾದರಿಯಾಗಿದೆ. ಇಂಥ ಕಥನ ಪ್ರವಾಸವು ನಗರವನ್ನು ನೋಡುವುದಷ್ಟೇ ಅಲ್ಲ, ಅದನ್ನು ಅರ್ಥಮಾಡಿಕೊಳ್ಳುವ ಅವಕಾಶವನ್ನು ನೀಡುತ್ತದೆ.
ಇದನ್ನೂ ಓದಿ: ಇಂಧನ ಸ್ವಾವಲಂಬನೆಯ ಭವಿಷ್ಯಕ್ಕೆ ಇವಿ ಅಗತ್ಯ
ಈ ವಾಕ್ ನಗರದ ಹೃದಯಭಾಗವಾದ ʻಮಹಾತ್ಮ ಗಾಂಧಿ ರಸ್ತೆ (ಎಂ.ಜಿ. ರಸ್ತೆ)ಯಿಂದ ಆರಂಭಿಸಬಹುದು. ಒಂದು ಕಾಲದಲ್ಲಿ ಇದು ಬ್ರಿಟಿಷ್ ಕ್ಯಾಂಟೋನ್ಮೆಂಟ್‌ನ ಪ್ರಮುಖ ಮೈದಾನದಂಥ ನಗರವಾಗಿತ್ತು. ಇಲ್ಲಿನ ಟ್ರಿನಿಟಿ ಚರ್ಚ್, ಮೇಯೋ ಹಾಲ್, ಎಲ್‌ಐಸಿ ಕಟ್ಟಡ, ಹಳೆಯ ಬ್ರಿಟಿಷ್ ಬ್ಯಾಂಕ್ ಕಟ್ಟಡಗಳು, ರಾಣಿ ವಿಕ್ಟೋರಿಯಾ ಪ್ರತಿಮೆ ಇದ್ದ ಸ್ಥಳ, ಬ್ರಿಟಿಷರ ಕಾಲದ ರಸ್ತೆ ವಿನ್ಯಾಸ, ಪಾದಚಾರಿ ಮಾರ್ಗಗಳು ಹಾಗೂ ಪಾರಂಪರಿಕ ಕಟ್ಟಡಗಳು ಇಂದಿಗೂ ಬೆಂಗಳೂರಿನ ಇತಿಹಾಸವನ್ನು ಸಾರುತ್ತವೆ.

ಪ್ರವಾಸದ ವೇಳೆ ಬ್ರಿಗೇಡ್ ರಸ್ತೆ, ಹಳೆಯ ಸೈನಿಕ ಶಿಬಿರಗಳು, ಪೆರೇಡ್ ಮೈದಾನಗಳು, ಬ್ರಿಟಿಷ್ ಅಧಿಕಾರಿಗಳ ಕ್ಲಬ್‌ಗಳು, ವಾಣಿಜ್ಯ ಪ್ರದೇಶಗಳು ಹಾಗೂ ಬೆಂಗಳೂರು ಕೋಟೆಯ ಇತಿಹಾಸವನ್ನು ಪರಿಚಯಿಸಬಹುದು. ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಬೆಂಗಳೂರು ಹೇಗೆ ಪ್ರಮುಖ ಸೈನಿಕ, ಆಡಳಿತಾತ್ಮಕ ಮತ್ತು ವಾಣಿಜ್ಯ ಕೇಂದ್ರವಾಗಿ ಬೆಳೆದಿತು ಎಂಬುದನ್ನು ಕಥೆಗಳ ಮೂಲಕ ವಿವರಿಸಬಹುದು.
