• ಹರ್ಷ ಹೆಗಡೆ ಕೊಂಡದಕುಳಿ

ಪಶ್ಚಿಮ ಘಟ್ಟಗಳು ಕೇವಲ ಬೆಟ್ಟಗಳ ಸಾಲಲ್ಲ. ಭೂಮಿ ಮಳೆಯ ಕನಸು ಕಂಡಾಗ ಹುಟ್ಟಿದ ಹಸಿರು ಅಲೆಗಳು. ನದಿಗಳು ತಮ್ಮ ಮೊದಲ ಉಸಿರನ್ನು ಪಡೆಯುವ ತಾಯಿಯ ಗರ್ಭ ಅದು. ಸಾವಿರಾರು ಮಳೆಗಾಲ ಬಂತೆಂದರೆ ಈ ಬೆಟ್ಟಗಳಲ್ಲಿ ಮತ್ತೊಮ್ಮೆ ಜೀವ ಚಿಗುರೊಡೆಯುತ್ತದೆ. ಬೇಸಗೆಯ ಧೂಳನ್ನು ತೊಳೆದು ಹಾಕಿದ ಮರಗಳು ಹೊಸ ಎಲೆಗಳ ಹಸಿರಿನಲ್ಲಿ ಮೈಮರೆಯುತ್ತವೆ. ಮೋಡಗಳು ನಿಧಾನವಾಗಿ ಕಣಿವೆಗಳಿಗೆ ಇಳಿದು ಮರಗಳ ಭುಜದ ಮೇಲೆ ಕೈಯಿಟ್ಟು ನಿಲ್ಲುತ್ತವೆ. ದೂರದ ಬೆಟ್ಟಗಳು ಮಂಜಿನ ತೆಳು ಸೆರಗಿನಲ್ಲಿ ನಾಚಿದ ಕನ್ಯೆಯಂತೆ ಅರ್ಧ ಮಾತ್ರ ಗೋಚರಿಸುತ್ತವೆ. ಆಗ ಪಶ್ಚಿಮ ಘಟ್ಟಗಳು ಕೇವಲ ಹಸಿರ ರಾಶಿಯಾಗಿರುವುದಿಲ್ಲ. ಅವು ನಮ್ಮನ್ನು ಆಕರ್ಷಿಸುವ ಪ್ರವಾಸಿ ತಾಣವಾಗುತ್ತದೆ. ಅಂಥದ್ದೇ ಒಂದು ತಾಣ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿ ಶಿಖರ.

Untitled design - 2026-09-11T180655.004

ಸೌಂದರ್ಯ ಮತ್ತು ಅಧ್ಯಾತ್ಮ

ಸಮುದ್ರಮಟ್ಟದಿಂದ ಸುಮಾರು 1,343 ಮೀಟರ್ ಎತ್ತರದಲ್ಲಿ ನಿಂತಿರುವ ಈ ಶೃಂಗ ಕೇವಲ ಪ್ರಕೃತಿ ಸೌಂದರ್ಯದ ತಾಣವಷ್ಟೇ ಅಲ್ಲ, ಸಾಂಸ್ಕೃತಿಕ ಐತಿಹ್ಯವನ್ನೂ ತನ್ನೊಳಗೆ ಹೊತ್ತು ನಿಂತಿದೆ. ಆದಿ ಶಂಕರಾಚಾರ್ಯರು ಇಲ್ಲಿಗೆ ಆಗಮಿಸಿದ್ದರು. ಕೊಲ್ಲೂರು ಮೂಕಾಂಬಿಕೆಯ ದೇವಾಲಯದ ಹಿಂಭಾಗದಲ್ಲಿ ಸದಾ ಹಸಿರನ್ನೇ ಹೊದ್ದು ಮಲಗಿರುವಂತೆ ಕಾಣುವ ಈ ಬೆಟ್ಟವನ್ನು ನೋಡಿದರೆ, ಪ್ರಕೃತಿಯೇ ತನ್ನ ಅತ್ಯಂತ ಸುಂದರ ಚಿತ್ರವನ್ನು ಇಲ್ಲಿ ಬಿಡಿಸಿದೆಯೇನೋ ಅನಿಸುತ್ತದೆ.

ನಾನು ಕೂಡ ಈ ಪಡುವಣ ಬೆಟ್ಟಗಳ ತಪ್ಪಲಿನಲ್ಲಿ ಹುಟ್ಟಿ ಬೆಳೆದವನು. ಕಾಡಿನ ಮೌನ, ತಂಗಾಳಿ - ಇವೆಲ್ಲದರೊಂದಿಗೆ ನನಗೊಂದು ಅವಿನಾಭಾವ ಸಂಬಂಧವಿದೆ. ಬೆಟ್ಟಗಳನ್ನು ಏರುವುದು ನನಗೆ ಕೇವಲ ಹವ್ಯಾಸವಲ್ಲ. ಹೊಸತೂ ಅಲ್ಲ. ಅದು ನನ್ನೊಳಗಿನ ಮತ್ತೊಬ್ಬನನ್ನು ಹುಡುಕುವ ಪ್ರಯಾಣ.

ಜೀಪ್‌ ಸವಾರಿ

ಕಟ್ಟಿನಹೊಳೆಯ ಅಕ್ಷಯ ಹೋಮ್ ಸ್ಟೇ ನಮ್ಮನ್ನು ಎದುರುಗೊಂಡಿದ್ದು ಮಂಜಿನಿಂದ ತೇವಗೊಂಡ ಬೆಳಗಿನೊಂದಿಗೆ. ಕೆಸರು ಮಣ್ಣಿನ ವಾಸನೆ, ಎಲೆಗಳ ಮೇಲೆ ತೂಗುತ್ತಿದ್ದ ಮಳೆ ಹನಿಗಳು, ದೂರದಲ್ಲಿ ಮೋಡಗಳ ಹೊದಿಕೆಯಲ್ಲಿ ಇನ್ನೂ ನಿದ್ರಿಸುತ್ತಿದ್ದ ಬೆಟ್ಟಗಳು, ಬಿಸಿ ಬಿಸಿ ಇಡ್ಲಿ, ಸಾಂಬಾರು, ಹೊರಗೆ ಬಿಡದೆ ಸುರಿಯುತ್ತಿದ್ದ ಮಳೆ – ಕೆಲವೊಮ್ಮೆ ಪ್ರವಾಸದ ದೊಡ್ಡ ಸಂತೋಷಗಳು ಇಂಥ ಸಣ್ಣ ಕ್ಷಣಗಳಲ್ಲೇ ಪ್ರಾರಂಭವಾಗುತ್ತದೆ.

Untitled design - 2026-09-11T181349.510

ಅಲ್ಲಿ ನಾವು ಉಪಾಹಾರ ಮುಗಿಸಿ ಜೀಪ್ ಏರಿದಾಗ ನಿಜವಾದ ಪ್ರಯಾಣ ಆರಂಭವಾದದ್ದು. ಕೆಸರು ತುಂಬಿದ ಕಲ್ಲು ರಸ್ತೆಗಳು, ಒಂದೆಡೆ ಆಳವಾದ ಕಂದಕ, ಮತ್ತೊಂದೆಡೆ ಮೋಡಗಳೊಳಗೆ ಮರೆಯಾಗಿ ಕಣ್ಣಾಮುಚ್ಚಾಲೆಯಾಡುವ ಬೆಟ್ಟಗಳು. ಕ್ಷಣಕ್ಷಣಕ್ಕೂ ಜೀಪು ಆಕಾಶಕ್ಕೇ ಹಾರುವಂತೆ ಎಗರುತ್ತಿದ್ದರೆ, ಅದರೊಳಗೆ ಕುಳಿತಿದ್ದ ನಮ್ಮೆಲ್ಲರ ಹೃದಯಗಳೂ ಅದೇ ಲಯದಲ್ಲಿ ತೂಗುತ್ತಿತ್ತು. ಮಳೆಯ ರಭಸ, ಜಾರುವ ನೆಲ, ನೆಲಬಿಡುವ ಟೈರುಗಳು – ಇವೆಲ್ಲದರ ನಡುವೆ ಸೆಣಸಾಡುವ ಚಾಲಕರ ನಿಪುಣತೆ. ಆ ಹಾದಿ ಕೇವಲ ಒಂದು ರಸ್ತೆಯಲ್ಲ, ಅದು ಕೊಡಚಾದ್ರಿಯ ಪ್ರಕೃತಿಯೊಂದಿಗೆ ನಡೆಸುವ ಮೊದಲ ಸಂಭಾಷಣೆ.

ಶಿಖರ ತಲುಪಿದಾಗ

ಕೊನೆಗೆ ನಾವು ತಲುಪಿದ್ದು ಕೊಡಚಾದ್ರಿಯ ಶಿರಭಾಗಕ್ಕೆ. ಅಲ್ಲಿಂದ ಸರ್ವಜ್ಞ ಪೀಠದತ್ತ ಸಾಗುವ ಹಾದಿ ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಒಂದೆಡೆ ಮೋಡಗಳು ಬಂದು ಎಲ್ಲವನ್ನೂ ಮರೆಮಾಚಿದರೆ, ಇನ್ನೊಂದೆಡೆ ಕ್ಷಣಾರ್ಧದಲ್ಲಿ ಮಂಜು ಸರಿದು ದೂರದವರೆಗೂ ಹಬ್ಬಿರುವ ಬೆಟ್ಟಗಳ ಸಾಲು ಕಣ್ಣಿಗೆ ಬೀಳುತ್ತದೆ. ಅಂಥ ಕ್ಷಣಗಳಲ್ಲಿ ನಾವು ಭೂಮಿಯ ಮೇಲಿದ್ದೇವೋ, ಮೋಡಗಳ ನಡುವೆ ನಿಂತಿದ್ದೇವೋ ಎನ್ನುವ ಅನುಮಾನ ಮೂಡುತ್ತದೆ. ವಿಶೇಷವಾಗಿ ಅಂತರ್ಮುಖಿಗಳಿಗೆ ಇಂಥ ಸ್ಥಳಗಳು ಹೇಳಿಮಾಡಿಸಿದಂತವು. ಏಕೆಂದರೆ ಇಲ್ಲಿ ಮನುಷ್ಯರ ಮಾತುಗಳ ಅವಶ್ಯಕತೆ ಇಲ್ಲ. ಬದಲಾಗಿ ಕಾಡು ಮಾತನಾಡುತ್ತದೆ. ಮಳೆ ಮಾತನಾಡುತ್ತದೆ. ಗಾಳಿ ಮಾತನಾಡುತ್ತದೆ. ನಮ್ಮೊಳಗೆ ನಾವು ಮರೆತುಬಿಟ್ಟಿರುವ ಧ್ವನಿ ಪ್ರತಿಧ್ವನಿಸುತ್ತದೆ. ಐತಿಹ್ಯದಂತೆ ಸರ್ವಜ್ಞ ಪೀಠವು ಆದಿ ಶಂಕರರು ಎಲ್ಲ ಪಂಡಿತರನ್ನು ಪಾಂಡಿತ್ಯದಲ್ಲಿ ಸೋಲಿಸಿ ಏರಿದ ಜಾಗ. ಆ ವಾತಾವರಣ ಒಮ್ಮೆ ಜಗತ್ತೇ ಇಲ್ಲದಂತೆ ಭಾಸವಾದರೆ ಮತ್ತೊಮ್ಮೆ ಇಡೀ ಜಗತ್ತೇ ನಮ್ಮ ಕಾಲ ಕೆಳಗಿರುವಂತೆ ಅನಿಸುತ್ತದೆ. ಅಲ್ಲಿಯೇ ಮನುಷ್ಯನಿಗೆ ತನ್ನ ಸಣ್ಣತನದ ಅರಿವಾಗುವುದು.

ಸ್ವಾಗತ ಕೋರುವ ಹಿಡ್ಲುಮನೆ

ಒಂದೂವರೆ ಗಂಟೆಯಷ್ಟು ಕಾಲ ಕೊಡಚಾದ್ರಿಯ ಶಿರದಲ್ಲಿ ಕಾಲ ಕಳೆಯುವ ಅವಕಾಶ ನಮಗಿಲ್ಲಿ ದೊರೆಯುತ್ತದೆ. ಅದಾದ ಬಳಿಕ ಮತ್ತೆ ಜೀಪು ಏರಿ ಕೆಳಗಿಳಿಯಬೇಕು. ವಾರದ ದಿನಗಳಲ್ಲಿ ಹೋಗುವುದು ಉತ್ತಮ. ಆಗ ಜನಸಂದಣಿಯೂ ಕಡಿಮೆ. ನಮ್ಮ ಪಯಣ ಇಲ್ಲಿಗೆ ಮುಗಿಯಲಿಲ್ಲ. ಕೊಡಚಾದ್ರಿಯ ನೆತ್ತಿಯಿಂದ ಕೆಳಬರುತ್ತಿದ್ದಂತೆ ನಮ್ಮನ್ನು ಎದುರು ನೋಡುತ್ತಿದುದು ಹಿಡ್ಲುಮನೆ. ಹಿಡ್ಲುಮನೆ ಜಲಪಾತದ ಚಾರಣ ಎರಡು ರೀತಿಯಲ್ಲಿ ಮಾಡಬಹುದು. ಜೀಪಿನಲ್ಲಿ ಚೆಕ್‌ಪೋಸ್ಟ್ ತನಕ ಹೋಗಿ ಕೊನೆಯ ಹಂತ ಮಾತ್ರ ನಡೆಯಬಹುದು. ಅಥವಾ ಸಂಪೂರ್ಣ ಹಾದಿಯನ್ನು ಕಾಲ್ನಡಿಗೆಯಲ್ಲೇ ಕ್ರಮಿಸಬಹುದು. ನಾವು ಆರಿಸಿಕೊಂಡದ್ದು ಎರಡನೆಯದು. ಈ ಚಾರಣದ ಹಾದಿ ಆರಂಭವಾಗುತ್ತಿದ್ದಂತೆ ಪಶ್ಚಿಮ ಘಟ್ಟ ತನ್ನ ನಿಜಸ್ವರೂಪವನ್ನು ತೋರಿಸಲು ಆರಂಭಿಸುತ್ತದೆ. ಅಗಸದೆತ್ತರ ಬೆಳೆದ ಮರಗಳು. ಸೂರ್ಯನ ಕಿರಣವೂ ನೆಲ ಮುಟ್ಟದ ಕಾಡು. ಕತ್ತಲೆಯ ಮೌನ. ಇಂಥ ಕಾಡುಗಳಲ್ಲಿ ನಡೆಯುವಾಗ ಸಮಯದ ಪರಿಕಲ್ಪನೆಯೇ ಬದಲಾಗುತ್ತದೆ. ಗಡಿಯಾರಗಳು ಅರ್ಥ ಕಳೆದುಕೊಳ್ಳುತ್ತವೆ. ಮೂರುವರೆ ಕಿಲೋಮೀಟರಿನ ನಂತರ ಈ ಮೌನ ಸಂವಹನ ಕೊನೆಗೊಳ್ಳುತ್ತದೆ. ಅಲ್ಲಿ ನಮ್ಮನ್ನು ಫಾರೆಸ್ಟ್ ಚೆಕ್ ಪೋಸ್ಟ್ ಬರಮಾಡಿಕೊಳ್ಳುತ್ತದೆ. ಅಲ್ಲಿ ಒಂದೆರಡು ಸಣ್ಣ ಅಂಗಡಿಗಳೂ ಇವೆ. ಊಟವೂ ಸಿಗುತ್ತದೆ. ಸಣ್ಣ ಪಿಟ್ ಸ್ಟಾಪಿನೊಂದಿಗೆ ದಣಿವಾರಿಸಿಕೊಳ್ಳಬಹುದು. ಆದರೆ ಫಾರೆಸ್ಟ್ ಚೆಕ್‌ಪೋಸ್ಟ್ ದಾಟಿದ ಬಳಿಕ ಹಾದಿ ಹೊಸ ಚಾರಣಿಗರಿಗೆ ನಿಜವಾದ ಸವಾಲೆಸೆಯುತ್ತದೆ. ಧುಮ್ಮಿಕ್ಕುವ ಜಲಧಾರೆಯ ಪಕ್ಕದಲ್ಲೇ ಜಾರುವ ಕಲ್ಲುಗಳನ್ನು ಏರಿ ಸಾಗಬೇಕು. ಕೆಲವೆಡೆ ಹಗ್ಗ ಹಿಡಿದು ಹತ್ತಬೇಕು. ನೀರಿನ ರಭಸ ಹೆಚ್ಚಾದರೆ ಈ ಹಾದಿ ಬಲು ಅಪಾಯಕಾರಿ. ನೀರಿನ ಹನಿಗಳು ಬಿದ್ದು ಬಿದ್ದು ಸದಾ ಜಾರುವ, ಸ್ವಲ್ಪ ಮೈ ನಡುಗಿದರೂ ಕಣಿವೆಗೆ ಬೀಳುವಂಥ ಉಪಕ್ರಮ ಅದು. ನಾವು ಹೋಗಿದ್ದವರು ಇಂಥ ಪರಿಸರಕ್ಕೆ ಪರಿಚಿತರಾಗಿದ್ದರಿಂದ ಅದು ದೊಡ್ಡ ಸಾಹಸವೆನಿಸಲಿಲ್ಲವಾದರೂ, ಪ್ರಕೃತಿಯ ಮುಂದೆ ಅಂಥ ಅಹಂಕಾರಕ್ಕೆ ಜಾಗವಿರುವುದಿಲ್ಲ ಬಿಡಿ.

ಮೈಮರೆಸುವ ದೃಶ್ಯಕಾವ್ಯ

ಇದೆಲ್ಲದರ ಬಳಿಕ ಸಿಗುವ ಆ ದೃಶ್ಯವಿದೆಯಲ್ಲ. ಅದು ಸ್ವತಃ ಕೊಡಚಾದ್ರಿಯೇ ಬಿಳಿಯ ಶಾಯಿಯಲ್ಲಿ ಬರೆದ ದೃಶ್ಯಕಾವ್ಯ. ಹಿಡ್ಲುಮನೆ ಜಲಪಾತ. ಸುಮಾರು ಅರವತ್ತು ಅಡಿಗಳ ಎತ್ತರದಿಂದ ಧುಮ್ಮಿಕ್ಕುವ ಆ ಜಲಧಾರೆ ಮೊದಲ ನೋಟಕ್ಕೆ ಸಿಕ್ಕಾಗ ಕೆಲ ಕ್ಷಣ ಮಾತೇ ಬರುವುದಿಲ್ಲ. ಸುತ್ತಲೂ ಮಳೆಕಾಡು. ಮಧ್ಯದಲ್ಲಿ ಬಿಳಿಯ ಜಲಧಾರೆ. ಅದರ ಸುತ್ತ ನಿರಂತರವಾಗಿ ತೇಲಾಡುವ ಮಂಜು. ಕೆಲವು ಸೌಂದರ್ಯಗಳನ್ನು ಕೇವಲ ಅನುಭವಿಸಲು ಮಾತ್ರ ಸಾಧ್ಯ. ಒಂದೂವರೆ ಗಂಟೆ ಅಲ್ಲೇ ಕಳೆದ ಬಳಿಕ ನಾವು ಮರಳಿ ಹೊರಟೆವು. ಕಾಡಿನ ನಡುವೆ ನೆಟ್ವರ್ಕ್ ಇಲ್ಲದ ನೆಮ್ಮದಿ. ಹವ್ಯಕ ಶೈಲಿಯ ಸರಳ ಸಾತ್ವಿಕ ಆಹಾರ. ನಿರಂತರವಾಗಿ ಕೇಳಿಬರುವ ಮಳೆಯ ಸಂಗೀತ. ಇವೆಲ್ಲವೂ ಸೇರಿ ಆ ದಿನವನ್ನು ಇನ್ನಷ್ಟು ವಿಶೇಷವಾಗಿಸಿತ್ತು.

ಇದನ್ನು ಓದಿ :ಮಂಗಳೂರು–ಬೆಂಗಳೂರು ರೈಲು ಸಂಚಾರ ಪುನರಾರಂಭ

ಜವಾಬ್ದಾರಿ ಮುಖ್ಯ

ಈ ಪಯಣದಲ್ಲಿ ಒಂದಷ್ಟು ಸಂಗತಿಗಳು ಕಾಡಿನ ಮೌನಕ್ಕಿಂತಲೂ ಹೆಚ್ಚಿಗೆ ಕಾಡಿದವು. ಜತೆಗೆ ಬಂದಿದ್ದ ಸುಮಾರು 50 ಜನರಲ್ಲಿ ಬಹುತೇಕರು ಕಾಡಿನಲ್ಲಿಯೇ ಪ್ಲಾಸ್ಟಿಕ್ ಎಸೆಯುವುದು, ಬಸ್ಸಿನಲ್ಲಿ ಬರುವಾಗ ಕಿಟಕಿಯಿಂದ ಕಸವನ್ನು ಎಸೆಯುವುದು ಮಾಡುತ್ತಿದ್ದರು. ಧೂಮಪಾನ ನಿಷೇಧಿಸಿದೆ ಎಂಬ ಜಾಗದಲ್ಲೂ ಸಿಗರೇಟು ಎಳೆಯುತ್ತಿದ್ದರು. ಇದನ್ನು ವಿರೋಧಿಸಿದರೆ ದರ್ಪ ತೋರುತ್ತಿದ್ದರು. ಇದಕ್ಕಿಂತ ಬೇಸರ ಎನಿಸಿದ್ದು ಇದೆಲ್ಲವೂ ನಮ್ಮ ಟ್ರೆಕ್ ಆರ್ಗನೈಸರ್ ಕಣ್ಣೆದುರೇ ನಡೆದರೂ ಅವರು ಒಂದು ಮಾತನ್ನೂ ವಿರೋಧಿಸಿ ಹೇಳದಿರುವುದು. ಕೇವಲ ವಿದ್ಯೆ ಕಲಿತರೆ ಮಾತ್ರ ಸಾಕಾಗುವುದಿಲ್ಲ, ಒಂದಷ್ಟು ಸಭ್ಯತೆ - ನಾಗರಿಕ ನಡತೆಯನ್ನೂ ಮೈಗೂಡಿಸಿಕೊಳ್ಳಬೇಕಾಗುತ್ತದೆ. ಪ್ರಕೃತಿಯನ್ನು ಪ್ರೀತಿಸುವುದೆಂದರೆ ಕೇವಲ ಫೊಟೋ ತೆಗೆದುಕೊಳ್ಳುವುದಲ್ಲ. ಅದನ್ನು ಗೌರವಿಸುವುದೂ ಹೌದು. ನಾವು ಪ್ರವಾಸಿಗರಾಗಿ ಹೋಗಬಹುದು. ಆದರೆ ಅತಿಥಿಗಳಾಗಿಯೇ ಹಿಂದಿರುಗಬೇಕು. ಒಡೆಯರಂತೆ ಅಲ್ಲ.

ಇಲ್ಲಿ ಗಮನಿಸಿ:

- ಪ್ಲಾಸ್ಟಿಕ್ ಬಾಟಲಿಗಳು, ಡಬ್ಬಗಳು, ಕವರ್‌ಗಳನ್ನು ಕೊಂಡೊಯ್ಯಬೇಡಿ.

- ಅತ್ಯುತ್ತಮ ಟ್ರೆಕ್ಕಿಂಗ್ ಶೂಗಳಿದ್ದರೆ ಉತ್ತಮ.

- ಉಂಬಳಕ್ಕೆ ಹೆದರುವವರಾದರೆ, ಉಪ್ಪು, ಸ್ಯಾನಿಟೈಸರ್‌ ಇಟ್ಟುಕೊಳ್ಳಿ.

- ಎರಡು ಜೊತೆ ಹಗುರಾದ ಬಟ್ಟೆಗಳು ಸೂಕ್ತ.

- ಆದಷ್ಟು ಕಡಿಮೆ ತೂಕದ ಬ್ಯಾಗ್‌ ಕೊಂಡೊಯ್ಯಿರಿ.

- ಉಗುಳುವುದು, ಕಸ ಎಸೆಯುವುದು, ಧೂಮಪಾನ, ಮದ್ಯಪಾನ ನಿಮ್ಮ ಮನೆಯ ಆವರಣದಲ್ಲಿಯೇ ಬಿಟ್ಟುಹೋಗಿ.

- ಒಂದೊಳ್ಳೆ ಟ್ರಿಪ್ ಆರ್ಗನೈಸರ್ ಜತೆಗೆ ಹೋದರೆ ಸುಲಭ - ಆದರೆ ಜೇಬಿಗೆ ಭಾರ.

- ಅಲ್ಲೇ ಹತ್ತಿರದಲ್ಲಿ ದೇವಗಂಗೆ ಕೊಳ ಮತ್ತು ನಗರ ಕೋಟೆಯನ್ನು ಕೂಡ ನೋಡಬಹುದು.