ಈ ಪ್ರವಾಸದ ಅತ್ಯಂತ ಕುತೂಹಲಕಾರಿ ಕಥೆಗಳಲ್ಲಿ ಒಂದಾಗಿದೆ ಸರ್ ವಿಂಸ್ಟನ್ ಚರ್ಚಿಲ್ ಅವರದ್ದು. 22 ವರ್ಷದ ಲೆಫ್ಟಿನೆಂಟ್ ಆಗಿದ್ದ ಚರ್ಚಿಲ್ 1896ರಿಂದ 1899ರವರೆಗೆ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದರು. ಅವರು ಬೆಂಗಳೂರು ಯುನೈಟೆಡ್ ಸರ್ವಿಸಸ್ ಕ್ಲಬ್ (ಇಂದಿನ ಬೆಂಗಳೂರು ಕ್ಲಬ್) ಸದಸ್ಯರಾಗಿದ್ದರು. ಬೆಳಿಗ್ಗೆ ಸೈನಿಕ ಕರ್ತವ್ಯ, ಮಧ್ಯಾಹ್ನ ಪೋಲೋ ಆಟ ಮತ್ತು ಸಂಜೆ ಕ್ಲಬ್‌ನಲ್ಲಿ ಉತ್ತಮ ಭೋಜನ, ಸಂಭಾಷಣೆ ಹಾಗೂ ಸಿಗಾರ್‌ಗಳೊಂದಿಗೆ ಸಮಯ ಕಳೆಯುತ್ತಿದ್ದರು. ಅವರು ಕ್ಲಬ್‌ನ ₹13 ಬಿಲ್ ಪಾವತಿಸದೆ ತೆರಳಿದ ಪ್ರಸಂಗ ಇಂದಿಗೂ ಬೆಂಗಳೂರು ಕ್ಲಬ್‌ನ ಅತ್ಯಂತ ಪ್ರಸಿದ್ಧ ಐತಿಹಾಸಿಕ ಕಥೆಗಳಲ್ಲಿ ಒಂದಾಗಿದೆ.
ಬೆಂಗಳೂರು ಭಾರತದಲ್ಲಿ ʻಡಿನ್ನರ್ ಅಂಡ್ ಡ್ಯಾನ್ಸ್ʼ ಸಂಸ್ಕೃತಿಯನ್ನು ಪರಿಚಯಿಸಿದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಬ್ರಿಟಿಷ್ ಕ್ಯಾಂಟೋನ್ಮೆಂಟ್‌ನಲ್ಲಿ ಆರಂಭವಾದ ಬಾಲ್‌ರೂಮ್ ಡ್ಯಾನ್ಸ್, ಲೈವ್ ಆರ್ಕೆಸ್ಟ್ರಾ, ಅಧಿಕೃತ ಭೋಜನ ಮತ್ತು ಸಾಮಾಜಿಕ ಸಮಾರಂಭಗಳು ನಂತರ ನಗರದ ವಿಶಿಷ್ಟ ಸಂಸ್ಕೃತಿಯಾಗಿ ಬೆಳೆದವು. ನಂತರದ ದಶಕಗಳಲ್ಲಿ Blue Fox, Koshy's, Breeze, 3 Aces, Lakeview Milk Bar, K.C. Das, West End Hotel, The Only Place ಸೇರಿದಂತೆ ಅನೇಕ ಪ್ರಸಿದ್ಧ ರೆಸ್ಟೋರೆಂಟ್‌ಗಳು ಮತ್ತು ಮಲ್ಟಿಕ್ಯೂಸಿನ್ ಆಹಾರ ಮಂದಿರಗಳು ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಯನ್ನು ಭಾರತದ ಅತ್ಯಂತ ಪ್ರಸಿದ್ಧ ಆಹಾರ, ಸಂಗೀತ, ಆತಿಥ್ಯ ಮತ್ತು ನೈಟ್‌ಲೈಫ್ ಕೇಂದ್ರಗಳಾಗಿ ರೂಪಿಸಿದವು.

ಇಂದು ಬೆಂಗಳೂರಿನ ಕಾಫೆ ಸಂಸ್ಕೃತಿ, ಬಹುರಾಷ್ಟ್ರೀಯ ಆಹಾರ ಪದ್ಧತಿ, ಲೈವ್ ಮ್ಯೂಸಿಕ್, ಪಬ್ ಸಂಸ್ಕೃತಿ ಮತ್ತು ಆತಿಥ್ಯ ಕ್ಷೇತ್ರದ ಬೆಳವಣಿಗೆಗೆ ಈ ಐತಿಹಾಸಿಕ ಹಿನ್ನೆಲೆಯೇ ಭದ್ರ ಬುನಾದಿಯಾಗಿದೆ. ಆದ್ದರಿಂದ ಹೆರಿಟೇಜ್ ವಾಕ್ ಕೇವಲ ಕಟ್ಟಡಗಳ ಪರಿಚಯವಾಗದೆ, ನಗರದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಬೆಳವಣಿಗೆಯ ಪಯಣವನ್ನು ಪರಿಚಯಿಸುವ ಜೀವಂತ ಅನುಭವವಾಗಬೇಕು.
ತರಬೇತಿ ಪಡೆದ ಮಾರ್ಗದರ್ಶಕರು, ಬಹುಭಾಷಾ ಕಥನ, ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಮಾಹಿತಿ, ಆಡಿಯೋ ಗೈಡ್ ಹಾಗೂ ಸಂಜೆ ವೇಳೆಯ Storytelling Heritage Walks ಮೂಲಕ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಬೆಂಗಳೂರಿನ ನಿಜವಾದ ಆತ್ಮವನ್ನು ಪರಿಚಯಿಸಬಹುದು. ಇದರಿಂದ ಪ್ರವಾಸಿಗರು ನಗರದಲ್ಲಿ ಹೆಚ್ಚು ಸಮಯ ಕಳೆಯಲು ಪ್ರೇರೇಪಿತರಾಗುತ್ತಾರೆ, ಸ್ಥಳೀಯ ವ್ಯಾಪಾರ, ಹೋಟೆಲ್, ರೆಸ್ಟೋರೆಂಟ್, ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹೆಚ್ಚಿನ ಆದಾಯ ದೊರೆಯುತ್ತದೆ.
ಕಥೆಗಳನ್ನು ಹೇಳುತ್ತಾ ನಗರದ ಪ್ರದಕ್ಷಿಣೆ ಮಾಡಿಸುವುದೇ ನಿಜವಾದ ʻಹೆರಿಟೇಜ್ ವಾಕ್ʼ. ಇದು ಪ್ರವಾಸಿಗರಿಗೆ ನಗರದ ಪರಿಚಯ, ನಗರವನ್ನು ಆಳಿದ ರಾಜರು ಮತ್ತು ಆಡಳಿತಗಾರರ ಪರಿಚಯ, ನಗರದ ಅಭಿವೃದ್ಧಿಗೆ ಕೊಡುಗೆ ನೀಡಿದ ಸಂಸ್ಥೆಗಳು ಮತ್ತು ವ್ಯಕ್ತಿಗಳ ಪರಿಚಯ ಹಾಗೂ ಬೆಂಗಳೂರಿನ ಸಂಸ್ಕೃತಿ, ಪರಂಪರೆ ಮತ್ತು ಆತಿಥ್ಯದ ಅನುಭವವನ್ನು ಒಂದೇ ಪ್ರವಾಸದಲ್ಲಿ ನೀಡುವ ಅತ್ಯುತ್ತಮ ಪ್ರವಾಸೋದ್ಯಮ ಮಾದರಿಯಾಗಿದೆ.
ಇಂಥ ʻಬೆಂಗಳೂರು ಹೆರಿಟೇಜ್ ವಾಕ್ ಮತ್ತು ಸ್ಟೋರಿ ಟೆಲಿಂಗ್ ಟೂರ್ಸ್ʼ ಅನ್ನು ಕರ್ನಾಟಕ ಪ್ರವಾಸೋದ್ಯಮ ನಿಗಮ ಮತ್ತು ಖಾಸಗಿ ಟ್ರಾವೆಲ್ಸ ಸಂಸ್ಥೆಗಳು, ಒನ್ಲಯನ್ ಸಂಸ್ಥೆಗಳು ಪ್ರವಾಸೋದ್ಯಮ ಸಂಘಗಳು ಹಾಗೂ ಪ್ರವಾಸ ನಿರ್ವಾಹಕರು ಜಂಟಿಯಾಗಿ ಅಭಿವೃದ್ಧಿಪಡಿಸಿದರೆ, ಬೆಂಗಳೂರು ವಿಶ್ವದ ಪ್ರಮುಖ ಹೆರಿಟೇಜ್ ನಗರಗಳ ಸಾಲಿನಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆಯಲಿದೆ.